ರಾಯಚೂರು ಬಸವ ಕೇಂದ್ರದಲ್ಲಿ ಶರಣ ಮಾದಾರ ಚೆನ್ನಯ್ಯನವರ ಜಯಂತಿ

ರಾಯಚೂರು

ಬಸವ ಕೇಂದ್ರದಲ್ಲಿ ಶರಣ ಮಾದಾರ ಚೆನ್ನಯ್ಯನವರ ಜಯಂತಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರ ಸ್ಮರಣೆ ಕಾರ್ಯಕ್ರಮ ನಡೆಯಿತು.

ಶರಣ ಮಲ್ಲಿಕಾರ್ಜುನ ಗುಡಿಮನಿಯವರು ಮಾತನಾಡಿ, ಶತಶತಮಾನಗಳಿಂದ ಸವರ್ಣಿಯರ ಕಾಲಡಿಯಲ್ಲಿ ಬಿದ್ದು ಧೂಳಿನಂತಾದ ಶೂದ್ರಜನಾಂಗ ಇಲ್ಲಿಯವರೆಗೆ ಸಹನೆಯಿಂದ ಅಡಗಿಸಿಕೊಂಡಿರುವ ಅಗ್ನಿಜ್ವಾಲೆಯನ್ನು ಮಾದಾರ ಚೆನ್ನಯ್ಯ ತನ್ನ ನಿಜಭಕ್ತಿ, ಸತ್ಯಶುದ್ಧ ಕಾಯಕದ ಮೂಲಕ ಸಮಾಜ ನಿರ್ಮಿತ ಹಿಂದುಳಿದ ಜನಾಂಗದ ಸ್ವಾಭಿಮಾನ, ಧೈರ್ಯ, ಸಾಹಸ, ಕರ್ತವ್ಯ ನಿಷ್ಠತೆಯನ್ನು ತಮ್ಮ ವಚನಗಳ ಮೂಲಕ ಹೊರ ಹಾಕಿ ಸಮಾಜಕ್ಕೆ ಮಾದರಿಯಾಗಿದ್ದಾರೆಂದರು.

ಸುಮಂಗಲಾ ಹಿರೇಮಠವರು ಮಾತನಾಡಿ, ಮಾದರ ಚೆನ್ನಯ್ಯ ಕಾಯಕದೊಳಗೆ ಶಿವನನ್ನು ಕಂಡುಕೊಂಡವರು. ಇಡೀ ಶರಣ ಸಮೂಹದಲ್ಲಿ ಚೆನ್ನಯ್ಯನಂತಹ ವ್ಯಕ್ತಿತ್ವವುಳ್ಳ ಮತ್ತೊಬ್ಬ ವ್ಯಕ್ತಿ ಬಸವಣ್ಣನವರಿಗೆ ಗೋಚರಿಸಿಲ್ಲ. ಅದಕ್ಕಾಗಿಯೇ ಅತ್ಯಂತ ವಿನಮ್ರವಾಗಿ ಬಸವಣ್ಣನವರು ತಲೆಬಾಗಿದ್ದು ಚೆನ್ನಯ್ಯನವರೊಬ್ಬರಿಗೆ ಮಾತ್ರ ವೆಂದರು.

ಬೆಟ್ಟಪ್ಪ ಕಸ್ತೂರಿ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪನವರು ಮುತ್ಸದ್ದಿ ರಾಜಕಾರಣಿ ಅಷ್ಟೇ ಅಲ್ಲದೆ ಬಸವಾದಿ ಶರಣರ ತತ್ವಾದರ್ಶಗಳು ಬೆಳೆದು, ವಿಶ್ವಕ್ಕೆ ತಲುಪಬೇಕೆಂಬ ಹಂಬಲದಿಂದ ಬೆಂಗಳೂರಲ್ಲಿರುರುವ ಬಸವ ಸಮಿತಿಗೆ ನಿವೇಶನ ಮಂಜೂರು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆಂದರು.

ಸಭೆಯ ಅಧ್ಯಕ್ಷತೆಯನ್ನು ಕೇಂದ್ರದ ಉಪಾಧ್ಯಕ್ಷರಾದ ಚೆನ್ನಬಸವ ಇಂಜಿನಿಯರ್ ವಹಿಸಿದ್ದರು. ವೆಂಕಣ್ಣ ಆಶಾಪುರ ಸ್ವಾಗತಿಸಿದರು. ವಚನಗಾಯನ / ಸಾಮೂಹಿಕ ಬಸವ ಪ್ರಾರ್ಥನೆಯನ್ನು ಅಶ್ವಿನಿ ಮಾಟೂರ, ರತ್ನಾಕರ ನಡೆಸಿಕೊಟ್ಟರು. ಜೆ. ಬಸವರಾಜ ವಕೀಲರು ಪ್ರಾಸ್ತವಿಕ ನುಡಿಗಳನ್ನಾಡಿದರು, ಚನ್ನಬಸವಣ್ಣ ಮಹಾಜನಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು. ಪಿ. ಸೋಮಶೇಖರ್ ವಂದಿಸಿದರು. ಶರಣೆ ಸುಮಂಗಲಾ ಪಾಟೀಲ, ಶಿವರಂಜಿನಿ ಮುಂತಾದವರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *