ನಂಜನಗೂಡು
ಹುಣ್ಣಿಮೆಯ ದಿನ ಅಶುಭವೆಂದು ಹೊಸ ಕಾರ್ಯಗಳನ್ನು ಶುರು ಮಾಡಲು ಸಾಮಾನ್ಯವಾಗಿ ಹಿಂದೇಟು ಹೊಡೆಯುತ್ತಾರೆ.
ಆದರೆ ತಾಲೂಕಿನ ಹಗಿನವಾಳು ಗ್ರಾಮದ ಅಂಬಳೆ ಗಿರೀಶ್ ಅವರು ಹುಣ್ಣಿಮೆಯ ದಿನವೇ ದೊಡ್ಡ ಪ್ರಮಾಣದ ನಾಲ್ಕು ಲಕ್ಷ ಸಸಿ ಬೆಳೆಯುವ ನರ್ಸರಿಯನ್ನು 90X190 ಅಡಿ ವಿಸ್ತೀರ್ಣದ ಜಾಗದಲ್ಲಿ ಶುರು ಮಾಡಿದರು.

“ಲಿಂಗಾಯತ ಧರ್ಮದಲ್ಲಿ ಮೂಢನಂಬಿಕೆಗೆ ಆಸ್ಪದವಿಲ್ಲ. ಬಸವಣ್ಣನವರು ಕಾಯಕದ ಮಹತ್ವ ಕಲಿಸಿದರು. ದುಡಿಯುವುದು ನೋಡಬೇಕೆ ಹೊರತು ಶುಭ ಅಶುಭ ದಿನಗಳನಲ್ಲ,” ಎಂದು ಹೇಳುತ್ತಾರೆ.
ಕಳೆದ ಹುಣ್ಣಿಮೆಯಂದು ಪೂಜ್ಯ ಶ್ರೀ ಬಸವಯೋಗಿ ಪ್ರಭುಗಳ ನೇತೃತ್ವದಲ್ಲಿ ರೈತರನ್ನು ಕರೆದು ಲಿಂಗಾಯತ ವಿಧಿಯ ಶ್ರೀ ಬಸವೇಶ್ವರ ನರ್ಸರಿಯನ್ನು ಉದ್ಘಾಟಿಸಿಯೇ ಬಿಟ್ಟರು

ಶ್ರೀ ಬಸವಯೋಗಿ ಪ್ರಭುಗಳು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ವೃಷ್ಟಿ ಮಾಡಿ, ವಚನಗಳನ್ನು ಹೇಳಿದರು. ಕಾರ್ಯಕ್ರಮಕ್ಕೆ ಬಂದ ರೈತರಿಗೆ ಬಸವಾದಿ ಶರಣರ ಕಾಯಕ ನಿಷ್ಠೆ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಸಲಹೆ ನೀಡಿದರು. ವಚನ ಪುಸ್ತಕ ನೀಡಿ ವಚನಗಳನ್ನು ಪ್ರತಿದಿನ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಜರ್ಮನಿಯ ಖಾಸಗಿ ಸಂಸ್ಥೆಯೊಂದಕ್ಕೆ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಅಂಬಳೆ ಗಿರೀಶ್ ಅವರು ಮನೆಯಿಂದಲೇ ದುಡಿಯುತ್ತಿದ್ದಾರೆ. “ಇಲ್ಲಿ ಹತ್ತಿರ ಯಾವುದೇ ನರ್ಸರಿ ಇಲ್ಲ. ಗುಣಮಟ್ಟದ ತರಕಾರಿ ಸಸಿಗಳನ್ನು ರೈತರಿಗೆ ಪೂರೈಸುವ ನರ್ಸರಿಯ ಅವಶ್ಯಕತೆಯಿತ್ತು. ಸಾಕಷ್ಟು ಕೃಷಿ ಅನುಭವವಿದೆ. ಅದಕ್ಕೆ ಹೊಸ ಕಾರ್ಯಕ್ಕೆ ಕೈ ಹಾಕಿದೆ,” ಎಂದು ಹೇಳಿದರು.
ಸದ್ಯಕ್ಕೆ ಅವರಿಗೆ ಎರಡೂ ಕೆಲಸಗಳನ್ನು ನಿಭಾಯಿಸುವ ಉದ್ದೇಶವಿದೆ. ಅವರ ಇಂಜಿನಿಯರ್ ಕೆಲಸ ಮಧ್ಯಾಹ್ನ 12ಕ್ಕೆ ಶುರುವಾಗುತ್ತದೆ. ಅದಕ್ಕಿಂತ ಮುಂಚೆ ನರ್ಸರಿಯ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಂತರ ಕಾರ್ಮಿಕರ ಮೂಲಕ ನಿರ್ವಹಿಸುತ್ತಾರೆ.

ಕೆಲವು ವರ್ಷಗಳ ಹಿಂದೆ ಗಿರೀಶ್ ಅವರಿಗೆ ಶ್ರೀ ಬಸವಯೋಗಿ ಪ್ರಭುಗಳ ಮೂಲಕ ಬಸವ ತತ್ವ ಪರಿಚಯವಾಯಿತು. ಆಗಿನಿಂದ ಬಸವ ತತ್ವದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಶ್ರೀ ಬಸವೇಶ್ವರ ನರ್ಸರಿ ಉದ್ಘಾಟನೆಯಲ್ಲಿ ನಂಜನಗೂಡು ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕ ಚೆನ್ನಪ್ಪ, ಬಸವಸೇನೆ ಅದ್ಯಕ್ಷ ಯೋಗಿಶ್, ಮಹೇಶ್ ಮುದ್ದಹಳ್ಳಿ ಅಶೋಕ್ ಮತ್ತು ಅಕ್ಕಪಕ್ಕದ ಹಳ್ಳಿಯ ರೈತರು ಉಪಸ್ಥಿತರಿದ್ದರು.
