ಕಷ್ಟ ಮೆಟ್ಟಿ ನಿಲ್ಲುವ ಶಕ್ತಿ ಕೊಟ್ಟಿದ್ದು ಬಸವಣ್ಣ: ವೀಣಾ ಕಾಶಪ್ಪನವರ

ಜಮಖಂಡಿ

‘ಹೆಣ್ಣು ಮಕ್ಕಳಿಗೆ ಕಷ್ಟದ ಬುತ್ತಿ ತಲೆಯ ಮೇಲೆ ಸದಾ ಇದ್ದೇ ಇರುತ್ತದೆ. ಆದರೆ, ಕಷ್ಟಗಳನ್ನು ಮೆಟ್ಟಿನಿಂತು ಬದುಕನ್ನು ಜಯಿಸಲು ಬಸವಣ್ಣನವರು ಹೆಣ್ಣು ಮಕ್ಕಳಿಗೆ ಶಕ್ತಿ ಕೊಟ್ಟಿದ್ದಾರೆ. ಅದನ್ನು ಬಳಸಿ ಹುಟ್ಟಿದ ಮನೆಗೆ ಮತ್ತು ಕೊಟ್ಟ ಮನೆಗೆ ಕೀರ್ತಿ ತರುವ ಕೆಲಸವನ್ನು ಮಹಿಳೆಯರು ಮಾಡಬೇಕು’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ನಗರದ ಓಲೇಮಠದಲ್ಲಿ ಬಸವ ಜಯಂತಿ ಅಂಗವಾಗಿ ಆನಂದ ದೇವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಈಚೆಗೆ ನಡೆದ ವಚನ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.

‘ಮಹಿಳೆಯನ್ನು ಭೂತಾಯಿ, ಗೋಮಾತೆ, ನದಿ ಇತ್ಯಾದಿಗಳಿಗೆ ಹೋಲಿಸಲಾಗುತ್ತದೆ. ಬಹುತೇಕ ಎಲ್ಲ ಹಬ್ಬಗಳು ಹೆಣ್ಣು ಮಕ್ಕಳಿಗಾಗಿ ಇವೆ. ಅದು ಈ ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ. ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ಮಹಿಳೆಯರ ಮೇಲಿದೆ’ ಎಂದರು.

ಓಲೇಮಠದ ಆನಂದ ದೇವರು ಮಾತನಾಡಿ, ‘ದ್ವೇಷ ಬಿಡು, ಪ್ರೀತಿ ಮಾಡು’ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು. ಒಂದು ಒಳ್ಳೆಯ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ತಲೆಯಲ್ಲಿನ ನೂರು ಕೆಟ್ಟ ವಿಚಾರಗಳು ದೂರವಾಗುತ್ತವೆ’ ಎಂದು ತಿಳಿಸಿದರು.

ಝುಂಜರವಾಡದ ಬಸವರಾಜೇಂದ್ರ ಶರಣರು ಮಾತನಾಡಿ, ‘ಶರಣರು ತಮಗಾಗಿ ಬದುಕಲಿಲ್ಲ. ಬದಲಾಗಿ ನಮಗಾಗಿ ಬದುಕಿದರು. ಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ನಡೆದದ್ದು ರಕ್ತಕ್ರಾಂತಿಯಲ್ಲ, ಅದು ಭಕ್ತಿಕ್ರಾಂತಿ. ವಚನ ಸಾಹಿತ್ಯವನ್ನು ಉಳಿಸಿಕೊಳ್ಳಲು ಶರಣರು ರಾತ್ರೋರಾತ್ರಿ ಕಲ್ಯಾಣವನ್ನು ತೊರೆದಿದ್ದರು’ ಎಂದರು.

ನಡೆದಾಡುವ ಕಂಪ್ಯೂಟರ್ ಎಂದೇ ಖ್ಯಾತರಾಗಿರುವ ಅಥಣಿಯ ಬಸವರಾಜ ಉಮರಾಣಿ ಅವರು, ಅಂಕಿ-ಸಂಖ್ಯೆಗಳ ಗುಣಾಕಾರ, ಭಾಗಾಕಾರ ಲೆಕ್ಕ ಸಲೀಸಾಗಿ ಮಾಡಿ ತೋರಿಸಿದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಸ್ವಾಮೀಜಿ, ಮುತ್ತೂರಿನ ರಾಚೋಟೇಶ್ವರ ಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಕಡಪಟ್ಟಿಯ ಜಗದೀಶ್ವರ ಮಠದ ಅಭಿನವ ರಾಚೋಟೇಶ್ವರ ದೇವರು ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಶಿವಯ್ಯ ನಾಗರಾಳಮಠ, ಪ್ರದೀಪ ಮಹಾಲಿಂಗಪುರಮಠ, ಮೊನಿಕಾ ಹಿರೇಮಠ, ರಾಜು ವಾರದ, ಶ್ರೀಶೈಲ ತೇಲಿ, ಸದಾಶಿವ ಸೊನ್ನದ, ಚನ್ನಪ್ಪ ಬಿರಾದಾರ, ಶಂಕರ ಜಾಲಿಗಿಡದ, ಅಣ್ಣಪ್ಪ ಜಗದೇವ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *