ದೊರೆತದ್ದರಲ್ಲಿ ತೃಪ್ತಿ ಪಡುವವನೇ ನಿಜವಾದ ಶರಣ: ಪ್ರಭುದೇವ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್

ದೊರೆತದ್ದು ದೇವ ಪ್ರಸಾದ. ಅದರಲ್ಲೇ ತೃಪ್ತಿ ಪಡುವವನೇ ನಿಜವಾದ ಶರಣ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನುಡಿದರು.

ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಗುರುವಾರ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಆದದ್ದೆಲ್ಲ ದೇವ ಇಚ್ಛೆ ಎಂದು ಭಾವಿಸಬೇಕು. ಸಿಕ್ಕಿದ್ದರಲ್ಲೇ ತೃಪ್ತಿ ಪಡುವುದನ್ನು ರೂಢಿಸಿಕೊಳ್ಳಬೇಕು. ಅತೃಪ್ತಿ ಭಕ್ತನ ಲಕ್ಷಣ ಅಲ್ಲ ಎಂದು ಹೇಳಿದರು. ಮನುಷ್ಯನ ಮಾತು ಹಾಗೂ ಕೃತಿ ಒಂದೇ ಆಗಿರಬೇಕು. ಮನಸ್ಸಿನಲ್ಲಿ ಒಂದು, ಮಾತಿನಲ್ಲಿ ಇನ್ನೊಂದು ಇರಬಾರದು. ನಮ್ಮ ಅಂತರಂಗ ಶುದ್ಧವಾಗಿರಬೇಕು. ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಸಚ್ಚಾರಿತ್ರ್ಯವಂತರು ಹಾಗೂ ಪ್ರಾಮಾಣಿಕ ಪ್ರಜೆಗಳ ನಿರ್ಮಾಣ ಇಂದಿನ ಅವಶ್ಯಕತೆಯಾಗಿದೆ ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು. ಇಂದು ದೇಶಕ್ಕೆ ಗಂಡಾಂತರ ಇರುವುದು ವಿದ್ಯಾವಂತರಿಂದಲೇ ಹೊರತು ಅವಿದ್ಯಾವಂತರಿಂದಲ್ಲ ಎಂದರು. ಮೊಟ್ಟ ಮೊದಲ ಬಾರಿಗೆ ಅಕ್ಷರ ಕ್ರಾಂತಿಗೈದವರು ಬಸವಣ್ಣ. ಕಸಗುಡಿಸುವ ಸತ್ಯಕ್ಕ, ಸೂಳೆ ಸಂಕವ್ವೆ ಅಂಥವರಿಗೆ ಅಕ್ಷರ ಕಲಿಸಿ, ವಚನ ಬರೆಯುವ ಮಟ್ಟಕ್ಕೆ ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಸ್ವಾಮೀಜಿ ಹೇಳಿದರು.

ಲಿಂಗಾಯತ ಪರಂಪರೆ ಬಲು ಶ್ರೇಷ್ಠ. ಲಿಂಗಾಯತರು ಶ್ರೇಷ್ಠತೆಯ ವ್ಯಸನದಿಂದ ಹೊರ ಬಂದು ನಿಜ ಆಚರಣೆಯಲ್ಲಿ ತೊಡಗಬೇಕು ಎಂದು ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ತಿಳಿಸಿದರು.

ನಾಡಿಗೆ ಭವ್ಯ-ದಿವ್ಯ ಪರಂಪರೆ ಕೊಟ್ಟವರಲ್ಲಿ ಲಿಂಗಾಯತರು ಪ್ರಮುಖರು. ಹೆಸರಾಂತ ವಿದ್ಯಾ ಸಂಸ್ಥೆಗಳನ್ನು ಕಟ್ಟಿದರು. ಅರಿವು, ಆಚಾರ ಬಿತ್ತಿದರು ಎಂದು ಬಣ್ಣಿಸಿದರು.

ಪ್ರಸ್ತುತ ದಾರಿ ತಪ್ಪುತ್ತಿರುವ ಮಕ್ಕಳನ್ನು ಸರಿದಾರಿಗೆ ತರಬೇಕಾಗಿದೆ. ಮೊಬೈಲ್, ಸಾಮಾಜಿಕ ಜಾಲತಾಣದ ಆಕರ್ಷಣೆಯಿಂದ ಮಕ್ಕಳು ಹೊರ ಬರಬೇಕಾಗಿದೆ ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ಜ್ಞಾನ ಕಾರಂಜಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ ಮಾತನಾಡಿದರು.

ಹುಬ್ಬಳ್ಳಿಯ ಶಂಭು ಯಾವಗಲ್ಲ ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ರಾಜಕುಮಾರ ಶೀಲವಂತ ಹಾಗೂ ಮಾರುತಿ ಪಾಟೀಲ ಅನುಷ್ಠಾನ ಕುಟೀರ ಅನಾವರಣಗೊಳಿಸಿದರು. ಕೊಟಕ್ ಮಹೀಂದ್ರ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಅಶೋಕ ಎಲಿ ಅಧ್ಯಕ್ಷತೆ ವಹಿಸಿದ್ದರು. ನಾಡಿನಾದ್ಯಂತ ಅಕ್ಷರ ಜ್ಯೋತಿ ಯಾತ್ರೆ ಕೈಗೊಂಡ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿ ರಮೇಶ ಮಠಪತಿ, ಚನ್ನಬಸವ ಹಂಗರಗಿ ಉಪಸ್ಥಿತರಿದ್ದರು.
ಸೃಷ್ಟಿ, ಸನ್ನಿಧಿ, ಸೌಮ್ಯ ಗುರು ಪೂಜೆ ನೆರವೇರಿಸಿದರು. ಶ್ಯಾಮಲಾ ಎಲಿ, ಗುರುಶ್ರೀ ಹಾಗೂ ಪರುಷಕಟ್ಟೆಯ ಚನ್ನಬಸವಣ್ಣ ವಚನ ಗಾಯನ ಮಾಡಿದರು. ನೀಲಮ್ಮನ ಬಳಗದವರು ಪ್ರಾರ್ಥನೆ ನಡೆಸಿಕೊಟ್ಟರು.

ಲಕ್ಷ್ಮಿಬಾಯಿ ಶಿವಲಿಂಗಯ್ಯ ಮಠಪತಿ ಭಕ್ತಿ ದಾಸೋಹಗೈದರು. ಬಸವರಾಜ ಬಿರಾದಾರ ಸ್ವಾಗತಿಸಿದರು.

Share This Article
Leave a comment

Leave a Reply

Your email address will not be published. Required fields are marked *