“ಮಕರ ಸಂಕ್ರಾಂತಿ ನದಿ ಸ್ನಾನ ಬಿಟ್ಟು, ಬಸವ ಕೇಂದ್ರಕ್ಕೆ ಬಂದು ಲಿಂಗವಂತರಾಗಿದ್ದೀರಿ”
ರಾಯಚೂರು
ಜಿಲ್ಲೆಯ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಮತ್ತು ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಮಂಗಳವಾರ ಆಚರಿಸಲಾಯಿತು.
ನಗರದ ಬಸವೇಶ್ವರ ವೃತ್ತದ, ವಿಶ್ವಗುರು ಬಸವಣ್ಣನವರ ಪುತ್ತಳಿಗೆ ಗಣ್ಯರು ಮಾಲಾರ್ಪಣೆ ಮಾಡಿದ ನಂತರ, ಅಕ್ಕನ ಬಳಗದ ಸದಸ್ಯರು ಮತ್ತು ಮಕ್ಕಳು ತಲೆಯ ಮೇಲೆ ವಚನ ಕಟ್ಟುಗಳನ್ನು ಹೊತ್ತುಕೊಂಡು, ಬಸವಾದಿ ಶರಣರ ವಚನಗಳ ಘೋಷದೊಂದಿಗೆ, ಬಸವಣ್ಣನವರಿಗೆ ಜೈಕಾರ ಹಾಕುತ್ತಾ ಬಸವ ಕೇಂದ್ರದ ವರೆಗೆ ಪಥಸಂಚಲನ ಮಾಡಿದರು.

ಬಸವ ಕೇಂದ್ರದ ವೇದಿಕೆ ಮೇಲೆ ಷಟಸ್ಥಲ ಧ್ವಜಾರೋಹಣ ಮತ್ತು ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿಶೇಷ ಉಪನ್ಯಾಸಕರಾಗಿ ರುದ್ರಪ್ಪ ಪಗಡದಿನ್ನಿ, ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ರಾಯಚೂರು ಜಿಲ್ಲಾ ಘಟಕ ಅವರು ಮಾತನಾಡುತ್ತಾ, ವಿಶ್ವಗುರು ಬಸವಣ್ಣನವರ ತತ್ವದಡಿಯಲ್ಲಿ ನಾವು ಹೋದಲ್ಲಿ ಮಾತ್ರ ಲಿಂಗಾಯತರಿಗೆ ಭವಿಷ್ಯವಿದೆ ಎಂದು ಹೇಳಿದರು.

ಮನುಕುಲಕ್ಕೆ ಸೃಷ್ಟಿಯ ರಹಸ್ಯವನ್ನು ತಿಳಿಸಲು ಬಂದಾತ ಬಸವಣ್ಣ, ನಿರಾಕಾರ ದೇವರ ಸಾಕಾರ ಸ್ವರೂಪವಾದ ಇಷ್ಟಲಿಂಗವನ್ನು ನಮ್ಮ ಕರಸ್ಥಲಕ್ಕೆ ತಂದುಕೊಟ್ಟು, ಬಸವಣ್ಣನವರು ಜಾತಿ, ವರ್ಣ, ವರ್ಗ, ಲಿಂಗ ಭೇದರಹಿತ ಸಮಾನತೆ ಸಾರುವ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ, ವಿಶ್ವಮಾನ್ಯ ಲಿಂಗಾಯತ ಧರ್ಮವನ್ನು ಈ ದಿನದಂದು 1155 ನೇ ಇಸ್ವಿಯಲ್ಲಿ ಸಂಸ್ಥಾಪಿಸಿದರು ಎಂದು ತಿಳಿಸಿದರು.

ನಾವು ನಿತ್ಯವೂ ಇಷ್ಟಲಿಂಗ ಪೂಜೆಯ ಮುಖಾಂತರ ನೇರವಾಗಿ ಸೃಷ್ಟಿಕರ್ತನ ಜೊತೆ ಸಂಪರ್ಕ ಸಾಧಿಸಬಹುದು ಎಂದು ತಿಳಿಸುತ್ತಾ, ನಾವೆಲ್ಲರೂ ಆ ಸೃಷ್ಟಿಕರ್ತನ ಮನೆಯ ಮಕ್ಕಳಾಗಿ ಜೀವನ ನಡೆಸಬೇಕೆ ಹೊರತು, ಕೂಲಿ ಆಳುಗಳಾಗಿ ಬೇಡಬಾರದು ಎಂದು ತಿಳಿಸಿದರು.

ವೀರಶೈವರು ಮತ್ತು ಲಿಂಗಾಯತರ ನಡುವೆ ಇರುವ ಗೊಂದಲಗಳ ಬಗ್ಗೆ ಪ್ರಸ್ತಾಪಿಸುತ್ತಾ, ಆದಷ್ಟು ಬೇಗ ವೀರಶೈವರು, ಅಪ್ಪ ಬಸವಣ್ಣನವರೇ ಲಿಂಗಾಯತ ಧರ್ಮದ ಸಂಸ್ಥಾಪಕರು ಮತ್ತು ಇಷ್ಟಲಿಂಗ ಜನಕರು ಎಂಬ ಸತ್ಯವನ್ನು ಅರಿತು, ಬಸವಪ್ರಣಿತ ಲಿಂಗಾಯತರ ಜೊತೆಗೂಡಿದಾಗ ಮಾತ್ರ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಸಿಗುತ್ತದೆ ಎಂದು ಎಚ್ಚರಿಸಿದರು.

ಲಿಂಗಾಯತ ಧರ್ಮದ ಮೂಲ ಆಶಯ, ಸಿದ್ಧಾಂತಗಳು ಮತ್ತು ನಿಜಾಚಾರಣೆಗಳ ಕುರಿತು ಅಧ್ಯಯನ ಮಾಡಲು ಎರಡು ದಿನದ ಕಾರ್ಯಗಾರವನ್ನು ನಗರದಲ್ಲಿ ಶೀಘ್ರದಲ್ಲಿ ಆಯೋಜಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಅವರು ಮಾತನಾಡುತ್ತಾ, ಮಕರ ಸಂಕ್ರಾಂತಿ ಹಬ್ಬದ ನೆಪದಲ್ಲಿ ನದಿಗಳಿಗೆ ತೆರಳಿ ಪುಣ್ಯಸ್ನಾನ ಮಾಡುವುದ ಬಿಟ್ಟು, ತಾವೆಲ್ಲರೂ ಬಸವ ಕೇಂದ್ರಕ್ಕೆ ಆಗಮಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿಜವಾದ ಲಿಂಗವಂತರಾಗಿದ್ದೀರಿ ಎಂದರು. ಬಸವಾದಿ ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು, ಆ ಮೂಲಕ ಅವರ ಆದರ್ಶಗಳಿಗೆ ನಾವು ಗೌರವ ಕೊಡಬೇಕು ಮತ್ತು ಅವರ ಸಂದೇಶಗಳನ್ನು ಜಾರಿಗೆ ತರಬೇಕೆಂದು ತಿಳಿಸುತ್ತಾ, ನಿತ್ಯವೂ ನಾವೆಲ್ಲರೂ ಬಸವಾದಿ ಶರಣರ ವಚನಗಳನ್ನು ಪಠಿಸುತ್ತಾ, ವಚನಗಳ ತತ್ವಗಳನ್ನು ಆಚರಣೆಯಲ್ಲಿ ತಂದುಕೊಂಡು ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕೆಂದರು.

ರಂಗಪ್ಪ ಮ್ಯಾದರ, ಅಧ್ಯಕ್ಷರು, ಬಸವ ಕೇಂದ್ರ ಮಾನ್ವಿ, ಅನ್ನಪೂರ್ಣಮ್ಮ ಮೇಟಿ, ಅಧ್ಯಕ್ಷರು, ಅಕ್ಕನ ಬಳಗ, ಸಾಹಿತಿಗಳಾದ ಸರ್ವ ಮಂಗಳ ಸಕ್ರಿ, ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕ, ಹರವಿ ನಾಗನಗೌಡ, ಗೌರವಾಧ್ಯಕ್ಷರು, ಜಿಲ್ಲಾ ವೀರಶೈವ ಸಮಾಜ, ವೈ. ಬಸವನಗೌಡ ಬಲ್ಲಟಗಿ ಮತ್ತು ಶ್ರೀ ಮಲ್ಲಿಕಾರ್ಜುನಗೌಡ, ಜಾಗತಿಕ ಲಿಂಗಾಯತ ಮಹಾಸಭಾ ಮಾನ್ವಿ ತಾಲೂಕ ಘಟಕ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ, ಕು. ಸುಗನ್ ತೇಜ ಮಾಟೂರ್ ಸಾಮೂಹಿಕ ಬಸವ ಪ್ರಾರ್ಥನೆ ನಡೆಸಿಕೊಟ್ಟರು. ಜಯಶ್ರೀ ಮಹಾಜನಶೆಟ್ಟಿ ಸ್ವಾಗತ ಕೋರಿ, ಶಿವಯೋಗಿ ಸಿದ್ಧರಾಮೇಶ್ವರ ಜೀವನ ಚರಿತ್ರೆ , ಅವರ ವಚನಗಳು ಮತ್ತು ಅಲ್ಲಮಪ್ರಭುದೇವರ ಜೊತೆಗಿನ ಸಂವಾದವನ್ನು ವಿಶ್ಲೇಷಣೆ ಮಾಡಿದರು. ಶಿವಕುಮಾರ ಮಾಟೂರ್ ನಿರೂಪಿಸಿದರು. ಪಾರ್ವತಿ ಪಾಟೀಲ ವಂದಿಸಿದರು.

ಕಾರ್ಯಕ್ರಮದ ಕೊನೆಗೆ ಶರಣ-ಶರಣೆಯರು ಜೊತೆಗೂಡಿ ತಾವು ಮನೆಯಿಂದ ತಂದಂಥ ಶೇಂಗಾ, ಎಳ್ಳು ಹೋಳಿಗಿ, ಸಜ್ಜೆ ರೊಟ್ಟಿ, ಭರ್ತಾ ಮುಂತಾದ ಪ್ರಸಾದವನ್ನು ಸೇವಿಸಿ ವಚನ ಸಂಕ್ರಮಣವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮ ಬಸವ ಕೇಂದ್ರ, ಅಕ್ಕನ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಶರಣು ವಿಶ್ವ ವಚನ ಫೌಂಡೇಶನ್ ಜಿಲ್ಲಾ ಘಟಕ, ಕದಳಿ ವೇದಿಕೆ ಜಿಲ್ಲಾ ಘಟಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಇತರೆ ಸಂಘಟನೆಗಳ ಸಹಯೋಗದಿಂದ ನಡೆಯಿತು.

ಮನ ಮಿಡಿಯುವ, ಹೃದಯ ತುಂಬುವ ಕಾರ್ಯಕ್ರಮ