ರಾಯಚೂರು ಬಸವ ಕೇಂದ್ರದಲ್ಲಿ ಆರ್.ಜಿ. ಶಾಸ್ತ್ರೀ ಅವರಿಗೆ ನುಡಿ ನಮನ

ರಾಯಚೂರು

ನಗರದ ಬಸವ ಕೇಂದ್ರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ಲಿಂಗೈಕ್ಯರಾದ ಹಿರಿಯ ಶರಣ ಆರ್. ಜಿ. ಶಾಸ್ತ್ರೀ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರೊ. ಪರಮೇಶ್ವರ ಸಾಲಿಮಠ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ಸಂಸಾರ ಸಾಗರವನ್ನು ದಾಟಿ, ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನು ನಡೆಸಿದರು.

” ಚಂದಗೆಟ್ಟವರೆಲ್ಲ ಬಂದೇರಿ ದೋಣಿಯನ್ನು ಶಿವನೊಂದೆ ಠಾವಿಗೊಯ್ದಿಳುವೆ ” ಎಂದು ಎದೆತಟ್ಟಿ ಹೇಳಿಕೊಂಡು ತಾವು ತಮ್ಮ ದೋಣಿ ಮತ್ತು ದೋಣಿಯಲ್ಲಿದ್ದ ಭಕ್ತರನ್ನೆಲ್ಲಾ ಶಿವಪಥದತ್ತ ಕರೆದೊಯ್ದ ಮಹಾನಿಸ್ಸೀಮ ಕಾಯಕಯೋಗಿಯಾಗಿದ್ದರು. ಅವರ ವಚನಗಳು ಅರಿವಿನ ಚಾಟಿ ಏಟು ಕೊಟ್ಟು ಬಡಿದೆಬ್ಬಿಸುವವು ಎಂದು ಹೇಳುತ್ತಾ, ಅವರ ಆಶಯದಂತೆ ಸತ್ಯ-ಶುದ್ಧ ಕಾಯಕದೊಂದಿಗೆ, ವೈಚಾರಿಕ ನೆಲೆಗಟ್ಟಿನಲ್ಲಿ ಬದುಕಿದಾಗ ಮಾತ್ರ ಜೀವನ ಸಾರ್ಥಕವೆಂದರು.

ಮಹಾದೇವಪ್ಪ ಏಗನೂರ ಮಾತನಾಡಿ ಲಿಂಗೈಕ್ಯರಾದ ಆರ್. ಜಿ. ಶಾಸ್ತ್ರಿಯವರು ಬಸವ ಕೇಂದ್ರದ ಚಿಂತಕರಾಗಿದ್ದರಷ್ಟೆ ಅಲ್ಲದೆ, ಬಸವ ಕೇಂದ್ರದ ಸಮಗ್ರ ಬೆಳವಣಿಗೆಗೆ ಶ್ರಮಿಸಿದ್ದರು. ಅವರ ಅಗಲಿಕೆಯಿಂದ ಅವರ ಕುಟುಂಬ ಸದಸ್ಯರಿಗೂ, ನಮಗೆಲ್ಲ ತುಂಬಲಾರದ ನಷ್ಟವೆಂದರು.

ಶಾಸ್ತ್ರೀಯವರ ಕುರಿತು ಮಿರ್ಜಾಪುರ ಚಂದ್ರಶೇಖರ, ಜೆ. ಬಸವರಾಜ ವಕೀಲರು, ಸಿ. ಬಿ. ಪಾಟೀಲ ವಕೀಲರು, ದೇವೇಂದ್ರಮ್ಮ ಮುಂತಾದವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ರಾಚನಗೌಡ ಕೋಳೂರ ಅವರು ಮಾತನಾಡಿ ಶರಣರಾದ ಮಹಾನ್ ಚೇತನ ಅಂಬಿಗರ ಚೌಡಯ್ಯನವರ ಸತ್ಯದ ನಿಲುವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣವೆಂದು ಹೇಳಿದರು. ಆರ್.ಜಿ. ಶಾಸ್ತ್ರಿಯವರು ಬಸವ ಕೇಂದ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಆರ್.ಜಿ. ಶಾಸ್ತ್ರಿಯವರ ಗೌರವಾರ್ಥ ಮೌನಚಾರಣೆ ಮಾಡಲಾಯಿತು.

ವಚನ ಗಾಯನವನ್ನು ರಾಘವೇಂದ್ರ ಆಶಾಪುರ, ಅಶ್ವಿನಿ ಮಾಟೂರ, ನಾಗೇಶಪ್ಪ ಮಾಡಿದರು. ಸಾಮೂಹಿಕ ಬಸವ ಪಾರ್ಥನೆಯನ್ನು ಪಾರ್ವತಿ ಪಾಟೀಲ ಮಾಡಿಸಿದರು. ಎಸ್. ಶಂಕರಗೌಡರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಾಗರಾಜ ಪಾಟೀಲ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಮಲ್ಲಿಕಾರ್ಜುನ ಗುಡಿಮನಿ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *