ಪ್ರಶ್ನಿಸಲು ಕಲಿಸಿದ ಕಲಬುರ್ಗಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

(ಇಂದು ಧಾರವಾಡದಲ್ಲಿ ಬಿಡುಗಡೆಯಾಗುತ್ತಿರುವ ಕಲಬುರ್ಗಿ ಕಲಿಸಿದ್ದು ಪುಸ್ತಕದ ಮುನ್ನುಡಿ.)

ದ್ವೇಷದ ಕಿಚ್ಚಿಗೆ ಪ್ರೊಫೆಸ್ಸರ್ ಎಂ. ಎಂ. ಕಲಬುರ್ಗಿ ಬಲಿಯಾದ ಹತ್ತನೇ ವರ್ಷದ ಸಂದರ್ಭದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ. ಅದ್ಬುತ ಸಾಧನೆ ಮಾಡಿದ ಸಂಶೋಧಕರೊಬ್ಬರ ದುರಂತದ ಕೊನೆ ಇನ್ನೂ ಕಣ್ಣಲ್ಲಿ ನೀರಿಳಿಸುತ್ತದೆ. ಆದರೆ ಅವರ ಚಿಂತನೆಯ ಬೆಳಕು ಇಂದು ಲಕ್ಷಾಂತರ ಜನರಿಗೆ ದಾರಿ ತೋರಿಸುತ್ತಿರುವುದರ ಬಗ್ಗೆ ಸ್ವಲ್ಪ ಸಮಾಧಾನವೂ ಇದೆ.

ಸರಳ ಕನ್ನಡದಲ್ಲಿ ಕಲಬುರ್ಗಿಯವರ ಸಂಶೋಧನೆಯನ್ನು ಪರಿಚಯಿಸುವ ಈ ಪ್ರಯತ್ನಕ್ಕೆ ಎರಡು ಆಕಸ್ಮಿಕಗಳು ಕಾರಣವಾದವು.

ಲಿಂಗಾಯತರ ಇತಿಹಾಸದ ಮೇಲೆ ಆಂಗ್ಲ ಪತ್ರಿಕೆಯೊಂದಕ್ಕೆ ಬರೆಯುತ್ತಿದ್ದ ವರದಿಗೆ ಬೇಕಾದ ಮಾಹಿತಿಗೆ ‘ಮಾರ್ಗ’ 7 ಸಂಪುಟದ ಕೆಲವು ಲೇಖನಗಳನ್ನು ಓದಲು ಸ್ನೇಹಿತರೊಬ್ಬರು ಹೇಳಿದ್ದರು. ವರದಿ ಮುಗಿದ ಮೇಲೂ ನನ್ನ ಕುತೂಹಲ, ಓದು ಮಿಕ್ಕ ಮಾರ್ಗ ಸಂಪುಟಗಳಿಗೂ ವಿಸ್ತರಿಸಿತು.

ಒಂದು ಸಣ್ಣ ಕ್ಷೇತ್ರ ಆಯ್ದುಕೊಂಡು ಅದರ ಆಳದಲ್ಲೇ ಇಡೀ ಜೀವನ ಸವೆಸುವ ಸಂಶೋಧಕರೇ ಇಂದು ಹೆಚ್ಚು. ಇದಕ್ಕೆ ಅಪವಾದವಾಗಿ ಒಂದು ಇಡೀ ನಾಡಿನ ಸಮಾಜಿಕ, ಧಾರ್ಮಿಕ ಇತಿಹಾಸ ಕಟ್ಟುವ ಸಾಹಸಕ್ಕೆ ಕೈ ಹಾಕಿದ ಕಲಬುರ್ಗಿಯವರ ಶ್ರಮ ಬೆರಗು ಮೂಡಿಸುವಂತದ್ದು.

ಬಸವಾದಿ ಶರಣರ ಚಳುವಳಿ, ಅದನ್ನು ವಶಪಡಿಸಲು ನಡೆದ ಪ್ರಯತ್ನ, ಅದನ್ನು ಉಳಿಸಿಕೊಳ್ಳಲು ನಡೆದ ಹೋರಾಟ – ಇವೆಲ್ಲಾ ಇತಿಹಾಸದ ಗರ್ಭಕ್ಕೆ ಸೇರಿಹೋದ ಘಟನೆಗಳಲ್ಲ, ಇಂದಿಗೂ ನಮ್ಮ ಮುಂದಿರುವ ಸವಾಲುಗಳು. ಇವುಗಳನ್ನು ಶೋಧಿಸುವ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಮಾಡಬೇಕಿದ್ದ ಕೆಲಸವನ್ನು ಕಲಬುರ್ಗಿ ಒಬ್ಬರೇ ಮಾಡಿದ್ದು, ಅಳಿಸಿಹೋಗುತ್ತಿದ್ದ ಒಂದು ವಿಶಿಷ್ಟ ಪ್ರಗತಿಪರ ಪರಂಪರೆಯನ್ನು ಬೆಳಕಿಗೆ ತಂದಿದ್ದು ಜಾಗತಿಕ ಮಟ್ಟದಲ್ಲಿಯೇ ಹೋಲಿಕೆಯಿಲ್ಲದ ಸಾಧನೆ.

ಈ ಹಿನ್ನಲೆಯಲ್ಲಿ ನಡೆದ ಎರಡನೇ ಆಕಸ್ಮಿಕ ಈ ಪುಸ್ತಕದ ಹುಟ್ಟಿಗೆ ನೇರವಾಗಿ ಕಾರಣವಾಯಿತು. 2023ರಲ್ಲಿ ಬಸವ ಕಲ್ಯಾಣದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಸಮಾವೇಶವನ್ನು ಮುಗಿಸಿಕೊಂಡು ರೈಲಿನಲ್ಲಿ ಹಿಂದಿರುಗುವಾಗ ಅನೇಕ ಬಸವಾನುಯಾಯಿಗಳ ಪರಿಚಯವಾಯಿತು. ಮೈಸೂರಿನ ಬಸವ ಕುಮಾರ್ ಕಲ್ಬುರ್ಗಿಯವರ ಸಂಶೋಧನೆಯ ಬಗ್ಗೆ ನನಗಿದ್ದ ಆಸಕ್ತಿಯನ್ನು ಕೇಳಿ ಅವರ ಸಂಶೋಧನೆಯನ್ನು ಸಂಕ್ಷಿಪ್ತವಾಗಿ, ಸರಳವಾಗಿ ಬರೆದು ಹೆಚ್ಚಿನ ಜನರಿಗೆ ತಲುಪಿಸಿ ಎಂದು ಸಲಹೆ ನೀಡಿದರು. ಜೊತೆಗೆ ನಾನು ಬರೆಯಲು ಶುರು ಮಾಡಿದ ‘ಕಲಬುರ್ಗಿ ಕಲಿಸಿದ್ದು’ ಅಂಕಣವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮಾರ್ಗ ತೋರಿಸಿದರು ಮತ್ತು ಪ್ರತಿ ವಾರ ಅದನ್ನು ಸುಂದರವಾಗಿ ವಿನ್ಯಾಸಗೊಳಿಸಿ ಕೊಡುತ್ತಿದ್ದರು ಕೂಡ. ಈ ಸಂದರ್ಭದಲ್ಲಿ ಅವರ ಪಾತ್ರವನ್ನು ವಿಶೇಷವಾಗಿ ನೆನೆಯಬೇಕು. ಅಲ್ಲಿಂದ ಶುರುವಾಗಿ ಎರಡು ವರ್ಷಗಳ ಕಾಲ ಪ್ರತಿ ವಾರ ಬಂದ ‘ಕಲಬುರ್ಗಿ ಕಲಿಸಿದ್ದು’ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಓದುಗರ ಬಳಗವನ್ನು ಸೃಷ್ಟಿಸಿಕೊಂಡಿತು.

ಕಲಬುರ್ಗಿಯವರ ಒಟ್ಟು ಚಿಂತನೆ ಐದು ದಶಕಗಳ ಪರಿಶ್ರಮದ ಫಲ. ಹೊಸ ಶಾಸನ, ಹಸ್ತಪ್ರತಿ, ಜಾನಪದ ಮುಂತಾದ ಆಕರಗಳು ಸಿಕ್ಕಾಗ ಅವರ ಸಂಶೋಧನೆಯ ಮುಂದಿನ ಅಧ್ಯಾಯ ತೆರೆದುಕೊಳ್ಳುತ್ತಿತ್ತು. ಇದರಿಂದ ಅನೇಕ ಸಂದರ್ಭಗಳಲ್ಲಿ ಅವರ ಚಿಂತನೆಯ ಎಳೆಗಳು ಹಲವಾರು ಕಡೆ ಅನಿವಾರ್ಯವಾಗಿ ಹಂಚಿಹೋಗಿತ್ತು. ‘ಕಲಬುರ್ಗಿ ಕಲಿಸಿದ್ದು’ ಸರಳವಾಗಿ ಅವರ ಸಂಶೋಧನೆಯನ್ನು ಸಂಕ್ಷಿಪ್ತಗೊಳಿಸುವುದರ ಜೊತೆಗೆ ಅದನ್ನು ಕ್ರೋಡೀಕರಿಸಬೇಕಿತ್ತು. ಈ ಸಾಹಸಕ್ಕೆ ಶ್ರೀ ವೀರಣ್ಣ ರಾಜೂರರಂತಹ ಹಿರಿಯ ವಿದ್ವಾಂಸರ ಅನುಮೋದನೆ ಸಿಕ್ಕಿರುವುದು ಸಂತಸದ ವಿಷಯ.

ಕಲಬುರ್ಗಿಯವರ ಬರವಣಿಗೆಯಲ್ಲಿ ಅಸಾಧಾರಣ ಶಕ್ತಿಯಿದೆ. ‘ಕಲಬುರ್ಗಿ ಕಲಿಸಿದ್ದು’ ಓದಿದ ಬಹಳಷ್ಟು ಜನರು ಬದಲಾಗಿದ್ದು ನಾನೇ ನೋಡಿದ್ದೇನೆ. ವೈಚಾರಿಕವಾಗಿ ಆಲೋಚಿಸುವ, ಪ್ರಶ್ನೆಗಳನ್ನು ಕೇಳುವ, ಶಿಸ್ತಿನಿಂದ ಉತ್ತರ ಕಂಡುಕೊಳ್ಳುವ ಮನಸ್ಥಿತಿಯನ್ನು ರೂಪಿಸುವ ಬಲ ಅವರ ಸಂಶೋಧನೆಗಿದೆ. ಇದನ್ನು ಕೇವಲ ಇತಿಹಾಸದ ಪುಸ್ತಕವಾಗಿ ಓದಬಾರದು. ನಮ್ಮ ಮುಂದಿರುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಬೇಕು. ‘ಕಲಬುರ್ಗಿ ಕಲಿಸಿದ್ದು’ ಇತಿಹಾಸ ಮಾತ್ರವಲ್ಲ ಇಂದು ಬದುಕಬೇಕಾಗಿರುವ ಮಾರ್ಗ ಕೂಡ.

ಕಲಬುರ್ಗಿಯವರ ಸಂಶೋಧನೆಯನ್ನು ಮುಂದುವರೆಸುವ, ಅವರ ಚಿಂತನೆಯನ್ನು ಜನರಿಗೆ ತಲುಪಿಸುವ ಮಹತ್ವದ ಕೆಲಸ ಇನ್ನೂ ಪರಿಣಾಮಕಾರಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ದುಡಿಯಲು ಬಸವ ಮೀಡಿಯಾ ಬದ್ಧವಾಗಿದೆ. ಬಸವ ಮೀಡಿಯಾದ ಕೆಲಸ ಎಂದೆಂದಿಗೂ ಕಲಬುರ್ಗಿ ತೋರಿಸಿದ ಮಾರ್ಗದಲ್ಲಿಯೇ ನಡೆಯಬೇಕೆಂಬ ನಿಯಮ ಟ್ರಸ್ಟಿನ ಪತ್ರದಲ್ಲಿಯೇ ದಾಖಲಾಗಿದೆ.

ಈ ಅಂಕಣಗಳ ಸಂಗ್ರಹವನ್ನು ಪ್ರಕಟಿಸುತ್ತಿರುವ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನಕ್ಕೆ ನನ್ನ ಕೃತಜ್ಞತೆ ಮತ್ತು ಧನ್ಯವಾದ. ಈ ಪುಸ್ತಕ ಮುಕ್ತ ಪರವಾನಗಿಯಲ್ಲಿ ಪ್ರಕಟವಾಗುತ್ತಿದೆ. ಇದರಲ್ಲಿರುವ ವಿಷಯವನ್ನು ಯಥಾವತ್ತಾಗಿ ಯಾರು ಬೇಕಾದರೂ ಪ್ರಕಟಿಸಿ ಮಾರಾಟ ಮಾಡಬಹುದು. ಮೂಲವನ್ನು ಉಲ್ಲೇಖಿಸಿ ಲೇಖಕರಿಗೆ ಐದು ಪ್ರತಿಗಳನ್ನು ಕಳಿಸಿದರೆ ಸಾಕು.

ಕಲಬುರ್ಗಿ ಕಲಿಸಿದ್ದು
ಲೇಖಕ ಎಂ. ಎ. ಅರುಣ್
ಪುಟ 120
ಬೆಲೆ 60 ರೂಪಾಯಿ ಮಾತ್ರ
ಪ್ರಕಾಶಕರು – ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
Leave a comment

Leave a Reply

Your email address will not be published. Required fields are marked *