ರಾಮದುರ್ಗ
ತಾಲ್ಲೂಕಿನ ನಾಗನೂರನ ಗುರುಬಸವ ಮಠದಲ್ಲಿ ಬಸವಧರ್ಮ ಉತ್ಸವ-2025 ಹಾಗೂ ಅಲ್ಲಮಪ್ರಭುಗಳ ಜಯಂತಿ ಅಂಗವಾಗಿ ಎರಡನೆ ದಿನ ಮಂಗಳವಾರ ಬೆಳಿಗ್ಗೆ 8.30ಕ್ಕೆ ಮಠದಿಂದ ಗುರುಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದೊಂದಿಗೆ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸಾಹದಿಂದ ಜರುಗಿತು.

ನಂತರ ಮುಂಜಾನೆ 11ಕ್ಕೆ ನಡೆದ ಉತ್ಸವದ ಸಮಾರೋಪ ಸಮಾರಂಭದಲ್ಲಿ, ಅನುಭಾವಿಗಳಾದ ಎಂ. ಜಿ. ದಾಸರ ಅವರು “ನಿತ್ಯ ಜೀವನಕ್ಕೆ ಸತ್ಯದ ವಚನಗಳು” ಎಂಬ ವಿಷಯದ ಕುರಿತು ಅನುಭಾವ ನೀಡಿದರು. “ನಮ್ಮ ಜೀವನಕ್ಕೆ ಏನೇನು ಮುಖ್ಯವಾದ ಅಂಶಗಳಿವೆಯೋ ಬಸವಾದಿ ಶರಣರು ಅದನ್ನೇ ಪಸರಿಸಿ ಹೋಗಿದ್ದಾರೆ. ವಚನಗಳು ನಮ್ಮ ಬಾಳಿನಲ್ಲಿ ಬೆಳಕಿನಂತೆ ಕಾರ್ಯ ವಹಿಸುತ್ತವೆ” ಎಂದರು.

ಅತಿಥಿಗಳಾದ ಸಿದ್ಧಣ್ಣ ಲಂಗೋಟಿಯವರು ಮಾತನಾಡಿ, “ಬಸವ ಧರ್ಮವೆಂದರೆ ದುಡಿಯುವವರ ಧರ್ಮ, ಇದು ಬಿದ್ದವರನ್ನು ಮೇಲೆತ್ತುವ ಧರ್ಮ, ಕಾಯಕ ಮತ್ತು ದಾಸೋಹವನ್ನು ಸಾರಿದ ಈ ಧರ್ಮ ಎಂದಿಗೂ ಬೇಡಿ ತಿನ್ನುವುದನ್ನು ಕಲಿಸಲಿಲ್ಲ. ಬದಲಾಗಿ ದುಡಿದು ತಿನ್ನಲು” ಎಂದರು.
ಕಿತ್ತೂರಿನ ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷರಾದ ಬಸವರಾಜ ಕಡೇಮನಿ ಮಾತನಾಡಿ “ಲಿಂಗಾಯತ ತುಂಬಾ ಅಮೂಲ್ಯವಾದ ಧರ್ಮ, ಮಾನವೀಯ ಮೌಲ್ಯಗಳನ್ನು ತನ್ನೊಳಗೆ ತುಂಬಿಕೊಂಡು ಜೀವನಕ್ಕೆ ಆದರ್ಶವನ್ನು ನೀಡುವ ಧರ್ಮವಾಗಿದೆ” ಎಂದರು.

ಸಾನಿಧ್ಯವನ್ನು ವಹಿಸಿದ್ದ ಗೋಕಾಕ ಶೂನ್ಯ ಸಂಪಾದನಾ ಮಠದ ಪೂಜ್ಯ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, “ಅನುಭಾವದ ವಿಷಯ ತುಂಬಾ ಅದ್ಭುತವಾಗಿದೆ. ನಿಜವಾದ ಬದುಕಿಗೆ ಶರಣರ ವಚನದ ಸಾಂಗತ್ಯ ತುಂಬಾ ಮುಖ್ಯವಾದದ್ದು. ಶರಣರ ವಚನ ಸಾಹಿತ್ಯದಲ್ಲಿ ನಮ್ಮ ಬದುಕಿನ ತಿರುಳನ್ನು ಕಂಡುಕೊಳ್ಳಬಹುದು. ಇಂತಹ ಚಿಕ್ಕ ಹಳ್ಳಿಯಲ್ಲಿ ಈ ಮಟ್ಟದ ಕಾರ್ಯಕ್ರಮವನ್ನು ನೋಡಲು ಸಂತೋಷವೆನಿಸುತ್ತದೆ.
ಬಸವಗೀತಾ ತಾಯಿಯವರ ಹಾಗೂ ಬಸವಪ್ರಕಾಶ ಸ್ವಾಮೀಜಿಯವರ ಪರಿಶ್ರಮದ ಫಲವೇ ಈ ಕಾರ್ಯಕ್ರಮ” ಎಂದರು.

ಗುಳೇದಗುಡ್ಡದ ಪೂಜ್ಯ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಮಹಾಸ್ವಾಮಿಗಳು ಮಾತನಾಡಿ, “ನಾನು ಗುರುಬಸವ ಮಠದ ಉದ್ಘಾಟನಾ ಸಂದರ್ಭದಲ್ಲಿ ಪೂಜ್ಯ ಮಹಾಂತ ಅಪ್ಪಗಳ ಜೊತೆಯಲ್ಲಿ ಇಲ್ಲಿಗೆ ಬಂದಿದ್ದೆ, ಅಂದಿನಿಂದಲೂ ಬಸವಗೀತಾ ತಾಯಿಯವರು ಹಾಗೂ ಬಸವಪ್ರಕಾಶ ಸ್ವಾಮೀಜಿಯವರ ಪರಿಚಯ. ತುಂಬಾ ಶ್ರಮಜೀವಿಗಳು ಎಂತದೇ ಸಂದರ್ಭದಲ್ಲೂ ನಮ್ಮ ಬಾಂಧವ್ಯ ತಾಯಿ ಮಕ್ಕಳ ರೀತಿಯಲ್ಲಿಯೇ ಇರುತ್ತದೆ” ಎಂದರು.
ಬಸವಗೀತಾ ತಾಯಿಯವರು ಮಾತನಾಡಿ “ಶರಣರ ವಚನದ ಸಾರವೇ ನಮ್ಮ ಬದುಕಿನ ಅರ್ಥ, ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ನಮ್ಮ ಜೀವನ ಪಾವನವಾಗುತ್ತದೆ. ಆದ್ದರಿಂದ ವಚನಸಾಹಿತ್ಯವನ್ನು ಕಡ್ಡಾಯವಾಗಿ ಎಲ್ಲರೂ ಅಭ್ಯಾಸ ಮಾಡಲೇಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜಸೇವಕ ರಾಜೇಶ ಹರ್ಲಾಪೂರ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಶೋಕ ಕುಲಗೋಡ, ಜೆ.ಎಲ್. ಎಂ. ರಾಮದುರ್ಗ ತಾಲೂಕಾ ಘಟಕದ ಅಧ್ಯಕ್ಷರಾದ ಜಿ. ವಿ. ನಾಡಗೌಡ್ರ, ಜೆ. ಎಲ್. ಎಂ. ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಆರಿಬೆಂಚಿ, ಮಲ್ಲಣ್ಣ ಯಾದವಾಡ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿದವು.

ಶ್ರೇಯಾಂಶ ಕೋಲ್ಹಾರ ನಿರೂಪಣೆ ಮಾಡಿದರು. ಈರಣ್ಣ ಗದಗಿನ, ಪಾಂಡುರಂಗ ಬಡಿಗೇರ ಸಂಗೀತ ಸೇವೆಯನ್ನು ನೀಡಿದರು.