ಬೀದರ್
ಬಸವಾದಿ ಶರಣರ ಸಮಾಜೋಧಾರ್ಮಿಕ ಕ್ರಾಂತಿ ಹಾಗೂ ಸಮ ಸಮಾಜದ ತತ್ವಾದರ್ಶಗಳ ಪ್ರಸಾರಕ್ಕಾಗಿ ಆರಂಭಿಸಿರುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನವೆಂಬರ್ 23, 24ರಂದು ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ನಡೆಯಲಿದೆ.
ನ. 23ರಂದು ಬೆಳಿಗ್ಗೆ 9.30ಕ್ಕೆ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಶಶಿಕಾಂತ ದುರ್ಗೆ ಗುರುಬಸವ ಪೂಜೆ ನೆರವೇರಿಸುವರು. ಸಾಹಿತಿ ಸಿದ್ದಣ್ಣ ಲಂಗೋಟಿ ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 11ಕ್ಕೆ ನಡೆಯಲಿರುವ ಪ್ರಧಾನ ಕಾರ್ಯಕ್ರಮವನ್ನು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಉದ್ಘಾಟಿಸುವರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರಶಸ್ತಿ ಪ್ರದಾನ ಮಾಡುವರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಗ್ರಂಥ ಬಿಡುಗಡೆಗೊಳಿಸುವರು. ಗದಗ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ, ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು ಎಂದು ವಿವರಿಸಿದರು.
ಮಧ್ಯಾಹ್ನ 2ಕ್ಕೆ ‘ಲಿಂಗಾಯತ ಹೋರಾಟ: ಮುಂದೇನು?’ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉಪನ್ಯಾಸ ನೀಡುವರು. ಸಂಜೆ ‘ಮಹಾಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ನ. 24ರಂದು ಬೆಳಿಗ್ಗೆ 6ಕ್ಕೆ ನಗೆಯೋಗ ಕೂಟ ಜರುಗಲಿದೆ. ಬೆಳಿಗ್ಗೆ 7ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜಾ ಯೋಗ ಜರುಗಲಿದೆ. ಯೋಗ ತಜ್ಞ ಡಾ. ಅಮರನಾಥ ಸೋಲಪೂರೆ ಪ್ರಾತ್ಯಕ್ಷಿಕೆ ತೋರಿಸುವರು. ಬೆಳಿಗ್ಗೆ 10ಕ್ಕೆ ನಡೆಯಲಿರುವ ‘ಬಸವಕಲ್ಯಾಣ ವಿಕಾಸ: ಅಂದು–ಇಂದು–ಮುಂದು’ ಕುರಿತು ಸಾಹಿತಿ ಶಿವಶರಣಪ್ಪ ಹುಗ್ಗೆ ಪಾಟೀಲ ಉಪನ್ಯಾಸ ನೀಡುವರು. 11 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು. ಮಧ್ಯಾಹ್ನ 1ಕ್ಕೆ ನಡೆಯಲಿರುವ ಸಮಾರೋಪದ ಸಾನ್ನಿಧ್ಯವನ್ನು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು ವಹಿಸುವರು. ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ ಸಮ್ಮುಖ ವಹಿಸುವರು ಎಂದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಅವರು ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.