ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ : ತೋಂಟದ ಶ್ರೀಗಳ ಸಂತಸ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯನ್ನು ವಿಸ್ತಾರೋನ್ನತವಾಗಿ ಬೆಳೆಸಿದ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಬದುಕಿರುವಾಗಲೇ ದಂತಕತೆಯಾದವರು.

ದೇಶ-ವಿದೇಶಗಳ ಅನೇಕ ಪ್ರತಿಷ್ಠಿತ ಪದವಿ-ಪ್ರಶಸ್ತಿಗಳನ್ನು ಪಡೆದ ಅವರಿಗೆ ಇದೀಗ ಭಾರತ ಸರಕಾರದ ಪದ್ಮಶ್ರೀ ಗೌರವ ಸಂದಿರುವುದು ಅತ್ಯಂತ ಸಂತಸ ಹಾಗೂ ಸಂಭ್ರಮವನ್ನುಂಟು ಮಾಡಿದೆ ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಪ್ರಕಟಣೆಯ ಮೂಲಕ ಈ ವಿಷಯ ತಿಳಿಸಿದ ಶ್ರೀಗಳು, ಕಳೆದ ೪೨ ವರ್ಷಗಳಿಂದ ಡಾ. ಪ್ರಭಾಕರ ಕೋರೆ ಅವರು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಗೆ ಸಲ್ಲಿಸಿದ ಅನುಪಮ ಸೇವೆಯನ್ನು ಮನದುಂಬಿ ಸ್ಮರಿಸಿದ್ದಾರೆ.

ಕೋರೆ ಅವರ ಪರಿಶ್ರಮದ ಫಲವಾಗಿ ಸಂಸ್ಥೆಯು ಇಂದು ಏಷ್ಯಾ ಖಂಡದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಅವರ ಸೇವೆ ಕೆ.ಎಲ್.ಇ. ಕಟ್ಟಿದ ಸಪ್ತರ್ಷಿಗಳ ಸೇವೆಗೆ ಸರಿದೊರೆಯಾಗಿದೆ. ಈ ದಿಶೆಯಲ್ಲಿ ಅವರು “ಅಷ್ಟಮ ಋಷಿ” ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

೩೦೦ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಕೆ.ಎಲ್.ಇ. ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಸಹಕಾರ, ಕೃಷಿ ಕ್ಷೇತ್ರಕ್ಕೂ ಅವರು ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ನಮ್ಮ ನಾಡಿಗೆ ತನ್ಮೂಲಕ ರಾಷ್ಟ್ರಕ್ಕೆ ನಿರಂತರ ಸಲ್ಲುವಂತಾಗಲಿ. ಡಾ. ಕೋರೆ ಅವರು ಇನ್ನೂ ನೂರ್ಕಾಲ ಆರೋಗ್ಯವಂತರಾಗಿ ಬಾಳಿ ಬೆಳಗಲಿ ಎಂದು ಹಾರೈಸಿ ಶ್ರೀಗಳು ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *