ಚನ್ನಗಿರಿ
ತಾಲ್ಲೂಕಿನ ತಾವರಕೆರೆಯಲ್ಲಿ ನಡೆದ ೨ನೆಯ ದಿನದ “ನಮ್ಮ ನಡೆ ಸರ್ವೋದಯದೆಡೆಗೆ” ಪಾದಯಾತ್ರೆ ಬೆಳಿಗ್ಗೆ ಅಜ್ಜಂಪುರದಿಂದ ಸಂಜೆ ೭ ಗಂಟೆಗೆ ತಾವರಕೆರೆಗೆ ತಲುಪಿತು.
ಸಂಜೆಯ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಲೀಲಾ ಸಂಪಗಿ ಪಂಡಿತಾರಾಧ್ಯ ಸ್ವಾಮಿಗಳು ಕ್ರಾಂತಿಕಾರಕ ಗುರುಗಳು, ಎಂದು ಹೇಳಿದರು.
ಇಡೀ ಸಮಾಜದ ಒಳಿತಿಗಾಗಿ ನಡೆದುಕೊಳ್ಳುತ್ತಿದ್ದಾರೆ. ಒಂದು ರೋಮಾಂಚನಕಾರಿಯಾದ ಕಾರ್ಯವನ್ನು ಮಾಡುತ್ತಿದ್ದಾರೆ. ೧೨ನೆಯ ಶತಮಾನವನ್ನು ಮತ್ತೆ ನೆನಪು ಮಾಡುವ ಮತ್ತೆ ಕಲ್ಯಾಣ ಕಾರ್ಯಕ್ರಮ ಇಡೀ ಕರ್ನಾಟಕದಾದ್ಯಂತ ಯಶಸ್ವಿಯಾಗಿ ನಡೆಯಿತು. ಅದೇ ರೀತಿ ಸರ್ವೋದಯದೆಡೆಗೆ ಇಡೀ ವ್ಯವಸ್ಥೆಯ ವಿರುದ್ಧ ಈಜಬೇಕಾದ ಮನಸ್ಥಿತಿಯನ್ನು ಗಟ್ಟಿಗೊಳಿಸುವ ಯಾತ್ರೆ. ಇದೊಂದು ಅರಿವಿನ ಜಾಗೃತಿಯ ಕಾರ್ಯಕ್ರಮ.
ಮಾನವೀಯ, ಭಾತೃತ್ವದ ಭಾರತಕ್ಕೆ ಕೊಳ್ಳೆ ಇಡುತ್ತಿದ್ದೇವೆ. ನಮ್ಮ ನಾಡಿನಲ್ಲಿ ಅನೇಕ ಮಠಾಧೀಶರಿದ್ದಾರೆ. ಆದರೆ ಜನಪರವಾದ, ಸಮಾಜಮುಖಿಯಾದ, ವೈಜ್ಞಾನಿಕ ಮನೋಭಾವವುಳ್ಳ, ತಾಯ್ತನದ ಹೃದಯವನ್ನು ಹೊಂದಿದವರು ಪಂಡಿತಾರಾಧ್ಯ ಶ್ರೀಗಳು.

ದಿನನಿನಿತ್ಯದ ಬದುಕಿನ ಐದು ಕ್ಷೇತ್ರಗಳನ್ನು ನಮ್ಮನ್ನು ನಾವು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾಗಿದೆ. ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕಾಗಿತ್ತೋ ಅಂತಹ ಆಹಾರವನ್ನು ವಿಷ ಮಾಡಿಕೊಂಡು ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮನ್ನು ನಾವು ಬದಲಾಗದೇ ಹೋದರೆ ಸರ್ವೋದಯದ ಹೆಸರನ್ನು ಹೇಳುವ ನೈತಿಕತೆ ನಮಗಿಲ್ಲ. ದೊಡ್ಡ ದೊಡ್ಡ ಕ್ರಾಂತಿಗಳ ಮೂಲಕ ಬದಲಾವಣೆ ಮಾಡುತ್ತೇವೆ ಎನ್ನುವ ಭ್ರಮೆ ಬೇಡ. ನಮ್ಮನ್ನು ನಾವು ಬದಲಾಗಬೇಕು.
ಇತ್ತೀಚಿಗೆ ಕೊಳ್ಳುಬಾಕ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ. ನಮ್ಮ ಬದುಕನ್ನು ಸರಳತೆ, ವೈಜ್ಞಾನಿಕವಾಗಿ ಚಿಂತನೆ ಮಾಡಬೇಕು. ಮತ್ತೆ ಕೃಷಿಯ ಕಡೆಗೆ ಮರಳುವುದೇ ಸರ್ವೋದಯದ ಮೂಲ ಉದ್ದೇಶ. ಹಿಂದಿನ ಕಾಲದ ಜನರು ಸಹಜ ಮತ್ತು ಸಾವಯವ ಕೃಷಿಯನ್ನು ಮಾಡುತ್ತಿದ್ದರು. ಆದರೆ ಈಗಿನ ಕೃಷಿ ಹೇಗಾಗಿದೆ ಎನ್ನುವುದನ್ನು ಬಿಚ್ಚಿ ಹೇಳಬೇಕಾಗಿಲ್ಲ.
ಮೊಟ್ಟಮೊದಲ ಮಹಿಳಾವಾದಿ ಬಸವಣ್ಣ. ಹೆರಿಗೆ ಕೋಣೆಯಿಂದ ಮಹಾಕೋಣೆಗೆ ಬಸವಣ್ಣನವರು ಕರೆತಂದರು. ಮಹಾಕೋಣೆಯಿಂದ ಸಂಸತ್ತಿನವರೆಗೆ ಹೆಣ್ಣನ್ನು ತಂದವರು ಬಾಬಾಸಾಹೇಬ ಅಂಬೇಡ್ಕರ್. ಮಹಿಳೆ ಜಾಗೃತಳಾದರೆ ಇಡೀ ಪರಿಸರ ಸುಂದರವಾಗಿಟ್ಟುಕೊಳ್ಳುವುದಕ್ಕೆ ಸಾಧ್ಯ.
ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ನಾಲ್ಕು ದಿನಗಳ ಕಾಲ ಪಾದಯಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮ ಯಶಸ್ವಿ ಮಾಡಿದ್ದೇವೆ ಎನ್ನುವುದು ಮುಖ್ಯವಲ್ಲ.
ಸರ್ವೋದಯದ ಆಶಯಗಳನ್ನು ಕಾರ್ಯಗತಗೊಳಿಸಿಕೊಂಡರೆ ಯಾತ್ರೆ ಸಾರ್ಥಕವಾಗುವುದು. ನಮ್ಮ ಮನಸ್ಸಿನಲ್ಲಿ ದ್ವೇಷ, ಅಸೂಯೆ, ಹೊಟ್ಟೆ ಕಿಚ್ಚು ತುಂಬಿಕೊಂಡಿದ್ದೇವೆ. ಅವುಗಳನ್ನು ದೂರ ಮಾಡಿಕೊಂಡು ಒಳ್ಳೆಯ ಕೆಲಸ ಮಾಡಿದವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು.

ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಮಾತನಾಡಿ ಬಹುರಾಷ್ಟ್ರೀಯ ಕಂಪನಿಗಳ ಆಸೆಗೆ ನಾವೆಲ್ಲರೂ ಬಲಿಯಾಗುತ್ತಿದ್ದೇವೆ ಎನ್ನುವುದೇ ದೊಡ್ಡ ದುರಂತ. ನಮ್ಮ ಹೊಲ, ಮನೆಯನ್ನು ಬಿಟ್ಟುಕೊಟ್ಟರೆ ಪರಕೀಯರ ಆಡಳಿತಕ್ಕೆ ಒಳಗಾಗುತ್ತೇವೆ. ಕೊನೆಗೆ ಮಣ್ಣು ತಿನ್ನುವ ವಾತಾವರಣ ನಿರ್ಮಾಣ ಆಗುವುದರಲ್ಲಿ ಅನುಮಾನವೇ ಇಲ್ಲ. ದುಶ್ಚಟಗಳನ್ನು ದೂರ ಮಾಡಿ ಸರ್ವೋದಯದ ಕಡೆಗೆ, ಮನುಷ್ಯತ್ವದ ಕಡೆಗೆ ಹೆಜ್ಜೆ ಹಾಕೋಣ.
ಕೃಷಿ ಮಾಡುವ ವ್ಯಕ್ತಿ ಋಷಿ ಇದ್ದಂತೆ. ಕೃಷಿಕನಿಗೆ ಶ್ರೇಷ್ಠ ಸ್ಥಾನಮಾನವನ್ನು ನಮ್ಮ ದೇಶ ಕೊಟ್ಟಿದೆ. ಸರ್ವೋದಯದ ಕಡೆಗೆ ನಮ್ಮ ಆಲೋಚನೆಯ ನಡಿಗೆ ಇದ್ದರೆ ನಮ್ಮ ಬದುಕು ಸಾವಯವ ಆಗುವುದು ಎಂದರು.
ತಾವರಕೆರೆಯ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಸ್ವಾಮಿಗಳು ಮಾತನಾಡಿ; ಯುವಪೀಳಿಗೆ ಸರ್ವೋದಯ ಕಡೆ ಬರಬೇಕಾಗಿದೆ. ಸರ್ವೋದಯದ ಯಾತ್ರೆಯ ಕಲ್ಪನೆ ಅತ್ಯುದ್ಭುತವಾದುದು. ಜ್ಞಾನದ ಗಾಳಿ ಬಂದಾಗ ತೂರಿಕೊಳ್ಳಬೇಕು. ಸರ್ವೋದಯದ ಗಾಳಿ ಬಂದಾಗ ತೂರಿಕೊಂಡಾಗ ನಾವು ಗುರಿ ಮುಟ್ಟಬಹುದು.
ಇಂದಿನ ಯುವಪೀಳಿಗೆ ದಾರಿತಪ್ಪುತ್ತಿದ್ದಾರೆ. ಅವರನ್ನು ದಾರಿ ತರುವುದು ನಮ್ಮಂಥ ಹಿರಿಯರ ಕೈಯಲ್ಲಿದೆ.
ಅಸೂಯೆ, ಹೊಟ್ಟೆಕಿಚ್ಚು ತಾಂಡವವಾಡುತ್ತಿದೆ. ಇಂತಹ ಕೆಟ್ಟ ಭಾವನೆಗಳನ್ನು ಬಿಟ್ಟಾಗ ಮನುಷ್ಯ ತನ್ನನ್ನು ತಾನು ತಿದ್ದಿಕೊಂಡಂತೆ. ಆಗ ಸಮಾಜದ ಗೌರವಕ್ಕೆ ಪಾತ್ರರಾಗುವನು. ಪಂಡಿತಾರಾಧ್ಯ ಶ್ರೀಗಳು ಜನಸಾಮಾನ್ಯರ ಬಾಗಿಲಿಗೆ ಬಂದು ನಮ್ಮ ನಮ್ಮ ತಪ್ಪುಗಳನ್ನು ತಿದ್ದುವ ಕೆಲಸ ಮಾಡುವುದು ಇದೊಂದು ಪುಣ್ಯದ ಕಾರ್ಯ. ಪಂಡಿತಾರಾಧ್ಯ ಶ್ರೀಗಳ ನಡೆಯಿಂದ ನಮ್ಮ ಬದುಕಿನ ನಡೆಯನ್ನು ಬದಲಾವಣೆ ಮಾಡಿಕೊಳ್ಳುವ ಸಂಕಲ್ಪ ಮಾಡಿಕೊಳ್ಳಬೇಕು.
ಇನ್ನೋರ್ವ ಸಾಹಿತಿ ಡಾ. ಸಂಜೀವ್ ಕುಲಕರ್ಣಿ ಮಾತನಾಡಿ; ಮಹಿಳೆಯರು ಶರೀರ ಶ್ರಮ ಇಲ್ಲದೇ ಜೀವನ ನಡೆಸುವುದರಿಂದ, ಅನೇಕ ರೋಗಗಳಿಂದ ತಾಯಿ ಬಳಲುತ್ತಿರುವುದರಿಂದ ಮಗುವನ್ನು ಉಳಿಸಿಕೊಳ್ಳುವ ಕಾರಣ, ಇನ್ನೊಂದು ವೈದ್ಯಕೀಯ ವೃತ್ತಿಯ ವಾಣಿಜ್ಯೀಕರಣದಿಂದ ಸಿಜರಿನ್‌ಗಳ ಸಂಖ್ಯೆ ಹೆಚ್ಚಾಗಿವೆ.

ಪಾಶ್ಚಿಮಾತ್ಯ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದರಿಂದ ಸಂತಾನೋತ್ಪತ್ತಿ ಗಣನೀಯವಾಗಿ ಕಡಿಮೆ, ಒತ್ತಡದ ಬದುಕು ಹೆಚ್ಚಾಗಿ ಐಡಿಎಫ್ ಕೇಂದ್ರಗಳು ಹೆಚ್ಚಾಗಿವೆ. ಹೆರಿಗೆ ಸಹಜವಾಗಿ ಆಗಬೇಕಾದ ಕ್ರಿಯೆ. ಸಹಜ ಹೆರಿಗೆ ತಾಯಿಯ ಮುಖದ ನಗು ಅವರ್ಣನೀಯ, ಅನುಪಮ.
ಇವತ್ತು ಅನೇಕ ಕಾಯಿಲೆಗಳು ನಮ್ಮ ತಪ್ಪು ಜೀವನ ಶೈಲಿಯಿಂದ ತಂದುಕೊಳ್ಳುತ್ತೇವೆ. ರೋಗ ಪ್ರತಿಬಂಧಕ ಆರೋಗ್ಯ ಹೇಗಿರಬೇಕು ಎನ್ನುವುದನ್ನು ಗಮನಹರಿಸಿದಾಗ ಆರೋಗ್ಯದಿಂದ ಇರಲು ಸಾಧ್ಯ. ಮುಂದಿನ ದಿನಗಳಲ್ಲಿ ಸ್ವಯಂದೀಪ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶ ನಮ್ಮ ಸರ್ವೋದಯ ಸಂಘಕ್ಕಿದೆ.
ನಿರ್ದಿಷ್ಠ ಜಾಗದಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿ ನೆನಪಿನ ಬನವಾಗಿ ಮಾಡುವ ಆಶಯ ಹೊಂದಿದೆ. ಆರೋಗ್ಯ ಭಂಡಾರವನ್ನು ತೆರೆಯಬೇಕು. ಪ್ಲಾಸ್ಟಿಕ್ ಎಷ್ಟು ಹಾನಿಕಾರಕವೋ ಪಾಲಿಸ್ಟಾರ್ ಬಟ್ಟೆಗಳು ಅಷ್ಟೇ ಹಾನಿಕಾರಕ. ಆದ್ದರಿಂದ ಎಲ್ಲವೂ ಹತ್ತಿ ಬಟ್ಟೆಗಳನ್ನೇ ಧರಿಸಬೇಕು. ವೃತ್ತಿಯ ಬಗ್ಗೆ ಗೌರವ ಭಾವನೆ ಇಟ್ಟುಕೊಂಡು ತಲ್ಲಿನತೆಯಿಂದ ಕೆಲಸ ಮಾಡಬೇಕು. ಆಗ ವ್ಯಕ್ತಿಗೌರವ ಪಡೆದುಕೊಳ್ಳಲು ಸಾಧ್ಯ. ಇವತ್ತು ಪರಿಸರ ಸ್ನೇಹಿ ಉದ್ಯೋಗಗಳ ಕಡೆ ಹೋಗಬೇಕಾಗಿದೆ. ಇದಕ್ಕೆಲ್ಲಾ ಅಡಿಪಾಯ ಧ್ಯಾನ ಅವಶ್ಯಕ. ಚೌಕಟ್ಟಿನೊಳಗೆ ಸಮಸ್ಯೆಯನ್ನು ನಿರ್ಮಾಣ ಮಾಡಿಕೊಂಡಿದ್ದೇವೆ. ಆ ಚೌಕಟ್ಟಿನೊಳಗೆ ಸಮಸ್ಯೆಯನ್ನು ಪರಿಹರಿಸಬೇಕು.
ಯಾವುದೇ ಪ್ರಯತ್ನಗಳಲ್ಲಿ ಸವಾಲುಗಳು, ಸಮಸ್ಯೆಗಳು, ತೊಡಕುಗಳು ಉಂಟು. ಅಂತಹ ಸವಾಲುಗಳಿಗೆ ಹೆದರಿ ಹೆಜ್ಜೆ ಇಡದೇ ಹೋದರೆ ಗುರಿಮುಟ್ಟಲು ಸಾಧ್ಯವಿಲ್ಲ. ಸರ್ವೋದಯದ ನಡಿಗೆ ಮಾತಿನ ಯಾತ್ರೆಯಾಗಬಾರದು. ಇದೊಂದು ಸ್ವಯಂ ದೀಪ ಸಂಘ ಸ್ಥಾಪನೆಯಾಗಬೇಕು. ನಮ್ಮ ನೆಮ್ಮದಿಯ ಬದುಕು ಇರುವುದು ಮಾನಸಿಕ ಮತ್ತು ಆರೋಗ್ಯದೊಳಗೆ. ಆದ್ದರಿಂದ ಮಾನಸಿಕ, ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಮಂಡ್ಯದ ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮಿಗಳು, ವೇದಿಕೆಯ ಮೇಲೆ ಮಾಜಿ ಶಾಸಕ ಮಹಿಮಾ ಜೆ ಪಾಟೀಲ, ಮಾಡಾಳ ಮಲ್ಲಿಕಾರ್ಜುನ, ವಡ್ನಾಳ ಜಗದೀಶ್ ಮತ್ತಿತರರಿದ್ದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಸಾಣೇಹಳ್ಳಿ ರಂಗಪ್ರಯೋಗಶಾಲೆಯ ವಿದ್ಯಾರ್ಥಿಗಳು ‘ಒಕ್ಕಲಿಗ ಒಕ್ಕದಿರೆ ನಾಡೆಲ್ಲ ಬಿಕ್ಕುವುದು’ ಎನ್ನುವ ಬೀದಿ ನಾಟಕ ಪ್ರದರ್ಶಿಸಿದರು. ಚಂದ್ರಶೇಖರ ಸ್ವಾಗತಿಸಿದರೆ ನಿಂಗರಾಜು ಡಿ ಬಿ ನಿರೂಪಿಸಿದರು. ಸರ್ವೋದಯ ಸಂಘಟಕ ಶಿವನಕೆರೆ ಬಸವಲಿಂಗಪ್ಪ ಪ್ರತಿಜ್ಞಾವಿಧಿ ಬೋಧಿಸಿದರು.