ಚಿಕ್ಕಮಗಳೂರು
12ನೇ ಶತಮಾನದ ಶರಣ, ಸಾಹಿತಿ ಅಲ್ಲಮಪ್ರಭುಗಳ ಒಂದು ವಚನದಲ್ಲಿ ಬರುವ ಸಾಲು ‘ನೋಡೂದ ನೋಡಲರಿಯದೆ ಕೆಟ್ಟಿತೀ ಲೋಕವೆಲ್ಲ!’ ನೋಡಬೇಕಾದ್ದನ್ನು ನೋಡದ ಸಮಾಜ ಒಂದು ವಿಕಾರಗಳ ಬೇನೆಯಲ್ಲಿ ಬೇಯುತ್ತಿದೆ- ನರಳುತ್ತಿದೆ.
ಬೇಕಾಗಿಯೋ-ಬೇಡವಾಗಿಯೋ ನೋಡಬಾರದ್ದನ್ನೆಲ್ಲಾ ನೋಡಿಯೇ ಇದುವೇ ಅಭಿರುಚಿ ಎನ್ನುವಂತಾಗಿದೆ. ಇಂಥ ಅಯೋಮಯ ಸ್ಥಿತಿಯಲ್ಲಿ ನಾವಿದ್ದೇವೆ.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ‘ನೋಡುವುದನ್ನೇ ನೋಡೋಣ’ ಎಂಬ ಹೆಸರಿನಲ್ಲಿ ಸದಭಿರುಚಿಯ ಸಿನೆಮಾಗಳ ಪ್ರದರ್ಶನ ಹಾಗೂ ಆಪ್ತ ಸಂವಾದವನ್ನು ಚಿಕ್ಕಮಗಳೂರು ಬಸವಮಂದಿರದಲ್ಲಿ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.

ವಿಭಿನ್ನ ಕಥಾ ಹಂದರ ಹೊಂದಿರುವ ಆರು ಚಲನಚಿತ್ರಗಳನ್ನು ಆರು ದಿನ ವಿಶಾಲವಾದ ಎಲ್ಇಡಿ ಪರದೆಯ ಮೇಲೆ ಅತ್ಯುತ್ತಮ ಗುಣಮಟ್ಟದ ಸೌಂಡ್ ಜೊತೆಯಲ್ಲಿ ಪ್ರದರ್ಶಿಸಲಾಯಿತು. ಈ ಆರೂ ದಿನ ಆಯಾ ಸಿನೆಮಾಗಳ ಮಹತ್ವದ ಬಗ್ಗೆ ಪ್ರಾಜ್ಞರಿಂದ ಉಪನ್ಯಾಸವನ್ನೂ ಆಯೋಜಿಸಲಾಗಿತ್ತು.
ಸಿ. ಲಕ್ಷ್ಮಣ್ ನಿರ್ದೇಶನದ ‘ಕಾರಣಿಕಶಿಶು’, ಟಿ.ಎಸ್. ನಾಗಭರಣ ನಿರ್ದೇಶನದ ‘ಸಂತಶಿಶುನಾಳ ಶರೀಫ’, ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ತಬರನಕತೆ’, ಪ್ರವೀಣ್ ಕೃಪಾಕರ್ ನಿರ್ದೇಶನದ ‘ತಲೆದಂಡ’, ಟಿ.ಎಸ್. ನಾಗಭರಣ ನಿರ್ದೇಶನದ ‘ಅಲ್ಲಮ’ ಹಾಗೂ ‘ಚಿಗುರಿದ ಕನಸು’ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿನೆಮಾಗಳು.
ರೂಢಿಗತ ಕಟ್ಟಲೆಗಳನ್ನು ಮೀರಿ ಹೊರ ನಡೆವ ಬಸವಣ್ಣವರ ಬಾಲ್ಯ ಕುರಿತ ಕಾರಣಿಕ ಶಿಶು ಸಿನೆಮಾ ಟ್ರೈಲರ್ ಬಿಡುಗಡೆ ಆಗಿತ್ತು. ಆಗ ಈ ಟ್ರೈಲರ್ ಇಡೀ ಸಿನೆಮಾ ನೋಡುವ ಅಪೇಕ್ಷಯನ್ನುಂಟು ಮಾಡಿತ್ತು. ಇದೇ ಕಾರಣಕ್ಕೆ ಈ ಸಿನೆಮಾದ ಜೊತೆ ಇನ್ನಿತರ ಸದಭಿರುಚಿಯ ಸಿನೆಮಾಗಳನ್ನೂ ಚಿಕ್ಕಮಗಳೂರಿನ ಜನತೆಗೆ ತೋರಿಸಲಾಯಿತು ಎನ್ನುತ್ತಾರೆ ಈ ಚಲನಚಿತ್ರೋತ್ಸವದ ರೂವಾರಿಗಳೂ ಆದ ಬಸವ ಮಂದಿರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು.

ಇಲ್ಲಿನ ಪ್ರದರ್ಶನಕ್ಕೆ ಚಿತ್ರಗಳನ್ನು ಆಯ್ಕೆ ಮಾಡುವಾಗ ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಸೇರಿದಂತೆ ನಾಡಿನ ಹಲವರ ಸಲಹೆ-ಸಹಕಾರ ಪಡೆಯಲಾಗಿದೆ. ಈ ಎಲ್ಲಾ ಸಿನೆಮಾಗಳೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಧ್ಯೇಯ ಇಟ್ಟುಕೊಂಡು ನಿರ್ಮಾಣವಾದ ಚಿತ್ರಗಳು. ರಂಜನೆ ಹೆಸರಿನಲ್ಲಿ ಅತೀ ವೈಭವೀಕರಣ, ಅನಾರೋಗ್ಯಕರ ಮನಸ್ಸುಗಳನ್ನು ಬೆಳೆಸುವ ಸಿನೆಮಾಗಳೇ ಹೆಚ್ಚು ಹೆಚ್ಚಾಗಿ ಬರುತ್ತಿರುವ ಈ ಹೊತ್ತಿನಲ್ಲಿ ಇದೇ ಸಿನೆಮಾಗಳ ಮೂಲಕ ಸದಭಿರುಚಿ ಬೆಳೆಸುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು.
ಜನಮಾನಸದ ಮೇಲೆ ಸಿನೆಮಾಗಳು ಬೀರುವ ಪ್ರಭಾವ ಮಹತ್ತರವಾದದ್ದು. ಈ ಹಿನ್ನಲೆಯಲ್ಲಿ ವಾಸ್ತವಿಕತೆಗೆ ಹತ್ತಿರ ಇರುವ ಈ ಸಿನೆಮಾಗಳು ಹೆಚ್ಚು ಹೆಚ್ಚು ಜನರನ್ನು ತಲುಪಬೇಕಿದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ಇಂಥ ಸಿನೆಮಾ ಪ್ರದರ್ಶನಗಳು ಹೆಚ್ಚು ಹೆಚ್ಚು ಪಸರಿಸಬೇಕಿದೆ.
ಸಿನೆಮಾಗಳ ಹಿನ್ನಲೆ:
ಕಾರಣಿಕ ಶಿಶು ಹಾಗೂ ಶಿಶುನಾಳ ಶರೀಫ ಎರಡೂ ಸಿನೆಮಗಳೂ ಧಾರ್ಮಿಕ ಲಾಂಛನಗಳ ಅರ್ಥೈಸುವಿಕೆ ಬೀರುವ ಪರಿಣಾಮ ಹಾಗೂ ಪರಿಣಾಮಗಳನ್ನು ತೀವ್ರವಾಗಿ ತಟ್ಟುತ್ತದೆ. ಶಿಶುಕಂಡ ಕನಸು ಸಿನೆಮಾದಲ್ಲಿ- ಲಿಂಗತಾರಮ್ಯದ ವಿರುದ್ಧ ಜನಿವಾರ ಕಿತ್ತೊಗೆಯುವ ಬಸವಣ್ಣ ಹಾಗೂ ಶಿಶುನಾಳ ಶರೀಫ ನಾಟಕದಲ್ಲಿ ಧರ್ಮದ ತಾರತಮ್ಯದ ವಿರುದ್ಧ ನಿಲ್ಲುವ ಗುರುಗೋವಿಂದ ಭಟ್ಟರು ಮುಸ್ಲಿಂ ವ್ಯಕ್ತಿ ಶರೀಫರಿಗೆ ಜನಿವಾರ ತೊಡಿಸುತ್ತಾರೆ. ಈ ಮೂಲಕ ಧರ್ಮ ಹಾಗೂ ಧಾರ್ಮಿಕ ಲಾಂಛನಗಳು ಸ್ಥಾವರವಾಗದೆ ಜಂಗಮವಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಇವೆರಡೂ ಸಿನೆಮಾಗಳು ಧರ್ಮಗಳನ್ನು ನೋಡುವ- ಅರ್ಥೈಸಿಕೊಳ್ಳುವ- ಅಳವಡಿಸಿಕೊಳ್ಳುವ ಹೊಸ ಆಲೋಚನಾ ದಾಟಿಯನ್ನು ತೋರುತ್ತವೆ.

ಒಬ್ಬ ಮುಗ್ದನಲ್ಲಿ ಇರುವ ಪ್ರಕೃತಿ ಪ್ರೇಮ ವಿದ್ಯಾವಂತರಲ್ಲಿ ಕಂಡು ಬರುವುದಿಲ್ಲ ಇದನ್ನು ವಿಶೇಷವಾಗಿ ಹೇಳಿರುವ ಸಿನೆಮಾ ತಲೆದಂಡ. ಸಂಚಾರಿ ವಿಜಯ್ ಅವರ ಕೊನೆಯ ಸಿನೆಮಾ. ತೇಜಸ್ವಿ ಅವರ ಕತೆ ತಬರನ ಕತೆ- ನಮ್ಮ ವ್ಯವಸ್ಥೆಯ ಕ್ರೂರತೆಯನ್ನು ತೋರುವ ಸಿನೆಮಾ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಕೃತಿ ಅಧರಿಸಿದ ಚಿಗುರಿದ ಕನಸು ಸಿನೆಮಾ- ಮನಷ್ಯನ ಮೂಲವನ್ನು ಸದಾ ಕಾಡುವ ಸಿನೆಮಾ. ನಮ್ಮ ಊರು ಎಂಬ ಅಭಿಮಾನ ಇದ್ದಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ತೋರುವ ಸಿನೆಮಾ ಇದಾಗಿದೆ. ವಚನಕಾರ ಅಲ್ಲಮರ ಬಗ್ಗೆ ನಾಗಭರಣ ನಿರ್ದೇಶನ ಸಿನೆಮಾ ಕೂಡ ಚಿತ್ರೋತ್ಸವದ ವಿಶೇಷ ಆಕರ್ಷಣೆ.
ತಲೆದಂಡ ಹಾಗೂ ಕಾರಣಿಕ ಶಿಶು ಹೊರತುಪಡಿಸಿದರೆ ಉಳಿದ ಎಲ್ಲಾ ಸಿನೆಮಾಗಳೂ ಓಟಿಟಿಯಲ್ಲಿ ಲಭ್ಯವಿವೆ. ಮನೆಯಲ್ಲೇ ಕೂತು ಈ ಸಿನೆಮಾ ನೋಡುವ ಅವಕಾಶವಿದೆ. ಆದರೆ, ಸಿನೆಮಾ ಸಮೂಹ ಮಾಧ್ಯಮ. ಸಮುದಾಯ ಪ್ರಜ್ಞೆಯಲ್ಲಿ ನಿರ್ಮಾಣಗೊಂಡವು. ವಿಶೇಷ ಪರಿಸರದಲ್ಲಿ, ಸಮುದಾಯದೊಂದಿಗೆ ಇಂಥ ಸಿನೆಮಗಳನ್ನು ನೋಡಿದಾಗ ಅವು ನೀಡುವ ಅನುಭವ ವಿಶೇಷವಾದದ್ದು. ಈ ನಿಟ್ಟಿನಲ್ಲಿ ಬಸವಮಂದಿರದಲ್ಲಿ ನಡೆದ ಚಲನಚಿತ್ರೋತ್ಸವ ಚಿಕ್ಕಮಗಳೂರು ಜನತೆಗೆ ಹೊಸ ಅಭಿರುಚಿಯನ್ನು ರೂಢಿಸುವತ್ತ ಒಂದು ದಿಟ್ಟ ಹೆಜ್ಜೆಯೇ ಸರಿ. ನೋಡುವುದ ನೋಡಲರಿಯದೆ ಕೆಟ್ಟಿತ್ತೀಲೋಕವೆಲ್ಲಾ ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ. ನೋಡಬೇಕಾದ್ದನ್ನ ನೋಡಿಸುವ ಜವಾಬ್ದಾರಿ ಸಮಾಜದಲ್ಲಿ ತಿಳವಳಿಕಸ್ಥ ಸ್ಥಾನದಲ್ಲಿ ಇರುವ ಎಲ್ಲರ ಮೇಲಿದೆ.
ನೋಡಿದವರು ಏನಂತಾರೆ?
ಪ್ರೇಕ್ಷಕರು ನಿರೀಕ್ಷೆಗೆ ಮೀರಿ ಬಂದಿದ್ದರು. ವರ್ತಮಾನಕ್ಕೆ ಅಗತ್ಯ ಇರುವ ಸಿನೆಮಾಗಳೇ ಇದ್ದವು. ಈ ಸಿನೆಮಾಗಳು ವಿಭಿನ್ನ ಸಂಸ್ಕೃತಿ ಹಾಗೂ ಕನ್ನಡದ ಭಾಷಾ ಶ್ರೀಮಂತಿಕೆಯನ್ನು ತೋರಿವೆ. ಸಿನೆಮಾಗಳ ಆಯ್ಕೆ ಹಾಗೂ ಪ್ರದರ್ಶನ ಎರಡರಲ್ಲೂ ಅಚ್ಚುಕಟ್ಟುತನ ಕಂಡು ಬಂತು. ಪ್ರತೀ ದಿನವೂ ಪ್ರೇಕ್ಷಕರು ಪ್ರೇಕ್ಷಕರ ಸ್ಪಂದನೆ ಉತ್ತಮವಾಗಿತ್ತು. ಇಂಥ ಚಿತ್ರೋತ್ಸವಗಳು ನಿರಂತರವಾಗಿ ಆಗುವ ಅಗತ್ಯವನ್ನು ಇದು ತೋರಿದೆ.
-ನಳಿನಾ ನಿರಂಜನ, ಶಿಕ್ಷಕಿ.

ಬಸವಣ್ಣವರ ಬಾಲ್ಯವನ್ನು ಇದೂವರೆಗೂ ಕಥಾ ರೂಪದಲ್ಲಿ ಮಾತ್ರ ಕೇಳಿದ್ದೆವು. ಕಾರಣಿಕ ಶಿಶು ದೃಶ್ಯ ರೂಪದಲ್ಲಿ ನೋಡಿದಾಗ ಅಂದಿನ ಸಮಾಜದ ಕಠೋರ ಕಟ್ಟಳೆಗಳು ಮನಕಲಕಿದವು. ಕಣ್ಣು ತೆರೆಸುವ ಸಿನೆಮಾ ಇದು. ಶಿಶುನಾಳ ಶರೀಫರು ಹಾಡುಗಳ ಮೂಲಕ ಹೆಚ್ಚು ಪರಿಚಿತರಾಗಿದ್ದರು. ಅವರ ಜೀವನ ದೃಶ್ಯರೂಪದಲ್ಲಿ ಪ್ರದರ್ಶನಗೊಂಡದ್ದು ಮನಸ್ಸಿನಲ್ಲಿ ಉಳಿಯಿತು. ಗುರುಗಳು ಹಾಗೂ ಪರಿಚಯಸ್ಥರ ಜೊತೆ ಕೂತು ವಿಶಾಲವಾದ ಎಲ್.ಇ.ಡಿ. ಪರದೆಯಲ್ಲಿ ನೋಡುವುದು, ನೋಡಿದ ಸಿನೆಮಾ ಬಗ್ಗೆ ನಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದು ಖುಷಿ ಆಯ್ತು.
-ಭಾರತಿ ಶಿವರುದ್ರಪ್ಪ, ಚಿಕ್ಕಮಗಳೂರು.
ನೋಡುವದನ್ನೇ ನೋಡೋಣ ಎಂಬ ಶೀರ್ಷಿಕೆಯಡಿ ಪ್ರದರ್ಶನಗೊಂಡ ಸಿನೆಮಾಗಳು ಅದ್ಭುತ. ಮತ್ತೆ ಮತ್ತೆ ಕೆಟ್ಟ ಕೆಲಸಗಳನ್ನು ಮಾಡುವ ಬದಲು ಒಳ್ಳೆಯ ಕೆಲಸಗಳನ್ನೇ ಮತ್ತೆ ಮತ್ತೆ ಮಾಡೋಣ- ನೋಡುವದನ್ನೇ ನೋಡೋಣ. ಒಳ್ಳೆಯದನ್ನೇ ಮತ್ತೆ ಮತ್ತೆ ನೋಡೋಣ. ಸಂವಾದ ಇನ್ನಷ್ಟು ಅರ್ಥಪೂರ್ಣವಾಗಿ ಆಗಬೇಕಿತ್ತು. ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗುವ ಭರವಸೆ ಇದೆ. ಕೇವಲ ಧಾರ್ಮಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದ ಬಸವಮಂದಿರ ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಕಾರ್ಯಕ್ಕೆ ಕೈ ಹಾಕಿರುವುದು ಉತ್ತಮ ಬೆಳವಣಿಗೆ.
-ಪಿ. ರವಿಕುಮಾರ, ಸಹಕಾರ ಸಂಘಗಳ ಲೆಕ್ಕಪರಿಶೋಧಕರು. ಚಿಕ್ಕಮಗಳೂರು
ಇತ್ತೀಚೆಗೆ ಟಾಕೀಸ್ಗೆ ಹೋಗಿ ಸಿನೆಮಾ ನೋಡುವ ಅಭ್ಯಾಸ ಕಡಿಮೆ ಆಗಿದೆ. ಅದರಲ್ಲೂ ಕಮರ್ಷಿಯಲ್ ಸಿನೆಮಾಗಳನ್ನೇ ಹೆಚ್ಚಾಗಿ ನೋಡಿದ್ವಿ. ಇಂತ ನೋಡಲೇಬೇಕಾದ ಸಿನೆಮಾಗಳು ನೋಡಲು ಸಿಕ್ಕಿರಲಿಲ್ಲ. ಈಗ ದೊರಕಿದ್ದು, ನಮ್ಮೆಲ್ಲರಿಗೂ ಸಿಕ್ಕ ಸುವರ್ಣ ಅವಕಾಶ ಎಂದರೇ ತಪ್ಪಾಗದು. ಇಲ್ಲಿ ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ಸಿನೆಮಾಗಳು. ಎಲ್ಲವೂ ಅಚ್ಚುಕಟ್ಟಾಗಿ, ತುಂಬಾ ಚೆನ್ನಾಗಿ ಆಯ್ತು. ಬಸವಮಂದಿರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳ ಅಭಿರುಚಿ ಹಾಗೂ ಭಕ್ತರಲ್ಲೂ ಇಂಥ ಅಭಿರುಚಿ ಬೆಳೆಸುವ ಪ್ರಯತ್ನ ಮೆಚ್ಚುವಂತಾದ್ದು.
-ಸಿ.ಎಲ್. ಜಗದೀಶಬಾಬು, ಚಿಕ್ಕಮಗಳೂರು.