ನುಡಿದಂತೆ ನಡೆದ ಸಂತ ಶ್ರೀ ಶಿವಕುಮಾರ ಸ್ವಾಮಿಗಳು

ಸಾಣೇಹಳ್ಳಿ

ಮಠ ಮತ್ತು ಮಠದ ಸ್ವಾಮಿಗಳೆಂದರೆ ಮೂಢನಂಬಿಕೆ, ಕಂದಾಚಾರ, ಅವೈಚಾರಿಕತೆಗಳ ತವರು ಎನ್ನುವ ಭಾವನೆ ಇದ್ದೇ ಇದೆ. ಇದಕ್ಕೆ ಅಪವಾದ ಎನ್ನುವಂತೆ ಬೆಳೆದುಬಂದದ್ದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಆ ಮಠದ ಪೂಜ್ಯರು.

ಈ ಮಠದ ಮೂಲಪುರುಷ ‘ವಿಶ್ವಬಂಧು ಮರುಳಸಿದ್ಧ’ರು. ಹುಟ್ಟಿನ ಕಾರಣಕ್ಕಾಗಿ ಸಮಗಾರರು. ತಮ್ಮ ಚಿಂತನೆ, ಸಾಮಾಜಿಕ ಕಳಕಳಿ, ದೂರದೃಷ್ಟಿಯ ಕಾರಣದಿಂದ ‘ವಿಶ್ವಬಂಧು’ ಎನಿಸಿಕೊಂಡವರು. ಅವರಿಂದ ಸ್ಥಾಪಿತವಾದದ್ದೇ `ತರಳಬಾಳು ಜಗದ್ಗುರು ಪೀಠ’. ಈ ಪೀಠದಲ್ಲಿ ಈಗಾಗಲೇ ೨೧ ಜಗದ್ಗುರುಗಳು ಸಮಾಜೋ-ಧಾರ್ಮಿಕ ಸೇವಾಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ.

ಅವರಲ್ಲಿ ೨೦ನೆಯ ಪೀಠಾಧ್ಯಕ್ಷರಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವ್ಯಕ್ತಿತ್ವ, ಸಮಾಜ ಕಟ್ಟಿದ ರೀತಿ, ಶಿಕ್ಷಣಕ್ಕೆ ನೀಡಿದ ಮಹತ್ವ, ಧರ್ಮಪ್ರಚಾರ ಮಾಡಿದ ವಿಧಾನ, ಶಿಷ್ಯವಾತ್ಸಲ್ಯ, ತಾಯ್ತನ, ನ್ಯಾಯನಿಷ್ಠುರತೆ, ತ್ಯಾಗ ಮುಂತಾದವುಗಳನ್ನು ಮರೆಯಲು ಸಾಧ್ಯವಿಲ್ಲ.

ಅವರು ತರಳಬಾಳು ಜಗದ್ಗುರು ಪೀಠಾಧ್ಯಕ್ಷರಾಗಿದ್ದು ೧೯೪೦ರಲ್ಲಿ. ಆಗ ಪೀಠ ಅವರಿಗೆ ಹೂವಿನ ಹಾಸಿಗೆಯಾಗದೆ ಮುಳ್ಳಿನ ಹಾಸಿಗೆಯಾಗಿತ್ತು. ಮಠ ಒಂದು ಒಡೆದ ಮಡಕೆಯಂತಾಗಿತ್ತು. ಅಂತಹ ಮಡಕೆಯ ಚೂರುಗಳಿಂದಲೇ ಹೊಸ ಮಡಕೆಯನ್ನು ನಿರ್ಮಾಣ ಮಾಡಿದ್ದು ಪೂಜ್ಯರ ಹೆಗ್ಗಳಿಕೆ.

ಹಾಗೆ ಮಾಡುವಲ್ಲಿ ಅವರು ತೋರಿದ ಜಾಣ್ಮೆ, ತೆಗೆದುಕೊಂಡ ದಿಟ್ಟಹೆಜ್ಜೆ, ಧೀರಕ್ರಮ, ಕರುಣೆ, ಕಾಠಿಣ್ಯ ಅವರ್ಣನೀಯ.

ಪೂಜ್ಯರ ಸಂಪರ್ಕದಲ್ಲಿದ್ದು ಅವರ ಆಶೀರ್ವಚನ ಕೇಳಿದವರೇ ಭಾಗ್ಯವಂತರು. ಅವರದು ನೇರ ನಡೆ-ನುಡಿ. ಮಾನವನ ಮನ ನೊಂದೀತೆಂದು ಸತ್ಯಕ್ಕೆ ಭಂಗ ತಂದವರಲ್ಲ. ಅವರೊಮ್ಮೆ ತಮ್ಮ ಆಶೀರ್ವಚನದಲ್ಲಿ ‘ಮನೆಯಲ್ಲಿ ಯಾವ ಕೆಲಸಕ್ಕೂ ಬಾರದವನನ್ನು ಒಂದು ಮಠಕ್ಕೆ ಮರಿಯನ್ನಾಗಿ ಮಾಡಿದರೆ, ಸಾಲ ಹೆಚ್ಚಾಗಿ ಸೋಮಾರಿಯಾದವನನ್ನು ಸೈನ್ಯಕ್ಕೆ ಸೇರಿಸಿದರೆ, ಊರ ಉಡಾಳನಾದ ನಿರುದ್ಯೋಗಿಯೊಬ್ಬನು ರಾಜಕೀಯ ಸೇರಿದರೆ ಅಂಥವರಿಂದ ಏನನ್ನು ನಿರೀಕ್ಷಣೆ ಮಾಡಲು ಸಾಧ್ಯ?’ ಎಂದು ಪ್ರಶ್ನಿಸಿದ್ದನ್ನು ಮಹಾದೇವ ಬಣಕಾರರು ದಾಖಲಿಸಿದ್ದಾರೆ.

ಪೂಜ್ಯರ ನಡಾವಳಿಯನ್ನು ಕಂಡ ನಮಗೆ ನೆನಪಾಗುವುದು ‘ಹೇಡಿಂಗೆ ಹಿರಿತನವು, ಮೂಢಂಗೆ ಗುರುತನವು, ನಾಡ ನೀಚಂಗೆ ದೊರೆತನವು ದೊರೆತರೆ ನಾಡಿಂಗೆ ಕೇಡು ತಪ್ಪದು ಸರ್ವಜ್ಞ’ ಎನ್ನುವ ವಚನ. ಗುರುಗಳು ಕಾಶಿಯಲ್ಲಿ ಸಂಸ್ಕೃತ ಓದಿ ಸಂಸ್ಕೃತದಲ್ಲಿ ಕಾವ್ಯ ರಚನೆ ಮಾಡುವಷ್ಟು ಪಾಂಡಿತ್ಯ ಪಡೆದವರು. ಆದರೆ ಜನಸಾಮಾನ್ಯರಾಡುವ ಕನ್ನಡವನ್ನೇ ತಮ್ಮ ಮಾತು, ಬರಹಗಳಲ್ಲಿ ಬಳಸುತ್ತಿದ್ದರು.

ಸಂಸ್ಕೃತದಲ್ಲಿ ಪಾಂಡಿತ್ಯವಿದ್ದರೂ ಸಂಸ್ಕೃತದ ವ್ಯಾಮೋಹ ಅವರಗಿರಲಿಲ್ಲ.

ಕಾಶಿಯಲ್ಲಿ ಓದುತ್ತಿದ್ದಾಗ ಅವರಿಗೆ ಬೋಧನೆ ಮಾಡಿದ ಗುರುಗಳು ಗೌರಿನಾಥ ಪಾಠಕ್‌ರು. ಅವರನ್ನು ಪದೇ ಪದೇ ಸ್ಮರಿಸಿಕೊಳ್ಳುತ್ತಿದ್ದರು. ‘ನಮ್ಮ ವಿದ್ಯಾಗುರುಗಳು ನಮಗೆ ಕಲಿಸಿದ್ದು ಸಂಸ್ಕೃತ ವಿದ್ಯೆಗಿಂತ ಸುಸಂಸ್ಕೃತ ವಿದ್ಯೆಯನ್ನು. ಅದನ್ನೇ ನಾವು ವ್ಯಾವಹಾರಿಕ ವಿದ್ಯೆ ಎಂದು ಕರೆಯುತ್ತೇವೆ’ ಎಂದು ತಮ್ಮ ‘ದಿಟ್ಟಹೆಜ್ಜೆ ಧೀರಕ್ರಮ’ದಲ್ಲಿ ಹೇಳಿಕೊಂಡಿದ್ದಾರೆ. ಹೌದು; ಅವರು ಸುಸಂಸ್ಕೃತರು, ವ್ಯವಹಾರ ಚತುರರು. ಶಿಕ್ಷಣ ಪ್ರೇಮಿಗಳು. ಸಾಮಾಜಿಕ ಕಳಕಳಿಯುಳ್ಳವರು.

ಡಾ. ಹಾ ಮ ನಾಯಕ ಅವರು ಪೂಜ್ಯರ ‘ದಿಟ್ಟಹೆಜ್ಜೆ ಧೀರಕ್ರಮ’ ಕುರಿತು ಬರೆದ ‘ನುಡಿಗಾಣಿಕೆ’ಯಲ್ಲಿ ‘ಸ್ವಾಮಿಗಳು ನನ್ನ ಗೌರವಕ್ಕೆ ಪಾತ್ರರಾದ ವಿರಳರಲ್ಲಿ ಒಬ್ಬರು. ವಾಸ್ತವವಾಗಿ ನಾನು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಕಂಡದ್ದು ಒಂದೇ ಒಂದು ಸಲ. ಅವರ ಒಂದು ಕಾಲೇಜಿನ ಪರಿಶೀಲನೆಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜಕ ಸಮಿತಿಯಲ್ಲಿ ಸಿರಿಗೆರೆಗೆ ಹೋಗಿದ್ದೆ. ಸ್ವಾಮಿಗಳನ್ನು ಮೊದಲ ಬಾರಿಗೆ ಕಂಡ ಚಿತ್ರ ನನ್ನ ಮನಸ್ಸಿನಲ್ಲಿ ಹಸುರಾಗಿದೆ.

ಯಾವುದೋ ಒಂದು ಕಟ್ಟಡದ ಕೆಲಸ ನಡೆಯುತ್ತಿತ್ತು. ಸ್ವಾಮಿಗಳು ಮಣ್ಣು ರಾಶಿಯೊಂದರ ಮೇಲೆ ನಿಂತುಕೊಂಡು ಕೆಲಸಗಾರರಿಗೆ ಸೂಚನೆ ಕೊಡುತ್ತಿದ್ದರು. ಅವರ ಕಾವಿಯುಡುಗೆಯಿಂದ ಸ್ವಾಮಿಗಳೆಂದು ಗುರುತಿಸಿದೆ. ಇಲ್ಲದಿದ್ದರೆ ಕೆಲಸಗಾರರಲ್ಲಿ ಅವರೊಬ್ಬ ಕೆಲಸಗಾರರು. ಅದು ಕೈಲಾಸವಾಗುವ ಕಾಯಕ. ಕರ್ಮಯೋಗಿ ಸಿದ್ಧರಾಮನ ಸಂಕೇತ. ಇದು ಅನೇಕ ವರ್ಷಗಳ ಹಿಂದಿನ ಮಾತು’ ಎಂದಿದ್ದಾರೆ.

ನಾವು ವಿದ್ಯಾರ್ಥಿಗಳಾಗಿ ಪೂಜ್ಯರನ್ನು ಕಂಡ ದೃಶ್ಯ ಈಗಲೂ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ನಾವು ಸಿರಿಗೆರೆಯಲ್ಲಿ ಪಿಯುಸಿ ಓದುತ್ತಿದ್ದಾಗ ‘ಮಹಾಮನೆ’ಯ ಕಟ್ಟಡಕ್ಕೆ ಆರ್‌ಸಿಸಿ ಹಾಕುವ ಕೆಲಸ ನಡೆದಿತ್ತು. ಮರಳು, ಜಲ್ಲಿ ಮಿಶ್ರಣದ ಕಾಂಕ್ರೀಟನ್ನು ಬಾಣಲಿಯಲ್ಲಿ ತುಂಬಿ ಸಾಗಿಸಲು ವಿದ್ಯಾರ್ಥಿಗಳ ಬಳಕೆ ಮಾಡಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಅವರೇ ಮರಳು ತುಂಬುವ, ತುಂಬಿದ ಪುಟ್ಟಿಯನ್ನು ವಿದ್ಯಾರ್ಥಿಗಳ ತಲೆಯ ಮೇಲೆ ಇಡುತ್ತಿದ್ದರು. ಪೂಜ್ಯರೇ ಕೈ ಮುಟ್ಟಿ ಕೆಲಸ ಮಾಡುವಾಗ ವಿದ್ಯಾರ್ಥಿಗಳು ಸೋಮಾರಿಯಾಗಲು ಹೇಗೆ ಸಾಧ್ಯ? ಗುರುಗಳು ತಾವು ಕಾಯಕ ಮಾಡುತ್ತಲೇ ಬೇರೆಯವರಿಗೂ ಸ್ಪೂರ್ತಿಯನ್ನು ತುಂಬುತ್ತಿದ್ದರು. ಇಂಥ ಅನೇಕ ಉದಾಹರಣೆಗಳನ್ನು ಕೊಡಬಹುದು.

ಜಾತ್ಯತೀತ ಗುಣ ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಹಾಗಾಗಿ ಮೀಸಲಾತಿ ಸೌಲಭ್ಯ ಇಲ್ಲದಿದ್ದಾಗಲೇ ತರಳಬಾಳು ವಿದ್ಯಾಸಂಸ್ಥೆಯಲ್ಲಿ ಎಲ್ಲ ವರ್ಗದ ನೌಕರರು ಸೇವೆ ಸಲ್ಲಿಸುತ್ತಿದ್ದರು. ವಿದ್ಯಾರ್ಥಿನಿಲಯ ಮತ್ತು ಮಠದಲ್ಲಿ ಜಾತಿಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕೂತು ಪ್ರಸಾದ ಸ್ವೀಕರಿಸುತ್ತಿದ್ದರು. ಇದನ್ನು ಕಂಡ ಕೆಲವು ಮಡಿವಂತ ಲಿಂಗಾಯತರು ಬುದ್ಧಿ ಲಿಂಗಾಯತರಿಗೇ ಬೇರೆ, ಇತರೆ ಜನಾಂಗದವರಿಗೇ ಬೇರೆ ಊಟ, ವಸತಿಯ ವ್ಯವಸ್ಥೆ ಮಾಡಿರಿ ಎಂದಾಗ ಬೇಕಾದರೆ ಈ ಪೀಠವನ್ನು ತ್ಯಜಿಸುತ್ತೇವೆ, ನಮ್ಮ ಜಾತ್ಯತೀತ ಮನೋಭಾವನೆಯನ್ನಲ್ಲ ಎಂದು ದಿಟ್ಟತನದಿಂದ ಹೇಳಿ ಅವರ ಮನಸ್ಸನ್ನು ಪರಿವರ್ತನೆ ಮಾಡಿದ ಶರಣರವರು.

‘ಮಠಗಳೆಂದರೆ ಅಂಧಶ್ರದ್ಧೆಯ ಗೂಡು, ಗುಡಿಗಳೆಂದರೆ ಕಂದಾಚಾರದ ಕೂಪ. ಇವನ್ನು ತೊಡೆದುಹಾಕದೆ ಪರಿಶುದ್ಧ ಜನಾಂಗವನ್ನು, ವಿಚಾರಶೀಲ ಜನತೆಯನ್ನು ನಾವು ಕಾಣಲಾರೆವು’ ಎಂದು ಶಿಷ್ಯರಿಗೆ ಹೇಳುತ್ತ ಅವರನ್ನು ಮೂಢನಂಬಿಕೆಗಳ ಹುತ್ತದಿಂದ ಹೊರತಂದವರು.

ಬಸವಣ್ಣನವರ ಸಂತಾನ ತಾವೆನ್ನುವವರೇ ಮತ್ತೆ ಲಿಂಗಾಯತ ಒಂದು ಜಾತಿ ಎನ್ನುವುದನ್ನು ಅವರು ಪ್ರತಿಭಟಿಸುತ್ತಿದ್ದರು. ‘ಅಸಂಬದ್ಧ ಜಾತಿಗಳನ್ನು ನಿರ್ಮೂಲನೆ ಮಾಡಿದ ಬಸವಣ್ಣನು ಲಿಂಗಾಯತ ಜಾತಿಯನ್ನು ಸೃಷ್ಟಿಸಿದನೇ’ ಎಂದು ಕೇಳುತ್ತ ಅದೊಂದು ಧರ್ಮ, ತತ್ವ, ಸಿದ್ಧಾಂತ ಎಂದು ಪ್ರತಿಪಾದಿಸುತ್ತಿದ್ದರು.

ನಾವು ಕಂಡಂತೆ ಅವರು ಧಾರ್ಮಿಕ, ರಾಜಕೀಯ, ಸಾಮಾಜಿಕ, ವ್ಯಾವಹಾರಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆನೆಯಂತೆ ಹೊಸ ಹೊಸ ಹೆಜ್ಜೆಯನ್ನಿಟ್ಟವರು. ಅವರದು ‘ಸವೆದ ಜಾಡಲ್ಲ; ಹೊಸ ರಾಜಮಾರ್ಗ’, ಮೂಢಾಚರಣೆಗಳನ್ನು ಅವರಂತೆ ಕಟುವಾಗಿ ವಿರೋಧಿಸಿದವರು ವಿರಳ.

ಹಾಗಾಗಿ ಏನೇ ಕಾರ್ಯ ಮಾಡಲು ಅಮಾವಾಸ್ಯೆ, ಹುಣ್ಣಿಮೆ, ರಾಹುಕಾಲ, ಶುಭದಿನ ಎಂದು ನೋಡಿದವರಲ್ಲ. ‘ಎಮ್ಮವರು ಬೆಸಗೊಂಡರೆ ಶುಭಲಗ್ನ’ ಎನ್ನುವ ಬಸವಣ್ಣನವರ ತತ್ವದಂತೆ ನಡೆದವರು, ಅದನ್ನೇ ಭಕ್ತರಿಗೆ ಕಲಿಸಿದವರು. ತಾವೇ ಒಬ್ಬ ಮಠಾಧಿಪತಿಯಾಗಿ, ಜಗದ್ಗುರುವಾಗಿ ಬೇರೆ ಮಠಾಧೀಶರ, ಜಗದ್ಗುರುಗಳ ಅವಗುಣಗಳನ್ನು ಹೇಳಲು ಹಿಂದೆ ಮುಂದೆ ನೋಡಿದವರಲ್ಲ. ಅದಕ್ಕೆ ಸಾಕ್ಷಿ ಅವರ ‘ಆತ್ಮನಿವೇದನೆ’ ಮತ್ತು ‘ದಿಟ್ಟಹೆಜ್ಜೆ ಧೀರಕ್ರಮ’ ಪುಸ್ತಕ.

ತತ್ವಗಳನ್ನು ಮಾರಿ ಅಥವಾ ಗಾಳಿಗೆ ತೂರಿ ಮಠ ಕಟ್ಟಿಕೊಳ್ಳುವುದನ್ನು ಅವರೆಂದೂ ಸಹಿಸುತ್ತಿರಲಿಲ್ಲ. ಮಠಾಧೀಶರು ನ್ಯಾಯನಿಷ್ಠುರರಾಗಿರಬೇಕು, ದಾಕ್ಷಿಣ್ಯಪರರಾಗಿರಬಾರದು ಎಂದು ಗಟ್ಟಿಧ್ವನಿಯಲ್ಲಿ ಹೇಳುತ್ತಿದ್ದರು.

ಒಮ್ಮೆ ಯಾವುದೇ ಸ್ಥಾನಮಾನ ಪಡೆದವರು ಸಾಯುವವರೆಗೂ ಆ ಸ್ಥಾನಮಾನದಲ್ಲೇ ಇರಬೇಕೆಂದು ಏನೆಲ್ಲ ತಂತ್ರಗಳನ್ನು ಮಾಡುವುದು ಸರ್ವೇಸಾಮಾನ್ಯ. ಇದಕ್ಕೆ ಅಪವಾದವಾಗಿದ್ದವರು ನಮ್ಮ ಗುರುಗಳು. ಅವರು ತಮ್ಮ ೬೦ನೆಯ ವಯಸ್ಸಿಗೆ ಪೀಠತ್ಯಾಗ ಮಾಡುವುದಾಗಿ ತಮ್ಮ ೫೩ನೆಯ ವಯಸ್ಸಿನಲ್ಲೇ ಘೋಷಿಸಿದ್ದರು. ಘೋಷಿಸಿದ್ದು ಮಾತ್ರವಲ್ಲ; ತಮಗೆ ಇನ್ನೂ ದೈಹಿಕ, ಮಾನಸಿಕ, ಬೌದ್ಧಿಕ ಆರೋಗ್ಯವಿದ್ದಾಗಲೇ ೬೦ ವರ್ಷ ತುಂಬುತ್ತಲೇ ತ್ಯಾಗಪತ್ರವನ್ನು ಸಲ್ಲಿಸಿ ಯೋಗ್ಯ ಉತ್ತರಾಧಿಕಾರಿಗಳನ್ನು ಮಾಡಿಕೊಳ್ಳಿ ಎಂದು ಸಾಧು ಸದ್ಧರ್ಮ ಸಂಘಕ್ಕೆ ಹೇಳಿದವರು. ಇಂಥ ತ್ಯಾಗಜೀವಿಗಳನ್ನು ರಾಜಕೀಯ, ಧಾರ್ಮಿಕ ಹೀಗೆ ಬೇರಾವ ಕ್ಷೇತ್ರಗಳಲ್ಲೂ ಕಾಣಲು ಸಾಧ್ಯವಿಲ್ಲ.

ಅವರು ತ್ಯಾಗಪತ್ರ ಕೊಟ್ಟ ನಂತರ ಸಿರಿಗೆರೆಯಲ್ಲಿರದೆ ಮುತ್ತಗದೂರಿನ ತರಳಬಾಳು ವೃತ್ತದ ಶ್ರೀ ಗುರುಶಾಂತನಿಕೇತನದಲ್ಲಿ ನಿಜವಾದ ಸಂತರ ಜೀವನ ನಡೆಸಿದರು. ಅವರ ಸಾಧನೆಗಳ ಸಾಲು ಸಾಲುಗಳೇ ಇಂದು ನಮ್ಮ ಕಣ್ಮುಂದೆ ಇವೆ. ಅವರಿಗೆ ಭಕ್ತರ ಏಳಿಗೆ, ಸಮಾಜದ ಪ್ರಗತಿ, ಮಠದ ಘನತೆ, ಮರುಳಸಿದ್ಧ ಮತ್ತು ಬಸವಾದಿ ಶರಣರ ತತ್ವಾದರ್ಶಗಳು, ಬದುಕಿನಲ್ಲಿ ಬದ್ಧತೆ ಮುಖ್ಯವಾಗಿದ್ದವು.

ಹಗಲಿರುಳೆನ್ನದೆ ನಾಲ್ಕು ದಶಕಗಳ ಕಾಲ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ ಮತ್ತಿತರ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದರೂ ಮಾಡಿದೆನೆಂಬ ಮೋಹ ಇಲ್ಲದೆ ನಡೆ-ನುಡಿಯೊಂದಾಗಿ ಆದರ್ಶ ಜೀವನ ನಡೆಸಿ ೧೯೯೨ ಸೆಪ್ಟೆಂಬರ್ ೨೪ ರಂದು ಶಿವನ ಪಾದ ಸೇರಿದರು.

ಅವರ ೩೪ನೆಯ ಪುಣ್ಯಸ್ಮರಣೆ ಸಾಣೇಹಳ್ಳಿಯಲ್ಲಿ ೨೦೨೫ ಸೆಪ್ಟೆಂಬರ್ ೨೪ರ ಬುಧವಾರ ಅವರ ಆದರ್ಶಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಡೆಯಲಿದೆ. ಇಂಥ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು, ಪೂಜ್ಯರ ಆದರ್ಶಗಳನ್ನು ಸ್ಮರಿಸಿಕೊಂಡು, ಅವರ ಹೆಜ್ಜೆಯಲ್ಲಿ ಹೆಜ್ಜೆ ಹಾಕುವ ಸಂಕಲ್ಪ ಮಾಡೋಣ. ಅವರು ತೋರಿದ ಬೆಳಕಿನಲ್ಲಿ ನಡೆಯೋಣ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *