ಜಮಖಂಡಿ
‘ಕಣ್ಣಿಗೆ ಕಾಣುವುದು ನಿಜವಾದ ಜಗತ್ತಲ್ಲ. ಅದು ಮಾಯಾಲೋಕ. ಆಳಕ್ಕಿಳಿದು ನೋಡಿದರೆ ಜಗತ್ತಿನ ನಿಜವಾದ ದರ್ಶನ ಆಗುತ್ತದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ವೈ.ವೈ. ಕೊಕ್ಕನವರ ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ‘ಓಣಿಗೊಂದು ದಿನ ವಚನ ಶ್ರಾವಣ’ದ ಭಾಗವಾಗಿ ಇಲ್ಲಿನ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಾಯೆಯ ಬೆನ್ನುಹತ್ತಿ ಬದುಕನ್ನು ನರಕ ಮಾಡಿಕೊಂಡು ಎಲ್ಲಿಯೂ ಸಲ್ಲದಂತಾಗಬಾರದು’ ಎಂದು ತಿಳಿಸಿದರು.
ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ‘ಮನೆಗೆದ್ದು ಮಾರುಗೆಲ್ಲಬೇಕು. ಅದಕ್ಕಾಗಿ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಬದುಕಬೇಕು. ಪ್ರಸಂಗ ಬಂದರೆ ಆತ್ಮಾರ್ಪಣ ಮಾಡಲು ಸಿದ್ಧರಿರಬೇಕು. ಸತ್ಕರ್ಮಗಳನ್ನು ಮಾಡಿ ಎಲ್ಲರೂ ನೆನಪಿಡುವ ಸಾಧನೆ ಮಾಡಬೇಕು’ ಎಂದರು.
ಓಲೆಮಠದ ಆನಂದ ದೇವರು ಸಾನ್ನಿಧ್ಯ ವಹಿಸಿದ್ದರು. ಎಸ್.ವೈ. ಪಾಟೀಲ ಸ್ವಾಗತಿಸಿದರು. ಸುನಿತಾ ಜಂಬಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸರಸ್ವತಿ ಸಬರದ (ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಎಸ್.ಎಚ್. ಮಠಪತಿ ನಿರೂಪಿಸಿದರು. ಶರಣ ಶರಣೆಯರು ಉಪಸ್ಥಿತರಿದ್ದರು.