ರಾಯಚೂರು
ನಗರದ ಬಸವ ಕೇಂದ್ರದಲ್ಲಿ ರವಿವಾರ ಶರಣ ಕುಂಬಾರ ಗುಂಡಯ್ಯನವರ ಸ್ಮರಣೋತ್ಸವ ನಡೆಯಿತು.
ಉಪನ್ಯಾಸಕರಾಗಿ ಆಗಮಿಸಿದ ಶರಣ ಬೆಟ್ಟಪ್ಪ ಕಸ್ತೂರಿ ಅವರು ಮಾತನಾಡಿ, ಕುಂಬಾರ ಗುಂಡಯ್ಯನವರು ಭಾಲ್ಕಿಯಲ್ಲಿ ಜನಿಸಿದ್ದರು. ಅವರ ಧರ್ಮಪತ್ನಿ ಕೇತಲಾದೇವಿ. ಗುಂಡಯ್ಯನವರು ಅಂತರಂಗದ ಘಟಕಾಯಕ ಹಾಗೂ ಬಹಿರಂಗದ ದೇಹಕಾಯಕಗಳೆರಡನ್ನು ಜಾಣತನದಿಂದ ನಿರ್ವಹಿಸುತ್ತಿದ್ದ ಕಲೆಯನ್ನು ಸಾಧಿಸಿದ್ದರು. ಗುಂಡಯ್ಯನವರು ಕಾಯಕದಲ್ಲಿ ನಿರತರಾಗಿ ಪ್ರಾಣ ಲಿಂಗ ಪೂಜೆಯಲ್ಲಿ ಮಗ್ನರಾಗುತ್ತಿದ್ದರು. ಅವರ ಜೀವನದ ಪ್ರತಿಕ್ಷಣವೂ ಪೂಜೆ, ಆರಾಧನೆ, ಶಿವಸ್ಮರಣೆಯಲ್ಲಿ ತೊಡಗುತ್ತಿದ್ದ ಗುಂಡಯ್ಯನವರು ಕಾಯಕದಲ್ಲಿ ಶಿವನನ್ನು ಕಂಡ ದಾರ್ಶನಿಕರಾಗಿದ್ದರೆಂದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಶರಣ ಸುಭಾಶ್ಚಂದ್ರ ಕೊನಿನ್, ಹಿರಿಯ ವಕೀಲರು ಕಲಬುರ್ಗಿ ಮಾತನಾಡಿ, ಇಂದಿನ ವಿಶ್ವದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವೆಂದರೆ ಸಕಲರಿಗೆ ಲೇಸನ್ನೇ ಬಯಸಿದ ಶರಣರ ವಚನಗಳು ಮತ್ತು ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ನಡೆದುಕೊಂಡಲ್ಲಿ ಮಾತ್ರ ಸಾಧ್ಯವೆಂದು ಹೇಳಿದರು.
ಶರಣೆ ಮುಕ್ತ ನರಕಲದಿನ್ನಿಯವರು ಮಾತನಾಡಿ, 12ನೇ ಶತಮಾನದ ಶರಣರಲ್ಲಿ ಗುಂಡಯ್ಯನವರು ಮೇರು ವ್ಯಕ್ತಿತ್ವದ ಶರಣರಾಗಿದ್ದರೆಂಬುದು ಜನಪದ ಹಾಡುಗಳಿಂದ ತಿಳಿದು ಬರುತ್ತದೆ. ಗುಂಡಯ್ಯನವರು ಕಾಯಕದಲ್ಲಿ ನಿರತರಾಗಿ ಪ್ರಾಣಲಿಂಗ ಪೂಜೆಯಲ್ಲಿ ಮಗ್ನರಾಗುತ್ತಿದ್ದರು. ಹಾಗೂ ಭಕ್ತಿಯಿಂದ ಮಡಿಕೆಗಳನ್ನು ಲಿಂಗದ ಆಕಾರದಲ್ಲಿ ಮಾಡುತ್ತಿದ್ದರು. ಗುಂಡಯ್ಯನವರ ಕಾಯಕನಿಷ್ಠೆ, ಆದರ್ಶಗಳು ನಮಗೆಲ್ಲ ಮಾದರಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹರವಿ ನಾಗನಗೌಡರು, ಗೌರವಾಧ್ಯಕ್ಷರು, ಬಸವ ಕೇಂದ್ರ ಮಾತನಾಡಿ, ಗುಂಡಯ್ಯನವರು ಧರ್ಮಪತ್ನಿ ಕೇತಲದೇವಿಯವರು ತಮ್ಮ ಪತಿ ಗುಂಡಯ್ಯನವರು ಮಡಿಕೆ ಮಾಡುವ ಕಾಯಕದಲ್ಲಿ ಸಹಕರಿಸುತ್ತಾ, ಆ ಕಾಯಕದ ಅನುಭವವನ್ನೇ ಬಿತ್ತರಿಸುವ ಅನೇಕ ವಚನಗಳನ್ನು ರಚಿಸಿದ ಕೇತಲದೇವಿಯವರು ಅನುಭವ ಮಂಟಪದಲ್ಲಿ ಮಂಡಿಸಿದಾಗ ಇಡೀ ಶರಣ ಸಂಕುಲ ಅಭಿಮಾನದಿಂದ ಅಪ್ಪಿಕೊಂಡಿದ್ದನ್ನು ಸ್ಮರಿಸಿದರು.
ವಚನ ಗಾಯನವನ್ನು ನಾಗೇಶ್ವರಪ್ಪ ಸಂಗಡಿಗರು ಸಾದರಪಡಿಸಿದರು. ಸಾಮೂಹಿಕ ಬಸವ ಪ್ರಾರ್ಥನೆಯನ್ನು ಡಾ. ಪ್ರಿಯಾಂಕಾ ಗದ್ವಾಲ್ ನಡೆಸಿಕೊಟ್ಟರು. ನಾಗರಾಜ ಪಾಟೀಲ ಸ್ವಾಗತ ಕೋರಿದರು. ಜೆ. ಬಸವರಾಜ, ವಕೀಲರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ , ನಿರೂಪಿಸಿದರು. ವೆಂಕಣ್ಣ ಆಶಾಪುರ್ ವಂದಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರದ ಕೋಶಾಧ್ಯಕ್ಷರಾದ ಎಸ್. ಶಂಕರಗೌಡರು 2024-25ನೇ ಸಾಲಿನ ಲೆಕ್ಕಪತ್ರ ವರದಿಯನ್ನು ( ಅಡಿಟ್ ರಿಪೋರ್ಟ್ ) ಸಭೆಯಲ್ಲಿ ಮಂಡಿಸಿ, ಸರ್ವ ಸದಸ್ಯರ ಒಪ್ಪಿಗೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮಹಾದೇವಪ್ಪ ಎಗನೂರು, ಚನ್ನಬಸವ ಇಂಜಿನಿಯರ್ , ಜಗದೇವಿ ಚನ್ನಬಸವ, ಸರೋಜಾ ಮಾಲಿಪಾಟೀಲ, ಮಲ್ಲಿಕಾರ್ಜುನ ಗುಡಿಮನಿ, ನರಸಪ್ಪ ಪತೇಪುರ್ ಮತ್ತಿತರರು ಉಪಸ್ಥಿತರಿದ್ದರು.