ಸಿಪಿಎಡ್ ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಿ.ಟಿ. ರವಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಅಣಕು ಶವ ಯಾತ್ರೆ ನಡೆಸಿ ಪ್ರತಿಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ
ಸಾವಿರಾರು ಸಂಖ್ಯೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳು ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ವಿಧಾನ ಪರಿಷತ್ತು ಸದಸ್ಯ ಸಿ.ಟಿ. ರವಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಚನ್ನಮ್ಮ ವೃತ್ತದಲ್ಲಿ ಸೇರಿದ ಸಾವಿರಾರು ಬೆಂಬಲಿಗರು ಸಿ.ಟಿ. ರವಿ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದರು.

ನಂತರ ಸಿಪಿಎಡ್ ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಿ.ಟಿ. ರವಿ ಭಾವಚಿತ್ರ ಹಿಡಿದು ಧಿಕ್ಕಾರ ಕೂಗಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತೇವೆ ಎಂದು ಹೇಳುವ ಬಿಜೆಪಿಯವರು ಒಬ್ಬ ಸಚಿವೆಗೆ ಈ ರೀತಿ ಅಶ್ಲೀಲ ಪದ ಬಳಕೆ ಮಾಡಿದ್ದು ಅವರ ಕುಸಂಸ್ಕೃತಿ ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದರು.

ರವಿ ಅವರನ್ನು ಕೂಡಲೇ ಪರಿಷತ್ ಸ್ಥಾನದಿಂದ ಅಮಾನತ್ತು ವಜಾಗೊಳಿಸಬೇಕು ಹಾಗೆಯೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೆಬ್ಬಾಳಕರ್ ಬೆಂಬಲಿಗರು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳು, ಅಭಿಮಾನಿಗಳು, ಹಿತೈಷಿಗಳು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವೆಯರ ಮಗ ಮೃಣಾಲ ಹೆಬ್ಬಾಳ್ಕರ್ ಒಬ್ಬ ಮಹಿಳಾ ಸಚಿವರಿಗೆ ಹೀಗೆ ಇವರು ಗೌರವಿಸುತ್ತಾರೆಂದರೆ, ಇನ್ನು ಜನಸಾಮಾನ್ಯ ಮಹಿಳೆಯರ ಬಗ್ಗೆ ಇವರು ಯಾವ ರೀತಿಯಾಗಿ ವರ್ತಿಸಬಲ್ಲರು ಎಂಬುದು ತಿಳಿಯುತ್ತದೆ.
ತಾಯಿಯವರ ಮನಸ್ಸು ಕುಗ್ಗಿದೆ, ಈ ರೀತಿ ಕುಗ್ಗಿದ್ದು ನಾನು ನೋಡಿರಲಿಲ್ಲ. ಬಹಳ ಹೋರಾಟ ಮಾಡಿ, ಪರಿಶ್ರಮದಿಂದ ಮೇಲೆ ಬಂದವರು ನಮ್ಮ ತಾಯಿ. ಅವರು ಯಾವುದಕ್ಕೂ ಹೆದರುವ ಮಾತೇ ಇಲ್ಲ. ಕಾನೂನು ಮುಖಾಂತರವೇ ಅವರಿಗೆ ಉತ್ತರ ಇರಲಿದೆ. ಎಲ್ಲ ಹಿರಿಯರು, ಮುಖಂಡರ ಜೊತೆ ಚರ್ಚಿಸಿ ಹೋರಾಟ ಮುಂದುವರಿಕೆ ಆಗುತ್ತೆ ಎಂದು ಹೇಳಿದರು.



