ನಾಗನೂರು
ಪುನೀತ ರಾಜಕುಮಾರ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ ಸೀಸನ್ 4 ರ ಗ್ರ್ಯಾಂಡ್ ಫಿನಾಲೆಯಲ್ಲಿ ನಾನೂ ಸ್ಪರ್ಧಿಯಾಗಿ ಭಾಗವಹಿಸಿದ್ದೆ. ಅದೇ ಮೊದಲು ನಾನು ಪುನೀತ ಅವರನ್ನು ಬಹಳ ಹತ್ತಿರದಿಂದ ನೋಡಿದ್ದು. ಅಲ್ಲಿಯವರೆಗೂ ಅವರೊಬ್ಬ ನಟನಾಗಿ ಮಾತ್ರ ನನಗೆ ಪರಿಚಯ. ಆದರೆ ಆ ವೇದಿಕೆಯಿಂದ ನನಗೆ ಅವರ ನೈಜ ವ್ಯಕ್ತಿತ್ವ ತಿಳಿಯುವಂತಾಯಿತು.
ಒಬ್ಬ ನಟನ ಬಗ್ಗೆ ಎಲ್ಲರಿಗೂ ಸಹಜವಾಗಿಯೇ ಇರುವಂತೆ ನನಗೂ ಒಂದು ಅನಿಸಿಕೆ ಇತ್ತು. ಒಬ್ಬ ಹೆಸರಾಂತ ನಟ ಜನಸಾಮಾನ್ಯರೊಟ್ಟಿಗೆ ಬಹಳ ಸಹಜವಾಗಿ ಬೆರೆಯಲಿಕ್ಕಿಲ್ಲ ಎಂಬುದು. ಆದರೆ ಅದು ಸುಳ್ಳು ಎನಿಸಿದ್ದು ಕೋಟ್ಯಾಧಿಪತಿ ವೇದಿಕೆಯಲ್ಲಿ ಪುನೀತರನ್ನು ಭೇಟಿಯಾದ ನಂತರ.
ಅವರೊಬ್ಬ ಸಾಮಾನ್ಯರಲ್ಲಿ ಸಾಮಾನ್ಯನಾಗಿ ನಮ್ಮೊಂದಿಗೆ ಬೆರೆತದ್ದು, ನಾನೂ ಹಾಟ್ ಸೀಟ್ ನಲ್ಲಿ ಕೂತಾಗ ನನಗೆ ಆಡಲು ಪ್ರೋತ್ಸಾಹಿಸಿದ್ದು, ಪರದೆಯ ಹಿಂದೆಯೂ ನಮ್ಮೊಂದಿಗೆ ಅಷ್ಟೇ ಪ್ರೀತಿಯಿಂದ ನಡೆದುಕೊಂಡದ್ದು ಬಹಳ ವಿಸ್ಮಯ ಎನಿಸಿತು.
ಅಲ್ಲಿರುವಷ್ಟೂ ಹೊತ್ತು ನಾನು ನನ್ನ ಅಣ್ಣನೊಂದಿಗೆ ಮಾತನಾಡುತ್ತಿದ್ದೇನೆಂದು ಅನಿಸಿದ್ದು ಸುಳ್ಳಲ್ಲ. ಅಲ್ಲಿ ಅವರು ನನಗೊಂದು ಪ್ರಶ್ನೆಯನ್ನು ಕೇಳುತ್ತಾರೆ…. “ನಾವು ಬಸವಣ್ಣನವರ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಯಾರು ಬರೆದ ಪುಸ್ತಕವನ್ನು ಓದಬೇಕು?” ಎಂದು, ಅದಕ್ಕೆ ನಾನು ಹೇಳಿದೆ “ಯಾರೋ ಬರೆದಿದ್ದು ಆದರೆ ಅದು ಬಸವಣ್ಣನವರ ಬಗ್ಗೆ ಅವರಿಗಿದ್ದ ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ಅದಕ್ಕೇ ನೀವು ಅವರ ವಚನ ಸಾಹಿತ್ಯವನ್ನು ಓದಿದರೆ, ಅವರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ” ಎಂದು.
ಆಗ ಪುನೀತ್ ಅವರು, “ಹಾಗಾದರೆ ನೀವು ಇಲ್ಲಿಂದ ಗೆದ್ದುಕೊಂಡು ಹೋದರೆ ನನಗೊಂದು ವಚನದ ಪುಸ್ತಕವನ್ನು ಕಳಿಸಬಹುದಾ?” ಎಂದು ಕೇಳುತ್ತಾರೆ. ಆಗ ನಾನು, “ನಾನು ಗೆದ್ದರೂ, ಗೆಲ್ಲದಿದ್ದರೂ ಕಳುಹಿಸಿ ಕೊಡುತ್ತೇನೆ” ಎಂದು ಹೇಳಿ, ಅಲ್ಲಿಂದ ಬಂದ ನಂತರ ಅವರಿಗೆ ಗುರು ಬಸವಣ್ಣನವರ ವಚನ ಸಾಹಿತ್ಯ ಪುಸ್ತಕವನ್ನು ಪೋಸ್ಟ್ ಮುಖಾಂತರ ಕಳಿಸಿಕೊಡಲಾಯಿತು.
ಕಾರ್ಯಕ್ರಮ ಮುಗಿದ ನಂತರ ನನ್ನ ತಂದೆ-ತಾಯಂದಿರು, ಅಂದರೆ ಪೂಜ್ಯ ಬಸವಗೀತಾತಾಯಿಯವರು ಮತ್ತು ಪೂಜ್ಯ ಬಸವಪ್ರಕಾಶ ಸ್ವಾಮೀಜಿಯವರು ಪುನೀತ ರಾಜಕುಮಾರ ಅವರನ್ನು ಶಾಲು ಹೊದಿಸಿ ಸನ್ಮಾನಿಸಲು ಹೋದಾಗ ಅವರು ಕುಳಿತಲ್ಲಿಂದ ಎದ್ದು ಬಂದು ಅವರೀರ್ವರ ಪಾದ ಮುಟ್ಟಿ ನಮಸ್ಕರಿಸಿದ್ದು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.
ಇದು ಅವರ ಸರಳತೆಗೆ ಹಿಡಿದ ಕನ್ನಡಿಯಂತೆ ಅಂದು ನನಗೆ ಭಾಸವಾಯಿತು. ಅವರೊಂದಿಗೆ ಮಾತನಾಡುವ, ಅಷ್ಟು ಹೊತ್ತು ಕಾಲಕಳೆಯುವ ಸದಾವಕಾಶ ನನಗೆ ದೊರೆತದ್ದು ಯಾವುದೋ ಜನ್ಮದ ಪುಣ್ಯದ ಫಲವೆಂದೇ ನಾನು ಇಂದಿಗೂ ಭಾವಿಸುತ್ತೇನೆ.
ಅವರು ನಮ್ಮನ್ನೆಲ್ಲ ಅಗಲಿದ ವಿಷಯ ತಿಳಿದು ಅಂದು ನನಗೆ ಬಹಳ ಸಂಕಟವಾಗಿತ್ತು.
ಇಂದು ನಾವು ಅವರ 3ನೇ ಸ್ಮರಣೋತ್ಸವವನ್ನು ಆಚರಿಸುತ್ತಿದ್ದೇವೆ. ಇಂದಿಗೂ ಅವರು ನಮ್ಮೆಲ್ಲರ ಮನದಲ್ಲಿ ಅಜರಾಮರವಾಗಿರಲು ಕಾರಣ ಕೇವಲ ನಟನಾಗಿ ಅಲ್ಲಾ, ಬದಲಿಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು, ಅಂದರೆ ಹಲವಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು, ಸಾಕಷ್ಟು ಆಶ್ರಮಗಳನ್ನು ದತ್ತು ಪಡೆದು ನಡೆಸುತ್ತಿದ್ದದ್ದು ಇಂತಹ ಹತ್ತು ಹಲವಾರು ಸೇವೆಗಳು ನಮಗೆ ತಿಳಿದಿದ್ದೇ ಅವರು ತೀರಿದ ನಂತರ. ಅಂದರೆ ಇದರಲ್ಲೇ ಅವರ ವ್ಯಕ್ತಿತ್ವ ನಮಗೆ ತಿಳಿದು ಬರುತ್ತದೆ, ಆ ವ್ಯಕ್ತಿ ಯಾವುದೇ ಸಹಾಯ, ಸೇವೆಯನ್ನೂ ಪ್ರಚಾರಕ್ಕೆಂದು ಮಾಡಿಲ್ಲವೆಂದು.
ಈ ಸ್ಮರಣೋತ್ಸವದ ಸಂದರ್ಭದಲ್ಲಿ ನಾವು ಅವರ ಸಿನಿಮಾಗಳನ್ನು ನೋಡುವುದರ ಮೂಲಕ, ಕೇವಲ ನಮ್ಮ ವಾಟ್ಸಾಪ್ ಸ್ಟೇಟಸ್ ಗಳನ್ನು ಹಾಕುವ ಮೂಲಕ ಮಾತ್ರ ಆಚರಿಸುವುದು ಮಾತ್ರವಲ್ಲದೇ, ಅವರ ಸಮಾಜಮುಖಿ ಆದರ್ಶಗಳನ್ನು ನಮ್ಮ ಬದುಕಿನಲ್ಲೂ ಸ್ವಲ್ಪ ಮಟ್ಟಿಗಾದರೂ ಅಳವಡಿಸಿಕೊಂಡು, ನಮ್ಮ ನೆಚ್ಚಿನ ಮುಗ್ಧ ಮನಸ್ಸಿನ, ನಾಯಕ ನಟನ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿ ಅವರ ಬಗೆಗಿನ ಅಭಿಮಾನವನ್ನು ಮೆರೆಯೋಣ.
ಅಮ್ಮಾ ನಿಮ್ಮ ಸರಳತನ, ಸರಳ ಆಡುಭಾಷೆ ಮನಮುಟ್ಟುತ್ತವೆ. ಅಡೆತಡೆಗಳನ್ನು ಮೀರಿ ಗಟ್ಟಿಗೊಂಡ ನಿಮ್ಮ ಜೀವನ ಅರ್ಥಪೂರ್ಣ ಕಾರ್ಯಗಳ ಮೂಲಕ ಸಾರ್ಥಕ ಬದುಕು ತಮ್ಮದಾಗಲಿ.
ಸೃಷ್ಟಿಕರ್ತ ವಿಶ್ವಾತ್ಮ ಹಾಗೂ ಬಸವಾದಿ ಶರಣರು ದೀರ್ಘ ಆಯುರಾರೋಗ್ಯ ಸುಖ ಸಂಪದ್ ಭಾಗ್ಯಗಳನ್ನು ಕರುಣಿಸಲೆಂದು ಹಾರೈಸುವೆ.
🌹🌴🌹🌴🌹🌴🌹🌴
ಶರಣು ಶರಣಾರ್ಥಿಗಳು
ಪರಮಾತ್ಮ 🙏🙏