‘ಕರುಣೆಯ ರಸ ಹರಿಯದ ಹೊರತು ಶರಣನಾಗಲು ಸಾಧ್ಯವಿಲ್ಲ’
ಸಾಣೇಹಳ್ಳಿ:
“ರಂಗಭೂಮಿ ಎಂಬುದು ಕೇವಲ ವೇದಿಕೆಯ ಮೇಲೆ ನಟಿಸುವುದಲ್ಲ, ಅದು ಮನುಷ್ಯನ ಅಂತರಂಗವನ್ನು ಶುದ್ಧೀಕರಿಸಿ, ಬದುಕನ್ನು ಪರಿವರ್ತಿಸುವ ಶಾಲೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
“ಮನುಷ್ಯನಲ್ಲಿ ಕರುಣೆಯ ರಸ ಹರಿಯದ ಹೊರತು ಅವನು ದೇವನಾಗಲು ಅಥವಾ ಶರಣನಾಗಲು ಸಾಧ್ಯವಿಲ್ಲ. ರಂಗಭೂಮಿ ಎಂಬುದು ಕೇವಲ ಪ್ರದರ್ಶನವಲ್ಲ, ಅದೊಂದು ತಪಸ್ಸು. ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಹಿಂಸೆ, ಕ್ರೌರ್ಯ ಮತ್ತು ಯುದ್ಧಗಳಿಗಿಂತ ಪ್ರೀತಿ, ಸತ್ಯ, ಶಾಂತಿ ಮತ್ತು ಅಹಿಂಸೆಯ ಅಗತ್ಯವಿದೆ. ಮನುಷ್ಯ ಮೃಗವಾಗದೆ ‘ಮಹಾದೇವ’ನಾಗುವ ಹಾದಿಯಲ್ಲಿ ಸಾಗಬೇಕು.
ಮನುಷ್ಯ ತನ್ನ ಒಳಗಿನ ಅಶಾಂತಿಯನ್ನು ಹೋಗಲಾಡಿಸಿ ಶಾಂತಿಯ ಬೀಜಗಳನ್ನು ಬಿತ್ತಲು ರಂಗಭೂಮಿ ಪೂರಕವಾಗಿದೆ. ಕಲಾವಿದನೊಬ್ಬ ರಂಗಪ್ರವೇಶ ಮಾಡಿದಾಗ ತನ್ನಲ್ಲಿರುವ ದ್ವೇಷ, ಅಸೂಯೆ ಮತ್ತು ಮತ್ಸರಗಳನ್ನು ತೊರೆದು ಹೊಸ ಮನುಷ್ಯನಾಗಿ (ಪರಕಾಯ ಪ್ರವೇಶ) ಹೊರಬರಬೇಕು.
ವಿಶ್ವ ರಂಗಭೂಮಿ ದಿನವು ನಮ್ಮ ಅಂತರಂಗದ ಭಾವನೆಗಳನ್ನು ಉದ್ದೀಪನಗೊಳಿಸಿ, ಬದುಕನ್ನು ಆದರ್ಶದ ಕಡೆಗೆ ಕೊಂಡೊಯ್ಯುವ ದಿನವಾಗಬೇಕು. ಸಮಾಜ ಸುಧಾರಣೆಗಿಂತ ಮೊದಲು ವ್ಯಕ್ತಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ‘ಮೂರ್ಖತನ’ದಿಂದ ಹೊರಬರಬೇಕು.
ಇಂದಿನ ಜಗತ್ತಿಗೆ ಯುದ್ಧಕ್ಕಿಂತ ಹೆಚ್ಚಾಗಿ ಮನುಷ್ಯತ್ವ, ಶಾಂತಿ, ಸತ್ಯ ಮತ್ತು ಅಹಿಂಸೆಯ ಅಗತ್ಯವಿದೆ. ಬಸವಣ್ಣನವರು ಹೇಳಿದಂತೆ “ದಯವಿಲ್ಲದ ಧರ್ಮವಾವುದಯ್ಯ” ಎಂಬ ತತ್ವವೇ ಎಲ್ಲಾ ಧರ್ಮಗಳ ಮೂಲ ಗುರಿಯಾಗಬೇಕು.

ಒಬ್ಬ ಶ್ರೇಷ್ಠ ನಟನಾಗುವುದಕ್ಕಿಂತ ಮೊದಲು ಒಬ್ಬ ಶ್ರೇಷ್ಠ ಮನುಷ್ಯನಾಗುವುದು ಮುಖ್ಯ. ತನ್ನಲ್ಲಿರುವ ದೌರ್ಬಲ್ಯಗಳನ್ನು ತಿದ್ದಿಕೊಳ್ಳದ ಕಲಾವಿದನ ಕಲೆಗೆ ಬೆಲೆಯಿರುವುದಿಲ್ಲ, ರಂಗಭೂಮಿಯು ಸಮಾಜದಲ್ಲಿ ಸೌಹಾರ್ದತೆ ಮತ್ತು ಪ್ರೀತಿಯನ್ನು ಬಿತ್ತುವ ಮೂಲಕ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿದೆ. ಮನುಷ್ಯನಿಗೆ ಶಾಂತಿ, ನೆಮ್ಮದಿ ಮತ್ತು ಸಂತೃಪ್ತಿಯನ್ನು ನೀಡುವ ದಿವ್ಯ ಸಾಧನ.
ಇಂದಿನ ಜಗತ್ತು ಶಾಂತಿ ಮತ್ತು ಸಮಾಧಾನವನ್ನು ಮರೆತು ಅಹಂಕಾರ, ದ್ವೇಷ, ಅಸೂಯೆ ಮತ್ತು ಮತ್ಸರಗಳ ಕೂಪದಲ್ಲಿ ಮುಳುಗಿದೆ. ದೊಡ್ಡ ಮನುಷ್ಯರಾಗುವುದಕ್ಕಿಂತ ‘ಒಳ್ಳೆಯ ಮನುಷ್ಯ’ರಾಗುವುದು ಇಂದಿನ ತುರ್ತು ಅಗತ್ಯವಾಗಿದೆ.
“ಹಬ್ಬದ ಸಂಭ್ರಮಕ್ಕಾಗಿ ತಂದ ಕುರಿಯು ತನಗಾಗುವ ಸಾವಿನ ಅರಿವಿಲ್ಲದೆ, ತೋರಣಕ್ಕೆ ಕಟ್ಟಿದ ಹಸಿರು ಎಲೆಗಳನ್ನು ತಿಂದು ಸಂಭ್ರಮಿಸುತ್ತದೆ. ಹಾಗೆಯೇ ಮನುಷ್ಯನೂ ಕೂಡ ತನ್ನ ನಾಶದ ಅರಿವಿಲ್ಲದೆ ಅಹಂಕಾರದ ಬದುಕಿನಲ್ಲಿ ಮುಳುಗಿದ್ದಾನೆ”. ಹಾವಿನ ಬಾಯಲ್ಲಿದ್ದರೂ ಕಪ್ಪೆಯು ತನ್ನ ಹಸಿವಿಗಾಗಿ ಹಾರಾಡುವ ನೊಣಕ್ಕೆ ಆಸೆ ಪಡುವಂತೆ, ಸಾವು ಎದುರಿಗಿದ್ದರೂ ಮನುಷ್ಯ ಅಧಿಕಾರ ಮತ್ತು ಸಂಪತ್ತಿನ ವ್ಯಾಮೋಹ ಬಿಡುತ್ತಿಲ್ಲ ಎಂಬ ಕಟು ಸತ್ಯವನ್ನು ವಚನಗಳ ಮೂಲಕ ನೆನಪಿಸಿದರು.
“ನಾನು ದೊಡ್ಡವನಾಗಬೇಕು, ಎಲ್ಲವೂ ನನ್ನ ಹತೋಟಿಯಲ್ಲಿರಬೇಕು” ಎಂಬ ದುರಾಸೆಯೇ ಇಂದಿನ ಯುದ್ಧಗಳಿಗೆ ಮೂಲ ಕಾರಣ. ಕೊಲ್ಲುವವನೂ ಒಂದು ದಿನ ಸಾಯಲೇಬೇಕು ಎಂಬ ಅರಿವು ಮನುಷ್ಯನಿಗೆ ಇರಬೇಕು. ಕೆಡುಕಿನ ಹಾದಿಯಲ್ಲಿ ಸಾಗುವವರನ್ನು ನಮ್ಮ ‘ಕೂಡಲಸಂಗಮದೇವ’ ಮೆಚ್ಚುವುದಿಲ್ಲ ಎಂದು ಅವರು ಎಚ್ಚರಿಸಿದರು. ಜಗತ್ತಿನ ಶಾಂತಿಗಾಗಿ ಮತ್ತು ಮಾನವೀಯತೆಯ ಉಳಿವಿನ ಪಥದಲ್ಲಿ ಸಾಗಲು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೈಕೋರ್ಟ್ ವಿಶ್ರಾಂತ ನ್ಯಾಯಧೀಶರಾದ ಹೆಚ್. ಬಿಲ್ಲಪ್ಪ ಮಾತನಾಡಿ; ರಂಗಭೂಮಿ ಮನುಷ್ಯನ ಜೀವನದ ದೃಷ್ಟಿಕೋನವನ್ನೇ ಬದಲಿಸುವ ಶಕ್ತಿ ಹೊಂದಿರುವ ಒಂದು ಅದ್ಭುತ ರಂಗ. ರಂಗಭೂಮಿ ವ್ಯಕ್ತಿಯ ಆರ್ಥಿಕ ಶಿಸ್ತು ಮತ್ತು ನೆಮ್ಮದಿಯ ಜೀವನಕ್ಕೆ ನಾಂದಿಯಾಗಬಲ್ಲದು.
ಮಹಾತ್ಮ ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯದ ಹಾದಿಯನ್ನು ಹಿಡಿಯಲು ರಂಗಭೂಮಿಯೇ ಪ್ರೇರಣೆ. ಬಾಲ್ಯದಲ್ಲಿ ಗಾಂಧೀಜಿಯವರು ನೋಡಿದ ‘ಸತ್ಯ ಹರಿಶ್ಚಂದ್ರ’ ಮತ್ತು ‘ಶ್ರವಣ ಕುಮಾರ’ ನಾಟಕಗಳು ಅವರ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದವು. ಹರಿಶ್ಚಂದ್ರನ ಸತ್ಯನಿಷ್ಠೆ ಮತ್ತು ಶ್ರವಣ ಕುಮಾರನ ಪಿತೃಭಕ್ತಿ ಅವರನ್ನು ಒಬ್ಬ ‘ಮಹಾತ್ಮ’ನನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು.
ಒಟ್ಟಾರೆಯಾಗಿ, ರಂಗಭೂಮಿಯು ಕೇವಲ ಕಲೆಯಲ್ಲ, ಅದು ಬದುಕಿನ ಪಾಠಶಾಲೆ. ಶೇಕ್ಸ್ಪಿಯರ್ನಿಂದ ಹಿಡಿದು ಡಿವಿಜಿವರೆಗೆ, ಹರಿಶ್ಚಂದ್ರನಿಂದ ಗಾಂಧೀಜಿಯವರೆಗೆ ಪ್ರತಿಯೊಬ್ಬರಿಗೂ ರಂಗಭೂಮಿ ಹೊಸ ದಾರಿಯನ್ನು ತೋರಿಸಿದೆ. ನಾಟಕದ ಒಂದು ಸಣ್ಣ ಮಾತು ಅಥವಾ ಪಾತ್ರವು ಒಬ್ಬ ಮನುಷ್ಯನ ಇಡೀ ಜೀವನವನ್ನು ಪರಿವರ್ತಿಸುವ ಶಕ್ತಿ ಹೊಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹೊಸದುರ್ಗದ ನವೀನ್ ಕುಮಾರ್ ಹೆಚ್ ಎಸ್; ರಂಗಭೂಮಿ ಎಂಬುದು ಕೇವಲ ಮನೋರಂಜನೆಯ ವೇದಿಕೆಯಲ್ಲ; ಅದು ಬದುಕಿನ ಭಾವನೆ, ತತ್ವಚಿಂತನೆ ಮತ್ತು ಶಾಂತಿಯ ಸಂಸ್ಕೃತಿಯನ್ನು ಬಿಂಬಿಸುವ ಅದ್ಭುತ ಜಂಗಮ ಪ್ರಕ್ರಿಯೆ.
“ಹೃದಯದ ಭಾಷೆಯಾದ ಸಂಗೀತ, ನಾಟಕ ಹಾಗೂ ಬುದ್ಧಿಯ ಭಾಷೆಯಾದ ತರ್ಕಗಳು ಒಂದಾದಾಗ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ. ಇದಕ್ಕೆ ರಂಗಭೂಮಿಯೇ ಅತ್ಯುತ್ತಮ ಉದಾಹರಣೆ”.
ನಟನಾ ಲೋಕದ ದಿಗ್ಗಜ ಡಾ. ರಾಜಕುಮಾರ್ ಅವರ ಸಂದರ್ಶನವೊಂದನ್ನು ನೆನಪಿಸಿಕೊಂಡರು. ಒಬ್ಬ ನಟನಿಗೆ ತನ್ನ ಕಲೆಯ ಬಗ್ಗೆ ಇರುವ ಅತೃಪ್ತಿ ಮತ್ತು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂಬ ಹಂಬಲವೇ ಅವನನ್ನು ದೊಡ್ಡ ಕಲಾವಿದನನ್ನಾಗಿ ಮಾಡುತ್ತದೆ. ಈ ವಿನಯಶೀಲತೆಯನ್ನು ರಂಗಭೂಮಿ ಕಲಿಸುತ್ತದೆ ಎಂದು ತಿಳಿಸಿದರು.
ರಂಗಭೂಮಿಯು ಮನುಕುಲದಷ್ಟೇ ಹಳೆಯದಾಗಿದ್ದು, ಇಂದಿನ ಅಶಾಂತಿಯ ಸಮಾಜಕ್ಕೆ ಶಾಂತಿಯ ಸಂಸ್ಕೃತಿಯನ್ನು ಬಿತ್ತುವ ಕೆಲಸವನ್ನು ರಂಗಭೂಮಿ ನಿರಂತರವಾಗಿ ಮಾಡುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಕುಮಾರ ರಂಗಪ್ರಯೋಗ ಶಾಲೆಯ ಪ್ರಾಚಾರ್ಯ ರಘು ಪುರಪ್ಪಮನೆ ಮಾತನಾಡಿ; “ನಾವು ಇಂದು ಕಗ್ಗತ್ತಲ ಕಾಲದಲ್ಲಿದ್ದೇವೆ ಮತ್ತು ಅಂತಹ ಕಾಲದ ಬಗ್ಗೆ ಹಾಡಲೇಬೇಕಾಗಿದೆ” ಎಂದು ತಿಳಿಸಿದರು. ಹಿಟ್ಲರ್ನ ಕಾಲದ ಕ್ರೌರ್ಯ, ಮಿಲಿಯನ್ ಗಟ್ಟಲೆ ಜನರ ಸಾವು ಮತ್ತು ಕಾನ್ಸಂಟ್ರೇಷನ್ ಕ್ಯಾಂಪ್ಗಳ ಭೀಕರತೆಯನ್ನು ನೋಡುತ್ತಿದ್ದೇವೆ. ಅಂತಹ ದುರಿತ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ವಿಷಾದಿಸಿದರು.
ಗ್ರೀಕ್ ಕಾಲದಿಂದ ಇಂದಿನ 21ನೇ ಶತಮಾನದವರೆಗೆ ರಂಗಭೂಮಿ ನಿರಂತರವಾಗಿ ಯುದ್ಧವನ್ನು ವಿರೋಧಿಸುತ್ತಾ, ಶಾಂತಿಯನ್ನು ಪ್ರತಿಪಾದಿಸುತ್ತಾ ಬಂದಿದೆ. “ನಮಗೆ ಇಂದು ಕ್ಷಿಪಣಿಗಳಿಗಿಂತ ಹೆಚ್ಚಾಗಿ ಮಾನವೀಯತೆ, ಪ್ರೀತಿ, ಕರುಣೆ ಮತ್ತು ತ್ಯಾಗದ ಅವಶ್ಯಕತೆ ಇದೆ” ಎಂದರು.
ಇದೇ ಸಂದರ್ಭದಲ್ಲಿ ವೈ.ಡಿ. ಬದಾಮಿ ಮತ್ತು ಮಂಜುಳ ಬದಾಮಿ ನಿರ್ದೇಶನ ಹಾಗೂ ಅಭಿನಯದ ‘ಓ ಮಾನಸೇ’ ಎಂಬ ವಿಶಿಷ್ಟ ಏಕವ್ಯಕ್ತಿ ರಂಗಪ್ರಯೋಗವನ್ನು ಪ್ರದರ್ಶಿಸಲಾಯಿತು. ಮನುಷ್ಯನ ಮನಸ್ಸಿನ ಆಳ-ಅಗಲಗಳನ್ನು ವಿಶ್ಲೇಷಿಸುವ ಈ ಪ್ರಯೋಗವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಆರಂಭದಲ್ಲಿ ರಂಗಶಿಕ್ಷಕ ನಾಗರಾಜ, ಶರಣ್ ಹಾಗೂ ರಂಗಶಾಲೆಯ ವಿದ್ಯಾರ್ಥಿಗಳು ರಂಗಗೀತೆಗಳನ್ನು ಹಾಡಿದರು. ರಂಗಶಿಕ್ಷಕಿ ಸಂಗೀತ ಬಿಡೆ ನಿರೂಪಿಸಿದರೆ ರಾಜು ವಂದಿಸಿದರು. ಉಭಯಶಾಲೆಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
