ಮಠಾಧೀಶರ ಒಕ್ಕೂಟದ ಸಮಾವೇಶದಲ್ಲಿ ತಲೆಯೆತ್ತಿದ ಮೀಸಲಾತಿ ವಿವಾದ

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ

ಲಿಂಗಾಯತ ಮಠಾಧೀಶರ ಒಕ್ಕೂಟದ ಸಮಾವೇಶದಲ್ಲಿ ಮೀಸಲಾತಿ ವಿಷಯದ ಮೇಲೆ ವಿರೋಧ ಪರ ಮಾತುಗಳು ಕೇಳಿ ಬಂದವು ಎಂದು ತಿಳಿದು ಬಂದಿದೆ.

ಹಿಂದುಳಿದ ಪಂಗಡದಿಂದ ಬಂದಿರುವ ಸ್ವಾಮೀಜಿಯೊಬ್ಬರ ಭಾಷಣವನ್ನು ವೀರಶೈವ ಶ್ರೀಗಳೊಬ್ಬರು ಪ್ರತಿಭಟಿಸಿದರು. ಮಾತು ಕಾವೇರುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಪ್ರಮುಖ ಶ್ರೀಗಳೊಬ್ಬರು ಮೈಕ್ ವಾಪಸ್ಸು ಪಡೆದುಕೊಂಡರು ಎಂದು ಸಮಾವೇಶದಲ್ಲಿ ಭಾಗವಹಿಸಿದವರೊಬ್ಬರು ಬಸವ ಮೀಡಿಯಾಗೆ ತಿಳಿಸಿದರು.

ಮೊದಲು ಮಾತನಾಡಿದ ಹಿಂದುಳಿದ ಪಂಗಡಗಳ ಪ್ರಮುಖ ಸ್ವಾಮೀಜಿಯೊಬ್ಬರು
“ಒಕ್ಕೂಟದ ಹಲವಾರು ಸ್ವಾಮಿಗಳು ಜಾತಿಯಿಂದ ಲಿಂಗಾಯತರಲ್ಲ, ಆದರೆ ಆಚರಣೆಯಿಂದ ಲಿಂಗಾಯತರು.

ಆದರೆ ಇಂದು ಉತ್ತಮ ಜಾತಿಯವರು ಅನ್ನಿಸಿಕೊಂಡ ಸ್ವಾಮಿಗಳೆಲ್ಲ ನಮಗೆ ಮೀಸಲಾತಿ ಬೇಕು ಎಂಬ ಕೇಳುತ್ತಾ ದಲಿತರ ತಾಟಿನ ಅನ್ನಕ್ಕೆ ಕೈ ಹಾಕುತ್ತಿದ್ದಾರೆ. ಇದೆಂತಹ ವಿಪರ್ಯಾಸ?

ಸಮಾಜ ತಿದ್ದಬೇಕಾದ ನಾವೇ ಒಂದು ಜಾತಿಗೆ ಸೀಮಿತವಾಗಿ ತುಳಿತಕ್ಕೊಳಗಾದವರಿಗೆ ಸಿಗಬೇಕಾದ ಮೀಸಲಾತಿ ಅವಕಾಶಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುವುದು ನನಗೇನೋ ಸರಿಯೆನಿಸುವುದಿಲ್ಲ.

ನಮ್ಮನ್ನು ನಂಬಿ ಲಿಂಗಾಯತರಾದ ಸಾಮಾನ್ಯ ಜನರ ಪರಿಸ್ಥಿತಿ ತುಂಬಾ ಅಯೋಮಯ. ಅವರಿಗಿದ್ದ ಮೀಸಲಾತಿ ಸೌಲಭ್ಯ ಇಂದು ಅವರಿಗೆ ಸಿಗುತ್ತಿಲ್ಲ, ಇನ್ನೊಂದೆಡೆ ಅವರನ್ನು ಲಿಂಗಾಯತರೆಂದು ಸಂಪೂರ್ಣವಾಗಿ ನಾವೂ ಅಹ ಒಪ್ಪಿಕೊಳ್ಳುತ್ತಿಲ್ಲ, ಮೊದಲು ನಾವು ಬದಲಾಗಿ ಜಾತಿ ಮನಸ್ಥಿತಿಯಿಂದ ಹೊರಬರಬೇಕು” ಎಂದರು.

ಅದರಿಂದ ಸಿಟ್ಟಾದ ವೀರಶೈವ ಸ್ವಾಮೀಜಿಯೊಬ್ಬರು ಎದ್ದು ಬಂದು “ದಲಿತ ಒಕ್ಕೂಟದ ಪ್ರಮುಖ ಸ್ವಾಮೀಜಿಯವರು ಹೇಳಿದಂತೆ ನಾವು ಯಾರ ತಟ್ಟೆಗೆ ಕೈ ಹಾಕಿ ಅನ್ನವನ್ನು ಕಸಿದುಕೊಂಡಿದ್ದೇವೆಂದು ದಾಖಲೆ ಸಹಿತ ಸಾಬೀತುಪಡಿಸಬೇಕು” ಎಂದರು.

ಅಲ್ಲಿದ್ದ ಇತರ ಸ್ವಾಮೀಜಿಗಳೆಲ್ಲ “ಇವಾಗ ಅದನ್ನು ಮಾತನಾಡಲು ಸಮಯವಲ್ಲ, ನಾವೆಲ್ಲಾ ಆಮೇಲೆ ಮಾತನಾಡಿ ಬಗೆಹರಿಸಿಕೊಳ್ಳೋಣ” ಎಂದರು.

ಆದರೂ ಅದನ್ನು ತಲೆಗೆ ಹಾಕಿಕೊಳ್ಳದ ವೀರಶೈವ ಸ್ವಾಮೀಜಿ “ಇಲ್ಲ, ಇಲ್ಲ, ಅವರು ಹೇಳಿದ್ದಕ್ಕೇ ನಾನು ಕೇಳುತ್ತಿರುವುದು. ನೀವು ಅವರು ಮಾತನಾಡುವಾಗ ಸುಮ್ಮನಿದ್ದು ನಾನು ಮಾತನಾಡುವಾಗ ಹೀಗೆ ಮಾಡಿದರೆ ಹೇಗೆ? ಎಂದು ಕೋಪಗೊಂಡರು.

ಆಗ ಪ್ರಮುಖ ಸ್ವಾಮೀಜಿ ಒಬ್ಬರು ಮಧ್ಯ ಪ್ರವೇಶಿಸಿ ವೀರಶೈವ ಶ್ರೀಗಳಿಂದ ಮೈಕ್ ಪಡೆದು “ಅದನ್ನೆಲ್ಲ ಮತ್ತೊಮ್ಮೆ ಚರ್ಚೆ ಮಾಡೋಣ” ಎಂದು ಹೇಳಿ ಅವರನ್ನು ಕೂರಿಸಿದರು ಎಂದು ತಿಳಿದು ಬಂದಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *