ದಾವಣಗೆರೆ
ನಗರದಲ್ಲಿ ನಡೆಯುವ ಸಮಾವೇಶದಲ್ಲಿ ಸತ್ಯಶುದ್ಧ ಧಾರ್ಮಿಕ ಆಚರಣೆಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂಚಪೀಠಗಳ ಸಾರಥ್ಯದಲ್ಲಿ ಜುಲೈ 21ರಿಂದ ಎರಡು ದಿನಗಳ ವೀರಶೈವ ಧರ್ಮದ ಪಂಚಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಯುತ್ತಿದೆ.
ನಗರದ ಪಿ.ಬಿ. ರಸ್ತೆಯ ಶ್ರೀಶೈಲ ಮಠದ ಪಂಚಾಚಾರ್ಯ ಮಂದಿರದಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ರಂಭಾಪುರಿ, ಶ್ರೀಶೈಲ, ಉಜ್ಜಯಿನಿ ಹಾಗೂ ಕಾಶಿ ಪೀಠದ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಕೇದಾರ ಪೀಠದ ಸ್ವಾಮೀಜಿ ಗೈರಾಗಿದ್ದರು.
‘ಈ ಶೃಂಗ ಸಮ್ಮೇಳನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿ ಅನೇಕ ರಾಜ್ಯಗಳ ವೀರಶೈವ ಪರಂಪರೆಯ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ’ ಎಂದು ವೀರಸೋಮೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಮ್ಮೇಳನ ಉದ್ಘಾಟಿಸಲಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಆಶಯ ನುಡಿಗಳನ್ನು ಆಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಹಲವು ಗಣ್ಯರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿದೆ.
ಶೃಂಗಕ್ಕೆ ಪೂರ್ವಭಾವಿಯಾಗಿ ಪಂಚಪೀಠಾಧೀಶರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಬೆಂಗಳೂರು ನಿವಾಸದಲ್ಲಿ ಇತ್ತೀಚೆಗೆ ಸಭೆ ಸೇರಿ ಚರ್ಚಿಸಿದ್ದರು.
ಧಾರ್ಮಿಕ, ಸಾಮಾಜಿಕ ಹಾಗೂ ಆಂತರಿಕ ವಿಚಾರಗಳ ಕುರಿತು ಶೃಂಗದಲ್ಲಿ ಸಮಾಲೋಚನೆ ನಡೆಯಲಿದೆ. ಸಾಮರಸ್ಯ, ಸತ್ಯಶುದ್ಧ ಧಾರ್ಮಿಕ ಆಚರಣೆಗಳಿಗೆ ನಿರ್ದೇಶನ ನೀಡಲಾಗುವುದು. ಸಮಾಜಕ್ಕೆ ಸಮಗ್ರತೆ, ಭಾವೈಕ್ಯ ಹಾಗೂ ವಿಶ್ವ ಬಂಧುತ್ವ ಸಂದೇಶ ನೀಡುವ ಉದ್ದೇಶ ಇದೆ. ಶೃಂಗದಲ್ಲಿ ನಿರ್ಣಯ ಕೈಗೊಂಡು ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ಸ್ಪಷ್ಟ ಧ್ವನಿ ವ್ಯಕ್ತಪಡಿಸಲಾಗುತ್ತದೆ’ ಎಂದು ಹೇಳಿದರು.