ಹಲವಾರು ಜಿಲ್ಲೆಗಳಲ್ಲಿ ಹೆದ್ದಾರಿ ತಡೆದು ಪಂಚಮಸಾಲಿ ಆಕ್ರೋಶ

ಬಸವ ಮೀಡಿಯಾ
ಬಸವ ಮೀಡಿಯಾ

ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೆನ್ನೆ ರಾಜ್ಯದ ಎಲ್ಲಾ ಕಡೆ ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದರು.

ಬೆಳಗಾವಿ

ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಕ್ಕೆ ಬೆಳಗಾವಿ, ಚಿಕ್ಕೋಡಿ, ಧಾರವಾಡ, ವಿಜಯಪುರ ಸೇರಿದಂತೆ ಹಲವೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆಕಾರರು ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕೃತಿಗೆ ಚಪ್ಪಲಿ ಹಾರ ಘೋಷಣೆ ಕೂಗಿದ್ದಾರೆ.

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯದ ಎಲ್ಲಾ ಕಡೆ ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಆಕ್ರೋಶ ವ್ಯಕ್ತವಾಯ್ತು.

ಧಾರವಾಡದಲ್ಲಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಜ್ಯುಬಿಲಿ ಸರ್ಕಲ್‌ ಬಂದ್ ಮಾಡಿ, ಹೋರಾಟಗಾರರು ಪ್ರತಿಭಟನೆ ನಡೆಸಿದರು. ಈ ವೇಳೆ ಸಿಎಂ‌ ಸಿದ್ದರಾಮಯ್ಯ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.

ವಿಜಯಪುರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯಿತು. ಚಡಚಣ, ಇಂಡಿ, ಮುದ್ದೇಬಿಹಾಳ, ಸಿಂದಗಿ ಪಟ್ಟಣ ಸೇರಿದಂತೆ ಹಲವೆಡೆ ಪಂಚಮಸಾಲಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ರು. ಚಡಚಣ, ಇಂಡಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಯಿತು. ಇಂಡಿ ಮಾಜಿ ಶಾಸಕ ರವಿಕಾಂತ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳ ಅಮಾನತ್ತು ಮಾಡಿ, ಪಂಚಮಸಾಲಿ ಜಗದ್ಗುರುಗಳ ಬಳಿ ಸಿಎಂ ಕ್ಷಮೆ ಕೇಳುವಂತೆ ಆಗ್ರಹಿಸಲಾಯ್ತು.

ಕಾಲಿಗೆ ಬೆಂಕಿ

ಬೆಳಗಾವಿಯಲ್ಲಿ ಲಾಠಿಚಾರ್ಜ್ ಮಾಡಿದ್ದನ್ನು ಖಂಡಿಸಿ ಗದಗದಲ್ಲಿ ಪ್ರತಿಭಟನೆ ನಡೆಯಿತು. ಇದೇ ವೇಳೆ, ಪ್ರತಿಭಟನಾಕಾರರು ಟಯರ್​ಗೆ ಬೆಂಕಿ ಹಚ್ಚುವಾಗ ಕಾಲಿಗೆ ಬೆಂಕಿ ತಗುಲಿದ ಘಟನೆಯೂ ಸಂಭವಿಸಿತು.

ಪ್ರತಿಭಟನಾಕಾರರು ಹಳೆ ಜಿಲ್ಲಾಧಿಕಾರಿ ಕಚೇರಿ ಸರ್ಕಲ್ ಬಂದ್ ಟಯರ್​ಗೆ ಬೆಂಕಿ ಹಚ್ಚಿದರು. ಟಯರ್​ಗೆ ಹೊತ್ತಿದ್ದ ಬೆಂಕಿ ಆರಿಸಲು ಪೊಲೀಸರು ಮುಂದಾಗಿದ್ದಾರೆ. ಪೊಲೀಸರು ಬೆಂಕಿ ಆರಿಸಲು ಮುಂದಾಗುತ್ತಿದ್ದಂತೆ ಪಂಚಮಸಾಲಿ ಮುಖಂಡರು ಅಡ್ಡಿಪಡಿಸಿದ್ದಾರೆ. ಟಯರ್ ದೂಡುವ ವೇಳೆ ಕಾಲಿಗೆ ಒಬ್ಬರಿಗೆ ಬೆಂಕಿಹೊತ್ತಿ ಕೆಲ ಕಾಲ ಪರದಾಟಪಡುವಂತಾಯಿತು.

ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಸಿಎಂ ಸಿಟ್ಟು

ಪಂಚಮಸಾಲಿ ಹೋರಾಟಗಾರರನ್ನು ಮನವೊಲಿಸಲು ವಿಫಲರಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ.

‘ನೀವು ಹಲವು ಬಾರಿ ಹೋಗಿ ಮೀಸಲಾತಿ ಹೋರಾಟಕ್ಕೆ ಬೆಂಬಲ ತಿಳಿಸಿ ಬಂದಿದ್ದೀರಿ. ಆದರೆ, ಅವರ ಮನವೊಲಿಸಿ ಪ್ರತಿಭಟನೆಯಿಂದ ಹಿಂದೆಸರಿಯುವಂತೆ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಜಯಮೃತ್ಯುಂಜಯ ಸ್ವಾಮೀಜಿ ಕಿಡಿ

ಪಂಚಮಸಾಲಿ ಮೀಸಲಾತಿ ಬೇಡಿಕೆ ಸಂವಿಧಾನ ವಿರೋಧಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ. ಸಿಎಂ ಹೇಳಿಕೆಯೇ ಸಂವಿಧಾನ ವಿರೋಧಿಯಾಗಿದೆ ಎಂದು ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ.

ಸಿಎಂ ಸುಳ್ಳು ಹೇಳುತ್ತಿದ್ದಾರೆ, ಇದನ್ನು ನಾವು ಸಹಿಸುವುದಿಲ್ಲ, ಮೀಸಲಾತಿ ಪಡೆದೇ ತೀರುತ್ತೇವೆ ಅಂತ ಸವಾಲು ಹಾಕಿದ್ದಾರೆ.

67
ಪಂಚಮಸಾಲಿ ಮೀಸಲಾತಿ ಹೋರಾಟದ ನಿಜ ಸ್ವರೂಪವೇನು?

 

 

ಸ್ಪೀಕರ್ ಜೊತೆ ಜಗಳ

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಲಾಠಿ ಚಾರ್ಜ್ ಮಾಡಿದ ಪೊಲೀಸರ ಕ್ರಮವನ್ನು ಖಂಡಿಸಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಇದರ ಪರಿಣಾಮವಾಗಿ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಸದನವನ್ನು ನಿಮಿಷಗಳ ಕಾಲ ಮುಂದೂಡಿದರು.

ಇದರಿಂದ ಕೆರಳಿದ ವಿಪಕ್ಷ ಬಿಜೆಪಿ ಸದಸ್ಯರು ಸ್ಪೀಕರ್ ಜೊತೆ ಜಗಳಕ್ಕೆ ಇಳಿದಿದ್ದರು. ಸ್ಪೀಕರ್ ಕಚೇರಿಗೆ ತೆರಳಿದ ಬಿಜೆಪಿ ಶಾಸಕರಾದ ಸುನೀಲ್ ಕುಮಾರ್, ವಿಪಕ್ಷ ನಾಯಕ ಅಶೋಕ್, ವಿಜಯೇಂದ್ರ, ಅರವಿಂದ್ ಬೆಲ್ಲದ್ ಸೇರಿದಂತೆ ಬಿಜೆಪಿ ಶಾಸಕರು ಖಾದರ್ ಅವರ ಜೊತೆ ವಾಗ್ದಾದ ನಡೆಸಿದರು. ಸ್ಪೀಕರ್ ಜೊತೆ ಬಿಜೆಪಿ ಶಾಸಕರ ಜಗಳದ ವಿಷಯ ತಿಳಿಯುತ್ತಿದ್ದಂತೆಯೇ ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಸ್ಥಳಕ್ಕೆ ದೌಡಾಯಿಸಿ ಯುಟಿ ಖಾದರ್ ಬೆಂಬಲಕ್ಕೆ ನಿಂತರು. ಹೀಗಾಗಿ ಎರಡೂ ಕಡೆಯಿಂದ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ಸ್ಪೀಕರ್ ಕಚೇರಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

Share This Article
Leave a comment

Leave a Reply

Your email address will not be published. Required fields are marked *