ಬಿಜೆಪಿ ಯಾವುದೆ ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಾಗಲೆಲ್ಲ ಸಂಘ ಮೂಲದದವರೇ ಶಿಕ್ಷಣ ಮಂತ್ರಿ ಆಗುವುದೇಕೆ ಎಂಬುದರ ಕುರಿತು ಜನರ ಅರಿವಿಗೆ ಬಂದಿದ್ದು ವಿರಳ.
ಮಹಾಕಾವ್ಯ ಹಾಗು ಪುರಾಣ ಕಾಲದಿಂದ ಹಿಡಿದು ವರ್ತಮಾನದವರೆಗೆ ತಮ್ಮ ಕುಟಿಲ ಹುನ್ನಾರಗಳನ್ನೆ ಪ್ರತಿಭೆ ಎಂದು ಬಿಂಬಿಸಿಕೊಂಡು ಇವರು ಬಂದಿದ್ದಾರೆ. ಭಾರತದ ಮೂಲ ಇತಿಹಾಸವನ್ನು ಜೀರ್ಣಿಸಿಕೊಳ್ಳಲು ಆಗದ ಈ ಜನರು ನೈಜ ಇತಿಹಾಸವನ್ನು ತಿರುಚುವ ಹಾಗು ಕಲ್ಪಿತ ಪುರಾಣಗಳನ್ನೆ ಇತಿಹಾಸವೆಂದು ಸಾಧಿಸುವ ದುಸ್ಸಾಹಸವನ್ನು ಮೊದಲಿನಿಂದ ಮಾಡಿಕೊಂಡೆ ಬಂದಿದ್ದಾರೆ.
ಬೌದ್ಧ ಜಾತಕ ಕತೆಗಳು ಹಾಗು ರಷ್ಯಾದ ಸ್ಲಾವಿಕ್ ಆರ್ಯನ್ನರ ವೇದಗಳನ್ನು ಕದ್ದು ಇಲ್ಲಿ ಮಹಾಕಾವ್ಯಗಳನ್ನು ಹಾಗು ವೇದಗಳನ್ನು ರಚಿಸಿಕೊಂಡು ಗೌತಮ ಬುದ್ದನನ್ನೆ ವಿಷ್ಣುವಿನ ದಶಾವತಾರದಲ್ಲಿ ಸೇರಿಸಿ ವಿಕೃತಿ ಮೆರೆದಿದ್ದಾರೆ.
ಈಗ ಬಸವ ಚರಿತ್ರೆಯನ್ನು ವಿಕೃತಗೊಳಿಸಲು ವಚನ ದರ್ಶನವೆಂಬ ಅಭಿಯಾನ ಆರಂಭಿಸಿದ್ದಾರೆ.
ಕರ್ನಾಟಕದಲ್ಲಿ ೨೦೧೯ ರಲ್ಲಿ ಅಕ್ರಮವಾಗಿ ಹಾಗು ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದ ಬಿಜೆಪಿˌ ಸಂಪುಟದಲ್ಲಿ ಸುರೇಶಕುಮಾರ ಮತ್ತು ಬಿ ಸಿ ನಾಗೇಶ್ ಎಂಬ ಇಬ್ಬರು ಸಂಘಿಗಳನ್ನು ಶಿಕ್ಷಣಮಂತ್ರಿಗಳಾಗಿಸಿದ್ದು ಈಗ ಇತಿಹಾಸ. “ಸಜ್ಜನ ರಾಜಕಾರಣಿ” ಎಂದು ಬಿರುದಾಂಕಿತರಾಗಿರುವ ಸುರೇಶಕುಮಾರ ಶಿಕ್ಷಣ ಮಂತ್ರಿ ಇದ್ದಾಗ ಸನಾತನ ವೈದಿಕ ಧರ್ಮಕ್ಕೆ ವಿರೋಧವಾಗಿ ಹುಟ್ಟಿದ ನೆಲಮೂಲದ ಜನಪದೀಯ ಧರ್ಮಗಳ ಪ್ರಸ್ತಾಪವನ್ನು ಹಾಗು ಯಜ್ಞ-ಯಾಗಗಳ ಮುಖೇನ ವೈದಿಕರು ಮಾಡುತ್ತಿದ್ದ ಜನಪೀಡಕ ಕೃತ್ಯಗಳನ್ನು ಶಾಲಾ ಪಠ್ಯದಿಂದ ಕೈಬಿಡಲಾಯಿತು.
ಆನಂತರ ಸುರೇಶ ತಮ್ಮ ಅದಕ್ಷತೆಯ ದೆಸೆಯಿಂದ ಸಂಪುಟದಿಂದ ಹೊರದೂಡಲ್ಪಟ್ಟಾಗ ಆ ಜಾಗದಲ್ಲಿ ಪ್ರತಿಷ್ಠಾಪನೆಗೊಂಡದ್ದು ಮತ್ತೊಬ್ಬ ಸಂಘಿ ಬಿ ಸಿ ನಾಗೇಶ್. ಈತ ಮಂತ್ರಿಯಾಗುವುದೆ ತಡ ಮೊದಲು ಮಾಡಿದ ಕುಕೃತ್ಯವೆಂದರೆ ಶಾಲಾ ಪಠ್ಯಗಳನ್ನು ವಿಕೃತವಾಗಿ ತಿರುಚಲು ಅಶಿಕ್ಷಿತನೊಬ್ಬನ ಮುಖಂಡತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿದ್ದು.
ರೋಹಿತ್ ಚಕ್ರತೀರ್ಥ ಎಂಬ ಮತ್ತೊಬ್ಬ ಸಂಘಿ ಆಸಾಮಿ ಕರ್ನಾಟಕದ ಶಾಲಾ ಪಠ್ಯಕ್ಕೆ ಇಡಿಯಾಗಿ ಕರಸೇವೆ ಮಾಡಿದ್ದು ಆಗ ದೊಡ್ಡ ವಿವಾದವೆ ಆಗಿತ್ತು. ಸರಕಾರದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಯೂ ನಡೆದಿತ್ತು. ದಪ್ಪ ಚರ್ಮದ ಸಂಘಿ ಮನಸ್ಥಿತಿಗಳಿಗೆ ಪ್ರತಿಭಟನೆಯ ಬಿಸಿ ಯಾವ ರೀತಿಯಲ್ಲೂ ತಟ್ಟಲಿಲ್ಲ. ಅದರ ಫಲಭೋಗವನ್ನು ೨೦೨೩ ರ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ್ದು ಈಗ ಮುಗಿದ ಕತೆ.
೨೦೧೩ ರ ಸಿದ್ಧರಾಮಯ್ಯ ಸರಕಾರದ ಅವಧಿಯಲ್ಲಿ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ನಡೆದಿದ್ದ ಪಠ್ಯ ಪರಿಷ್ಕರಣೆ ಕಾರ್ಯವು ಸಂಪೂರ್ಣವಾಗಿ ಸರಿಯಾಗಿತ್ತು ಎಂದು ಹೇಳಲಾಗದು. ವಿಶೇಷವಾಗಿ ಬಸವಣ್ಣನವರಿಗೆ ಸಂಬಂಧಿಸಿದ ಪಠ್ಯವು ಅತ್ಯಂತ ದೋಷಪೂರಿತವಾಗಿತ್ತು. “ಬಸವಣ್ಣನವರು ಶೈವ ಗುರುವಿನಿಂದ ದೀಕ್ಷೆ ಪಡೆದು ವೀರಶೈವ ಮತವನ್ನು ಪ್ರಚಾರಮಾಡಿದರು” ಎನ್ನುವ ಶತಮಾನಗಳಷ್ಟು ಹಳೆಯ ಸ್ಥಾಪಿತ ಮಿತ್ಯವನ್ನೆ ಬರಗೂರು ಸಮಿತಿ ಪಠ್ಯದಲ್ಲಿ ಸೇರಿಸಿ ದೊಡ್ಡ ತಪ್ಪನ್ನು ಎಸಗಿತ್ತು. ವಚನಾಧಾರದಲ್ಲಿ ವಿಷಯನ್ನು ರೂಪಿಸದೆ ಸ್ಥಾಪಿತ ಮಿತ್ಯವನ್ನು ನಂಬಿ ಬರಗೂರು ಸಮಿತಿ ಪ್ರಮಾದವೆಸಗಿತ್ತು.
ಮುಂದೆ ಚಕ್ರತೀರ್ಥ ಎಂಬ ಖಾಸಗಿ ಸಿಇಟಿ ತರಬೇತಿ ಪ್ರಾಧ್ಯಾಪಕನ ಸಮಿತಿಯು ಬಸವಣ್ಣನವರ ಪಠ್ಯದ ಕುರಿತ ಬರಗೂರು ಸಮಿತಿ ಮಾಡಿದ್ದ ತಪ್ಪನ್ನು ಯಥಾವತ್ತಾಗಿ ಹಾಗೆಯೆ ಉಳಿಸಿಕೊಂಡು ಇನ್ನುಳಿದ ಧನಾತ್ಮಕ ಸಂಗತಿಗಳಾದ “ಬಸವಣ್ಣನವರು ಜನಿವಾರ ಕಿತ್ತೆಸೆದದ್ದು ˌ ವೈದಿಕ ಮೌಢ್ಯಗಳ ವಿರುದ್ಧ ತೊಡೆತಟ್ಟಿ ಚಳುವಳಿ ಕಟ್ಟಿದ್ದು” ಮುಂತಾದವುಗಳಿಗೆ ಸಂಪೂರ್ಣ ಕರಸೇವೆ ಮಾಡಿತು.
ಲಿಂಗಾಯತ ಧರ್ಮಕ್ಕೆ ೧೫-೧೬ ಶತಮಾನದಲ್ಲಿ ವಲಸೆ ಬಂದಿದ್ದ ಆಂಧ್ರ ಮೂಲದ ವೀರಶೈವರು ಆಗ ಏನನ್ನೂ ಮಾತನಾಡದೆ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರು. ಬರಗೂರು ಸಮಿತಿ ಸರಿಯಾಗಿ ವಚನಗಳ ಅಧ್ಯಯನ ಮಾಡಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು ಹಾಗು ಬಸವಣ್ಣ ವೀರಶೈವ ಮತ ಪ್ರಚಾರ ಮಾಡಿದ್ದರು ಎನ್ನುವ ದೊಡ್ಡ ಸುಳ್ಳನ್ನು ಅತ್ಯಂತ ಚಿಕ್ಕ ಸಂಗತಿ ಎಂದು ಬರಗೂರು ಸಮಿತಿ ಭಾವಿಸಿತ್ತೇನೊ ಗೊತ್ತಿಲ್ಲ.
ಒಟ್ಟಾರೆ ಅದು ಬರಗೂರು ಸಮಿತಿಯ ಅತಿ ದೊಡ್ಡ ಪ್ರಮಾದವಂತೂ ಆಗಿತ್ತು. ಮುಂದೆ ೨೦೨೩ ರಲ್ಲಿ ರಾಜ್ಯದಲ್ಲಿ ಹೊಸ ಸರಕಾರ ಬಂದ ಮೇಲೆ ಜನಾಕ್ರೋಶಕ್ಕೆ ಮನ್ನಣೆಯನ್ನಿತ್ತು ಹಿಂದಿನ ಬಿಜೆಪಿ ಸರಕಾರ ಮಾಡಿದ್ದ ವಿಕೃತಿಗಳನ್ನು ಸರಿಪಡಿಸುವ ಮಹತ್ತರ ಕಾರ್ಯಕ್ಕೆ ಕೈಹಾಕಿತು.
ಈಗಿನ ಸಮಿತಿ ಹಿಂದಿನ ಬರಗೂರು ಸಮಿತಿ ಮಾಡಿದ್ದ ಪ್ರಮಾದ ಹಾಗು ಚಕ್ರತೀರ್ಥ ಮಾಡಿದ ವಿಕೃತ ಕರಸೇವೆ ಎರಡನ್ನೂ ಸಮರ್ಪಕವಾಗಿ ರಿಪೇರಿ ಮಾಡುವ ದುಸ್ಸಾಹಸಕ್ಕಿಳಿಯದೆ ಸಂಪೂರ್ಣವಾಗಿ ಹೊಸದಾಗಿ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಸತ್ಯ ಸಂಗತಿಯನ್ನು ಪುನಃರೂಪಿಸಿದ್ದು ಅಭಿನಂದನಾರ್ಹ ಸಂಗತಿಯಾಗಿದೆ.
ಬಸವಣ್ಣನವರು ವೀರಶೈವ ಮತೋದ್ಧಾರಕರು ಎಂದು ಸುಳ್ಳು ಹೇಳುವ ಪಂಚಾಚಾರ್ಯರು ಕರ್ನಾಟಕ ಘನ ಸರಕಾರ ಅವರನ್ನು ಕನ್ನಡ ನಾಡಿನ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದಾಗ ಸಂತೋಷ ಪಡುವ ಬದಲಿಗೆ ಒಳಗೊಳಗೆ ಹೊಟ್ಟೆಯುರಿಯಿಂದ ಕುದ್ದಿದ್ದನ್ನು ಇಡೀ ಕನ್ನಡಿಗರು ಗಮನಿಸಿದ್ದಾರೆ. ಪಂಚಪೀಠಗಳ ವೀರಶೈವ ಮಠಾಧೀಶರ ಗುಂಪಿನ ಕಾವಿ ಪುಢಾರಿಗಳ ಗುಂಪು ಈಗಿನ ಪಠ್ಯದಲ್ಲಿನ ಸತ್ಯ ಸಂಗತಿಯಿಂದ ತಳಮಳಗೊಂಡು ಸರಕಾರಕ್ಕೆ ಪತ್ರ ಬರೆದದ್ದು ಅವರ ಬಸವದ್ವೇಷವನ್ನು ಎತ್ತಿ ತೋರಿಸುತ್ತಿದೆ.
ಬಸವಣ್ಣನವರು ವೀರಶೈವ ಮತ ಪ್ರಚಾರಕರು ಹಾಗು ಉದ್ಧಾರಕರು ಎಂದು ಹೆಜ್ಜೆಹೆಜ್ಜೆಗೆ ಸುಳ್ಳು ಹೇಳುವ ಪಂಚಪೀಠದ ವೀರಶೈವ ಆರಾಧ್ಯರು ಬಸವಣ್ಣನವರ ಮತೋದ್ಧಾರಗಳಲ್ಲಿ ಬರುವ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದಿಲ್ಲ. ತಾವು ಅತ್ಯಂತ ಶ್ರೇಷ್ಠರೆಂದು ಲಿಂಗಾಯತರನ್ನು ಹೀನವಾಗಿ ನಡೆಸಿಕೊಳ್ಳುವ ಇವರು ಅಸಲಿ ದಲಿತ ಬುಡುಗ/ಬೇಡ ಜಂಗಮರಿಗೆ ಮೀಸಲಿರುವ ಪರಿಶಿಷ್ಠರ ಮೀಸಲಾತಿಯ ಮೇಲೆ ಕಣ್ಣು ಹಾಕಿˌ ವೀರೈಶೈವ ಜಂಗಮರಾದ ತಮಗೂ ಈ ಪರಿಶಿಷ್ಠರ ಮೀಸಲಾತಿ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ.
ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಸಿಗುವುದಕ್ಕೆ ಕಲ್ಲು ಹಾಕಿರುವ ಈ ಪಂಚಪೀಠದ ವೀರಶೈವರು ತಮ್ಮ ಕುಲಬಾಂಧವರು ಬಸವಣ್ಣನವರ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವ ಪರಿಶಿಷ್ಠರ ಮೀಸಲಾತಿಗಾಗಿ ಹೋರಾಡುತ್ತೀರುವುದರ ಕುರಿತು ಒಂದೇ ಒಂದು ಶಬ್ದ ಮಾತನಾಡದಿರುವುದು ಸೋಜಿಗವೆನ್ನಿಸಿದೆ.
ಆಗಾಗ ಲಿಂಗಾಯತ ಸಮುದಾಯದ ಹಿತಚಿಂತಕರಂತೆ ಹೇಳಿಕೆ ನೀಡುವ ಈ ವೀರಶೈವರು ಲಿಂಗಾಯತ ಸಮುದಾಯದ ಶ್ರೇಷ್ಠ ವಿದ್ವಾಂಸರಾಗಿದ್ದ ಡಾ. ಎಂ ಎಂ ಕಲಬುರಗಿಯವರನ್ನು ಹಾಗು ಸಾಮಾಜಿಕ ಕಾರ್ಯಕರ್ತೆ ಮತ್ತು ಪತ್ರಕರ್ತೆ ಗೌರಿ ಲಂಕೇಶರನ್ನು ಸನಾತನವಾದಿಗಳ ಬಾಡಿಗೆ ಭಂಟರು ಕೊಲೆ ಮಾಡಿದಾಗ ಮೌನ ಮುರಿಯಲೇಯಿಲ್ಲ. ದಿನನಿತ್ಯ ಅಸಂಖ್ಯಾತ ಲಿಂಗಾಯತ ಯುವಕರು ಒಂದಿಲ್ಲೊಂದು ಸಂಕಟದಲ್ಲಿ ಸಿಲುಕಿದಾಗ ಆ ಕಡೆ ತಿರುಗಿ ನೋಡದ ರಂಭಾಪುರಿ ಸ್ವಾಮಿಗಳು ನಟ ದರ್ಶನ ಗ್ಯಾಂಗಿನಿಂದ ಕೊಲೆಯಾದ ತಮ್ಮ ಕುಲಬಾಂಧವ ರೇಣುಕಾಸ್ವಾಮಿಯ ಮನೆಗೆ ಹೋಗಿ ಸಾಂತ್ವನ ಹೇಳುತ್ತಾರೆ.
ವೈಯಕ್ತಿಕ ಕಾರಣಗಳಿಂದ ಕೊಲೆಯಾದ ಸ್ನೇಹಾ ಹಿರೇಮಠಳ ಕುರಿತು ಒಳಗೊಳಗೆ ಸಹಾಯ ಮಾಡುತ್ತಾರೆ. ಕಣ್ಣಿಗೆ ರಾಚುವಂತೆ ಬಸವದ್ರೋಹ ಹಾಗು ಲಿಂಗಾಯತದ್ರೋಹದ ಕೃತ್ಯ ಪಂಚಪೀಠದ ವೀರಶೈವರು ಮಾಡುತ್ತಿದ್ದರು ಮುಗ್ಧ ಲಿಂಗಾಯತರಿಗೆ ಈ ಸಂಗತಿ ಇದುವರೆಗೆ ಅರ್ಥವಾಗದಿರುವುದು ದುರಂತದ ಸಂಗತಿಯಾಗಿದೆ.
ಆದರೆ ಒಂದಂತೂ ಸತ್ಯ ˌ ಈ ಸಂಘಿ ವೈದಿಕ ದುಷ್ಟಶಕ್ತಿಗಳು ಹಾಗು ವಲಸೆ ಆಗಮಿಕ ವೀರಶೈವರು ಎಷ್ಟೆ ತಿಪ್ಪರಲಾಗ ಹಾಕಿದರೂ ಬಸವ ತತ್ವ ಹಾಗು ಬಸವ ಚರಿತ್ರೆಯನ್ನು ವಿಕೃತಗೊಳಿಸುವುದು ಅಸಾಧ್ಯ. ಈಗ ಬಸವಾನುಯಾಯಿ ಲಿಂಗಾಯತರು ಜಾಗೃತರಾಗುತ್ತಿದ್ದಾರೆ.
ಯಡಿಯೂರಪ್ಪ ನಿರಾಕರಿಸಿದ್ದ ಕಾಲ್ಪನಿಕ ರೇಣುಕರ ಜಯಂತಿ ಆಚರಣೆಯನ್ನು ಸಂಘಿಗಳ ಸಹಾಯದಿಂದ ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೂಲಕ ಸಾಧಿಸಿದ ಈ ವೀರಶೈವರು ಇನ್ನು ಮುಂದಾದರೂ ಬಸವದ್ವೇಷ ಹಾಗು ಲಿಂಗಾಯತ ಧರ್ಮದ್ವೇಷವನ್ನು ತ್ಯಜಿಸಿ ಅಪ್ಪಟ ಬಸವಭಕ್ತ ಲಿಂಗಾಯತರಾಗಿ ಬಾಳುವುದನ್ನು ಕಲಿಯಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಥ ಲಿಂಗಾಯತ ಸಮಾಜವು ಈ ವಲಸೆ ವೀರಶೈವರನ್ನು ಬಹಿಷ್ಕರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದು ಕೇವಲ ಎಚ್ಚರಿಕೆಯ ಮಾತಲ್ಲ. ಲಿಂಗಾಯತರು ಈಗ ಸಂಪೂರ್ಣ ಬಸವ ಪ್ರಜ್ಞೆ ಬೆಳೆಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಮರೆಯಬಾರದು.