ರಾಮದುರ್ಗ
ತಾಲ್ಲೂಕಿನ ಹೊರವಲಯದ ವಿಶ್ವೇಶ್ವರ ಕಲ್ಯಾಣ ಮಂಟಪದಲ್ಲಿ ‘ಬಸವ ಸಂಸ್ಕೃತಿ ಅಭಿಯಾನ’ದ ತಾಲೂಕಾ ಮಟ್ಟದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ರೊಟ್ಟಿಯವರು ಮಾತನಾಡಿ, “ಅಭಿಯಾನದ ಉದ್ದೇಶ, ವ್ಯಸನಮುಕ್ತ, ಮೂಢನಂಬಿಕೆರಹಿತ ಶರಣ ಸಮಾಜದ ನಿರ್ಮಾಣ. ಮಕ್ಕಳಲ್ಲಿ ಆಧ್ಯಾತ್ಮಿಕ ಶಕ್ತಿ ಬೆಳೆಸಲು ಹಾಗೂ ಯುವಕರಿಗೆ ಬಸವ ಸಂಸ್ಕೃತಿಯ ಪರಿಚಯಿಸಲು ಪ್ರಯತ್ನಿಸಲಾಗುವುದು. ಮುಕ್ತಾಯದ ದಿನ ವೇದಿಕೆಯ ಮೇಲೆ ಮುಖ್ಯಮಂತ್ರಿಗಳಿಗೆ 60 ದಾಖಲೆಗಳನ್ನು ಹೊಂದಿರುವ ಮನವಿ ಪತ್ರವನ್ನು ನೀಡಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಮರುಶಿಫಾರಸ್ಸು ಮಾಡುವಂತೆ ಕೋರಲಾಗುವುದು. ತನು-ಮನ-ಧನಗಳಿಂದ ಸರ್ವರೂ ಸಹಕಾರ ನೀಡಬೇಕು” ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಮಳಗಲಿ ಮಾತನಾಡಿ, “ಲಿಂಗಾಯತ ಮಠಾಧೀಶರ ಒಕ್ಕೂಟದ ಈ ಹೆಜ್ಜೆ ಅಭೂತಪೂರ್ವವಾದದ್ದು. ಈ ಅಭಿಯಾನದಿಂದ ನಮ್ಮನ್ನು ನಾವು ಒಗ್ಗೂಡಿಸಿಕೊಳ್ಳಬೇಕಾಗಿದೆ. ಆಚರಣೆಗಳಿಂದ ನಮ್ಮ ಧರ್ಮದ ಸ್ವಾಸ್ಥ್ಯ ಕಾಪಾಡಬೇಕಿದೆ” ಎಂದರು.
ಸಾನಿಧ್ಯ ವಹಿಸಿದ್ದ ಕಟಕೋಳದ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, “ಬಸವಣ್ಣನವರು ಕೇವಲ ಲಿಂಗಾಯತರ ಸ್ವತ್ತಲ್ಲ ಅವರು ಇಡೀ ವಿಶ್ವದ ಸ್ವತ್ತು. ನಾವು ಇಂದಿಗೂ ಕಾಯಕವನ್ನು ಮಾಡುತ್ತಲೇ ನಮ್ಮ ಮಠವನ್ನು ಸಾಗಿಸುತ್ತಿದ್ದೇವೆ, ಕೃಷಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ಎಲ್ಲರೂ ಅಭಿಯಾನವನ್ನು ಯಶಸ್ವಿಗೊಳಿಸೋಣ” ಎಂದರು.
ನಾಗನೂರಿನ ಪೂಜ್ಯ ಬಸವಪ್ರಕಾಶ ಸ್ವಾಮೀಜಿ ಮಾತನಾಡಿ, “ಮಠಾಧೀಶರು ಒಂದಾಗುವುದಿಲ್ಲ ಎಂಬ ಅಪವಾದವನ್ನು ಮಠಾಧೀಶರ ಒಕ್ಕೂಟವು ತೊಡೆದು ಹಾಕಿದೆ. ಮಹಿಳೆಯರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಅವರಿಗೂ ತಕ್ಕವಾದ ಸ್ಥಾನಮಾನವನ್ನು ನೀಡಬೇಕಿದೆ. ಹಳ್ಳಿ-ಹಳ್ಳಿಗೂ ಈ ಯೋಜನೆ ತಲುಪಲಿ. ನಮ್ಮೆಲ್ಲರ ಅಸ್ತಿತ್ವವನ್ನು ತಿಳಿದುಕೊಳ್ಳಲು ಈ ಅಭಿಯಾನ ಒಂದು ಸುವರ್ಣಾವಕಾಶ. ಎಲ್ಲರೂ ನಿಂತುಕೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಿ, ಲಿಂಗಾಯತರ ನಿಷ್ಠೆಯನ್ನು ಜಗತ್ತಿಗೆ ತೋರಿಸಬೇಕಿದೆ” ಎಂದರು.
ಜೊತೆಗೆ ಸಭೆಯಲ್ಲಿ ಹಲವಾರಿ ಶರಣರು ತಮ್ಮ ಶಕ್ತ್ಯಾನುಸಾರ ಅಭಿಯಾನಕ್ಕೆ ದಾಸೋಹವನ್ನು ಘೋಷಿಸಿದರು.
ಜೆ. ಎಲ್. ಎಮ್. ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಎಮ್. ಸಕ್ರಿ ಸ್ವಾಗತಿಸಿದರು. ಡಿ. ಪಿ. ನಿವೇದಿತಾ ಪ್ರಾರ್ಥನೆಗೈದರು. ಲೇಪಾಕ್ಷಿಯವರು ಶರಣು ಸಮರ್ಪಣೆ ಮಾಡಿದರು. ಈರಣ್ಣ ಬುಡ್ಡಾಗೋಳ ನಿರೂಪಿಸಿದರು.
ವೇದಿಕೆ ಮೇಲೆ ಬಟಕುರ್ಕಿ ಶ್ರೀಗಳು, ಶಿವಮೂರ್ತೇಶ್ವರ ಶ್ರೀಗಳು, ಡಾ. ವಾಯ್. ಬಿ. ಕುಲಗೋಡ, ಎಮ್. ಎಮ್. ಬಾಳಿ, ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರು ಗೀತಾ ಆರಿಬೆಂಚಿ, ಅಧ್ಯಕ್ಷರು ಜಿ. ವ್ಹಿ. ನಾಡಗೌಡ್ರ ಉಪಸ್ಥಿತರಿದ್ದರು.