ಜಮಖಂಡಿ
‘ಧರ್ಮದ ಆಚರಣೆ, ಆರೋಗ್ಯ ರಕ್ಷಣೆಯ ಅರಿವು ಹಾಗೂ ಆಧ್ಯಾತ್ಮಿಕ ಚಿಂತನೆ ಕುರಿತು ಜಾಗೃತಿ ಮೂಡಿಸಲು ಶ್ರಾವಣ ಮಾಸದ ನಿಮಿತ್ತ ನಗರದ ವಿವಿಧ ಓಣಿಗಳಲ್ಲಿ ಓಲೇಮಠದ ಆಶ್ರಯದಲ್ಲಿ ಜುಲೈ 25ರಿಂದ ಆ. 20ರವರೆಗೆ ವಚನ ಶ್ರಾವಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಓಲೇಮಠದ ಆನಂದ ದೇವರು ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೇಮಠದ ಆಶ್ರಯದಲ್ಲಿ ಹಮ್ಮಿಕೊಳ್ಳಲಿರುವ ವಚನ ಶ್ರಾವಣ ಕಾರ್ಯಕ್ರಮದ ಕುರಿತು ಮಠದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಭಕ್ತರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜುಲೈ 25ರಿಂದ ಆಗಸ್ಟ್ 20ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಕಾರ್ಯಕ್ರಮಗಳು ದಿನಕ್ಕೊಂದು ಓಣಿಯಲ್ಲಿ ಆರಂಭವಾಗುತ್ತವೆ. ಸಂಜೆ 6.30ರಿಂದ ಸಂಗೀತ ಸೇವೆ, 7ರಿಂದ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, 7.30ರಿಂದ ಶ್ರೀಗಳಿಂದ ಪ್ರವಚನ ನಡೆಯಲಿವೆ.
ಆಸ್ತಿ, ಅಂತಸ್ತು, ಹಣ, ಚಿನ್ನ-ಬೆಳ್ಳಿ ಇವು ನಿಜವಾದ ಸಂಪತ್ತು ಅಲ್ಲ. ಕುಡಿಯುವ ನೀರು, ತಿನ್ನುವ ಅನ್ನ ಹಾಗೂ ಉತ್ತಮ ವಿಚಾರದ ಮಾತುಗಳು ನಿಜವಾದ ಸಂಪತ್ತು. ಆದ್ದರಿಂದ ಬಸವಾದಿ ಶಿವಶರಣರ ವಚನಗಳನ್ನು ಆಧರಿಸಿ ಒಳ್ಳೆಯ ವಿಚಾರಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ಧೇಶವಾಗಿದೆ.
ಓಣಿ ಓಣಿಯಲ್ಲಿ ಮಠದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಓಣಿ ಓಣಿಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದೆ. ಹಾಗಾಗಿ ಯುವ ಪೀಳಿಗೆಗೆ ಒಳ್ಳೆಯ ಸಂಸ್ಕಾರ ನೀಡಿ ಸನ್ನಡತೆಯತ್ತ ಅವರ ಮನ ಪರಿವರ್ತನ ಮಾಡುವುದು, ವಚನ ಶ್ರಾವಣ ಕಾರ್ಯಕ್ರಮದ ಧ್ಯೇಯವಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಡಾ.ಎಚ್.ಜಿ. ದಡ್ಡಿ, ಪ್ರೊ. ಬಸವರಾಜ ಕಡ್ಡಿ, ನಗರಸಭೆ ಸದಸ್ಯ ಸಿದ್ದು ಮೀಶಿ, ನಿವೃತ್ತ ಶಿಕ್ಷಕ ಎಂ.ಡಿ. ಸಂಖ ಮಾತನಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು.