ವೈರಲ್: ‘ಪೇಜಾವರ ಶ್ರೀಗಳು ಲಿಂಗಾಯತ ಕಾರ್ಯಕ್ರಮಗಳಲ್ಲಿ ಮಾತ್ರ ವಚನ ಹೇಳುತ್ತಾರೆ’

ಬಸವ ಮೀಡಿಯಾ
ಬಸವ ಮೀಡಿಯಾ

ಇದು ಪೇಜಾವರ ಶ್ರೀಗಳು ಲಿಂಗಾಯತ ಧರ್ಮವನ್ನು ಹೈಜಾಕ್ ಮಾಡಲು ನಡೆಸುತ್ತಿರುವ ಪ್ರಯತ್ನ ಎಂದು ಪತ್ರಕರ್ತ ಹನುಮಂತ ಹಾಲಗೇರಿ ಹೇಳುತ್ತಾರೆ.

ಬೆಂಗಳೂರು

ಸಂಸ್ಕೃತ ಶ್ಲೋಕಗಳಲ್ಲಿ ಇರುವುದನ್ನೇ ಸರಳ ಕನ್ನಡದಲ್ಲಿ ವಚನಗಳು ಹೇಳಿದವು ಎಂದು ಹೇಳಿ ಪೇಜಾವರ ಶ್ರೀಗಳು ಇತ್ತೀಚೆಗೆ ಮಂಗಳೂರಿನಲ್ಲಿ ದೊಡ್ಡ ವಿವಾದ ಸೃಷ್ಟಿಸಿದ್ದರು.

ಈ ವಿಷಯದ ಮೇಲೆ ಪೀಪಲ್ ಟಿವಿ ಮಾಡಿರುವ 16 ನಿಮಿಷದ ವಿಡಿಯೋ ವೈರಲ್ ಆಗಿದೆ.

ಇದರಲ್ಲಿ ಪತ್ರಕರ್ತ ಹನುಮಂತ ಹಾಲಗೇರಿ ಒಂದು ಮುಖ್ಯವಾದ ಪ್ರಶ್ನೆ ಕೇಳುತ್ತಾರೆ: ಪೇಜಾವರ ಶ್ರೀಗಳು ಲಿಂಗಾಯತ ಕಾರ್ಯಕ್ರಮಗಳಲ್ಲಿ ಮಾತ್ರ ವಚನಗಳನ್ನು ಹೇಳುವುದು ಏಕೆ?

ಯಾವುದೇ ವೈದಿಕ, ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ವಚನಗಳನ್ನು ವಾಚಿಸುವ, ಹಾಡುವ ಪರಿಪಾಠವೇ ಇಲ್ಲ. ಅಂತಹ ಸಂಘಟನೆಗಳಲ್ಲಿರುವ ಲಿಂಗಾಯತರು ಕೆಲವು ಕಾರ್ಯಕ್ರಮಗಳಲ್ಲಿ ವಚನಗಳನ್ನು ಹಾಡಲು ಪ್ರಯತ್ನಿಸಿದಾಗ ಅವರನ್ನು ಸುಮ್ಮನಾಗಿರಿಸಿರುವ ಪ್ರಸಂಗಗಳೂ ಇವೆ.

ಸೇಡಂನಲ್ಲಿ ಆಯೋಜಿತವಾಗಿರುವ ಬೃಹತ್ ಸಂಘ ಪರಿವಾರದ ಉತ್ಸವದಲ್ಲಿ ವಚನಗಳ ಸುಳಿವೇ ಇಲ್ಲ. ಇದೇ ಬಳಗದ ಮಹೇಶ್ ಜೋಶಿ ನಡೆಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲೂ ವಚನ ಚಿಂತನೆಯನ್ನು ದೂರವಿಟ್ಟಿದ್ದರು. ಬಸವಣ್ಣನವರಿಗೆ ಪ್ರವೇಶ ಕೊಟ್ಟಿದ್ದೂ ಪ್ರತಿಭಟನೆಯ ಒತ್ತಡ ಬಂದಾಗ ಮಾತ್ರ.

ಆದರೆ ಬೇಕಾದಾಗ ಮಾತ್ರ ಜನರ ಮನಸಿನಲ್ಲಿ ಬೆಟ್ಟದಂತೆ ನಿಂತಿರುವ ಬಸವಣ್ಣನವರ ಪ್ರಭಾವವನ್ನು, ಜನಪ್ರಿಯತೆಯನ್ನು ಬಳಸುವ ಪ್ರಯತ್ನ ಸಂಘ ಪರಿವಾರದವರು ಮಾಡುತ್ತಾರೆ. ಸೇಡಂ ಕಾರ್ಯಕ್ರಮಕ್ಕೆ ಹೊರಡಿಸಿರುವ ‘ಬಸವ ರಥ’ ನೋಡಿ.

ಪೇಜಾವರ ಶ್ರೀಗಳು ಸಂಘ ಪರಿವಾರದ ಅಧಿನಾಯಕರು. ಅವರೂ ಕೂಡ ತಮ್ಮ ಸ್ವಂತದ ಕಾರ್ಯಕ್ರಮಗಳಲ್ಲಿ ವಚನಗಳನ್ನು, ಬಸವಣ್ಣನವರನ್ನು ಹೊರಗಿಡುತ್ತಾರೆ. ಲಿಂಗಾಯತರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ನುಸುಳಿಕೊಂಡು ಅಲ್ಲಿ ಶರಣ ತತ್ವ, ಪರಂಪರೆಗಳನ್ನು ಅಳಿಸುವ, ತಿರಚುವ ಸಾಹಸಕ್ಕೆ ಕೈ ಹಾಕುತ್ತಾರೆ. ವಚನ ದರ್ಶನ ಪುಸ್ತಕದ ಪ್ರಯತ್ನವೂ ಇದೇ.

ಇದು ಪೇಜಾವರ ಶ್ರೀಗಳ ಲಿಂಗಾಯತ ಧರ್ಮವನ್ನು ಹೈಜಾಕ್ ಮಾಡುವ ಪ್ರಯತ್ನ ಎಂದು ಹಾಲಗೇರಿ ಹೇಳುತ್ತಾರೆ.

ಬೆಳಗಾವಿಯ ಬಸವ ತತ್ವದ ನ್ಯಾಯವಾದಿ ಸುನೀಲ ಎಸ್. ಸಾಣಿಕೊಪ್ಪ ರೆಕಾರ್ಡ್ ಮಾಡಿ ಕಳಿಸಿದ್ದ ಪೇಜಾವರ ಶ್ರೀಗಳ ವಿಡಿಯೋವನ್ನು ಬಸವ ಮೀಡಿಯಾ ಪ್ರಕಟಿಸಿತ್ತು. ಅದರ ಭಾಗಗಳನ್ನು ಹಾಲಗೇರಿ ಕ್ರೆಡಿಟ್ ಕೊಟ್ಟು ತಮ್ಮ ವೈರಲ್ ಆಗಿರುವ ವಿಡಿಯೋನಲ್ಲಿ ಬಳಸಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *