ರಾಯಚೂರು
ನಗರದ ಬಸವ ಕೇಂದ್ರದಲ್ಲಿ ರವಿವಾರ ಶರಣ ಜೇಡರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವೀರಭದ್ರಪ್ಪ ಶರಣರು, ನೀಲಾಂಬಿಕ ಬಸವ ಯೋಗಾಶ್ರಮ, ಜಾಡಲದಿನ್ನಿ ಮಾತನಾಡಿ ಜೇಡರ ದಾಸಿಮಯ್ಯನವರ ಹಾಗೂ ದುಗ್ಗಳೆಯವರ ಆದರ್ಶ ದಾಂಪತ್ಯ ಜೀವನ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಶರಣಿ ಅನ್ನಪೂರ್ಣ ಮೇಟಿ ಅವರು ಮಾತನಾಡಿ, ಜೇಡರ ದಾಸಿಮಯ್ಯನ ವಚನಗಳಲ್ಲಿ ಭಕ್ತಿಯ ಮೇಲ್ಮೆ ಉತ್ಕಟವಾದ ಲಿಂಗನಿಷ್ಠೆ, ನಿಷ್ಠುರತೆ ಕಾಣ ಸಿಗುತ್ತದೆ. ಅವರ ವಚನಗಳಲ್ಲಿ ಆಳವಾದ ಅರ್ಥ, ಭಾವ, ಧ್ವನಿ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ ಮುಂತಾದ ಭಾವನೆಗಳು ಎದ್ದು ಕಾಣುತ್ತವೆ ಎಂದರು.
ನಾಗನಗೌಡ ಹರಿವಿಯವರು ಮಾತನಾಡಿ, ಜೇಡರ ದಾಸಿಮಯ್ಯ ಜನ್ಮತ: ಸಾಮಾನ್ಯ ವ್ಯಕ್ತಿ, ಆದರೆ ಸಾಧನೆಯ ಮೂಲಕ ಅಸಾಮಾನ್ಯ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಅವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ರಾಚನಗೌಡ ಕೋಳೂರು ಮಾತನಾಡಿ, ಜೇಡರ ದಾಸಿಮಯ್ಯನವರು ಗಂಡು ಹೆಣ್ಣೆಂಬ ಉಭಯ ಭೇದವನ್ನು ತೊಡೆದುಹಾಕಿ ” ಗಡ್ಡ ಮೀಸೆ ಬಂದರೆ ಗಂಡೆಂಬರು ಮೊಲೆ ಮುಡಿ ಬಂದರೆ ಹೆಣ್ಣೆಂಬರು ” ಒಳಗೆ ಸುಳಿಯುವ ಆತ್ಮ ಒಂದೇ ಎಂದು ಸಾರಿದ ದಿಟ್ಟ ಶರಣರೆಂದು ಹೇಳಿದರು.

ಎಂ. ಚನ್ನಬಸವ, ಇಂಜಿನಿಯರ್ ಮಾತನಾಡಿ ದೇವರ ದಾಸಿಮಯ್ಯನವರ ಕಾಲ ಕ್ರಿ. ಶ.1040. ಇವರು ವಚನಗಳನ್ನು ರಚಿಸಿಲ್ಲ. ಜೇಡರ ದಾಸಿಮಯ್ಯನವರು ಕ್ರಿ. ಶ.1165 ರಲ್ಲಿ ಜನಿಸಿದ್ದು, ಇವರು ವಚನಗಳನ್ನು ರಚಿಸಿದ ಆದ್ಯ ವಚನಕಾರರೆನ್ನುವುದು ಇತಿಹಾಸದ ಪುಟದಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂದರು.
ವಚನ ಗಾಯನವನ್ನು ರಾಘವೇಂದ್ರ ಆಶಾಪುರ, ಸಂಗಡಿಗರು ಹಾಡಿದರು. ಸಾಮೂಹಿಕ ಬಸವ ಪ್ರಾರ್ಥನೆ ಪಾರ್ವತಿ ಪಾಟೀಲ ನಡೆಸಿಕೊಟ್ಟರು. ವೆಂಕಣ್ಣ ಆಶಾಪುರ್ ಸ್ವಾಗತಿಸಿದರು. ಶರಣೆ ಸುಮಂಗಲ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣನ ಮಹಾಜನಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು. ನಾಗರಾಜ ಪಾಟೀಲ ವಂದಿಸಿದರು.

ಕಾರ್ಯಕ್ರಮದಲ್ಲಿ ಅಮರಪ್ಪ ಅಮಿನಗಡ, ಡಾ. ಶಿವಕುಮಾರ್ ಮಾಟೂರ, ಅನ್ನಪೂರ್ಣ ಹರವಿ, ಸುಮಂಗಲ ಪಾಟೀಲ, ನರಸಪ್ಪ ಪತೆಪುರ, ಪೂರ್ಣಿಮಾ ಕಿರಣ್, ಜೆ. ಬಸವರಾಜ್ ವಕೀಲರು, ಮಲ್ಲಿಕಾರ್ಜುನ ಗುಡಿಮನಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಕ್ತಾಯಕ್ಕನವರು 13.4.25( ರವಿವಾರ) ಹಮ್ಮಿಕೊಳ್ಳಲಾದ ಶರಣಿ ಅಕ್ಕ ಮಹಾದೇವಿಯವರ ಜಯಂತಿಯಲ್ಲಿ ಪಾಲ್ಗೊಳ್ಳಲು ಎಲ್ಲರಲ್ಲಿ ವಿನಂತಿಸಿದರು.