ಬೆಂಗಳೂರು
ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೋರೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಅವರಿಗೆ ಈ ಗೌರವ ಲಭ್ಯವಾಗಿದೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಭಾಕರ ಕೋರೆ, ಸಾಮಾಜಿಕ ಸೇವೆ ನನ್ನ ಉಸಿರು. ಹಿಂದಿನಿಂದಲೂ ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಕೊರತೆ ಇತ್ತು. ಹಾಗಾಗಿ ಗಡಿಭಾಗದ ಹಳ್ಳಿ–ಹಳ್ಳಿಗಳ ಜನರಿಗೆ ಶಿಕ್ಷಣ ಒದಗಿಸಲು ಕೆಲಸ ಮಾಡಿದೆ, ಎಂದರು.
‘ಯಾವುದೇ ಪ್ರಶಸ್ತಿಗಾಗಿ ನಾನು ಕೆಲಸ ಮಾಡಿದವನಲ್ಲ. ಆದರೆ ಪದ್ಮಶ್ರೀಯಂತಹ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಇದನ್ನು ಕೆಎಲ್ಇ ಸಂಸ್ಥೆಯ ಇಡೀ ಸಮೂಹಕ್ಕೆ ಮತ್ತು ರೈತರಿಗೆ ಅರ್ಪಿಸುವೆ,’ ಎಂದು ಹೇಳಿದರು.
ಮುಂಬೈ ಪ್ರಾಂತ್ಯದಲ್ಲಿ ಕನ್ನಡ ಉಳಿಸುವಲ್ಲಿ ಕೋರೆ ಅವರ ಕೊಡುಗೆ ದೊಡ್ಡದು. ನಿಪ್ಪಾಣಿಯಲ್ಲಿ ಮೊದಲ ಕನ್ನಡ ಶಾಲೆ ತೆರೆದ ಸಾಧನೆಯೂ ಅವರದಾಗಿದೆ.
ದೇಶದ ಒಟ್ಟು 131 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪಟ್ಟಿಯಲ್ಲಿ ಒಟ್ಟು 5 ಜನರು ಪದ್ಮ ವಿಭೂಷಣ, 13 ಜನ ಪದ್ಮ ಭೂಷಣ ಮತ್ತು 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕದ 9 ಸಾಧಕರು ಭಾಜನರಾಗಿದ್ದಾರೆ. ಶತಾವಧಾನಿ ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಉಳಿದಂತೆ ಅಂಕೇಗೌಡ, ಅರ್ಮಿದಾ ಫರ್ನಾಂಡೀಸ್, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ ಹನಗವಾಡಿ ಹಾಗೂ ಟಿ.ಟಿ.ಜಗನ್ನಾಥ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಸಾಧಕ ಜೀವನ
ಕೆಎಲ್ಇ ಸಂಸ್ಥೆಯ ಮೂಲಕ ವೈದ್ಯಕೀಯ, ತಾಂತ್ರಿಕ, ಎಂಜಿನಿಯರಿಂಗ್ ಹಾಗೂ ಸಾಮಾನ್ಯ ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಮಹಾವಿದ್ಯಾಲಯ ಸ್ಥಾಪಿಸಿ, ಕೋರೆ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ನೆರವಾಗಿದ್ದಾರೆ.
1984ರಲ್ಲಿ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷರಾಗಿ ಅಧಿಕಾರ ಹಿಡಿದಾಗ ಕೆಎಲ್ಇ ಸಂಸ್ಥೆಯ ಅಂಗಸಂಸ್ಥೆ 38 ಇದ್ದವು. ಈ ಆ ಸಂಖ್ಯೆ 317ಕ್ಕೆ ಏರಿಕೆಯಾಗಿದೆ.
1947ರ ಆಗಸ್ಟ್ 1ರಿಂದ ಜನಿಸಿದ ಕೋರೆ ಬಿ.ಕಾಂ ಪದವೀಧರ. ಶಿಕ್ಷಣ, ಕೃಷಿ, ಸಹಕಾರ, ರಾಜಕೀಯ ವಲಯ, ಚಲನಚಿತ್ರ ಉದ್ಯಮ ಮತ್ತು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂರು ಅವಧಿಗೆ (1990-1996, 2008-2014, 2014-2020) ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 2001ರಿಂದ 2007ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಘಟಕದ ಉಪಾಧ್ಯಕ್ಷರಾಗಿದ್ದಾರೆ.
2003ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ, ಅದೇ ವರ್ಷ ನಡೆದ ಐದನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ದುಡಿದಿದ್ದಾರೆ.
2006 ಮತ್ತು 2009ರಲ್ಲಿ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಆವರಣದಲ್ಲಿ ಎರಡು ಬಾರಿ ಕರ್ನಾಟಕ ವಿಧಾನಮಂಡಲ ಅಧಿವೇಶನ ಯಶಸ್ವಿಯಾಗಿ ಆಯೋಜಿಸಿದ್ದಾರೆ.
2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಲ್ಲಿ ಅವರ ಕೊಡುಗೆ ದೊಡ್ಡದು.
