ಬಾಗಲಕೋಟೆ
12ನೇ ಶತಮಾನದಲ್ಲಿ ಮೇಲು-ಕೀಳು ಭೇದಭಾವ ಹಾಗೂ ಜಾತಿಯ ಅಡೆತಡೆಗಳನ್ನು ತೊಡೆದು ಹಾಕಿ, ಎಲ್ಲರೂ ಸಮಾನರು ಎಂಬ ತತ್ವ ಹೋರಾಟ ನಡೆಸಿದ ಶರಣರಲ್ಲಿ ನುಲಿಯ ಚಂದಯ್ಯನವರೂ ಇದ್ದರು. ಮಾನವ ಅಂತಃಕರಣದ ಪೂರ್ಣತೆಯಿಂದ ಕೂಡಿದವರಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.
ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣವರು 12ನೇ ಶತಮಾನದಲ್ಲಿ ಎಲ್ಲಾ ಸಮುದಾಯಗಳ ಅಂತಃಕರಣ ಹೊಂದಿದವರನ್ನು ಗುರುತಿಸಿ ಅನುಭವ ಮಂಟಪ ಮಾಡಿದ್ದರು. ಆ ಕಾಲದಲ್ಲೇ ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದರು ಎಂದರು.
ಶಿವಶರಣರ ತತ್ವಗಳು ಯಾವಾಗಲೂ ಮಾನವೀಯತೆ, ಮನುಷ್ಯ ಜಾತಿ ಒಂದೇ ಎಂಬುದು, ಎಲ್ಲರ ಏಳಿಗೆಗಾಗಿ ದುಡಿಯುವ ಮನೋಭಾವ ಹೊಂದಿರುವುದಾಗಿವೆ. ಜಗತ್ತಿನ ಅನೇಕ ಭಾಗಗಳಲ್ಲಿ ಬಸವಣ್ಣವರ ಮೂರ್ತಿಸ್ಥಾಪನೆ ಮಾಡಲಾಗಿದೆ. ಎಲ್ಲರೂ ಕಾಯಕ ನಿಷ್ಠೆ ಪಾಲಿಸಬೇಕು ಎಂದು ಹೇಳಿದರು.
ಬಾದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಶಿವಶರಣರು ಹೋರಾಡಿದ ವಿಷಯಗಳು ಹಾಗೂ ಇಂದಿನ ದಿನಮಾನದಲ್ಲಿ ನುಲಿಯ ಚಂದಯ್ಯರ ವಚನಗಳ ಮಹತ್ವದ ಕುರಿತು ವಿವರಿಸಿದರು.
ಸಮುದಾಯದ ಜಿಲ್ಲಾಧ್ಯಕ್ಷ ಅಶೋಕ ಭಜಂತ್ರಿ, ಗೌರವಾಧ್ಯಕ್ಷ ಮೋಹನ್ ದಾಸ್ ಕಟ್ಟಿಮನಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಭಜಂತ್ರಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.