15ನೇ ಮಹಾದೇವಿಯಕ್ಕಗಳ ಸಮ್ಮೇಳನ ಅನಾವರಣ
ಕಲಬುರಗಿ:
ಬಸವ-ಅಲ್ಲಮರ ಅನುಭವ ಮಂಟಪ ಎಂಬ ಕುಲುಮೆಯಲ್ಲಿ ಅದ್ದಿ ತೆಗೆದಂತಿರುವ ಅಕ್ಕಮಹಾದೇವಿ ಸ್ತ್ರೀ ಕುಲದ ಹೆಮ್ಮೆಯ ತಿಲಕ ಎಂದು ಜನಪದ ಗಾಯಕಿ ನೀಲಮ್ಮ ನೆಲೋಗಿ ಅಭಿಪ್ರಾಯಪಟ್ಟರು.
ಬಸವ ಸಮಿತಿಯ ಅಕ್ಕನ ಬಳಗ, ಕಲಬುರಗಿ ಬಸವ ಸಮಿತಿ ವತಿಯಿಂದ ಜಯನಗರದ ಅನುಭವ ಮಂಟಪದಲ್ಲಿ ಶನಿವಾರ ಜರುಗಿದ ’15ನೇ ಮಹಾದೇವಿಯಕ್ಕಗಳ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣ ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ಒದಗಿಸುವ ಮೂಲಕ ಸ್ತ್ರೀಕುಲ ಉದ್ಧಾರಕರೆನಿಸಿಕೊಂಡರು.
ಬಾಲ್ಯದಿಂದಲೇ ವೈರಾಗ್ಯಭಾವ ತಾಳಿದ್ದ ಅಕ್ಕ ಕೌಶಿಕ ಅರಸನ ಗರ್ವ ಮುರಿದು ಇಷ್ಟಲಿಂಗ ಪೂಜೆಯ ಮೂಲಕ ಲಿಂಗಾಂಗ ಸಾಮರಸ್ಯ ಕಂಡುಕೊಂಡ ಅಕ್ಕ ತಾಳ್ಮೆ, ಧೈರ್ಯ, ಶಿಕ್ಷಣ, ಅಧ್ಯಾತ್ಮದ ಪ್ರತೀಕವಾಗಿದ್ದಾರೆ ಎಂದರು.
ಮಾತೆ ಮಹಾದೇವಿ ತಮ್ಮ ಪ್ರವಚನದ ಮೂಲಕ ಬಸವಣ್ಣನವರನ್ನು ಇಡೀ ನಾಡಿಗೆ ತೋರಿಸಿಕೊಟ್ಟಂತೆ ಡಾ. ವಿಲಾಸವತಿ ಖೂಬಾ ತಾಯಿ ಅಕ್ಕನ ಸಮ್ಮೇಳನ ಮಾಡುವ ಮೂಲಕ ಅಕ್ಕನನ್ನು ಇಡೀ ನಾಡಿಗೆ ತೋರಿಸಿಕೊಟ್ಟಿದ್ದಾರೆ ಎಂದು ನೀಲಮ್ಮ ಹೇಳಿದರು.
ಸಮ್ಮೇಳನಾಧ್ಯಕ್ಷೆ ಪುಷ್ಪಾ ವಾಲಿ ಮಾತನಾಡಿ, ಬಸವಪೂರ್ವ ಸಮಾಜದಲ್ಲಿ ಅನೇಕ ಬಗೆಯ ಭೇದ ಭಾವಗಳು ನೆಲೆಯೂರಿದ್ದವು. ವರ್ಗ, ವರ್ಣ, ಲಿಂಗ, ಜಾತಿ ಭೇಧಗಳು ಸಮಾಜವನ್ನು ಬೇರೆ ಬೇರೆ ಭಾಗಗಳನ್ನಾಗಿ ಮಾಡಿ ಜನರ ಶೋಷಣೆಗೆ ಕಾರಣವಾಗಿದ್ದವು. ಬಸವಣ್ಣನವರು ಈ ಭೇದ ಭಾವ ಶೋಷಣೆಯಿಂದ ಸಮಾಜವನ್ನು ಮುಕ್ತಗೊಳಿಸಿದರು. ಮಹಾಮನೆ ಮತ್ತು ಅನುಭವ ಮಂಟಪದ ಮೂಲಕ ಸಮಾಜೋಧಾರ್ಮಿಕ ವಿಚಾರಗಳ ಚಿಂತನೆ ನಡೆಸಿ ಶರಣ ತತ್ವಗಳನ್ನು ಚಾಲನೆಗೆ ತಂದರು ಎಂದರು.

ಪ್ರಕೃತಿ ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಸೌಕರ್ಯ, ಸೌಲಭ್ಯ, ಸಮಾನತೆ, ಸಹಜೀವನ, ಸಹಬಾಳ್ವೆ, ಸಮಾಧಾನ, ಸಂತೃಪ್ತಿ, ಸಮೃದ್ಧಿ ಎಲ್ಲವನ್ನು ಕೊಡುತ್ತದೆ. ಹೀಗಾಗಿ ಪ್ರಕೃತಿಯೇ ನಮಗೆ ಗುರು, ಗಗನವೇ ನಮಗೆ ಲಿಂಗ, ಈ ಜಗತ್ತಿನಲ್ಲಿ ಪಶು, ಪ್ರಾಣಿ, ಗಿಡ, ಮರ, ಎಲ್ಲ ಜಾತಿ, ಮತ, ಪಂಥ, ಧರ್ಮದವರು ಸಮರಸವಾಗಿ ಬಾಳುವುದೇ ಕೂಡಲಸಂಗಮ ಎಂದು ತಿಳಿಸಿದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಸಮ್ಮೇಳನದ ಗೌರವಾಧ್ಯಕ್ಷೆ ಶರಣಮ್ಮ ಕಲಬುರ್ಗಿ, ಕಾರ್ಯದರ್ಶಿ ಅನಸೂಯಾ ನಡಕಟ್ಟಿ, ಕಾರ್ಯಾಧ್ಯಕ್ಷೆ ಡಾ. ಜಯಶ್ರೀ ದಂಡೆ ವೇದಿಕೆಯಲ್ಲಿದ್ದರು. ಡಾ. ಸುವರ್ಣಾ ಹಿರೇಮಠ ನಿರೂಪಿಸಿದರು. ವಿಜಯಲಕ್ಷ್ಮೀ ನಾವದಗೇರಿ ವಂದಿಸಿದರು.
ಅಕ್ಕನ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ, ಷಟಸ್ಥಲ ಧ್ವಜಾರೋಹಣ ಮಾಡಿ ಜಯನಗರ ಬಡಾವಣೆಯಲ್ಲಿ ಹಾಡು, ವಚನ ಉಗ್ಘಡಣೆ, ಭಜನೆಯ ಮೂಲಕ ಅಕ್ಕನ ಭಾವಚಿತ್ರ ಮೆರವಣಿಗೆ ನಡೆಯಿತು.
ಅನುಭಾವದ ಆಡೋಂಬಲ ಬಸವಾಲ್ಲಮರ ಸಂವಾದ ಬಸವಾಲ್ಲಮರು ಶರಣರ ಸಂಗದಿಂದ ಉಬ್ಬಿ, ಕೊಬ್ಬಿ ಓಲಾಡಿದರು ಎಂದು ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ನುಡಿದರು.
ಮಹಾದೇವಿಯಕ್ಕಗಳ ಸಮ್ಮೇಳನದ ಗೋಷ್ಠಿ-2 ಬಸವ- ಅಲ್ಲಮರ ಸಂವಾದ ಕುರಿತು ಮಾತನಾಡಿದ ಅವರು, ಕಾಯಭಾವ ತೊರೆದು ಶರಣನಾದ ನಿನ್ನ ಪರಿ ಆವುದು? ಎಂದು ಬಸವಣ್ಣನವರಿಗೆ ಅಲ್ಲಮ ಪ್ರಶ್ನಿಸುತ್ತಾರೆ. ಮನಸ್ಸಿನ ಸಾಮರ್ಥ್ಯದಿಂದ ಪರಮಾತ್ಮ ಹಾಗೂ ನಿಮ್ಮನ್ನು ನನ್ನಲ್ಲಿ ಇಂಬಿಟ್ಟುಕೊಂಡಿದ್ದೇನೆ ಎಂದು ಬಸವಣ್ಣನವರು ಉತ್ತರಿಸುತ್ತಾರೆ ಎಂದರು.
ಅರಿವಿಗೆ ಬಾರದ, ಮೀರಿದ ದೇವರನ್ನು ಅದ್ಹೇಗೆ ನಿನ್ನ ತನುವಿನಲ್ಲಿ ಇಂಬಿಟ್ಟುಕೊಂಡೆ, ಬಯಲನ್ನು ನೀನು ತನುವಿನಲ್ಲಿ ಹೇಗೆ ಇಂಬಿಟ್ಟುಕೊಂಡೆ ಎಂದು ಮತ್ತೆ ಕೇಳುತ್ತಾರೆ.

ಅದಕ್ಕೆ ಬಸವಣ್ಣ ಜಗವು ಸುತ್ತಿಪ್ಪುದು ನಿನ್ನ ಮಾಯೆ. ಇದನ್ನು ನಾನು ಕರಿಯನ್ನು ಕನ್ನಡಿಯೊಳಗಡಿಸಿದಂತೆ ಪರವಸ್ತುವನ್ನು ಅಡಗಿಸಿಟ್ಟುಕೊಂಡಿರುವೆ ಎಂದು ಬಸವಣ್ಣ ಉತ್ತರಿಸುತ್ತಾರೆ ಎಂದು ತಿಳಿಸಿದರು.
ಗುರುಲಿಂಗ, ಜಂಗಮ, ಪ್ರಸಾದ ನಾನು ಅರಿತೆ ಎಂದ ಅಲ್ಲಮಪ್ರಭುಗಳು ಬಸವಣ್ಣನ ವ್ಯಕ್ತಿತ್ವವನ್ನು ಜಗತ್ತಿಗೆ ಸಾರಿದರು ಎಂದು ಅವರು ತಿಳಿಸಿದರು.
ಡಾ. ಶಿವಲೀಲಾ ಶೀಲವಂತರ ಅಲ್ಲಮ-ಚೆನ್ನಬಸವಣ್ಣ, ನೇಹಾ ಬೀದರ ಅವರು, ಅಲ್ಲಮ-ನುಲಿಯ ಚಂದಯ್ಯನವರ ಸಂವಾದ ಕುರಿತು ಮಾತನಾಡಿದರು. ಡಾ. ಸುಪ್ರಿಯಾ ನಾಗಶೆಟ್ಟಿ, ಜ್ಯೋತಿ ದೇವಣಿ ನಿರೂಪಿಸಿದರು.
