ರಾಯಚೂರು
ನಗರದ ಬಸವ ಕೇಂದ್ರದಲ್ಲಿ ಕಳೆದ ರವಿವಾರ ಅಕ್ಕನ ಬಳಗದ ವತಿಯಿಂದ ವೀರವಿರಾಗಿಣಿ, ವೈರಾಗ್ಯನಿಧಿ ಅಕ್ಕಮಹಾದೇವಿ ತಾಯಿಯವರ ಜಯಂತೋತ್ಸವ ಅಂಗವಾಗಿ ಪಥ ಸಂಚಲನ, ಷಟಸ್ಥಲ ಧ್ವಜಾರೋಹಣ, ಅಕ್ಕನ ತೊಟ್ಟಿಲು ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ವಿಶ್ವಗುರು ಬಸವಣ್ಣನವರ ಮತ್ತು ಅಕ್ಕಮಹಾದೇವಿ ತಾಯಿಯವರ ಪುತ್ತಳಿಗೆ, ಗಣ್ಯರಿಂದ ಪುಷ್ಪ ನಮನ ಮತ್ತು ಷಟಸ್ಥಲ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ, ಶರಣ ವಿಶ್ವಾರಾಧ್ಯ ಸತ್ಯಂಪೇಟೆ, ಬಸವ ಮಾರ್ಗ ಪ್ರತಿಷ್ಠಾನ, ಶಹಾಪುರ ಇವರು ಹೆದರದಿರು ಮನವೇ ಕುರಿತು ಸುಧೀರ್ಘವಾಗಿ, ಅತ್ಯಂತ ಅರ್ಥಪೂರ್ಣವಾಗಿ ಚಿಂತನೆ ಮಾಡುತ್ತಾ, ಸುಮಾರು 900 ವರ್ಷಗಳ ಹಿಂದೆ ಆಗಿಹೋದ ಅಕ್ಕನ ಜೀವನ, ಅಕ್ಕನ ಆಧ್ಯಾತ್ಮಿಕ ಔನ್ನತ್ಯ, ಅಕ್ಕನ ಧೈರ್ಯ ಮತ್ತು ಕೆಚ್ಚು, ಇಂದಿಗೂ ಸಹ ಸಮಾಜದ ಪ್ರತಿಯೊಬ್ಬ ಮಹಿಳೆಯರಿಗೆ ಆದರ್ಶಪ್ರಾಯವಾಗಿದೆ ಎಂದರು.

ಅಕ್ಕನ ಜಯಂತಿ ದಿನ ನಮ್ಮೆಲ್ಲರ ಆತ್ಮಾವಲೋಕನದ ದಿನ, ಅಕ್ಕನ ವಚನಗಳು ನಮ್ಮೊಳಗೆ ಪಚನವಾದರೆ ನಾವು ಯಾರು ಮೋಸ ಹೋಗುವುದಿಲ್ಲ. ಜಗತ್ತಿನ ಅಪ್ರತಿಮ ಸಾಧಕಿ ಅಕ್ಕಮಹಾದೇವಿ ತಾಯಿಯವರು ಮತ್ತು ಪುರುಷ ಪ್ರಧಾನ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿದ ಜಗತ್ತಿನ ಪ್ರಥಮ ಮಹಿಳೆ ಅಕ್ಕಮಹಾದೇವಿ ಎಂದು ಬಣ್ಣಿಸಿದರು.

ಅಕ್ಕನ ಜೀವನದಿಂದ ಪ್ರಭಾವಿತರಾಗಿ, ನಾವೆಲ್ಲರು ಎಂತಹ ಕಷ್ಟದ ಪ್ರಸಂಗ ಬಂದರೂ, ಎದೆಗುಂದದೆ ಧೈರ್ಯದಿಂದ ಎದುರಿಸಿ, ಸ್ವನಿರ್ಧಾರ ಕೈಗೊಂಡು, ನಮ್ಮ ಅಸ್ಮಿತೆ ಉಳಿಸಿಕೊಳ್ಳುವುದೇ ಮಹಿಳೆಯರ ಪಾರಮಾರ್ಥಿಕ ಸಾಧನೆ ಎಂದು ತಿಳಿಸಿದರು.

ಮಹಿಳಾ ಸಂವೇದನೆಯನ್ನು ಜಾಗತಿಕ ಮಟ್ಟದಲ್ಲಿ ಅರ್ಥಪೂರ್ಣವಾಗಿ ಹೇಳಿದವರು ಬಸವಾದಿ ಶರಣರು, ಹಾಗೆ ಸೂತಕ ಎಂದು ಹೆಣ್ಣನ್ನು ಆ ಬೇಲಿಯೊಳಗೇ ಬಂಧಿಸಿಡುತ್ತಿದ್ದ ಕಾಲದಲ್ಲಿ, ಸೂತಕ ಮನಸ್ಸಿಗೆ ಹೊರತು ಮನುಷ್ಯನ ದೇಹಕ್ಕಲ್ಲ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ ಅಕ್ಕ.
ಹೆಣ್ಣಿಗೂ ಪ್ರತ್ಯೇಕ ಸ್ಥಾನ, ಆತ್ಮಸಾಕ್ಷಿ, ಚಿಂತನೆ ಮಾಡುವ ಅಧಿಕಾರ ಇದೆ ಎಂದು ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ್ದರು ಎಂದು ತಿಳಿಸುತ್ತಾ, ಹೆಣ್ಣುಮಕ್ಕಳು ಪ್ರಜ್ಞಾವಂತರಾದರೆ ಸಮಾಜ ಪ್ರಜ್ಞಾವಂತವಾಗುತ್ತದೆ ಎಂದು ಸಂತ್ಯಂಪೇಟೆ ತಿಳಿಸಿದರು.
ಸಮ್ಮುಖ ವಹಿಸಿ, ಅಕ್ಕನ ದಿಟ್ಟತನದ ನಿಲುವಿನ ಕುರಿತು ವೆಂಕಟಾಪುರ ಬಸವರಾಜಪ್ಪ ಶರಣರು ಮಾತನಾಡಿದರು.

ಕಾರ್ಯಕ್ರಮದಲ್ಲಿ, ಸಾಮಾಜಿಕ, ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ, ಶರಣೆ ಶೃತಿ ಮತ್ತು ರಾಮಣ್ಣ ಹಂಪರಗುಂದಿ, ಸಂಸ್ಥಾಪಕರು ಅಭಿನಂದನ್ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಮಸ್ಕಿ ಇವರಿಗೆ ” ನಿಸ್ವಾರ್ಥ ಸೇವಾ ದಂಪತಿಗಳು” ಎಂಬ ಪ್ರಶಸ್ತಿಯನ್ನು ರಾಯಚೂರು ಜಿಲ್ಲಾ ಬಸವ ಕೇಂದ್ರ ಮತ್ತು ಅಕ್ಕನ ಬಳಗದ ವತಿಯಿಂದ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಸರಳ, ಸಜ್ಜನಿಕೆಯ ಸಾಕಾರ ಪ್ರತಿರೂಪವಾದ ಈ ಶರಣ ದಂಪತಿಗಳು, ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಕಳೆದ 09 ವರ್ಷಗಳಿಂದ ಸುಮಾರು ಐವತ್ತಕ್ಕೂ ಹೆಚ್ಚು ಅನಾಥ, ಬಡ, ನಿರ್ಗತಿಕ ಮತ್ತು ವಿಶೇಷಚೇತನ ಮಕ್ಕಳಿಗೆ, ಉಚಿತವಾಗಿ ವಸತಿ, ಆಹಾರ, ವಸ್ತ್ರ ಮತ್ತು ಶಿಕ್ಷಣವನ್ನು ಕೊಟ್ಟು ಆಪದ್ಬಾಂಧವರಾಗಿದ್ದಾರೆ. ತಮಗೆ ಮಕ್ಕಳಾಗಿಲ್ಲ ಎಂಬ ಕೊರಗು ನೀಗಿಸಲು, ಈ ಶರಣ ದಂಪತಿಗಳು ಅಭಿನಂದನ್ ಸ್ಪೂರ್ತಿಧಾಮ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿರುವ ಮಕ್ಕಳನ್ನೇ ತಮ್ಮ ಸ್ವಂತ ಮಕ್ಕಳೆಂದು ಭಾವಿಸಿ, ಮಾನವೀಯತೆ ಮೆರೆದಿದ್ದಾರೆ.
ಇದರ ಜೊತೆಯಲ್ಲಿ ಸಂಡೇ ಫಾರ್ ಸೋಶಿಯಲ್ ವರ್ಕ್ ಎಂಬ ಅಭಿಯಾನದ ಮೂಲಕ, ಪ್ರತಿ ಭಾನುವಾರ ಶಾಲೆ, ಕಾಲೇಜು, ದೇವಸ್ಥಾನ, ಬಸ್ ನಿಲ್ದಾಣ ಮುಂತಾದ ಕಟ್ಟಡಗಳನ್ನು ಸ್ವಚ್ಛಗೊಳಿಸಿ ಸುಣ್ಣ – ಬಣ್ಣ ಬಳಿದು ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಕಾರ್ಯಕ್ರಮವನ್ನು ಶರಣ ಹರವಿ ನಾಗನಗೌಡ, ಗೌರವಾಧ್ಯಕ್ಷರು, ಬಸವ ಕೇಂದ್ರ ಉದ್ಘಾಟಿಸಿದರು. ಶರಣ ರಾಚನಗೌಡ ಕೋಳೂರು ಅಧ್ಯಕ್ಷರು, ಬಸವ ಕೇಂದ್ರ ರಾಯಚೂರು ಅಧ್ಯಕ್ಷತೆ ವಹಿಸಿದ್ದರು. ಶರಣೆ ಸುಲೋಚನಮ್ಮ ಪಟ್ಟಣಶೆಟ್ಟಿ ಕಾರ್ಯಕ್ರಮದ ದಾಸೋಹಿಗಳಾಗಿದ್ದರು. ಶರಣ ಚುಕ್ಕಿ ಸೂಗಪ್ಪ ಮತ್ತು ಶರಣೆ ಜಗದೇವಿ ಚನ್ನಬಸವ, ಅಧ್ಯಕ್ಷರು, ಅಕ್ಕನ ಬಳಗ, ರಾಯಚೂರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶರಣೆ ಪ್ರಿಯಾಂಕ ಗದ್ವಾಲ್ ಸ್ವಾಗತ ಕೋರಿದರು. ಮುಕ್ತಾಯಕ್ಕ ನರಕಲದಿನ್ನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶರಣೆ ರೇಖಾ ಪಾಟೀಲ್ ನಿರೂಪಿಸಿದರು, ತಾಯಮ್ಮ ವಂದಿಸಿದರು, ಪೂರ್ಣಿಮಾ ಕಿರಣ್ ಹಂಪರಗುಂದಿ ದಂಪತಿಗಳ ಕಿರುಪರಿಚಯ ಮಾಡಿದರು.
ಪ್ರಮುಖ ಆಕರ್ಷಣೆಯಾಗಿ ಪ್ರಾರಂಭದಲ್ಲಿ, ನಿಜಲಿಂಗಪ್ಪ ಕಾಲೋನಿಯ ಗಣೇಶ ದೇವಸ್ಥಾನದಿಂದ ಬಸವ ಕೇಂದ್ರದವರೆಗೆ, ಅಕ್ಕಮಹಾದೇವಿಯವರ ಭಾವಚಿತ್ರದೊಂದಿಗೆ ಅಕ್ಕನ ಬಳಗ ಮತ್ತು ಬಸವ ಕೇಂದ್ರದ ಸರ್ವಸದಸ್ಯರಿಂದ ಪಥ ಸಂಚಲನ ನಡೆದು, ನಗರದ ಜನತೆಯ ಮನ ಮುಟ್ಟಿತು. ವಚನ ಗಾಯನ ಮತ್ತು ಸಾಮೂಹಿಕ ಬಸವ ಪ್ರಾರ್ಥನೆಯನ್ನು ಶ್ರೀ ರಾಘವೇಂದ್ರ ಆಶಾಪುರ ಮತ್ತು ಅವರ ಶಿಷ್ಯವೃಂದ ನಡೆಸಿಕೊಟ್ಟರು.

ಕುಮಾರಿ ಸಾಧನ ಮಲ್ಲಿಕಾರ್ಜುನ್ ಹೂಗಾರ ಅವರ ವಚನ ನೃತ್ಯ, ಕುಮಾರಿ ಲಾಸ್ಯ ಕಿರಣ್, ಕುಮಾರಿ ಸಾನ್ವಿ ಯಾಪಲದಿನ್ನಿ ಅವರ ಅಕ್ಕನ ವೇಷಭೂಷಣ ಮತ್ತು ಕುಮಾರ ವಿಶ್ವಾಸ್ ಅವರ ಬಸವಣ್ಣನವರ ವೇಷಭೂಷಣ ಹಾಗು ಅಕ್ಕನ ಬಳಗದ ಶರಣೆ ಸುಪ್ರಿಯ ಅವರಿಂದ ಅಕ್ಕಮಹಾದೇವಿ ತಾಯಿಯವರ ತೊಟ್ಟಿಲು ಕಾರ್ಯಕ್ರಮ ಮತ್ತು ಪಾರ್ವತಿ ಪಾಟೀಲ ಅವರಿಂದ ಅಕ್ಕಮಹಾದೇವಿ ತಾಯಿಯವರ ಯೋಗಾಂಗ ತ್ರಿವಿಧಿ ಪಠಣ ನೆರೆದಿದ್ದ ಅಪಾರ ಬಸವಾಭಿಮಾನಿಗಳ ಮನಸೂರೆಗೊಂಡಿತು.
ಬಹಳ ಒಳ್ಳೆಯ ಸುದ್ದಿ.ಅಕ್ಕಮಹಾದೇವಿ ಗುru yaru