ಸಾಣೇಹಳ್ಳಿ
ಜನವರಿ ೨೭ ರಿಂದ ೩೦ರವರೆಗೆ ನಡೆದ “ನಮ್ಮ ನಡೆಗೆ ಸರ್ವೋದಯದೆಡೆಗೆ” ಪಾದಯಾತ್ರೆಯ ಯಶಸ್ಸಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಕೃತಜ್ಞತಾ ಹಾಗೂ ಲೆಕ್ಕಪತ್ರಗಳ ಪರಿಶೀಲನಾ ಕಾರ್ಯಕ್ರಮ ಇಲ್ಲಿನ ಎಸ್.ಎಸ್. ರಂಗಮಂದಿರದಲ್ಲಿ ಶುಕ್ರವಾರ ನಡೆಯಿತು.
ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು
ಕೃಷಿ, ಶಿಕ್ಷಣ, ಆರೋಗ್ಯ, ಪರಿಸರ, ರಾಜಕೀಯ ಕ್ಷೇತ್ರಗಳು ಯಶಸ್ಸಾದರೆ ಮಾತ್ರ ಸರ್ವೋದಯ ಜಾಥಾ ಯಶಸ್ವಿ ಕಾರ್ಯಕ್ರಮವೆನೆಸಿಕೊಳ್ಳಲು ಸಾಧ್ಯ. ಯಾವುದೇ ಪ್ರಯೋಗಗಳು ಒಂದೇ ಸಾರಿ ಯಶಸ್ಸು ಕಾಣಲು ಅಸಾಧ್ಯ. ಮತ್ತೆ ಮತ್ತೆ ಆಗ್ತಾ ಹೋದಾಗ ಪರಿವರ್ತನೆ ಆಗಲು ಸಾಧ್ಯ. ಪಾದಯಾತ್ರೆ ಎಲ್ಲ ಕಡೆ ನಡೆದರೆ ಜನರು ಜಾಗೃತಿಯಾಗುವರು.
ಯಾವುದೇ ಕಾರ್ಯಕ್ರಮ ಮಾಡಿದರೂ ಉಳಿತಾಯದ ದೃಷ್ಟಿಯನ್ನಿಟ್ಟುಕೊಂಡು ಸರಳ ಹಾಗೂ ಅರ್ಥಗರ್ಭಿತವಾಗಿ ಮಾಡಬೇಕು. ದುಡ್ಡು ಕೊಡುವವರು ಬಹಳಷ್ಟು ಜನ, ಆದರೆ ಆದರ್ಶ ಜೀವನವನ್ನು ಇಟ್ಟುಕೊಳ್ಳಬೇಕು.
ಸರ್ವೋದಯ ಜಾಥಾ ಉದ್ದೇಶ ಪ್ಲಾಸ್ಟಿಕ್ ಮುಕ್ತವಾಗಿರಬೇಕು ಎನ್ನುವ ಆಶಯ ನಮ್ಮದಾಗಿತ್ತು. ಆದರೆ ಜಾಥಾದ ದಾರಿಯುದ್ದಕ್ಕೂ ಪ್ಲಾಸ್ಟಿಕ್ ಹಾವಳಿ ಕಾಣಿಸಿತು. ಮೊದಲ ಹೆಜ್ಜೆ ಇಡುವಾಗ ತಪ್ಪುಗಳಾಗುವುದು ಸಹಜ. ತಪ್ಪನ್ನು ತಿದ್ದುಕೊಂಡು ಸಂಘಟನೆಯನ್ನು ಮಾಡಬೇಕಾಗಿದೆ, ಎಂದರು.
ಮಾಡಾಳಿನ ರುದ್ರಮುನಿ ಸ್ವಾಮಿಗಳು ಮಾತನಾಡಿ ಸರ್ವೋದಯದೆಡೆಗೆ ಪಾದಯಾತ್ರೆ ಪಂಚವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ತುಂಬಾ ಪರಿಣಾಮಕಾರಿಯಾಗಿತ್ತು. ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧ ಮಾಡಬೇಕು. ಪ್ರತಿಯೊಬ್ಬರ ಕೈಗಳಲ್ಲಿ ಬಟ್ಟೆ ಚೀಲಗಳನ್ನಿಟ್ಟುಕೊಳ್ಳಬೇಕು.
ಎಲ್ಲ ಕಡೆಗಳಲ್ಲಿ ಇಂತಹ ಸರ್ವೋದಯದ ಕಾರ್ಯಕ್ರಮಗಳು ನಡೆಯಬೇಕು. ಇದು ಎಲ್ಲರೂ ಒಳಗೊಂಡಿರುವ ಕಾರ್ಯಕ್ರಮ. ಶಿಕ್ಷಣದ ಜೊತೆಗೆ ಜೀವನಕ್ಕೆ ಬೇಕಾದ ವಿಷಯಗಳನ್ನು ನಮ್ಮ ಮಕ್ಕಳಿಗೆ ಮನೆಯಲ್ಲಿ ಕಲಿಸಿಕೊಡಬೇಕು, ಎಂದರು.
ಸೋಮಶೇಖರಪ್ಪ ಮಾತನಾಡಿ ಪಾದಯಾತ್ರೆ ನಿಜಕ್ಕೂ ಯಶಸ್ವಿಯಾಗಿದೆ ಎನ್ನಲು ಈ ಕಾರ್ಯಕ್ರಮವೇ ಸಾಕ್ಷಿ. ಬದಲಾವಣೆಯ ಬೀಜಗಳು ಅಲ್ಲಲ್ಲೇ ಬಿತ್ತಬೇಕು. ಪ್ರತಿಯೊಂದು ಗ್ರಾಮ ಪ್ಲಾಸ್ಟಿಕ್ ಮುಕ್ತ ಗ್ರಾಮ ಆಗ್ಬೇಕು. ಪ್ಲಾಸ್ಟಿಕ್ ಬಗ್ಗೆ ಅರಿವು ಮಾಡಿಸುವ ಕಾರ್ಯ ಮಾಡಬೇಕು. ಊರೂರುಗಳಲ್ಲಿ ಪಾದಯಾತ್ರೆ ಆಗಬೇಕು. ಪ್ರತಿಗ್ರಾಮಗಳಲ್ಲೂ ಸರ್ವೋದಯದ ಘಟಕಗಳು ಪ್ರಾರಂಭ ಆಗಬೇಕು ಎಂದರು.
ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಶಂಕರಲಿಂಗಪ್ಪ ಮಾತನಾಡಿ ಸರ್ವೋದಯದ ಕಾರ್ಯಕ್ರಮದ ಆಶಯಗಳನ್ನು ಈಡೇರಿಸಿದಾಗ ಮಾತ್ರ ಯಶಸ್ವಿ ಕಾರ್ಯಕ್ರಮವಾಗುವುದು. ಈ ಪಾದಯಾತ್ರೆಯಲ್ಲಿ ಮೊದಲು ಟೀಕೆಗಳು ಬಂದವು. ಆದರೆ ಪಾದಯಾತ್ರೆ ಮುಗಿದ್ಮೇಲೆ ಅದರ ಉದ್ಧೇಶ ಏನು ಎನ್ನುವುದು ಅವರಿಗೆ ಅರಿವಾಯಿತು ಎಂದರು.
ಸಂತೇಬೆನ್ನೂರಿನ ಸಿರಾಜ್ ಅಹಮದ್ ಮಾತನಾಡಿ ಯಾಂತ್ರಿಕ ಜೀವನದಲ್ಲಿ ನಮ್ಮ ಧರ್ಮ, ಮಾನವೀಯ ಮೌಲ್ಯಗಳನ್ನು ಬಿಡಬಾರದು ಎಂದರು.
ದೇವರಹಳ್ಳಿ ಬಸವರಾಜಪ್ಪ ಇಡೀ ಕರ್ನಾಟಕದಲ್ಲಿ ಯಾವುದೇ ಸ್ವಾಮಿಗಳು ಹಮ್ಮಿಕೊಳ್ಳದೇ ಇರುವಂಥ ಕಾರ್ಯಕ್ರಮವನ್ನು ಪಂಡಿತಾರಾಧ್ಯ ಶ್ರೀಗಳು ಹಮ್ಮಿಕೊಂಡಿರುವರು. ಸರ್ವೋದಯದೆಡೆಗೆ ಕಾರ್ಯಕ್ರಮ ಕರ್ನಾಟಕದ ಎಲ್ಲ ಭಾಗಗಳಲ್ಲಿ ನಡೆಯಲಿ. ರಾಜಕೀಯ ಸರಿಯಾದರೆ ಎಲ್ಲ ಕ್ಷೇತ್ರಗಳು ಸರಿ ಹೊಂದಲಿಕ್ಕೆ ಸಾಧ್ಯ. ಗಾಂಧೀಜಿಯವರ ಚಿಂತನೆಗಳ ಬಗ್ಗೆ ಜನರು ಯೋಚನೆ ಮಾಡಬೇಕು. ಸರಕಾರ ಹೆಂಡದ ಅಂಗಡಿಗಳನ್ನು ಮುಚ್ಚಬೇಕು ಎಂದರು.
ಗುಳ್ಳಿಹಳ್ಳಿ ಮಲ್ಲಿಕಾರ್ಜುನಪ್ಪ ಮಾತನಾಡಿ ಇಡೀ ಸರ್ವೋದಯದ ಕಲ್ಪನೆಯಲ್ಲಿ ಗಾಂಧೀಜಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದರು. ಆದರೆ ಶ್ರೀಮಂತರ ಕಡೆಗೆ ಹೋಗ್ತಾ ಇದ್ದೇವೇ ಹೊರತು ಸ್ಥಿತಿವಂತರಾಗುವುದರ ಕಡೆಗೆ ಹೋಗುತ್ತಿಲ್ಲ.
ಬುಕ್ಕಾಂಬುದಿಯ ಸವಿತಾ ಮಾತನಾಡಿ, ಕುಡಿಯುವರ ಸಂಖ್ಯೆ ಕಡಿಮೆಯಾದರೆ ಸುಖ ಸಂಸಾರ ನಡೆಯಲು ಸಾಧ್ಯ. ಪ್ರತಿಯೊಬ್ಬರು ಸಾವಯವ ಕೃಷಿಕರಾದಾಗ ಆರ್ಥಿಕವಾಗಿ ಸಬಲದ ಜೊತೆಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದರು.
ಮುಗಮುಳಿಹಳ್ಳಿ ಲಿಂಗರಾಜು ಮಾತನಾಡಿ ಪ್ರತಿಯೊಂದು ಮನೆಯಲ್ಲೂ ಅನಾರೋಗ್ಯಕ್ಕೀಡುಗುವಂಥವರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಕಾರಣ ನಾವು ತಿನ್ನುವಂಥ ಆಹಾರ, ನಮ್ಮ ಪರಿಸರ. ಆದ್ದರಿಂದ ನಮ್ಮ ಪರಿಸರವನ್ನು ಶುದ್ಧವಾಗಿಟ್ಟುಕೊಂಡು ಸಾವಯವ ಆಹಾರ ಪದಾರ್ಥಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದ ನಾಗರಾಜ್ ಹೆಚ್. ಎಸ್, ತಬಲಾ ಸಾಥಿ ಶರಣ್ ವಚನಗೀತೆಗಳನ್ನು ಹಾಡಿದರು. ವೇದಿಕೆಯ ಮೇಲೆ ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಎಸ್. ಸಿದ್ಧಪ್ಪ ಹಾಗೂ ಶಂಕರಲಿಂಗಪ್ಪ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಿವಕುಮಾರ್ ಬಿ.ಎಸ್. ಸ್ವಾಗತಿಸಿದರೆ ಸಾನಿ ರವಿಕುಮಾರ ನಿರೂಪಿಸಿ, ವಂದಿಸಿದರು.
ಅಜ್ಜಂಪುರ, ತರೀಕೆರೆ, ಹೊಸದುರ್ಗ ತಾಲ್ಲೂಕಿನ ಗ್ರಾಮಸ್ಥರು ಸರ್ವೋದಯದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕೊನೆಗೆ ಎಲ್ಲರೂ ಉದಕ ಮುದ್ದೆ, ಕಾಳು, ಅಂಬಾಹೊಡೆ, ನಿಂಬೆಹಣ್ಣು, ಮೆಣಸಿನಕಾಯಿ ಮಜ್ಜಿಗೆಯ ದೇಶೀ ಊಟವನ್ನು ಸವಿದರು.