ಕಲಬುರಗಿ
ಶರಣೆ ಅಕ್ಕಮಹಾದೇವಿ ಅವರ ವಚನಗಳಲ್ಲಿ ಪ್ರಕೃತಿಯ ಉಪಮೆಗಳು ಹೇರಳವಾಗಿ ಕಾಣುತ್ತೇವೆ. ಇಳೆ ನಿಂಬೆ ಮಾವು ಮಾದಲಕ್ಕೆ ಹುಳಿ ನೀರು ಎರೆದವರಾರು ಎಂಬ ಅವರ ವಚನದಲ್ಲಿ ಸುಂದರವಾದ ರೂಪಕ ಕಾಣಲು ಸಾಧ್ಯವಿದೆ ಎಂದು ಬಳ್ಳಾರಿಯ ಪ್ರಾಧ್ಯಾಪಕರಾದ ಡಾ. ತಿಪ್ಪೇರುದ್ರ ಸಂಡೂರ ಹೇಳಿದರು.
ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂಗೈಕ್ಯ ಮಹಾದೇವಿಯಮ್ಮ ಗುರುಪಾದಪ್ಪ ಮಾಲಿಪಾಟೀಲ ಸ್ಮರಣಾರ್ಥ ಜರುಗಿದ 870 ನೆಯ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅಕ್ಕ ಪ್ರಕೃತಿಯ ಜೊತೆಗೆ ಆಪ್ತವಾಗಿರುವ ಅನುಸಂಧಾನ ನಡೆಸಿದ್ದಾಳೆ. ಲೋಕದ ಮನುಜರ ನಡುವೆ ಮಾನವ ಹೇಗೆ ನಿರ್ಲಿಪ್ತವಾಗಿ ಬದುಕಬೇಕೆಂಬುದನ್ನು, ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಬಾರದು ಎಂಬ ಪ್ರಕೃತಿ ಸಹಜ ರೂಪಕದೊಂದಿಗೆ ವಿವರಿಸುತ್ತಾಳೆ.
ಲೋಕದ ಟೀಕೆಗಳಿಗೆ ಹೆದರಿ ಜನ ಮೆಚ್ಚಿಸಲೆಂದು ಬದುಕುವುದಕ್ಕಿಂತ ದೇವರ ಮೆಚ್ಚುಗೆಗೆ ಪಾತ್ರವಾಗಿ ಮನ ಮೆಚ್ಚುವಂತೆ ಬದುಕಬೇಕೆಂದು ಅಕ್ಕ ಹೇಳಿದಳು.
ಅಕ್ಕಮಹಾದೇವಿ ದೈವವನ್ನು ಹುಡುಕುತ್ತಾ ಪ್ರಕೃತಿಯ ಗಿಳಿ ಕೋಗಿಲೆ ದುಂಬಿ ನವಿಲುಗಳಿಗೆ ದೇವರನ್ನು ನೀವೇನಾದರೂ ಕಂಡಿದ್ದೀರಾ ಎಂದು ಪ್ರಶ್ನಿಸುತ್ತಾಳೆ. ಇಡೀ ಪ್ರಕೃತಿಯ ಸೂರ್ಯ ಚಂದ್ರ ಅಗ್ನಿ ನಕ್ಷತ್ರಗಳು ಕೂಡ ದೇವರ ಆರಾಧನೆ ಮಾಡುತ್ತವೆ ಎಂಬ ಭಾವ ಅಕ್ಕಮಹಾದೇವಿಯಲ್ಲಿದೆ.
ತೃಷೆಯಾದರೆ ಕೆರೆ ಹಳ್ಳ ಬಾವಿಗಳುಂಟು ಎಂಬ ಅಕ್ಕನ ವಚನದ ಸಾಲು ಮಾನವನಿಗೆ ಪ್ರಕೃತಿ ಸಲಹುವ ಶಕ್ತಿ ಹೊಂದಿದೆ ಎಂಬ ನಂಬಿಕೆ ಆಕೆಯಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ದತ್ತಿ ದಾಸೋಹಿಗಳಾದ ಡಾ. ಕಲ್ಯಾಣರಾವ ಪಾಟೀಲ, ಲಕ್ಷ್ಮಿಕಾಂತ್ ಪಂಚಾಳ, ಡಾ. ವೀರಶೆಟ್ಟಿ ಗಾರಂಪಳ್ಳಿ, ಡಾ. ಕೆ. ಎಸ್. ವಾಲಿ, ಶರಣಗೌಡ ಪಾಟೀಲ್ ಪಾಳ, ಬಂಡಪ್ಪ ಕೇಸುರ್, ಉದ್ದಂಡಯ್ಯ ಭಾಗವಹಿಸಿದರು.