ಪೇಜಾವರ ಶ್ರೀಗಳು ಸಂವಿಧಾನ ಗೌರವ ಕೊಟ್ಟಿಲ್ಲ ಎನ್ನುವುದು ದೇಶದ್ರೋಹ: ಬಸವರಾಜ ಸೂಳಿಬಾವಿ

ಬಸವ ಮೀಡಿಯಾ
ಬಸವ ಮೀಡಿಯಾ

“ಇಂತಹ ಹೇಳಿಕೆಯನ್ನು ಪೇಜಾವರ ಸ್ವಾಮೀಜಿ ವ್ಯಕ್ತಿಯಾಗಿ ಹೇಳಿದ್ದಲ್ಲ, ಒಂದು ಸಂಸ್ಥೆಯಾಗಿ ಕೊಟ್ಟಿರುವಂತಹದ್ದು. ಅಲ್ಲಿನ ಸಂತರ ಸಭೆಯನ್ನು ನಡೆಸಿದವರು ವಿಶ್ವ ಹಿಂದೂ ಪರಿಷತ್ತಿನವರು.”

ಗದಗ

“ನಮ್ಮ ಸಂವಿಧಾನ ಯಾರನ್ನು ಅಗೌರವಿಸುವಂತಹದಲ್ಲ, ಎಲ್ಲರನ್ನು ಗೌರವಿಸುವಂತಹದ್ದು. ಎಲ್ಲ ಧರ್ಮಿಯರನ್ನು ಗೌರವಿಸುವಂತಹದ್ದು. ಯಾರಾದರೂ ‘ಈ ಸಂವಿಧಾನ ನಮಗೆ ಗೌರವ ಕೊಟ್ಟಿಲ್ಲ’ ಎಂದು ಹೇಳಿದರೆ ಅದು ಮೂರ್ಖ ಹೇಳಿಕೆ ಆಗುತ್ತದೆ.

ಯಾವ ಸಂವಿಧಾನ ಪ್ರತಿಯೊಬ್ಬರ ಹಕ್ಕನ್ನು, ಸಮಾನತೆಯನ್ನು ಪ್ರತಿಪಾದನೆ ಮಾಡಿದೆಯೋ, ಎಲ್ಲರನ್ನು ಸಮಾನವಾಗಿ ಕಾಣಲು ಹೇಳಿದೆಯೋ ಅಂತಹ ಸಂವಿಧಾನ ಗೌರವ ಕೊಟ್ಟಿಲ್ಲ ಎಂದು ಹೇಳುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ದೇಶ ದ್ರೋಹವು ಆಗುತ್ತದೆ” ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಹೇಳಿದರು.

ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ ಎಂದು ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ ಉಡುಪಿಯ ಪೇಜಾವರ ಸ್ವಾಮಿಯ ಹೇಳಿಕೆ ಖಂಡಿಸಿ ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶ ಸಂವಿಧಾನದ 75ನೇ ವಾರ್ಷಿಕೋತ್ಸವವನ್ನು ಮಾಡಿದೆ. ಈ ದೇಶಕ್ಕೆ ಸಂವಿಧಾನದಿಂದ ವಿಶೇಷ ಗೌರವ ಸಿಕ್ಕಿದೆ. ಈ ದೇಶವನ್ನು ಹಿಂದೆ ರಾಜಪ್ರಭುತ್ವ ಆಳಿದೆ, ಧರ್ಮಪ್ರಭುತ್ವ ಆಳಿದೆ, ಆದರೆ ಪ್ರಜಾಪ್ರಭುತ್ವ ಆಳ್ವಿಕೆಯನ್ನು, ಮೇಲರಿಮೆಯನ್ನು ಸಾರಿದ್ದೆ ಈ ಸಂವಿಧಾನ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ದೇಶ ಹೊರಳಿದೆ. ಸನಾತನ ಪ್ರಭುತ್ವದಿಂದ, ಧರ್ಮಪ್ರಭುತ್ವದಿಂದ ಆಚೆ ಬಂದು ಪ್ರಜಾಪ್ರಭುತ್ವ ಪರಿಕಲ್ಪನೆ ಕೊಟ್ಟಿದ್ದು ಈ ದೇಶದ ಸಂವಿಧಾನ. ಇಡೀ ವಿಶ್ವದಲ್ಲಿಯೇ ನಮ್ಮ ದೇಶಕ್ಕೆ ಇಷ್ಟು ದೊಡ್ಡ ಪ್ರಜಾಪ್ರಭುತ್ವದ ಗೌರವ ಸಿಕ್ಕಿರುವುದು ಸಂವಿಧಾನದ ಮೂಲಕ” ಎಂದರು.

ಪೇಜಾವರ ಸ್ವಾಮಿಗಳು ದೇಶ ದ್ರೋಹದ ಕೆಲಸ ಮಾಡಿದ್ದಾರೆ. ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ. ಕೂಡಲೇ ದೇಶದ್ರೋಹಿ, ಸಂವಿಧಾನ ವಿರೋಧಿ ಎಂದು ಸರಕಾರ ಅವರು ವಿರುದ್ಧ ಪ್ರಕರಣ ದಾಖಲಿಸಬೇಕು.

ಎಲ್ಲರನ್ನು ಗೌರವಿಸುವಂತಹ ಸಂವಿಧಾನವನ್ನು ನಮಗೆ ಗೌರವ ಕೊಟ್ಟಿಲ್ಲ ಎಂದು ಹೇಳುವುದು ದೇಶದ್ರೋಹದ ಕೆಲಸ. ಇಂತಹ ಹೇಳಿಕೆಯನ್ನು ಪೇಜಾವರ ಸ್ವಾಮೀಜಿ ವ್ಯಕ್ತಿಯಾಗಿ ಹೇಳಿದ್ದಲ್ಲ, ಒಂದು ಸಂಸ್ಥೆಯಾಗಿ ಕೊಟ್ಟಿರುವಂತಹದ್ದು. ಅಲ್ಲಿನ ಸಂತರ ಸಭೆಯನ್ನು ನಡೆಸಿದವರು ವಿಶ್ವ ಹಿಂದೂ ಪರಿಷತ್ತಿನವರು.

ಈ ದೇಶದಲ್ಲಿ ಆರ್ ಎಸ್ ಎಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ಸಂಸದರು, ಮಂತ್ರಿಗಳಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನ ಕೊಡಿಸುವಂತಹ ಕೆಲಸ ನಿರಂತರ ಮಾಡುತ್ತಿದೆ. ಆರ್ ಎಸ್ ಎಸ್ ನ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ತಿನ ರಾಷ್ಟೀಯ ಉಪಾಧ್ಯಕ್ಷ ಪೇಜಾವರ ಸ್ವಾಮೀಜಿ ಭಾಗವಹಿಸಿದ್ದು ಸಂತರ ಸಭೆಯೋ, ರಾಜಕೀಯ ಸಭೆಯೋ ಅನುಮಾನ ಕಾಡುತ್ತಿದೆ. ಸಭೆಯಲ್ಲಿ ಅವರು ಮಾತನಾಡುವಂತ ಭಾಷೆ ರಾಜಕಾರಣದ ಭಾಷೆಯಲ್ಲಿತ್ತು. ಹಾಗಾಗಿ ಪೇಜಾವರ ಸ್ವಾಮೀಜಿ ತಕ್ಷಣವೇ ಮಠವನ್ನು ತ್ಯಜಿಸಿ, ಪಕ್ಷಕ್ಕೆ ಸೇರಬೇಕು. ಬದಲಾಗಿ ಧಾರ್ಮಿಕ ಸ್ವಾಮೀಜಿಯಾಗಿ ಸಂವಿಧಾನ ವಿರೋದಿಸುವ ಅವರ ಹೇಳಿಕೆ ಆತಂಕಕಾರಿಯಾಗಿದೆ. ಸಂವಿಧಾನ ಬದಲಾಯಿಸುವೆವು ಎಂಬುದಕ್ಕೆ ನೇರವಾಗಿ ಸಾಂಸ್ತಿಕವಾದ ಅವರ ಹೇಳಿಕೆಗಳನ್ನ ಗಮನಿಸಬೇಕು.

ಈ ರೀತಿ ಹೇಳಿಕೆ ನೀಡುವುದರ ಮೂಲಕ ಈ ದೇಶದಲ್ಲಿ ಮೇಲು ಕೀಳು, ಮನುಸ್ಮೃತಿಯನ್ನು ಮತ್ತೆ ಪ್ರತಿಪಾದನೆ ಮಾಡುತ್ತಿದ್ದಾರೆ. ಇದು ಆರ್ ಎಸ್ ಎಸ್ ಅಜೆಂಡಾ ಆಗಿದ್ದು, ಸಂವಿಧಾನ ನಿರಾಕರಿಸುವ ಕೆಲಸ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಜನ ಬಂಡೇಳಬೇಕು” ಎಂದರು.

ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡುವ ಸ್ವಾಮೀಜಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಳಿಬಾವಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಡಿ ಎಸ್ ಎಸ್ ಮುಖಂಡರಾದ ಬಾಲರಾಜ ಅರಬರ, ಆನಂದ ಶಿಂಗಾಡಿ, ನಾಗರಾಜ ಗೋಕಾವಿ, ಶರೀಫ ಬಿಳೆಯಲಿ, ಅನಿಲ ಕಾಳೆ, ಪರಶು ಕಾಳೆ, ಮುತ್ತು ಬಿಳಿಯಲಿ, ಶಿವಾನಂದ ತಮ್ಮಣ್ಣವರ, ಬಸವರಾಜ ಪೂಜಾರ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *