ಬೆಂಗಳೂರು
ತನ್ನ ಹಾಡಿನಲ್ಲಿ ಲಿಂಗಾಯತ ಸಮುದಾಯದ ಕುರಿತು ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಆರೋಪಿಸಿ ರ‍್ಯಾಪರ್ ಕರಣ್ ಶೆಟ್ಟಿ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಬೆಂಗಳೂರು ಘಟಕದ ಪದಾಧಿಕಾರಿಗಳು ಬುಧವಾರ ದೂರು ದಾಖಲಿಸಿದ್ದಾರೆ.
ಸದಾಶಿವನಗರದ ಠಾಣೆಯಲ್ಲಿ ಶೇಷಾದ್ರಿಪುರ ಉಪವಿಭಾಗದ ಎಸಿಪಿ ಪ್ರಕಾಶ್ ರೆಡ್ಡಿ ಅವರನ್ನು ಭೇಟಿಯಾಗಿ ವೀರಶೈವ ಮಹಾಸಭಾದ ನಾಯಕರು ದೂರು ಸಲ್ಲಿಸಿದರು.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಿರುವ ರ‍್ಯಾಪ್ ಹಾಡಿನಲ್ಲಿ ಲಿಂಗಾಯತ ಸಮುದಾಯ ಕುರಿತು ಅವಹೇಳನಕಾರಿ ಪದ ಬಳಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕರಣ್ ಹಂಚಿಕೊಂಡಿದ್ದಾರೆ. ಇದರಿಂದ ಸಮುದಾಯಕ್ಕೆ ಮುಜುಗರ ಉಂಟಾಗಿದೆ. ಈ ಕೂಡಲೇ ಕರಣ್ ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ.
ಅಲ್ಲದೆ ಯೂಟ್ಯೂಬ್‌ನಲ್ಲಿ ಆ ಹಾಡನ್ನು ನಿರ್ಬಂಧಿಸಬೇಕು ಎಂದು ವೀರಶೈವ ಮಹಾಸಭಾ ನಾಯಕರು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವೀರಶೈವ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ನವೀನಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ಶಿವಕುಮಾರ, ಉಪಾಧ್ಯಕ್ಷರಾದ ಪಿ.ವಿಜಯಕುಮಾರ, ಸ್ವರ್ಣಗೌರಿ ಎಚ್.ಆರ್, ಗುರುಮೂರ್ತಿ, ಮಲ್ಲಿಕಾರ್ಜುನ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಉತ್ತಮವಾದ ಕೆಲಸ ಧನ್ಯವಾದಗಳು