ದಾವಣಗೆರೆ
ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿಯ ವಿರಕ್ತಮಠದಲ್ಲಿ ಜನೇವರಿ 16ರಿಂದ 18ರವರೆಗೆ ಸಂಗಮನಾಥ ಮಹಾಸ್ವಾಮಿಗಳ 64ನೇ ಹಾಗೂ ಚನ್ನಬಸವ ಮಹಾಸ್ವಾಮಿಗಳ 19ನೇ ವರ್ಷದ ಸ್ಮರಣೋತ್ಸವ ಮತ್ತು ಬಸವ ತತ್ವ ಸಮ್ಮೇಳನ ನಡೆಯಲಿದೆ.
ಜ.16ರಂದು ಬೆಳಗ್ಗೆ 10ಕ್ಕೆ ಚನ್ನಗಿರಿಯ ಬೆಳಗು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಲಿದೆ. ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿವಿಧ ತಜ್ಞ ವೈದ್ಯರು ಭಾಗವಹಿಸುವರು.
ಜ.18ರಂದು ಬೆಳಗ್ಗೆ 7.30ಕ್ಕೆ ಚನ್ನಬಸವ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಬೆಳಗ್ಗೆ 8ಕ್ಕೆ ಷಟ್ಸ್ಥಲ ಧ್ವಜಾರೋಹಣವನ್ನು ಶರಣ ಗೌಡ್ರ ಸಿದ್ದರಾಮಪ್ಪನವರು ನೆರವೇರಿಸುವರು. ಬೆಳಗ್ಗೆ 8.15ಕ್ಕೆ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷತೆ ನಡೆಯಲಿದೆ. ರಾಷ್ಟ್ರೀಯ ಬಸವ ದಳದ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್. ಲಿಂಗಾಯತ ಪ್ರಾತ್ಯಕ್ಷತೆ ನೀಡುವರು. ಬೆಳಗ್ಗೆ 11ಗಂಟೆಗೆ ನಡೆಯುವ ರೈತ ಸಂಗಮ ಕಾರ್ಯಕ್ರಮವನ್ನು ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಉದ್ಘಾಟಿಸುವರು. ಪ್ರವಚನಕಾರ ಶೇಖರಯ್ಯಶಾಸ್ತ್ರಿ ಅನುಭಾವ ನೀಡುವರು.
ಮಧ್ಯಾಹ್ನ ಜರುಗುವ ಮಹಿಳಾ ಸಂಗಮ ಕಾರ್ಯಕ್ರಮದಲ್ಲಿ ಮಹಿಳಾ ಪೀಠದ ವಿವಿಧ ಮಠಾಧೀಶೆಯರು ಪಾಲ್ಗೊಳ್ಳುವರು. ಸಂಜೆ 6.30ಕ್ಕೆ ನಡೆಯುವ ಶರಣ ಸಂಗಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸುವರು. ಡಿವೈಎಸ್ಪಿ ರಮೇಶ ಕೆ.ಎನ್. ಅನುಭಾವ ನೀಡುವರು. ಶಾಸಕರು, ಮಾಜಿ ಶಾಸಕರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಜ. 18ರಂದು ಬೆಳಗ್ಗೆ 8ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷತೆ, ಸಾಮೂಹಿಕ ಪ್ರಾರ್ಥನೆ ಜರುಗಲಿದೆ. ಬೆಳಗ್ಗೆ 11ಕ್ಕೆ ಬಸವ ತತ್ವ ಸಮ್ಮೇಳನ ಹಾಗೂ ವಿಶ್ವಗುರು ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ವೀರಣ್ಣ ರಾಜೂರು ಅನುಭಾವ ನೀಡುವರು. ಮರೇಗುದ್ದಿ ವಿರಕ್ತಮಠದ ಗುರುಮಹಾಂತ ಮಹಾಸ್ವಾಮಿಗಳು, ತಿಪ್ಪಾಯಿಕೊಪ್ಪದ ಮುಕ್ತೇಶ್ವರ ಕ್ಷೇತ್ರದ ಮಹಾಂತ ಮಹಾಸ್ವಾಮಿಗಳು, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಸಾಮಾಜಿಕ ಕಾರ್ಯಕರ್ತ, ನಾಡೋಜ ಡಾ. ವುಡೇ ಪಿ. ಕೃಷ್ಣ ಅವರಿಗೆ ವಿಶ್ವಗುರು ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

