ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡ ರಮಾಕಾಂತ ಕಾಶೀನಾಥ ಮುರಗೋಡ
ಹುಬ್ಬಳ್ಳಿ
ಬಸವಾದಿ ಶರಣರ ಮೇಲೆ ಅವಹೇಳನಕಾರಿ ಪೋಸ್ಟ್ ಬರೆದಿರುವವನ ವಿರುದ್ಧ ಬಸವ ಅನುಯಾಯಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
ವಿಜಯಪುರ, ಬಸವನ ಬಾಗೇವಾಡಿ, ಕಲಬುರ್ಗಿಗಳಲ್ಲಿ ಇಲ್ಲಿಯವರೆಗೆ ಪ್ರತಿಭಟನೆ ನಡೆದಿದೆ.
ಹಳೇ ಹುಬ್ಬಳಿಯ ನಿವಾಸಿಯಾದ ಆರೋಪಿಯ ಮೇಲೆ ಕಾನೂನು ಕ್ರಮ ನಡೆದಿದೆ ಎಂದು ಇಂದು ಬೆಳಗ್ಗೆ ಬಸವನಬಾಗೇವಾಡಿಯ ಪೊಲೀಸ್ ಇನ್ಸ್ಪೆಕ್ಟರ್ ಗುರುಶಾಂತ ದಾಸ್ಯಾಳ ಬಸವ ಮೀಡಿಯಾಗೆ ತಿಳಿಸಿದರು.
ನಂತರ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಕಚೇರಿಯಿಂದ ಬಂದ ಪ್ರಕಟಣೆಯೊಂದು ಆರೋಪಿಯ ಮೇಲೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 2025ರ ಜೂನ್ 15ರಂದು ಪ್ರಕರಣ ದಾಖಲೆಯಾಗಿದೆ ಎಂದು ತಿಳಿಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣವು ತನಿಖೆ ಹಂತದಲ್ಲಿದೆ ಎಂದು ಹುಬ್ಬಳ್ಳಿ ಪೊಲೀಸರು ಹೇಳಿದ್ದಾರೆ.
ಈತ ಬರೆದಿದ್ದ ಪೋಸ್ಟ್ ಒಂದು ವರ್ಷದ ಹಿಂದೆಯೇ ಪೊಲೀಸ್ ಗಮನಕ್ಕೆ ಬಂದು ಅವನ ಮೇಲೆ ಕಾನೂನು ಕ್ರಮ ಜರುಗಿಸಲಾಗಿತ್ತು. ಆದರೆ ಮತ್ತೆ ಅವನ ಪೋಸ್ಟ್ ವೈರಲ್ ಆಗಿ ಬಸವ ಅನುಯಾಯಿಗಳ ಆಕ್ರೋಶಕ್ಕೆ ಗುರಿಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಆರೋಪಿಯ ಹೆಸರು ರಮಾಕಾಂತ ಕಾಶೀನಾಥ ಮುರಗೋಡ ಎಂದು ಅವರು ಖಚಿತ ಪಡಿಸಿದರು.
ಮಾನಸಿಕ ಅಸ್ವಸ್ಥ
ಮಾಧ್ಯಮದ ವರದಿಯೊಂದರ ಪ್ರಕಾರ ಹೊಸದಾಗಿ ದೂರು ಬಂದ ಮೇಲೆ ಬಸವನಬಾಗೇವಾಡಿ ಪೊಲೀಸರು ಮೊಬೈಲ್‌ನ ಐಪಿ ಅಡ್ರೆಸ್ ಆಧಾರದಿಂದ ಆರೋಪಿಯ ಮನೆ ಪತ್ತೆ ಹಚ್ಚಿದರು.
ಆದರೆ ಅವನು ರೈಲು ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡ ಮಾನಸಿಕವಾಗಿ ವಿಕ್ಷಿಪ್ತ ವ್ಯಕ್ತಿಯಾಗಿದ್ದರಿಂದ ಮನೆಯಲ್ಲಿಯೇ ನಿಯಮಾನುಸಾರ ಬಂಧನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅವನನ್ನು ವಶಕ್ಕೆ ತೆಗೆದುಕೊಳ್ಳದೆ ಹಿಂತಿರುಗಿದರು.
ಆರೋಪಿ ಮಾನಸಿಕವಾಗಿ ವಿಕ್ಷಿಪ್ತನಂತೆ ವರ್ತಿಸುವ ಕಾರಣಕ್ಕೆ ಆತನ ಪತ್ನಿ ಬಿಟ್ಟು ಹೋಗಿದ್ದಾಳೆ, ವಯೋವೃದ್ಧ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ ಎಂದು ಹೇಳಲಾಗಿದೆ.
ಬಾಗೇವಾಡಿ ಪೊಲೀಸರು ಮನೆ ಪ್ರವೇಶಿಸಿದಾಗ ಆತನ ತಾಯಿ ಎರಡು ಕಾಲಿಲ್ಲದ ಮಗನನ್ನು ತೋರಿಸಿ ಇವನೇ ನೀವು ಹುಡುಕಿಕೊಂಡು ಬಂದ ಆರೋಪಿ, ಬೇಕಾದರೆ ಕರೆದುಕೊಂಡು ಹೋಗಿ, ನಮಗೆ ಇವನ ಸೇವೆ ಮಾಡಿ ಸಾಕಾಗಿದೆ. ನೀವೊಂದಿಷ್ಟು ಮಾಡಿ ಎಂದಳು ಎಂದು ಮಾಧ್ಯಮ ವರದಿಯಲ್ಲಿ ತಿಳಿದು ಬಂದಿದೆ.
ಆರೋಪಿ ಮಾನಸಿಕ ಅಸ್ವಸ್ಥನಾಗಿರುವ ಸಾಧ್ಯತೆ ಇರುವುದರಿಂದ ಅವನ ಚಿತ್ರವನ್ನು ಪ್ರಕಟಿಸದಿರಲು ಬಸವ ಮೀಡಿಯಾ ನಿರ್ಧರಿಸಿದೆ.
