ಬೀದರ:
ಜ್ಞಾನದ ಮೂಲ ಗುರುಸೇವೆ. ಗುರುಸೇವಯಿಂದ ಮನ ನಿರ್ಮಲವಾಗುತ್ತದೆ. ನರಜನ್ಮಕ್ಕೆ ಬಂದ ಬಳಿಕ ಗುರುವಿನ ಕುರುಹು ಕಾಣಬೇಕು. ಗುರು ದೊರೆತರೆ ಶಿಷ್ಯನಾಗಿ ಗುರುಕರ ಜಾತನಾಗಿ ಸೇವೆ ಸಲ್ಲಿಸಬೇಕು ಎಂದು ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಗೋರಟಾ ಗ್ರಾಮದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯರು, ಇಂದು ಮಾನವನಲ್ಲಿ ಎಲ್ಲಾ ಸೌಕರ್ಯಗಳಿದ್ದರೂ ಶಾಂತಿ ಸಮಾಧಾನ ಸಂತೃಪ್ತಿ ಇಲ್ಲದೆ ಬಳಲುತ್ತಿದ್ದಾನೆ. ಜೀವನದ ಗುರಿಯನ್ನು ಮರೆತು ಭೌತಿಕ ಸಂಪತ್ತೇ ಶಾಶ್ವತ ಎಂದು ತಿಳಿದು ಬಳಲುತ್ತಿದ್ದಾನೆ.

ಮಾನವನ ನಿಜವಾದ ಗುರಿ ಸತ್ಯವನ್ನು ಅರಿಯುವುದು. ಸಾಕೆನಿಸದ ಸವೆಯದ ಮತ್ತೊಂದು ಬೇಕೆನಿಸದ ಸುಖವೇ ಪರಮಸುಖ. ಆ ಸುಖವನ್ನು ಪಡೆದ ಶರಣರೆ ನಮಗೆ ಮಾರ್ಗದರ್ಶಕರು.
ಭೌತಿಕ ಸುಖದ ಮೋಹವನ್ನು ಹುಸಿಯೆಂದು ತಿಳಿಸಿ ಅಧ್ಯಾತ್ಮದ ಆನಂದದ ಸುಖದ ಜ್ಞಾನ ನೀಡುವವನೇ ನಿಜವಾದ ಗುರು. ಅಂತಹ ಗುರು ದೊರೆತರೆ ಜೀವನ ಆನಂದಮಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅನುಭವ ನೀಡಿರುವ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶರಣ ಶಂಭುಲಿಂಗ ಕಾಮಣ್ಣ ಮಾತನಾಡಿ, ಶರಣರ ನೆನೆದರ ಸರಗಿಯ ಇಟ್ಟಂಗ ಎಂದು ಜನಪದ ನುಡಿಯಲ್ಲಿ ತಿಳಿಸುತ್ತಾರೆ. ಯಾವುದು ಕೇಳುವುದರಿಂದ ಮನ ಸತ್ಪಥದತ್ತ ಮುಖ ಮಾಡುವುದೊ ಅಂತಹ ಶರಣರ ನುಡಿಗಳು ಮಾತ್ರ ಕೇಳಬೇಕು.

ಕೌಟುಂಬಿಕ ಕಲಹ ಮನಸ್ತಾಪಗಳಿಗೆ ಶರಣರ ವಚನಗಳು ನಿಜವಾದ ಮದ್ದು. ತನ್ನ ತಾ ಅರಿಯದ ಮಾನವ ಪಶುವಿನ ಸಮಾನ. ಏನ ಕಂಡಡೆನಯ್ಯ ತನ್ನ ತಾ ಕಾಣದಾತ ಕುರುಡ ಎನ್ನುತ್ತಾರೆ ಶರಣರು ಎಂದು ನುಡಿದರು.
ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣವನ್ನು ಗುಂಡಪ್ಪ ಸಂಗಮಕರ ನೆರವೇರಿಸಿದರು. ಕಲಖೊರಾ ಅನಿಲ ಮಹಾರಾಜ ಉದ್ಘಾಟನೆಗೆ ಗೈದರು.
ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶರಣ ನಾಗಪ್ಪ ನಿಣ್ಣೆ ಅವರಿಗೆ ಅಭಿನಂದಿಸಲಾಯಿತು. ರವಿ ಜಗಶೆಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಪ್ರಜ್ವಲ ರಾಜೋಳೆ ನಿರೂಪಣೆ ಮಾಡಿದರು. ಶಾಶ್ವತ ಸೋಮನಾಥಪ್ಪ ರಾಜೇಶ್ವರೆ ಸ್ವಾಗತಿಸಿದರು. ನೀಲಮ್ಮನ ಬಳಗ ಗೋರ್ಟಾ ಗ್ರಾಮದ ಶರಣೆಯರು ಪ್ರಾರ್ಥನೆ ನಡೆಸಿಕೊಟ್ಟರು.
