ಭಾಲ್ಕಿ:
ವಚನ ಸಾಹಿತ್ಯ ಕೇವಲ ಧಾರ್ಮಿಕ ಸಾಹಿತ್ಯವಾಗಿರದೆ ವಿಜ್ಞಾನ, ಕಲೆ, ಸಮಾಜ, ವೈದ್ಯಕೀಯ, ತರ್ಕ, ಅರ್ಥಶಾಸ್ತ್ರ ಹೀಗೆ ಎಲ್ಲಾ ಕ್ಷೇತ್ರದ ಜ್ಞಾನವನ್ನು ಒಳಗೊಂಡಿದೆ ಎಂದು ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದ ಜಯಕ್ಕ ಮಧುಕರ ಗಾಂವಕರ ವ್ಯಾಖ್ಯಾನಿಸಿದರು.
ತಾಲೂಕಿನ ತಳವಾಡ(ಕೆ) ಗ್ರಾಮದ ಶ್ರೀದೇವಿ ಶಿವಪ್ರಕಾಶ ಕುಂಬಾರ ಅವರ ಬಸವ ಬೆಳಗು ನಿವಾಸದಲ್ಲಿ ಆಯೋಜಿಸಿದ ಎಂಟನೇ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಸಮಾಜದ ಕನಸನ್ನು ಹೊತ್ತುಕೊಂಡು ಜಗತ್ತಿನಲ್ಲಿಯೇ ಬಸವಾದಿ ಶರಣರು ಜಗತ್ತಿನಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಸಮಾನತೆ ನೀಡಿದ್ದಾರೆ.
ಕುಟುಂಬ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿರುವ ಮಹಿಳೆಯರಿಗೆ ಸಾಮಾಜಿಕ, ಧಾರ್ಮಿಕ ಎಲ್ಲಾ ಕ್ಷೇತ್ರಗಳಲ್ಲಿ ನಿಜಾರ್ಥದಲ್ಲಿ ಸಮಾನತೆಯನ್ನು ಶರಣರು ನೀಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಕಾರಾಮುಂಗೆ ಮಾತನಾಡಿ, ವಚನ ಸಾಹಿತ್ಯದ ಅಧ್ಯಯನ, ಅನುಸಂಧಾನ, ಆಚರಣೆಗೆ ತರುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಪ್ರಜ್ವಲ್ ಕುಂಬಾರ ಬಸವ ಗುರುಪೂಜೆ ನಡೆಸಿಕೊಟ್ಟರು. ಶಿವಪ್ರಕಾಶ ಕುಂಬಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ಕುಂಬಾರ ಶರಣು ಸಮರ್ಪಿಸಿದರು.

