ಬೆಳಗಾವಿ
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಆರಂಭಿಸಲಾಗಿದ್ದ ಪಂಚಮಸಾಲಿ ಮೀಸಲಾತಿಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
‘ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ ‘2ಎ’ ಮೀಸಲಾತಿ ನೀಡಬೇಕು ಮತ್ತು ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿ ಬೆಳಗಾವಿಯ ಅಂಬೇಡ್ಕರ್ ಗಾರ್ಡನ್‌ನಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು.
ಸ್ಥಳಕ್ಕೆ ತೆರಳಿದ ಮಾಜಿ ಸಚಿವ ಸಿ.ಸಿ.ಪಾಟೀಲ್, ಶಾಸಕರಾದ ಡಾ.ವಿ.ಐ.ಪಾಟೀಲ್, ಹೆಚ್.ಎಸ್.ಶಿವಶಂಕರ್ ಅವರು, ಪ್ರತಿಭಟನಾನಿರತ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಸಿದ್ದರಾಮಯ್ಯ ಅವರು ಡಿಸೆಂಬರ್ 21ರಂದು ಸರ್ವಪಕ್ಷಗಳ ಪಂಚಮಸಾಲಿ ಲಿಂಗಾಯತ ಶಾಸಕರ ಸಭೆ ಕರೆದಿದ್ದಾರೆಂದು ಹೇಳಿದರು.
ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಲು ಮೂವರು ಮಂತ್ರಿಗಳನ್ನು ಕಳುಹಿಸಿದರೂ, ಸ್ವಾಮೀಜಿಗಳು ಮತ್ತು ಅವರ ಬೆಂಬಲಿಗರು ನಿರಾಕರಿಸಿದ್ದರು. ಇದು ಸರ್ಕಾರ ಲಿಂಗಾಯತ ವಿರೋಧಿ ಎಂಬ ಸಂದೇಶವನ್ನು ರವಾನಿಸಿತ್ತು, ಎಂದರು.
ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಧರಣಿ ಸತ್ಯಾಗ್ರಹ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಡಿ. 23ರಿಂದ ಮನೆಮನೆಗೆ ಭೇಟಿ ನೀಡುವ ಮೂಲಕ ಹೋರಾಟ ಆರಂಭಿಸಿ ಹಲ್ಲೆಗೊಳಗಾದವರ ಕುಟುಂಬಕ್ಕೆ ಧೈರ್ಯ ತುಂಬುತ್ತೇವೆ’ ಎಂದು ತಿಳಿಸಿದರು.
‘ಲಿಂಗಾಯತರ ಮೇಲೆ ರಾಜ್ಯದಲ್ಲಿ ಮೊದಲ ಬಾರಿಗೆ ಹಲ್ಲೆಯಾಗಿದೆ. ನಮಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲುವುದಿಲ್ಲ. ನಮ್ಮ ಸಮಾಜದ ಶಾಸಕರು, ಸಚಿವರನ್ನು ಹೆದರಿಸಿದ್ದಾರೆ. ಕೆಲ ಶಾಸಕರಿಗೆ ಆಸೆ, ಆಮಿಷ ತೋರಿಸಿ ಮಾತನಾಡದಂತೆ ತಡೆದಿದ್ದಾರೆ, ಎಂದರು.