ರಾಯಚೂರಿನಲ್ಲಿ ಹಳಕಟ್ಟಿ ಜನ್ಮದಿನಾಚರಣೆ, ಲಿಂಗಾನಂದ ಶ್ರೀಗಳ ಪುಣ್ಯ ಸ್ಮರಣೆ

ರಾಯಚೂರು

ನಗರದ ಬಸವ ಕೇಂದ್ರದಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಹಾಗೂ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.

ಉಪನ್ಯಾಸ ನೀಡುತ್ತ, ಶಿಕ್ಷಕ ಚನ್ನಬಸವ ಹೆಗ್ಗಣದಿನ್ನಿ ಇವರು, ಹಳಕಟ್ಟಿಯವರು ತಮ್ಮ ಸಂಬಂಧಿಕ ಬನಹಟ್ಟಿಯ ಶಿವಲಿಂಗಪ್ಪ ಮಂಚಾಲಿ ಅವರ ಮನೆಗೆ ಹೋದಾಗ ” ಚಾಮರಸ ಪ್ರಭುಲಿಂಗಲೀಲೆ ಹಾಗೂ ಷಟಸ್ಥಲ ತಿಲಕ ಗ್ರಂಥ ನೋಡಿ, ಶರಣರ ವಚನಗಳಲ್ಲಿ ವಿಶ್ವವೇ ಬೆರಗಾಗುವಂತಹ ಸಮಾನತೆ ತತ್ವ- ಇರುವುದನ್ನು ಅರಿತುಕೊಂಡು, ಇಡೀ ಜೀವನವನ್ನೇ ವಚನ ಸಾಹಿತ್ಯದ ಸಂಶೋಧನೆ ಬರವಣಿಗೆಗಾಗಿ ಹಾಗೂ ಶರಣರ ಚರಿತ್ರೆಯನ್ನು ಬರೆಯುವಲ್ಲಿ ಅರ್ಪಿಸಿಕೊಂಡ ಶ್ರೇಷ್ಠ ದಾರ್ಶನಿಕ ಅವರಾಗಿದ್ದರೆಂದರು.

ಶರಣ ಮಲ್ಲಿಕಾರ್ಜುನ ಗುಡಿಮನಿ ಮಾತನಾಡಿ, ಪೂಜ್ಯ ಲಿಂಗಾನಂದಪ್ಪಗಳು ವಚನ ಸಾಹಿತ್ಯವನ್ನು ಪಟ್ಟಣ ಪಟ್ಟಣಕ್ಕೆ, ಹಳ್ಳಿ ಹಳ್ಳಿಗೆ, ಮನೆ ಮನೆಗೆ ಮುಟ್ಟಿಸುವ ಮಹಾಕಾರ್ಯ ಮಾಡಿದರೆಂದರು.

ಶರಣೆ ಮುಕ್ತಾ ನರಕಲದಿನ್ನಿ ಮಾತನಾಡಿ, ಡಾ. ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸುವುದಕ್ಕೆ ಮುಂಚೆ ಕೇವಲ 50 ಜನ ಶರಣ- ಶರಣೆಯರನ್ನು ಮಾತ್ರ ಗುರುತಿಸಲಾಗಿತ್ತು. ಅವರು ವಚನಗಳ ಸಂಶೋಧನೆ, ಸಂಗ್ರಹಣೆ ಹಾಗೂ ವಚನ ಸಂಪುಟಗಳನ್ನು ಮುದ್ರಿಸಿದ ಫಲವಾಗಿ 250 ವಚನಕಾರರನ್ನು ಗುರುತಿಸುವಂತಾಯಿತು. ವಚನಗಳ ಮುದ್ರಣಕ್ಕಾಗಿ, ಇದ್ದ ತಮ್ಮ ಸ್ವಂತ ಮನೆ ಮಾರಿ ಹಿತಚಿಂತಕ ಎಂಬ ಹೆಸರಿನ ಮುದ್ರಣ ಕೇಂದ್ರ ಸ್ಥಾಪನೆ ಮಾಡಿ ಸಮಗ್ರ ವಚನಗಳನ್ನು ಮುದ್ರಿಸಿ, ವಚನ ಸಂಪುಟಗಳನ್ನು ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಹಾಗೂ 1926ರಲ್ಲಿ ಶಿವಾನುಭವ ಮಾಸಪತ್ರಿಕೆಯನ್ನು, 1927ರಲ್ಲಿ ನವ ಕರ್ನಾಟಕ ವಾರಪತ್ರಿಕೆಯನ್ನು ಹೊರ ತಂದು, ಈ ಮೂಲಕ ವಚನಗಳ ಸಾರವನ್ನು, ಶರಣರ ಇತಿಹಾಸವನ್ನು, ಅವರ ವಿಚಾರಧಾರೆಯನ್ನು ಹಾಗೂ ಸಾಮಾಜಿಕ, ರಾಜಕೀಯ ಮೌಲ್ಯಗಳ ಕುರಿತು ಪ್ರಕಟಿಸಿ ಜನರ ಕಣ್ಣು ತೆರೆಸುವ ಕಾರ್ಯ ಮಾಡಿದ್ದು ಶ್ಲಾಘನೀಯವೆಂದರು.

ಶರಣೆ ಅನ್ನಪೂರ್ಣ ಮೇಟಿಯವರು ಮಾತನಾಡಿ, ಹಳಕಟ್ಟಿಯವರು ವಚನಗಳ ಕಟ್ಟುವಿಕೆ ಕಾರ್ಯದೊಂದಿಗೆ ಸಮಾಜವನ್ನು ಕಟ್ಟುವ ಮಹತ್ಕಾರ್ಯ ಮಾಡಿದರು. ಅವರು ವಿಜಯಪುರ ನಗರ ಸಭೆಯ ಶಾಲಾ ಕಾರ್ಯನಿರ್ವಾಯಕ ಮಂಡಳಿ ಕಾರ್ಯದರ್ಶಿಯಾಗಿ, ಸಮಿತಿ ಕಾರ್ಯದರ್ಶಿಯಾಗಿ, ಮುಂಬೈ ಪ್ರಾಂತ್ಯದ ವಿಧಾನ ಪರಿಷತ್ ಸದಸ್ಯರಾಗಿ, ಹತ್ತು ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.

ಕೇಂದ್ರದ ಉಪಾಧ್ಯಕ್ಷ ಕುಮಾರ ಸಜ್ಜನ ಮಾತನಾಡಿ, ಶಿಕ್ಷಣ ಪ್ರೇಮಿಗಳಾದ ಇವರು 1910 ರಲ್ಲಿ ವಿಜಯಪುರ ಜಿಲ್ಲಾ ಲಿಂಗಾಯತ್ ವಿದ್ಯಾವರ್ಧಕ ಸಂಘ (BLDE) ಸ್ಥಾಪನೆ ಮಾಡಿದರು. ಮುಂದೆ ಇದನ್ನು ಪೂಜ್ಯ ಬಂಥನಾಳ ಸಂಗನಬಸವ ಶ್ರೀಗಳು ಉನ್ನತ ಮಟ್ಟಕ್ಕೆ ಬೆಳೆಸಿದ್ದನ್ನು ನಾವು ನೋಡಬಹುದು. ಅದೇ ರೀತಿ ಇವರು 1912ರಲ್ಲಿ ಶ್ರೀ ಸಿದ್ದೇಶ್ವರ ಅರ್ಬನ್ ಕೊ. ಆಪರೇಟಿವ್ ಸಂಘ ಸ್ಥಾಪಿಸಿದರು, 1917ರಲ್ಲಿ ಸಿದ್ದೇಶ್ವರ ಮಾಧ್ಯಮಿಕ ಶಾಲೆಯನ್ನು ಸ್ಥಾಪನೆ ಮಾಡಿದ್ದು ವಿಶೇಷವೆಂದರು.

ಬೆಟ್ಟಪ್ಪ ಕಸ್ತೂರಿ ಮಾತನಾಡಿ, ಶಿಕ್ಷಣ ಮಹಿಳೆಯರಿಗೂ ಅವಶ್ಯವೆಂದು ಗುರುತಿಸಿದ ಪೂಜ್ಯ ಹಳಕಟ್ಟಿಯವರು ವಿಜಾಪುರದಲ್ಲಿ ಮಹಿಳಾ ಮಾಧ್ಯಮಿಕ ಶಾಲೆಯನ್ನು ಪ್ರಾರಂಭಿಸಿದ ದಾರ್ಶನಿಕರೆಂದರು.

ಶರಣೆ ಸುಮಂಗಲ ಹಿರೇಮಠ ಮಾತನಾಡಿ, ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು ಸ್ತ್ರೀ ಸಮಾನತೆಯ ಹಿತದೃಷ್ಟಿಯಿಂದ ಕೂಡಲಸಂಗಮದಲ್ಲಿ ಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಸ್ಥಾಪಿಸಿ ಪೂಜ್ಯ ಮಾತಾಜಿಯವರನ್ನು ಆ ಪೀಠಕ್ಕೆ ನೇಮಕ ಮಾಡಿದ್ದನ್ನು ಸ್ಮರಿಸಿದರು.

ಕೇಂದ್ರದ ಉಪಾಧ್ಯಕ್ಷ ಚನ್ನಬಸವ ಇಂಜಿನಿಯರ್, ಹಳಕಟ್ಟಿಯವರು ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ್ದನ್ನು ಸ್ಮರಿಸಿದರು.

ಬಸವ ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ಮಾತನಾಡುತ್ತಾ, ಡಾ. ಹಳಕಟ್ಟಿಯವರ ಹಾಗೂ ಅವರ ತಾತನವರಾದ ಹರವಿ ಬಸಲಿಂಗಪ್ಪನವರ ಒಡನಾಟದ ಬಗ್ಗೆ ಮಾತನಾಡುತ್ತಾ, ಹಳಕಟ್ಟಿಯವರ ಮಹಾನ್ ಸಾಧನೆಯನ್ನು ಗುರುತಿಸಿ 1926 ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1928 ರಲ್ಲಿ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ, 1931ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, 1933ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ ಒಲಿದು ಬಂದವು.1956ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ‘ ಗೌರವ ಡಾಕ್ಟರೇಟ್ ‘ ಪದವಿ ನೀಡಿದ್ದನ್ನು ಸ್ಮರಿಸುತ್ತಾ, ಡಾ. ಹಳಕಟ್ಟಿಯವರು ದಿನಾಂಕ 29-6-1964 ರಂದು ಜಂಗಮೈಕ್ಯರಾದರೆಂದು ತಿಳಿಸಿದರು.

ಆರಂಭದಲ್ಲಿ ಶರಣ ಹಳಕಟ್ಟಿ ಹಾಗೂ ಲಿಂಗಾನಂದ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಮರ್ಪಣೆ ಸಲ್ಲಿಸಲಾಯಿತು.

ವಚನ ಗಾಯನವನ್ನು ರಾಘವೇಂದ್ರ ಆಶಾಪುರ, ನಾಗೇಶ್ವರಪ್ಪ, ರತ್ನಾಕರ್, ಮಾಡಿದರು. ಸಾಮೂಹಿಕ ಬಸವ ಪ್ರಾರ್ಥನೆಯನ್ನು ಶರಣೆ ಪಾರ್ವತಿ ಪಾಟೀಲ ಮಾಡಿಸಿದರು. ನಾಗರಾಜ ಪಾಟೀಲ ಯರಮರಸ್ ಸ್ವಾಗತಿಸಿದರು. ಜೆ. ಬಸವರಾಜ ವಕೀಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಸಿ.ಬಿ ಪಾಟೀಲ ವಂದಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಶರಣರಾದ ವೆಂಕಣ್ಣ ಆಶಾಪುರ, ದಿನಾಂಕ 8.7.25ರ ಸಂಜೆ 6 ಗಂಟೆಗೆ ತಮ್ಮ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಬರಲು ಆಮಂತ್ರಣ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *