‘ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಎಲ್ಲಾ ಬಡಾವಣೆಯಲ್ಲಿ ನಡೆಯಲಿ’

ರಾಯಚೂರು

164ನೇ ಮಹಾಮನೆ ಕಾರ್ಯಕ್ರಮ ಎಲ್.ಬಿ.ಎಸ್. ನಗರದ ಸಿದ್ಧಲಿಂಗಮ್ಮ ಶೇಖರಪ್ಪ ಅವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಗೌರವಾಧ್ಯಕ್ಷ ನಾಗನಗೌಡ ಹರವಿ “ಮನೆಯಲ್ಲಿ ಮಹಾಮನೆ ಕಾರ್ಯಕ್ರಮಗಳನ್ನು ಪ್ರತಿಯೊಂದು ಬಡಾವಣೆಯಲ್ಲಿ ನಡೆಸಿದಾಗ ಶರಣರ ತತ್ವಾದರ್ಶಗಳು ಜನರಲ್ಲಿ ಮೂಡಿ ಸಮಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ,” ಎಂದರು.

‘ಬಸವ ಸಾಂಸ್ಕೃತಿಕ ಅಭಿಯಾನ’ದ ಕುರಿತು ತಿಳಿಸಿ, ದಿನಾಂಕ 5.9.25 ರಂದು ರಾಯಚೂರು ನಗರಕ್ಕಾಗಮಿಸುತ್ತಿದ್ದು, ಸರ್ವರೂ ಅದರಲ್ಲಿ ಪಾಲ್ಗೊಳ್ಳಲು ವಿನಂತಿಸಿದರು.

ವಿಶೇಷ ಅತಿಥಿಗಳಾಗಿದ್ದ ಮಾನ್ವಿ ಬಸವಕೇಂದ್ರದ ಅಧ್ಯಕ್ಷ ರಂಗಪ್ಪ ಮ್ಯಾದಾರ ಮಾತನಾಡಿ, 12ನೇ ಶತಮಾನದ ಶರಣ ಚಳುವಳಿ ಜಾಗತಿಕ ಇತಿಹಾಸದಲ್ಲಿ ಅಪೂರ್ವವಾದದ್ದು. ಅಂದು ಮೂಡಿದ ಚೈತನ್ಯದ ಬೆಳಕು ನಿರಂತರವಾಗಿ ಬೆಳಗುತ್ತಿದೆ. ಆ ಕಾಲದಲ್ಲಿ ಕರ್ನಾಟಕ, ಹೊರ ರಾಜ್ಯಗಳಲ್ಲದೆ ವಿದೇಶಗಳಿಂದ ಬಂದ ಸಾವಿರಾರು ಶರಣರು ಅನುಭವ ಮಂಟಪದಲ್ಲಿ ಅಧ್ಯಯನ ಶೀಲರಾಗಿ, ಅದರಂತೆ ನಡೆದು ತಮ್ಮ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ಜಾತಿ, ಪದವಿ, ವೃತ್ತಿ, ಪುರುಷ, ಸ್ತ್ರಿ, ವಯೋಮಾನ, ಸ್ಥಾನಮಾನ, ಪ್ರತಿಷ್ಠೆ ಎಲ್ಲವನ್ನು ತ್ಯಜಿಸಿ ಆತ್ಮಾನುಭವದ ಕಡೆ ಚಲಿಸಿದರು. ಇಷ್ಟಲಿಂಗದಲ್ಲಿ ಅಪಾರ ನಂಬಿಕೆ, ಶ್ರದ್ದೆ, ದಾಸೋಹದಲ್ಲಿ ನಿಷ್ಠೆ, ಪ್ರೀತಿ- ವಿಶ್ವಾಸಗಳಿಂದ ಕೂಡಿದ ಪರಸ್ಪರ ಗೌರವ ಭಾವವು ಎಲ್ಲ ಸಮಾನ ಚಿಂತಕರನ್ನು ಹತ್ತಿರ ಸೆಳೆದವು. ಈ ಅನುಭವ ಮಂಟಪದಲ್ಲಿ ನಡೆದ ಸಾತ್ವಿಕ ವಿಚಾರಗಳನ್ನು ಅಧ್ಯಯನ ಮಾಡಿ ಅದರಂತೆ ನಡೆದುಕೊಂಡಲ್ಲಿ ಮಾತ್ರ ನಮ್ಮ ಬದುಕು ಸಾರ್ಥಕವೆಂದರು.

ವೆಂಕಣ್ಣ ಅಶಾಪೂರ ಮಾತನಾಡಿ, ಶರಣರ ವಿಚಾರಧಾರೆ, ವಚನಗಳನ್ನು ನಿತ್ಯ ಅಧ್ಯಯನ ಮಾಡಿದಾಗ ಮಾತ್ರ ನಮ್ಮ ಬದುಕು ಸಾರ್ಥಕವೆಂದರು.

ಪ್ರಾಸ್ತಾವಿಕ ನುಡಿಗಳನ್ನು ಅನ್ನಪೂರ್ಣ ಮೇಟಿ ಮಾತನಾಡಿ, ಶರಣರ ತತ್ವಾದರ್ಶಗಳನ್ನು, ಅವರ ವಿಚಾರಧಾರೆಯನ್ನು ಮನೆ ಮನೆಗೆ ತಲುಪಿಸುವ ಈ ಉದ್ದೇಶಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದರು.

ವಚನ ಪ್ರಾರ್ಥನೆಯನ್ನು ಮುಕ್ತಾ ನರಕರದಿನ್ನಿ, ಜಗದೇವಿ ಚನ್ನಬಸವ ಮಾಡಿಸಿದರು. ಸುಮಂಗಲ ಹಿರೇಮಠ ಸ್ವಾಗತಿಸಿದರು, ಜಗದೇವಿ ಚನ್ನಬಸವ ನಿರೂಪಿಸಿದರು. ಪಾರ್ವತಿ ಪಾಟೀಲ ಶರಣು ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ನಾಗೇಶ್ವರಪ್ಪ, ಮಲ್ಲಿಕಾರ್ಜುನ ಗುಡಿಮನಿ, ನಾಗರಾಜ ಪಾಟೀಲ, ಲಲಿತಾ ಗುಡಿಮನಿ, ತಾಯಮ್ಮ ಯಲ್ಲನಗೌಡ, ಸಿದ್ದರಾಮ ಶಿಕ್ಷಕರು ಮುಂತಾದ ಶರಣ -ಶರಣಣೆಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಿದ್ದಲಿಂಗಮ್ಮ ಹಾಗೂ ಅವರ ಕುಟುಂಬ ಸದಸ್ಯರನ್ನು ಗೌರವಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *