ಸಾಣೇಹಳ್ಳಿ ಶ್ರೀಗಳಿಗೆ ದೆಹಲಿ ಆಹ್ವಾನ, ರಾಷ್ಟ್ರವ್ಯಾಪಿ ಅವರ ಚಿಂತನೆಗೆ ಪ್ರಚಾರ: ಸೋಮಣ್ಣ

ಗಣೇಶ ಅಮೀನಗಡ
ಗಣೇಶ ಅಮೀನಗಡ

ಹೊಸದುರ್ಗ:

“ಮುಂದಿನ ವರುಷ ದೆಹಲಿಯಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸುವುದರ ಜೊತೆಗೆ ಪಂಡಿತಾರಾಧ್ಯ ಶ್ರೀಗಳನ್ನು ದೆಹಲಿಗೆ ಆಹ್ವಾನಿಸುವೆ. ಅವರ ವಿಚಾರಗಳು ರಾಷ್ಟ್ರಮಟ್ಟದಲ್ಲಿ ತಲುಪಲು ಸಾಧ್ಯವಾಗುತ್ತದೆ,” ಎಂದು ರೈಲ್ವೆ ಮತ್ತು ಜಲಶಕ್ತಿಯ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಿವಸಂಚಾರದ ಕೈಪಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು‌.

ಶರಣೆ, ವಚನ ಸಂಗ್ರಹಗಾರ್ತಿ ಅಕ್ಕ ನಾಗಲಾಂಬಿಕೆಯ ಹೆಸರನ್ನು ರಾಜ್ಯದ ಯಾವುದಾದರೊಂದು ರೈಲುನಿಲ್ದಾಣಕ್ಕೆ ಇಡಲಾಗುವುದು ಭರವಸೆ ನೀಡಿದರು.

ಕೇಂದ್ರ ಸರಕಾರದ ತುಮಕೂರಿನ ರೈಲು ನಿಲ್ದಾಣಕ್ಕೆ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಇಟ್ಟು, 150 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ.

ಹೀಗೆಯೇ ಅಲ್ಲದೆ 49 ಸಾವಿರ ಕೋಟಿ ರೂಪಾಯಿ ಯೋಜನೆಗಳನ್ನು ಕೈಗೆತ್ತಿಕೊಂಡಿರುವೆ. ಈಗಾಗಲೇ 11 ಸಾವಿರ ವೆಚ್ಚದಲ್ಲಿ ರೈಲ್ವೆ ಯೋಜನೆಗಳು ಅಭಿವೃದ್ಧಿಯಾಗಿದೆ ಎಂದರು‌.

ಹಳ್ಳಿಗಾಡಿನ ಜನರ ಜೀವನದಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ ಅವರು ಯಾರನ್ನೂ ಕೇಳುವುದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರದ ಮೂಲಕ ತಂತ್ರಜ್ಞಾನ ಆಧಾರಿತ ಬೆಳೆ ಸಂಸ್ಕರಣಾ ಪದ್ಧತಿ  ರಾಜ್ಯದ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ತುಮಕೂರು, ಚಿತ್ರದುರ್ಗ, ಹಾವೇರಿ, ಚಿಕ್ಕಬಳ್ಳಾಪುರ, ಗದಗ ಹೀಗೆ ಆರು ಜಿಲ್ಲೆಗಳು ಒಳಗೊಂಡಿರುತ್ತವೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಶಿವನಿಯಲ್ಲಿ ವಾಸ್ಕೋಡಗಾಮಾ ರೈಲನ್ನು ನಿಲ್ಲಿಸುವುದಕ್ಕೆ ಚಾಲನೆ ನೀಡಿದೆ. ನಿತ್ಯ 200-300 ಜನರು ಈ ರೈಲು ನಿಲ್ದಾಣದಿಂದ ಗೋವಾಕ್ಕೆ ಸಂಚರಿಸುತ್ತಿದ್ದಾರೆ. ಈ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಂಡಿತಾರಾಧ್ಯ ಸ್ವಾಮಿಗಳು ಕೇವಲ ಮಠಾಧೀಶರಾಗಿಲ್ಲ. ನೇರ ನುಡಿಯ, ನಿಷ್ಠುರವಾಗಿ ಮಾತನಾಡುವವರು. ದೂರದೃಷ್ಟಿ, ಅನುಕರಣೀಯವಾದ ಚಿಂತನೆಯಿರುವ ಅವರು ಸ್ವಾಮಿಗಳಾಗದೆ ರಾಜಕಾರಣಿಯಾಗಿದ್ದರೆ ದೊಡ್ಡ ಕೊಡುಗೆ ನೀಡಬಹುದಿತ್ತು ಎಂದರು.

ಮುಖ್ಯಮಂತ್ರಿ ಚಂದ್ರು ಅವರು ಆರೋಗ್ಯವಾಗಿದ್ದು, ಇನ್ನು ಐವತ್ತು ವರುಷಗಳವರೆಗೆ ಇದ್ದು, ಸಮಾಜ ಸುಧಾರಣೆಗೆ ಒತ್ತು ಕೊಡಲಿ ಎಂದು ಹಾರೈಸಿದರು.

ಬಸವಣ್ಣನವರ ಅನುಯಾಯಿಗಳಾಗಿ ದೆಹಲಿಯಲ್ಲಿ ಒಂಬತ್ತು ಮಹಾತ್ಮರ ಪ್ರತಿಮೆಗಳನ್ನು ರೂಪಿಸಲಾಗುತ್ತಿದೆ. ಬಸವಣ್ಣನವರ, ಕಿತ್ತೂರು ಚೆನ್ನಮ್ಮ ಅವರ ಪುತ್ಥಳಿಗಳೂ ಸಿದ್ಧಗೊಳ್ಳುತ್ತಿವೆ. ಈಮೂಲಕ ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ. ಕಿತ್ತೂರು ಚೆನ್ನಮ್ಮ ಅವರ ಕುರಿತ ಅಂಚೆ ಚೀಟಿಯನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ ಎಂದು ಹೇಳಿದರು.

ಬಸವಣ್ಣನವರು ಒಂದು ಜಾತಿಗೆ ಸೀಮಿತರಾಗಿಲ್ಲ. ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸುವಲ್ಲಿ ಸಾಣೇಹಳ್ಳಿ ಮಠ ನಿರಂತರವಾಗಿ ತೊಡಗಿದೆ ಎಂದು ಶ್ಲಾಘಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oq

Share This Article
Leave a comment

Leave a Reply

Your email address will not be published. Required fields are marked *