ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶಕ್ಕೆ ಸಕಲ ಸಿದ್ಧತೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಇದೇ ಶನಿವಾರದಿಂದ ಎರಡು ದಿನಗಳ ಕಾಲ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ಹಿರಿಯ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣೆ ಹಾಗೂ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ.‌ ಶಾಂತಾ ಅಸ್ಟಿಗೆ ತಿಳಿಸಿದರು.

ನಗರದ ಜೈಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಸಾಹಿತಿ, ಶರಣೆ ಡಾ. ಮೀನಾಕ್ಷಿ ಬಾಳಿ ಸರ್ವಾಧ್ಯಕ್ಷತೆಯಲ್ಲಿ ಅ.26, 27ರಂದು ಸಮಾವೇಶ ಜರುಗಲಿದ್ದು, ಸಮಾವೇಶಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದ 30 ಜಿಲ್ಲೆಗಳಿಂದ ಸುಮಾರು 600 ಪ್ರತಿನಿಧಿಗಳು ಹಾಗೂ ಸ್ಥಳೀಯವಾಗಿ 400 ಜನ ಸೇರಿದಂತೆ 1000ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಜಯನಗರದ ಅನುಭವ ಮಂಟಪದಿಂದ ಜೈಭವಾನಿ ಕನ್ವೆನ್ಷನ್ ಹಾಲ್ ವರೆಗೆ ವಚನಗಳ ಕಟ್ಟು ಹಾಗೂ ಅಕ್ಕಮಹಾದೇವಿ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ವಚನ ಕಲಾಕೃತಿಗಳ ಪ್ರದರ್ಶನ ಮತ್ತು ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ನೆರವೇರಿಸಲಿದ್ದಾರೆ ಎಂದರು.

ಶನಿವಾರ ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಶರಣಬಸವೇಶ್ವರ ಸಂಸ್ಥಾನದ ಚೇರಪರ್ಸನ್ ಡಾ. ದಾಕ್ಷಾಯಿಣಿ ಶರಣಬಸಪ್ಪ ಅಪ್ಪ ಉದ್ಘಾಟಿಸಲಿದ್ದಾರೆ. ಮೈಸೂರಿನ ಸುತ್ತೂರು ಶಿವರಾತ್ರಿ ದೇಶಿಕಕೇಂದ್ರ ಮಹಾಸ್ವಾಮಿಗಳು, ಗದಗನ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಸುಲಫಲಮಠ ಹಾಗೂ ಶ್ರೀಶೈಲಂ ಸಾರಂಗಮಠದ ಡಾ. ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದ ಸಿದ್ಧತೆಗಾಗಿ ಸ್ವಾಗತ ಸಮಿತಿ, ಮೆರವಣಿಗೆ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ಮೆರವಣಿಗೆ ಸಮಿತಿಗಳನ್ನು ಮಾಡಿಕೊಳ್ಳಲಾಗಿದೆ. ನಾಲ್ಕು ಪ್ರಮುಖ ಗೋಷ್ಠಿ, ಮಹಾದ್ವಾರ ಗಳಿಗೆ ಎಲ್ಹೇರಿ ಅಕ್ಕಮ್ಮ, ದುಗ್ಗಳೆ, ಜಯದೇವಿತಾಯಿ ಲಿಗಾಡೆ ಮುಂತಾದ ಸ್ಥಳೀಯ ಶರಣೆಯರ ಹೆಸರನ್ನು
ಇಡಲಾಗಿದೆ. ಮುಖ್ಯ ವೇದಿಕೆಗೆ ಅಕ್ಕಮಹಾದೇವಿ, ಮಹಾದಾಸೋಹಿ ಶರಣಬಸವೇಶ್ವರ ಮಂಟಪ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕದಳಿ, ಅಕ್ಕ ಕೇಳವ್ವ ಎಂಬ ಎರಡು ಸ್ಮರಣ ಸಂಚಿಕೆ, ಶರಣ ಪ್ರಸಾದ, 63 ಪುರಾತನರ ಚಿತ್ರಪಟಗಳು, ವಚನ ನಿಜದರ್ಶನ, ಜಡದಲ್ಲಿ ಜಂಗಮ ಸೇರಿ ಒಟ್ಟು 6 ಕೃತಿಗಳು ಬಿಡುಗಡೆಯಾಗಲಿವೆ ಎಂದರು.

ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಸಮಾವೇಶ ನಡೆಯುತ್ತಿದೆ. ಸ್ತ್ರೀ ಸಮಾನತೆ ಬಗ್ಗೆ ಜಾಗೃತಿ ಮೂಡಿಸುವುದು ಸಮಾವೇಶದ ಉದ್ದೇಶವಾಗಿದೆ. ವಿದ್ವಾಂಸರು, ಮಠಾದೀಶರು, ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ ಎಂದು ಡಾ.‌ ಮಲ್ಲಿಕಾರ್ಜುನ ವಡ್ಡನಕೇರಿ, ಜಿಲ್ಲಾಧ್ಯಕ್ಷರು, ಶರಣ ಸಾಹಿತ್ಯ ಪರಿಷತ್, ಕಲಬುರಗಿ ಇವರು ತಿಳಿಸಿದರು.

ಜಿಲ್ಲಾಧ್ಯಕ್ಷ ಡಾ.‌ ಮಲ್ಲಿಕಾರ್ಜುನ ವಡ್ಡನಕೇರಿ, ಪ್ರಧಾನ ಕಾರ್ಯದರ್ಶಿ ಶಾಂತಲಿಂಗ ಪಾಟೀಲ ಕೋಳಕೂರ,
ಜಯಶ್ರೀ ಚಟ್ನಳ್ಳಿ, ಬಸವರಾಜ ಮೊರಬದ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Share This Article
Leave a comment

Leave a Reply

Your email address will not be published. Required fields are marked *