ಓಲೆಮಠದಲ್ಲಿ 15 ದಿನಗಳ ಬಸವ ಜಯಂತಿಯ ಪೂರ್ವಭಾವಿ ಸಭೆ

ಜಮಖಂಡಿ

ಓಲೆಮಠದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಏಪ್ರಿಲ್ 15 ರಿಂದ ಏಪ್ರಿಲ್ 29ರ ವರೆಗೆ ಪ್ರವಚನ, ಸಂಗೀತ ಕಾರ್ಯಕ್ರಮ ಹಾಗೂ ಏಪ್ರಿಲ್ 30 ರಂದು ಶ್ರದ್ಧಾಭಕ್ತಿಯಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಓಲೆಮಠದ ಆನಂದ ದೇವರು ಹೇಳಿದರು.

ಓಲೆಮಠದ ಸಭಾಂಗಣದಲ್ಲಿ ಭಾನುವಾರ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಏ.15 ರಿಂದ ಏ.29ರ ವರೆಗೆ ಪ್ರತಿದಿನ ಸಂಜೆ ಪ್ರವಚನ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು.

ಪ್ರತಿದಿನ ಒಬ್ಬರು ಧರ್ಮಗುರುಗಳನ್ನು ಆಹ್ವಾನಿಸಿ ಧರ್ಮ ಸಂದೇಶ ನೀಡಲಾಗುವುದು, ಪ್ರತಿದಿನ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗುವುದು ಎಂದರು.

ವಿಶೇಷ ಸೇವೆ ಸಲ್ಲಿಸುತ್ತಿರುವ ವೈದ್ಯರು, ಯೋಧರು, ಪೊಲೀಸರು, ಪತ್ರಕರ್ತರು, ವಿಕಲಚೇತನರು, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವರನ್ನು ಪ್ರತಿದಿನ ಒಬ್ಬರಂತೆ ಸನ್ಮಾನಿಸಲಾಗುವುದು.

ಪ್ರತಿದಿನ ನಸುಕಿನಜಾವ ನಗರದ ಒಂದೊಂದು ವಾರ್ಡ್ ನಲ್ಲಿ ಗಣ್ಯರು ಹಾಗೂ ಶ್ರೀಗಳ ಜೊತೆಗೂಡಿ ‘ಅರಿವಿನ ಜೋಳಿ’ಗೆ ಹಿಡಿದು ಪಾದಯಾತ್ರೆ ನಡೆಸಿ ದುಶ್ಚಟ ವ್ಯಸನಿಗಳಿಂದ ವ್ಯಸನಗಳನ್ನು ಭಿಕ್ಷೆ ಬೇಡಿ ವ್ಯಸನಮುಕ್ತ ನಗರವನ್ನಾಗಿಸುವ ಸಂಕಲ್ಪ ಮಾಡಲಾಗಿದೆ. ಓಲೆಮಠ ನಗರದ ಪ್ರತಿ ಮನೆಗೂ ತಲುಪಬೇಕು ಎಂಬುದು ಶ್ರೀಮಠದ ಆಶಯ ಎಂದರು.

ಏ.30ರಂದು ಬೆಳಿಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಹಾಗೂ ಎಲ್ಲ ಬಸವಾದಿ ಶಿವಶರಣರ ಭಾವಚಿತ್ರಗಳ ಮೆರವಣಿಗೆ ನಡೆಸಲಾಗುವುದು. ಅದಕ್ಕಾಗಿ ಎಲ್ಲ ಸಮಾಜಗಳ ಪದಾಧಿಕಾರಿಗಳು, ಸಮಾಜ ಬಾಂಧವರು ತಮ್ಮ ತಮ್ಮ ಸಮಾಜದ ಶಿವಶರಣರ ಭಾವಚಿತ್ರದೊಂದಿಗೆ ಭಾಗವಹಿಸಿ ಭಾವೈಕ್ಯತೆ ಮೆರೆಯಬೇಕು. ಬಸವಣ್ಣನವರ ವಚನ ಪುಸ್ತಕಗಳನ್ನು ತಲೆಯಮೇಲೆ ಹೊತ್ತು ಅಕ್ಕನ ಬಳಗದ ಅಕ್ಕಂದಿರು ಸಾಗಬೇಕು, ಸಾಯಂಕಾಲ ರಥೋತ್ಸವ ಹಾಗೂ ಬಸವಣ್ಣನವರ ಮೂರ್ತಿಯ ಮೆರವಣಿಗೆ ನಡೆಯಲಿದೆ.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಸ್ವಾಮಿಗಳು, ಹೂವಿನ ಹಿಪ್ಪರಗಿಯ ವಿಶ್ವನಾಥ ಸ್ವಾಮಿಗಳು, ಹುನ್ನೂರಿನ ವೇದಮೂರ್ತಿ ವಿಶ್ವನಾಥಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ವಕೀಲ ಎನ್.ಎಸ್. ದೇವರವರ, ರವಿ ಯಡಹಳ್ಳಿ, ಕಾಡು ಮಾಳಿ, ಅರುಣಕುಮಾರ ಶಹಾ, ಪ್ರೊ. ಬಸವರಾಜ ಕಡ್ಡಿ, ಟಿ.ಪಿ. ಗಿರಡ್ಡಿ, ಸಿದ್ದು ಮೀಸಿ, ಅರ್ಬನ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ಉದ್ದಿಮೆದಾರ ಧರ್ಮಲಿಂಗಯ್ಯ ಗುಡಗುಂಟಿ, ವಕೀಲ ಸಿ.ಎಸ್. ಬಾಂಗಿ, ಶಿವಾನಂದ ಕೊಣ್ಣೂರ ಸಭೆಯಲ್ಲಿ ಮಾತನಾಡಿದರು.

Share This Article
Leave a comment

Leave a Reply

Your email address will not be published. Required fields are marked *