ಸಿದ್ಧರಾಮಯ್ಯನವರ ಮೇಲೆ ರಂಭಾಪುರಿ ಶ್ರೀಗಳಿಗೇಕೆ ಇಷ್ಟೊಂದು ಕೋಪ?

ಮೌಢ್ಯವೆ ಮೈವೆತ್ತಂತಿರುವ ಡಿ.ಕೆ. ಶಿವಕುಮಾರ ಅಂತಹ ವ್ಯಕ್ತಿಯ ಪರ ಮಾತನಾಡುವುದನ್ನು ನಿಲ್ಲಿಸಲಿ.

ವಿಜಯಪುರ

ವೀರಶೈವ ಆರಾಧ್ಯ ಬ್ರಾಹ್ಮಣರು ಲಿಂಗಾಯತ ಧರ್ಮದೊಳಗೆ ವಿಲಿನಗೊಂಡು ಮೂರ್ನಾಲ್ಕು ಶತಮಾನಗಳೆ ಕಳೆದಿವೆˌ ಆದರೂ ಅವರು ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಒತ್ತಟ್ಟಿಗಿರಲಿˌ ಬಸವಣ್ಣನವರನ್ನು ಹಾಗೂ ಬಸವ ತತ್ವವನ್ನು ಕಟುವಾಗಿ ದ್ವೇಷಿಸುವುದು ನಿಲ್ಲಿಸಿಲ್ಲ.

ವೀರಶೈವ ಆರಾಧ್ಯ ಬ್ರಾಹ್ಮಣರನ್ನು ಐದು ಧರ್ಮಪೀಠಗಳು ಪ್ರತಿನಿಧಿಸುತ್ತಿದ್ದು ಅವುಗಳನ್ನು ಪಂಚಪೀಠಗಳು ಅಥವಾ ಶಿವಾಚಾರ್ಯ ಪೀಠಗಳೆಂದು ಕರೆಯುತ್ತಾರೆ. ಅವುಗಳ ಮುಖ್ಯ ಆಚಾರ್ಯರನ್ನು ಪಂಚಾಚಾರ್ಯರು ಎನ್ನಲಾಗುತ್ತದೆ. ಈ ಪೀಠ ಹಾಗೂ ಪರಂಪರೆಗಳಿಗೆ ಲಕ್ಷಾಂತರ ವರ್ಷಗಳಷ್ಟು ಹಳೆಯ ಖೊಟ್ಟಿ ಇತಿಹಾಸವನ್ನು ಸೃಷ್ಠಿಸಲಾಗಿದ್ದು ಪಂಚಾಚಾರ್ಯರು ಅಗಸ್ತ್ಯ ಮುನಿಗೆ ಲಿಂಗದೀಕ್ಷೆ ಕೊಟ್ಟಿದ್ದಾರೆ ಎನ್ನಲಾಗುತ್ತದೆ. ಮುಂದುವರೆದು ಪಂಚಪೀಠದ ಆಚಾರ್ಯರೆ ಬಸವಣ್ಣನವರ ದೀಕ್ಷಾ ಗುರುಗಳು ಎಂದು ವಾದಿಸಲಾಗುತ್ತದೆ.

ಆದರೆ ಇಲ್ಲಿಯವರೆಗೆ ಲಭ್ಯವಾಗಿರುವ ಶರಣರು ಬರೆದ ಸಾವಿರಾರು ವಚನಗಳಲ್ಲಾಗಲಿ ಅಥವಾ ಬಸವೋತ್ತರ ಯುಗದ ಶರಣ ಚಳುವಳಿಗೆ ಸಂಬಂಧಿಸಿದ ಸಮಗ್ರ ಸಾಹಿತ್ಯದಲ್ಲಾಗಲಿ ಪಂಚಪೀಠಗಳು ಮತ್ತು ಅವುಗಳ ಆಚಾರ್ಯರ ಉಲ್ಲೇಖ ಸಿಗುವುದಿಲ್ಲ.

ವೀರಶೈವರ ಇತಿಹಾಸ ಹೇಗಾದರೂ ಇರಲಿˌ ಅದನ್ನು ಕ್ಷಣಕಾಲ ಅಲಕ್ಷಿಸಿ ಬಿಡೋಣ. ಲಿಂಗಾಯತ ಧರ್ಮವು ಬಸವಣ್ಣನವರಿಂದ ಸ್ಥಾಪಿಸಲಾಯಿತು ಎನ್ನುವುದಕ್ಕೆ ಬೆಟ್ಟದಷ್ಟು ದಾಖಲೆಗಳಿವೆ. ಆದಾಗ್ಯೂ ವೀರಶೈವವೆ ಮೂಲ ಧರ್ಮˌ ಲಿಂಗಾಯತ ಅದರ ಪರ್ಯಾಯ ಪದˌ ಬಸವಾದಿ ಶರಣರು ಬೋಧಿಸಿದ್ದು ವೀರಶೈವ ಸಿದ್ಧಾಂತ ಎನ್ನುವ ಪೊಳ್ಳು ವಾದ ಈ ಆಚಾರ್ಯರು ಇಂದಿಗೂ ನಿಲ್ಲಿಸಿಲ್ಲ.

ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಯ ಹೋರಾಟಕ್ಕೆ ಸುಮಾರು ಒಂದು ಶತಮಾನದ ಇತಿಹಾಸವಿದೆ. ಮೈಸೂರು ರಾಜ್ಯದಲ್ಲಿ 1871 ರಲ್ಲಿ ಪ್ರತ್ಯೇಕ ಧರ್ಮೀಯರಾಗಿದ್ದ ಲಿಂಗಾಯತರು ಬದಲಾದ ಕಾಲಘಟ್ಟದಲ್ಲಿ ಮತ್ತೆ ಶೂದ್ರರಾಗಿ ಪರಿಗಣಿಸಲ್ಪಟ್ಟಿದ್ದು ಈಗ ಗತ ಇತಿಹಾಸ. 1945ರಲ್ಲಿಯೆ ಲಿಂಗಾಯತ ಐಕ್ಯ ಸಂಘ ಎಂದ ಸಂಸ್ಥೆಯ ಅಡಿಯಲ್ಲಿ ಈ ಹೋರಾಟ ಮತ್ತೆ ಕಾಣಿಸಿಕೊಂಡು ಮರೆಯಾಯಿತು.

2017ಕ್ಕೆ ಮೊದಲು ವೀರಶೈವ ಮಹಾಸಭಾ ಮೂರ್ನಾಲ್ಕು ಬಾರಿ ಪ್ರತ್ಯೇಕ ಧರ್ಮಕ್ಕಾಗಿ ಒಕ್ಕೂಟ ಸರಕಾರಕ್ಕೆ ತಪ್ಪಾಗಿ ಅರ್ಜಿ ಸಲ್ಲಿಸಿ ಮುಖಭಂಗಕ್ಕೀಡಾಯಿತು. ದುರಂತವೆಂದರೆ 2017 ರಲ್ಲಿ ಸಂವಿಧಾನ ಮಾನ್ಯತೆಯ ಹೋರಾಟ ತಾರಕಕ್ಕೇರಿದಾಗ ವೀರಶೈವ ಮಹಾಸಭಾ ಆ ಬೇಡಿಕೆಯನ್ನು ವಿರೋಧಿಸಿತು. ಆ ವಿರೋಧದ ಹಿಂದೆ ವೀರಶೈವ ಪಂಚಾಚಾರ್ಯರ ಒತ್ತಾಸೆ ಇತ್ತು ಎನ್ನುವುದು ಸ್ಪಷ್ಟ.

2018ರಲ್ಲಿ ಸಿದ್ಧರಾಮಯ್ಯ ಸರಕಾರ ತಜ್ಞರ ಸಮಿತಿ ಸಲ್ಲಿಸಿದ ವರದಿಯ ಆಧಾರದಲ್ಲಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯಕ್ಕಾಗಿ ಒಕ್ಕೂಟ ಸರಕಾರಕ್ಕೆ ಶಿಫಾರಸ್ಸು ಮಾಡಿತು. ಆಗ ಲಿಂಗಾಯತರಿಗೆ ಸಿಗುವ ಸಾಂವಿಧಾನಿಕ ಸೌಲಭ್ಯಕ್ಕೆ ತಡೆಯೊಡ್ಡಿದವರು ಇದೇ ಪಂಚಾಚಾರ್ಯರು. ಅಂದು ಸಿದ್ಧರಾಮಯ್ಯನವರು ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳದಂತೆ ಕಾಂಗ್ರೆಸ್ ಸರಕಾರದ ಸಂಪುಟದಲ್ಲಿದ್ದ ಕೆಲವು ಲಿಂಗಾಯತ ವಿರೋಧಿ ಸಚಿವರ ಮೂಲಕ ಒತ್ತಡ ಹಾಕಿಸಿದ್ದರ ಹಿಂದೆ ಯಾರಿದ್ದರು ಎನ್ನುವ ಸಂಗತಿ ಗುಟ್ಟಿನದೇನಲ್ಲ.

ಸಂಘ ಪರಿವಾರದ ಸನಾತನಿಗಳೊಂದಿಗೆ ಸೇರಿಕೊಂಡು ಧರ್ಮ ಒಡೆದರು ಎಂದು ದೊಡ್ಡ ಮಟ್ಟದ ಅಪಪ್ರಚಾರ ಮಾಡಿದ ಪಂಚಾಚಾರ್ಯರು ತಮಗಿರುವ ಲಿಂಗಾಯತರ ಹಾಗೂ ಬಸವಣ್ಣನವರ ಸಿದ್ಧಾಂತದ ಮೇಲಿನ ದ್ವೇಷವನ್ನು ಬಹಿರಂಗವಾಗಿಯೆ ಹೊರಹಾಕಿದರು.

ಅದಕ್ಕಿಂತ ಒಂದೆರಡು ವರ್ಷಗಳ ಮೊದಲು ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆಯಬೇಕಿದ್ದ ಅಮಾನುಷ ಅಡ್ಡಪಲ್ಲಕ್ಕಿ ಉತ್ಸವವನ್ನು ಸ್ಥಳೀಯ ಪ್ರಗತಿಪರ ಲಿಂಗಾಯತರು ವಿರೋಧಿಸಿದಾಗ ಹಾಗೂ ಸಿದ್ಧರಾಮಯ್ಯ ಸರಕಾರ ಮೌಢ್ಯ ನಿಷೇಧ ಕಾಯ್ದೆ ಅಂಗೀಕರಿಸಿದಾಗ ಪಂಚಾಚಾರ್ಯರಲ್ಲಿರುವ ಸಿದ್ಧರಾಮಯ್ಯನವರ ಮೇಲಿರುವ ದ್ವೇಷ ಮತ್ತಷ್ಟು ಹೆಚ್ಚಿತು.

ಸಿದ್ದರಾಮಯ್ಯ ವೈಯಕ್ತಿಕವಾಗಿ ಬಸವ ನಿಷ್ಠರು. ಅವರ ಸರಕಾರ ರಾಷ್ಟ್ರದ ಬೆಳವಣಿಗೆಯಲ್ಲಿ ಬಸವಣ್ಣನವರ ಕೊಡುಗೆ, ಪ್ರಭಾವ ಮತ್ತು ಅವರ ವಿಶ್ವ ಮಾನವ ಸಂದೇಶಗಳನ್ನು ಬಿಂಬಿಸಲು ಅನೇಕ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರಾಗಿ ಗುರುತಿಸಿದ್ದು ಈ ಸರಕಾರ. ಅನುಭವ ಮಂಟಪದ ಕೆಲಸ ಶುರುವಾಗಿದ್ದು ಮತ್ತು ಈಗ ಮುಗಿಯುತ್ತಾ ಬಂದಿರುವುದು ಈ ಸರಕಾರದ ಅವಧಿಯಲ್ಲಿ. ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ಬಸವ ಪ್ರಜ್ಞೆ ರಭಸದಿಂದ ಬೆಳೆಯಲು ಈ ಬೆಳವಣಿಗೆಗಳ ಪಾತ್ರ ಮಹತ್ವದ್ದು.

ಹಲವಾರು ಶತಮಾನಗಳಿಂದ ಬಸವಣ್ಣನವರ ಪ್ರಭಾವವನ್ನು ಕುಗ್ಗಿಸುವ ಪ್ರಯತ್ನ ನಡೆಸಿಯೇ ಪಂಚಾಚಾರ್ಯರು ಬೆಳೆದಿರುವುದು. ಈಗ ಪ್ರವಾಹದಂತೆ ಹರಿಯಲು ಶುರುವಾಗಿರುವ ಬಸವ ಪ್ರಜ್ಞೆಯಲ್ಲಿ ಅವರ ಅಸ್ತಿತ್ವವೇ ಕೊಚ್ಚಿಕೊಂಡು ಹೋಗುವ ಭೀತಿಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಪಂಚಾಚಾರ್ಯರು ಈಗ ಬಸವಣ್ಣನವರ ಫೋಟೋ ಹಿಡಿದುಕೊಂಡು ಓಡಾಡುತ್ತಿರುವುದು. ಈ ಕಾರಣಕ್ಕಾಗಿಯೇ ಸಿದ್ದರಾಯ್ಯನವರನ್ನು ಕಂಡರೆ ರಂಭಾಪುರಿ ಶ್ರೀಗಳಲ್ಲಿ ಭಯ, ಸಿಟ್ಟು, ಆತಂಕ ಎಲ್ಲಾ ಒಮ್ಮೆಲೇ ಪ್ರಕಟವಾಗುತ್ತವೆ.

ಬಸವಣ್ಣನವರನ್ನು ಸಿದ್ಧರಾಮಯ್ಯ ಸರಕಾರ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಾಗಲೂ ರಂಭಾಪುರಿ ಸ್ವಾಮಿಗಳು ಕುಹಕದ ಮಾತನಾಡಿದ್ದರು.
ಅದರ ಮುಂದುವರೆದ ಭಾಗವಾಗಿ ಈಗ ಸಿದ್ಧರಾಮಯ್ಯನವರು ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನ ತಮ್ಮ ರಾಜಕೀಯ ವಿರೋಧಿ ಡಿ ಕೆ ಶಿವ ಕುಮಾರ್ ಅವರಿಗೆ ಬಿಟ್ಟು ಕೊಡಬೇಕು ಎಂದು ಆಜ್ಞಾಪಿಸಿದ್ದಾರೆ. ಅಷ್ಟೇ ಅಲ್ಲದೆ ಗ್ಯಾರಂಟಿ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿಸುತ್ತವೆ ಎಂದು ನಂಜು ಕಾರಿದ್ದಾರೆ.

ಈ ಸಂದರ್ಭದಲ್ಲಿ ರಂಭಾಪುರಿ ಶ್ರೀಗಳಿಗೆ ಕೇಳಬೇಕಾದ ಕೆಲವು ಪ್ರಶ್ನೆಗಳು:

  1. ಸಿದ್ಧರಾಮಯ್ಯನವರ ಮೇಲಿನ ಪಂಚಾಚಾರ್ಯರ ಸಿಟ್ಟು ಎಲ್ಲರಿಗೂ ಅರ್ಥವಾಗುವಂತದ್ದೆ. ಆದರೆ ಲಿಂಗಾಯತ/ವೀರಶೈವ ಸಮಾಜದ ಹಿತರಕ್ಷಕರಂತೆ ಮಾತನಾಡುವ ರಂಭಾಪುರಿ ಸ್ವಾಮಿಗಳು ಮುಖ್ಯಮಂತ್ರಿ ಸ್ಥಾನವನ್ನು ಶಾಮನೂರು ಶಿವಶಂಕರಪ್ಪನವರಿಗೊˌ ಎಂ. ಬಿ. ಪಾಟೀಲರಿಗೊ ಅಥವಾ ಇನ್ನಾರಾದರು ಲಿಂಗಾಯತ ನಾಯಕರಿಗೆ ಬಿಟ್ಟುಕೊಡಬೇಕು ಎನ್ನುವ ಬದಲಿಗೆ ಡಿ ಕೆ ಶಿವಕುಮಾರ ಅವರಿಗೆ ಕೊಡಬೇಕು ಎನ್ನುತ್ತಿರುವುದರ ಹಿಂದಿನ ಹುನ್ನಾರವೇನು?
  2. ಗ್ಯಾರಂಟಿ ಯೋಜನೆಗಳು ಬಡವರಿಗೆ ಸಹಾಯ ಮಾಡುತ್ತವೆ. ಬಸವಣ್ಣನವರು ಬಡವರುˌ ಶೋಷಿತರ ಪರವಾಗಿ ಧ್ವನಿ ಎತ್ತಿದ ಧರ್ಮಗುರು. ಬಸವಣ್ಣನವರು ವೀರಶೈವ ಮತೋದ್ಧಾರಕ ಎಂದು ನಾಚಿಕೆ ಬಿಟ್ಟು ಹೇಳುವ ರಂಭಾಪುರಿ ಸ್ವಾಮಿಗಳು ಗ್ಯಾರಂಟಿ ಯೋಜನೆ ಟೀಕಿಸುವುದು ತರವೆ?
  3. ರಾಜನಾಗಲಿˌ ಜಗದ್ಗುರುವಾಗಲಿ ಕಾಯಕ ಮಾಡದೆ ಉಣ್ಣಬಾರದು ಎನ್ನುವುದು ಬಸವಣ್ಣನವರ ಭೋದನೆ. ಗ್ಯಾರಂಟಿ ಯೋಜನೆಯಿಂದ ಜನ ಸೋಮಾರಿಗಳಾಗುತ್ತಾರೆ ಎಂದಿರುವ ರಂಭಾಪುರಿ ಸ್ವಾಮಿಗಳು ಯಾವ ಶ್ರಮಾಧಾರಿಕ ಕಾಯಕ ಮಾಡುತ್ತಿದ್ದಾರೆ? ಭಕ್ತರ ಹಣದಲ್ಲಿ ದುಬಾರಿ ಐಷಾರಾಮಿ ಕಾರಿನಲ್ಲಿ ಅಡ್ಡಾಡುತ್ತˌ ಭಕ್ತರ ಹೆಗಲ ಮೇಲೆ ಅಡ್ಡಪಲ್ಲಕ್ಕಿಯಲ್ಲಿ ಮೆರೆಯುವುದು ಬಸವ ತತ್ವವೆ? ಭಕ್ತರ ಕಾಣಿಕೆಯಿಂದ ಸೋಮಾರಿಗಳಾಗಿರುವ ರಂಭಾಪುರಿ ಸ್ವಾಮಿಗಳು ತಕ್ಷಣಕ್ಕೆ ಯಾವುದಾದರೂ ಒಂದು ದೇಹದಂಡನೆಯ ಕಾಯಕ ಮಾಡುವರೆ?
  4. ಪಂಚಾಚಾರ್ಯರ ಪ್ರಕಾರ ಲಿಂಗಾಯತರು ಸಾಂವಿಧಾನಿಕವಾಗಿ ಅಲ್ಪಸಂಖ್ಯಾತರ ಸ್ಥಾನಮಾನ ಕೇಳುವುದು ಧರ್ಮ ಒಡೆದಂತೆ. ಲಿಂಗಾಯತ ಸಮಾಜದಲ್ಲಿ ಎಲ್ಲಿಲ್ಲದ ಗೌರವಾದರಗಳಿದ್ದಾಗ್ಯೂ ವೀರಶೈವ ಜಂಗಮರು ಬೇಡ/ಬುಡ್ಗ ಜಂಗಮರಂತೆ ತಮ್ಮನ್ನು ಪರಿಶಿಷ್ಠ ವರ್ಗದವೆಂದು ಪರಿಗಣಿಸುವುದಕ್ಕೆ ಹೋರಾಡುತ್ತಿರುವುದು ಧರ್ಮ ಒಡೆದಂತೆ ಅಲ್ಲವೆ? ಈ ವಿಷಯದಲ್ಲಿ ಪಂಚಾಚಾರ್ಯರು ಮೌನ ತಾಳಿರುವುದು ಏನನ್ನು ತೋರಿಸುತ್ತದೆ.

ಪಂಚಾಚಾರ್ಯರಿಗೆ ಯಾವಾಗಲೂ ಕೇಳಬೇಕಾದ ಕೆಲವು ಪ್ರಶ್ನೆಗಳು:

  1. ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದರು ಎನ್ನುವ ರಂಭಾಪುರಿ ಸ್ವಾಮಿಗಳ ವಾದವು ಎಷ್ಟು ಸರಿ? ಬ್ರಾಹ್ಮಣರಂತೆ ವೀರಶೈವರೂ ಕೂಡ ವೇದಮೂರ್ತಿಗಳುˌ ಯಜ್ಞ-ಯಾಗˌ ಹೋಮˌ ಹವನ ಮಾಡುತ್ತಾರೆ. ಹಾಗಿರುವಾಗ ಬಸವಣ್ಣ ಬ್ರಾಹ್ಮಣ ಮತ ಬಿಟ್ಟು ವೀರಶೈವ ಮತ ಏಕೆ ಸ್ವೀಕರಿಸಬೇಕಿತ್ತು?
  2. ಹಾಗೊಂದು ವೇಳೆ ಪಂಚಾಚಾರ್ಯರೆ ಬಸವಣ್ಣನವರ ದೀಕ್ಷಾಗುರುಗಳಾಗಿದ್ದರೆ ಬಸವಾದಿ ಶರಣರ ವಚನಗಳಲ್ಲಿ ಈ ಆಚಾರ್ಯರˌ ಆಗಮಿಕ ಆರಾಧ್ಯರ ಪ್ರಸ್ತಾಪಗಳೇಕಿಲ್ಲ?
  3. ವೀರಶೈವ ಆರಾಧ್ಯರು ಜನಿವಾರ-ಇಷ್ಟಲಿಂಗ ಎರಡನ್ನು ಧರಿಸುತ್ತಾರೆ. ಪುರುಷರಿಗೆ ತಲೆ ಬೋಳಿಸಿ ಬ್ರಾಹ್ಮಣರಂತೆ ಜುಟ್ಟು ಬಿಡಿಸಿ ಅಯ್ಯಾಚಾರ ಮಾಡಿಸುತ್ತಾರೆ. ಆರಾಧ್ಯರ ಮನೆಯ ಸ್ತ್ರೀಗೆ ಈ ಅಯ್ಯಾಚಾರದ ಧಾರ್ಮಿಕ ಸಂಸ್ಕಾರವಿಲ್ಲ. ತನ್ನ ಸಹೋದರಿಗೆ ಜನಿವಾರ ಹಾಕಲಿಲ್ಲ ಎನ್ನುವ ಕಾರಣಕ್ಕೆ ಬ್ರಾಹ್ಮಣ ಮತ ತ್ಯಜಿಸಿದ ಬಸವಣ್ಣನವರು ಅಂಥದ್ದೆ ಕರ್ಮಠ ವೀರಶೈವ ಮತವನ್ನು ಸ್ವೀಕರಿಸಿದ್ದೇಕೆ?
  4. ಬಸವಣ್ಣನವರು ವೀರಶೈವ ಧರ್ಮದ ಸುಧಾರಕರಾದರೆ ಅವರು ಭೋಧಿಸಿದ ಸುಧಾರಣೆಗಳನ್ನು ಪಂಚಾಚಾರ್ಯರು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದಾರೆ?

ರಂಭಾಪುರಿ ಸ್ವಾಮಿಗಳು 50 ವರ್ಷಗಳ ಹಿಂದಿನ ಲಿಂಗಾಯತ ಸಮಾಜವನ್ನು ಕಲ್ಪಿಸಿಕೊಂಡು ಮಾತನಾಡುವುದು ಬಿಡಬೇಕು. ಈಗ ಲಿಂಗಾಯತರು ಜಾಗೃತರಾಗಿದ್ದಾರೆ. ಶೂನ್ಯಪೀಠಾಧ್ಯಕ್ಷ ಅಲ್ಲಮರು “ಜಾತಿ ಜಂಗಮರು ಕೋಟ್ಯಾನು ಕೋಟಿˌ ನೀತಿ ಜಂಗಮರೊಬ್ಬರನ್ನೂ ಕಾಣೆ” ಎನ್ನುವಂತೆˌ ರಂಭಾಪುರಿ ಸ್ವಾಮಿಗಳು ಇನ್ನಾದರೂ ಜಾತಿ ಜಂಗಮದ ಭ್ರಮೆಯಿಂದ ಹೊರಬಂದು ಬಸವಪ್ರಜ್ಞೆಯ ನೀತಿ ಜಂಗಮರಾಗಲಿ.

ಬಸವಪ್ರಜ್ಞೆಯ ಸಿದ್ಧರಾಮಯ್ಯನವರನ್ನು ದ್ವೇಷಿಸುವುದು ಬಿಡಲಿˌ ಮೌಢ್ಯವೆ ಮೈವೆತ್ತಂತಿರುವ ಡಿ ಕೆ ಶಿವಕುಮಾರ ಅಂತಹ ವ್ಯಕ್ತಿಯ ಪರ ಮಾತನಾಡುವುದು ನಿಲ್ಲಿಸಲಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
11 Comments
  • ಇದೇ ರಂಭಾಪುರಿ ಮಠಕ್ಕೆ ಇದರ ಜೊತೆ ಹಲವಾರು ಮಠಗಳಿಗೆ ಹಿಂದಿನ ಬಿಜೆಪಿ ಸರಕಾರ ನೂರಾರು ಕೋಟಿ ರೂಪಾಯಿ ಸರ್ಕಾರಿ ಅನುದಾನ,ಹಲವಾರು ಎಕರೆ ಜಮೀನು ಉಚಿತವಾಗಿ(ಬಿಟ್ಟಿ) ನೀಡಿದೆ, ಇದಕ್ಕೆ ಕಾರಣ ಈ ಮಠಗಳು,ಅದರ ಸ್ವಾಮಿಗಳು ಬಿಜೆಪಿ ಪರವಾಗಿ ಕೆಲಸ ಮಾಡಲಿ ಎನ್ನುವುದು,ಆದರೆ ಸಿದ್ದರಾಮಯ್ಯ ಸರ್ಕಾರ ಈ ಕೆಲಸ ಮಾಡುತ್ತಿಲ್ಲ, ಅದಕ್ಕೆ ಇವರಿಗೆ ಸಿದ್ದರಾಮಯ್ಯ ಮೇಲೆ ಇಂತಹ ಸಿಟ್ಟು

  • ಮೌಢ್ಯತೆ ಮೂಢನಂಬಿಕೆಗಳನ್ನು ಜನಗಳಿಗೆ ಬೋದಿಸುವವರು ಬಸವಾದಿ ಶರಣರಿಗೆ ವಿರುದ್ಧ ಮಾಡೇ ಮಾಡುತ್ತಾರೆ.. ಶರಣು ಶರಣಾರ್ಥಿಗಳು 🙏🙏

  • ಸರಕಾರದಿಂದ ಕೊಟ್ಟಿದು ಬಿಟ್ಟಿನ ಹಾಗಾದರೆ ಅನುಭಾವ ಮಂಟಪಕ್ಕೆ ಸರಕಾರದಿಂದ ಕೋಟಿಧು ಏನು ಹೇಳಿ ,

    • ಅನುಭವ ಮಂಟಪ ನಿರ್ಮಾಣ ಕಾರ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ ಇನ್ನಷ್ಟು ಯುವಕರು ಜ್ಞಾನಿಗಳು ತೊಡಗಿಕೊಳ್ಳುವಂತೆ ಮತ್ತು ತಂತ್ರಜ್ಞಾನಗಳಿಂದ ಹೆಚ್ಚು ತತ್ವ ಸಿದ್ಧಾಂತಗಳನ್ನು ಅನುಭವಿಸುವ ಯೋಜನೆಗಳನ್ನು ಅಳವಡಿಸಬೇಕು.

      ಈ 10 ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಬಸವ ತತ್ವ ಹೆಚ್ಚು ಪ್ರಚಾರವಾಗಿದ್ದು ಹೆಮ್ಮೆಯ ಸಂಗತಿ.

      ಹಾಗೆಯೇ ಅನೇಕ ವೈಚಾರಿಕ
      ಜನರು ಇದರಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ
      Nalini m ಅವರ ವಿಚಾರ ಇಲ್ಲಿ ಮರು ಪರಿಶೀಲನೆ ನಡೆಸಿ

    • ಕೊಟ್ಟಿ ಬಸವ ತತ್ವ ಪಾಲಿಸುವವರು ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಏಕೆ ಆಕ್ಟಿವ್ ಆಗುತ್ತಾರೆ. ಮತ್ತು ನೀವು ಇನ್ನೊಂದು ಧರ್ಮವನ್ನು ಏಕೆ ತುಳಿಯಲು ಯತ್ನಿಸುತ್ತಿದ್ದೀರಾ ಇದು ಬಸವಣ್ಣನವರಿಗೆ ಮಾಡುವ ಅವಮಾನ ಅಲ್ಲವೇ

  • ವೀರಶೈವ ಲಿಂಗಾಯತ ಇಬ್ಬರಿಗೂ ಒಬ್ಬನೇ ದೇವರು ಅದು ಶಿವ. ಬಸವಣ್ಣವರು ಸುಧಾರಣೆ ಮಾಡಿ ಎಲ್ಲರಿಗೂ ಅನುಕೂಲ ಆಗುವಂತೆ ಇಷ್ಟ ಲಿಂಗ ಪೂಜೆ ತಂದರು. ವೀರಶೈವರೂ ಕೂಡ ಸ್ಥಾವರ ಲೀಗದ ಜೊತೆಗೆ ಇಷ್ಟ ಲಿಂಗ ಪೂಜೆ ಕೂಡ ಮಾಡುತ್ತಾರೆ. ಶಿವೋಪಸ ನೆ ಅನಾದಿ ಕಾಲದ್ದು. ಒಳ ಜಗಳ ಬಿಟ್ಟು ಒಂದಾಗಬೇಕು

    • ನಿಮ್ಮ ಅನಿಸಿಕೆ ಸಮಾಜಕ್ಕೆ ಉತ್ತಮ, ಆದರೆ ಇಲ್ಲಿ ಸಮಾಜ ಒಡೆಯುವವರು ಹೆಚ್ಚು

  • ಲಿಂಗಾಯತ ಧರ್ಮ ಎನ್ನುವದು ಒಂದು ಐತಿಹಾಸಿಕ ಸತ್ಯ. ಇದಕ್ಕೆ ನಿಷಿತವಾದ ಇತಿಹಾಸವಿದೆ. ವೀರಶೈವ ಎನ್ನುವದು ಇತ್ತೀಚೆಗೆ ಹುಟ್ಟಿಸಿಕೊಂಡ ಹೆಸರು. ವಚನಗಳಲ್ಲಿ ಲಿಪಿ ಪ್ರತಿಕಾರರು ಸೇರಿಸಿದ ಶಬ್ದ. 1980ರ ನಂತರ ಸೇರ್ಪಡೆಯಾದ ಶಬ್ದ.

Leave a Reply

Your email address will not be published. Required fields are marked *