ಪುಣೆ
ಪೂಜ್ಯ ಬಸವದೇವರ ನೇತೃತ್ವದಲ್ಲಿ ಜುಲೈ 26ರಿಂದ ಆಗಸ್ಟ್ 22ರವರೆಗೆ ‘ಗುರು ಬಸವ ಜ್ಯೋತಿ ಹಾಗೂ ದುಷ್ಚಟಗಳ ಭಿಕ್ಷಾ ಜೋಳಿಗೆ’ ಕಾರ್ಯಕ್ರಮ ನಗರದಲ್ಲಿ ನಡೆಯಿತು.
ಆಗಸ್ಟ್ 22 ರಂದು ಸಾಯಂಕಾಲ ವಡ್ಗಾಂವ ಜೈನ್ ಮಂದಿರದ ಸಮುದಾಯ ಭವನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಸಮಾರೋಪಗೊಂಡಿತು.

“ನಮ್ಮ ಜೀವನಕ್ಕೆ ಬಸವಾದಿ ಪ್ರಮಥರ ವಚನಗಳ ಜ್ಞಾನ ಜ್ಯೋತಿಯ ಬೆಳಕು, ಸಮಾಜಕ್ಕೆ ದುಶ್ಚಟ ಮುಕ್ತ ಪರಿವರ್ತನೆಗೆ ಅವಕಾಶ ಕಲ್ಪಿಸುವುದು ಶ್ರಾವಣದ ನಿಜವಾದ ಸಂದೇಶ,” ಎಂದು ಪೂಜ್ಯ ಶ್ರೀ ಬಸವದೇವರು ಸಮಾರೋಪದಲ್ಲಿ ನುಡಿದರು.
ಶ್ರಾವಣ ಮಾಸದಲ್ಲಿ ನಡೆದ ಈ ಅಭಿಯಾನ ಸಮಾಜ ಪರಿವರ್ತನೆಯ ಮಾದರಿಯಾಗಿ ಪರಿಣಮಿಸಿತು.

ಪ್ರತಿ ಮನೆಗೆ ಜ್ಯೋತಿ ತಲುಪಿದಾಗ ಬಸವದೇವರು ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳ ಜೊತೆಗೆ ಬಸವ, ಅಲ್ಲಮ, ಅಕ್ಕ, ಚೆನ್ನಬಸವ ಮುಂತಾದ ಶರಣರ ಜೀವನ ಸಂದೇಶಗನ್ನೂ ಭಕ್ತರಿಗೆ ಪರಿಚಯಿಸಿದರು.
ಹಲವಾರು ಮಕ್ಕಳು, ಯುವಕರು ಮತ್ತು ಗ್ರಹಸ್ಢರು ಇಷ್ಟಲಿಂಗ ದೀಕ್ಷೆ ಸ್ವೀಕರಿಸಿ ನವ ಬದುಕನ್ನು ಆರಂಭಿಸಿದರು.

ದುಶ್ಚಟಗಳ ಭಿಕ್ಷಾ ಜೋಳಿಗೆ ಅಭಿಯಾನದ ಹೃದಯವಾಗಿತ್ತು. ಸಮಾಜದಲ್ಲಿ ವ್ಯಸನ, ಅಹಂಕಾರ, ಅಸೂಯೆ, ಸ್ವಾರ್ಥ ಇತ್ಯಾದಿ ದುಶ್ಚಟಗಳು ಬೇರುಬಿಟ್ಟಿವೆ. ಅವನ್ನು ಕೇವಲ ಕಾನೂನು ಅಥವಾ ಶಿಕ್ಷೆಯಿಂದ ದೂರ ಮಾಡಲು ಸಾಧ್ಯವಿಲ್ಲ. ಅವುಗಳನ್ನು ಆಂತರಿಕ ಪರಿವರ್ತನೆಯ ಮೂಲಕವೇ ಜಯಿಸಬಹುದು, ಎಂದು ಬಸವದೇವರು ಹೇಳಿದರು.
ದುಶ್ಚಟಗಳನ್ನು ಭಿಕ್ಷಾ ಜೋಳಿಗೆಗೆ ಸಮರ್ಪಿಸುವ ಸಂಕೇತಾತ್ಮಕ ಕ್ರಮ ಜನಮನದಲ್ಲಿ ಭಾರಿ ಸ್ಪಂದನೆ ಉಂಟುಮಾಡಿತು. ಅನೇಕ ಗ್ರಹಸ್ಢರು, ಯುವಕರು, ಯುವತಿಯರು ತಮ್ಮ ಹಳೆಯ ದುಷ್ಚಟ, ದುರ್ಗುಣ, ದುರ್ವಾಸನೆಗಳನ್ನು ಬಿಡುವೆನೆಂದು ಸಂಕಲ್ಪ ಮಾಡಿ ಒಂದು ಪುಷ್ಪವನ್ನು ಗುರುವಿನ ಜೋಳಿಗೆಗೆ ಹಾಕಿ ಹೊಸ ಜೀವನ ಶೈಲಿಯನ್ನು ಆರಿಸಿಕೊಂಡರು. ಇದು ಜನರಿಗೆ ನಿಜವಾದ ಶರಣಾಗತಿಯ ಅನುಭವ ತಂದುಕೊಟ್ಟಿತು.

ಈ ಕಾರ್ಯಕ್ರಮ ಯಶಸ್ವಿಯಾಗಲು ಪುಣೆಯ ಸಂತೋಷ ಮಲ್ಲಶೆಟ್ಟಿ, ಸಂಗಮೇಶ ಕೂಬಾ, ನಂದಿನಿ ಪಾಟೀಲ, ರವೀಂದ್ರ ಕೂಬಾ, ಸಂಜಯ ಇಂಡೆ, ನಾಗೇಶ ಇಂಡೆ, ನಾಗೇಶ ಕುಂಟೆಗಾಂವಿ, ರಾಚಪ್ಪ, ಸತೀಶ ಪಾಟೀಲ, ದೇವಲೆ, ವೀರಭದ್ರ ನೌಖಂಡೆ, ಮಲ್ಲಿಕಾರ್ಜುನ ಸರ್ಜೆ ಮೊದಲಾದವರು ಮತ್ತು ಎಲ್ಲ ಬಸವಪರ ಸಂಘಟನೆಗಳು ಕೈ ಜೋಡಿಸಿದವು.

ಪೂಜ್ಯ ಡಾ. ಬಸವಲಿಂಗ ಪಟ್ಟದೇವರು, ಪೂಜ್ಯ ಡಾ. ಗಂಗಾ ಮಾತಾಜಿ ಹಾಗೂ ಗದುಗಿನ ಪೂಜ್ಯ ಡಾ. ಸಿದ್ದರಾಮ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅಭಿಯಾನ ನಡೆಯಿತು.