ಲಿಂಗಾಯತರು ಕೇಸರಿಕರಣಗೊಳ್ಳಲು ರಾಷ್ಟ್ರೀಯ ಬಸವದಳ ಬಿಡುವುದಿಲ್ಲ: ಎನ್.ಚಂದ್ರಮೌಳಿ

ಎಂ. ಎ. ಅರುಣ್
ಎಂ. ಎ. ಅರುಣ್

ಬೆಂಗಳೂರು

ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಅಧಿವೇಶನದಲ್ಲಿ ರಾಷ್ಟ್ರೀಯ ಬಸವದಳ ತೆಗೆದುಕೊಂಡ ಮಹತ್ವದ ನಿರ್ಣಯಗಳು ಎಲ್ಲರ ಗಮನ ಸೆಳೆದಿವೆ.

ಸಂಘಟನೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಚಂದ್ರಮೌಳಿ ಬಸವ ಮೀಡಿಯಾದ ಎಂ ಎ ಅರುಣ್ ಅವರ ಜೊತೆ ಮಾತನಾಡುತ್ತ ಈ ನಿರ್ಣಯಗಳ ಮಹತ್ವವನ್ನು ವಿವರಿಸಿದರು.

ಆರು ದಶಕಗಳ ಸಂಘಟನೆ ರಾಷ್ಟ್ರೀಯ ಬಸವದಳ ಬದಲಾಗುತ್ತಿದೆ. ಇನ್ನು ಮುಂದೆ ಒಂದು ದಿನವೂ ನಾವು ಸುಮ್ಮನೆ ಕೂರುವುದಿಲ್ಲ, ಮತ್ತೆ ಆಕ್ರಮಣಕಾರಿಯಾಗಿ ಲಿಂಗಾಯತ ಧರ್ಮಕ್ಕೆ ಹೋರಾಡಲಿದ್ದೇವೆ. ಇದು ಅವರ ಮಾತಿನ ಒಟ್ಟು ಸಂದೇಶ.

ಆರು ದಶಕಗಳ ಸಂಘಟನೆ ರಾಷ್ಟ್ರೀಯ ಬಸವದಳ ಬದಲಾಗುತ್ತಿದೆ. ಇನ್ನು ಮುಂದೆ ಒಂದು ದಿನವೂ ನಾವು ಸುಮ್ಮನೆ ಕೂರುವುದಿಲ್ಲ,

ಇದು ಸಂದರ್ಶನದ ಭಾಗ 1. ನಾಳೆ ಸಂದರ್ಶನದ ಕೊನೆಯ ಭಾಗ ಪ್ರಕಟವಾಗಲಿದೆ.

1) ಬಳ್ಳಾರಿಯಲ್ಲಿ ನಡೆದ ಅಧಿವೇಶನದ ಮಹತ್ವ, ಹಿನ್ನೆಲೆಯೇನು?

ರಾಷ್ಟ್ರೀಯ ಬಸವದಳದಲ್ಲಿ ದೊಡ್ಡ ಬದಲಾವಣೆಗಳು ಆಗುತ್ತಿದೆ, ನಾವು ಮತ್ತೆ ಆಕ್ರಮಣಕಾರಿಯಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ. ಲಿಂಗಾಯತ ಧರ್ಮ ಪ್ರಚಾರ, ಪ್ರತ್ಯೇಕ ಧರ್ಮದ ಹೋರಾಟಕ್ಕೆ ಶಕ್ತಿ ತುಂಬುತ್ತೇವೆ.

ಜನವರಿ 15ರಂದು ಶರಣ ಮೇಳದಲ್ಲಿ ಸಂಘಟನೆ ಬಲಿಷ್ಠಗೊಳಿಸಲು ತಿಂಗಳಿಗೊಂದು ಜಿಲ್ಲೆಯಲ್ಲಿ ಅಧಿವೇಶನ ನಡೆಸಲು ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ನಿರ್ಧಾರ ತೆಗೆದುಕೊಂಡೆವು. ಅದಾದ ಕೇವಲ ಹನ್ನೊಂದು ದಿನಗಳಲ್ಲಿ, ಜನವರಿ 26, ಬಳ್ಳಾರಿಯಲ್ಲಿ ಮೊದಲನೇ ಅಧಿವೇಶನ ನಡೆಸಿದ್ದೇವೆ. ಮುಂದಿನ ತಿಂಗಳು ಚಿತ್ರದುರ್ಗದಲ್ಲಿ ಇದೇ ತರಹದ ಅಧಿವೇಶನ ನಡೆಯಲಿದೆ.

ಇಷ್ಟು ಬೇಗ ಬೇಗ ಈ ಅಧಿವೇಶನಗಳನ್ನು ಹಮ್ಮಿಕೊಳ್ಳುತ್ತಿರುವುದು ಈ ವಿಷಯವನ್ನು ರಾಷ್ಟ್ರೀಯ ಬಸವದಳ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂದು ತೋರಿಸುತ್ತದೆ.

ಇದು ಧರ್ಮ ಪ್ರಚಾರ ಮಾಡಲು ಒಳ್ಳೆಯ ಸಮಯ ಅಂತ ಕಾಲಜ್ಞಾನವೂ ಹೇಳುತ್ತದೆ.

ನಾವು ಮತ್ತೆ ಆಕ್ರಮಣಕಾರಿಯಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ.

2) ರಾಷ್ಟ್ರೀಯ ಬಸವದಳದಲ್ಲಿ ಈ ಬದಲಾವಣೆ ಬರಲು ಕಾರಣವೇನು?

ಇದು ಬಹಳ ಕಷ್ಟದ ಸಮಯ. ಮನುಸ್ಮೃತಿಯ, ಹಿಂದುತ್ವದ, ಅಸಮಾನತೆಯ ಸಂವಿಧಾನ ತರುವ ಪ್ರಯತ್ನಗಳಾಗುತ್ತಿವೆ. ಕುಂಭಮೇಳದಂತಹ ಕಾರ್ಯಕ್ರಮಗಳನ್ನು ಬಳಸಿಕೊಂಡು ಲಿಂಗಾಯತರನ್ನು ವೈದಿಕತೆಯತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಕೆಲವು ಲಿಂಗಾಯತ ಮಠಾಧೀಶರೂ ಕೈ ಜೋಡಿಸಿದ್ದಾರೆ.

ಇದು ಸುಮ್ಮನೆ ಕೂರುವ ಸಮಯ ಸಮಯ ಅಲ್ಲ ಎಂದು ಎಲ್ಲರಿಗೂ ಅರಿವಾಗಬೇಕು. ನಮ್ಮ ಆರು ದಶಕಗಳ ಸಂಘಟನೆ ಇನ್ನು ಮುಂದೆ ಒಂದು ದಿನವೂ ಸುಮ್ಮನೆ ಕೂರದೆ ಗಂಗಾ ಮಾತಾಜಿಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತದೆ.

ಲಿಂಗಾಯತರನ್ನು, ಲಿಂಗಾಯತ ಮಠಗಳನ್ನು ಕೇಸರಿಕರಣಗೊಳಿಸುವುದಕ್ಕೆ ಬಿಡಬಾರದು ಅಂತ ಅಚಲವಾದ ನಿರ್ಧಾರ ತೆಗೆದುಕೊಂಡಿದ್ದೇವೆ. ಇದು ಬಹಳ ದೊಡ್ಡ ಕಾರ್ಯ, ಎಲ್ಲ ಸಂಘಟನೆಗಳು ಕೂಡಿ ಒಗ್ಗಟ್ಟಾಗಿ ಮಾಡಬೇಕಾಗಿರುವ ಕೆಲಸ.

ಇದು ಬಹಳ ಕಷ್ಟದ ಸಮಯ. ಮನುಸ್ಮೃತಿಯ, ಹಿಂದುತ್ವದ, ಅಸಮಾನತೆಯ ಸಂವಿಧಾನ ತರುವ ಪ್ರಯತ್ನಗಳಾಗುತ್ತಿವೆ.

3) ನೀವು ಸದ್ಯಕ್ಕೆ ಮಾಡುತ್ತಿರುವ ಮುಖ್ಯ ಕೆಲಸಗಳೇನು?

ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರ ನಿರ್ಮಾಣವಾಗುತ್ತಿದೆ. ಸರಿಯಾಗಿ ತರಭೇತಿ ಪಡೆದಿರುವ ಯುವ ಕಾರ್ಯಕರ್ತರನ್ನ ಇಮ್ಮಡಿ, ಮುಮ್ಮಡಿ ಮಾಡುವುದು ನಾವು ಮಾಡುತ್ತಿರುವ ಮುಖ್ಯ ಕೆಲಸ.

ಈ ಶರಣ ಮೇಳದಿಂದ ದೊಡ್ಡ ಬದಲಾವಣೆ ಆಗುತ್ತಿದೆ. ಯುವ ಶರಣರು ಉತ್ಸಾಹದಿಂದ ಮುಂದೆ ಬಂದು ಸಮಯ ಕೊಡುತ್ತಿದ್ದಾರೆ. ಅವರಿಗೆ ಕಾರ್ಯಾಗಾರ ಮಾಡಿ, ತರಭೇತಿ ಕೊಡುತ್ತಾ ಇದ್ದೀವಿ. ವಾರದಲ್ಲಿ ಎರಡು ಮೂರು ಗೂಗಲ್ ಮೀಟ್ ಆಗುತ್ತಿವೆ. ನಂತರ ಕಾರ್ಯಕರ್ತರನ್ನ ಭೇಟಿ ಮಾಡಿ ಜಿಲ್ಲಾ ಸಮಾವೇಶ ಮಾಡುತ್ತಿದ್ದೇವೆ.

ಯುವ ಕಾರ್ಯಕರ್ತರನ್ನ ಇಮ್ಮಡಿ, ಮುಮ್ಮಡಿ ಮಾಡುವುದು ನಾವು ಮಾಡುತ್ತಿರುವ ಮುಖ್ಯ ಕೆಲಸ.

4) ಕಾರ್ಯಕರ್ತರು ಮಾಡುತ್ತಿರೋ ಮುಖ್ಯ ಕೆಲಸವೇನು?

ಕನಿಷ್ಠ ಮೂರು, ನಾಲ್ಕು ಕಾರ್ಯಕರ್ತರ ತಂಡ ಹಳ್ಳಿ ಹಳ್ಳಿಗಳಲ್ಲಿ ಧರ್ಮ ಪ್ರಚಾರ ಮಾಡಲು ಶುರು ಮಾಡಿದೆ. ನಮ್ಮದು ಲಿಂಗಾಯತ ಧರ್ಮ, ಅಪ್ಪ ಬಸವಣ್ಣ ನಮ್ಮ ಧರ್ಮ ಗುರು, ನಮ್ಮ ಧರ್ಮದ ಆಚರಣೆಗಳು ಇಷ್ಟಲಿಂಗ ಪೂಜೆ, ಶೂನ್ಯ ಸಂಪಾದನೆ, ಷಟ್ಸ್ಥಲರೋಹಣ… ಹೀಗೆ ಜನರಲ್ಲಿ ಅರಿವು ಮೂಡಿಸಬೇಕು.

ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲ ಹಳ್ಳಿಗಳಿಗೂ ನಮ್ಮ ಕಾರ್ಯಕರ್ತರು ಹೋಗುತ್ತಾ ಇದ್ದಾರೆ. ವಾರದಲ್ಲಿ ಕನಿಷ್ಠ ಎರಡು ಮೂರು ಹಳ್ಳಿಗಳಿಗೆ ಹೋಗಿ ಬಸವ ತತ್ವದ ಪ್ರಚಾರ ಮಾಡುತ್ತಿದ್ದೇವೆ.

ಇದೇ ರೀತಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡುತ್ತಿದ್ದೇವೆ. ಒಂದು ಸುತ್ತು ಮುಗಿದ ಮೇಲೆ, ಇನ್ನೊಂದು ಸುತ್ತಿನ ಕಾರ್ಯಕ್ರಮ ಹಾಕಿ ಕೊಳ್ಳುತ್ತೇವೆ.

ನಾವು ಗ್ರೌಂಡ್ ಅಲ್ಲಿ ಕೆಲಸ ಮಾಡುವವರು ಬರೀ ಪೇಪರ್ ಹೇಳಿಕೆ ಕೊಡುವವರಲ್ಲ.

ಕನಿಷ್ಠ ಮೂರು, ನಾಲ್ಕು ಕಾರ್ಯಕರ್ತರ ತಂಡ ಹಳ್ಳಿ ಹಳ್ಳಿಗಳಲ್ಲಿ ಧರ್ಮ ಪ್ರಚಾರ ಮಾಡಲು ಶುರು ಮಾಡಿದೆ.

5) ಬೇರೆ ಏನಾದರೂ ಆಲೋಚನೆಗಳಿವೆಯೇ?

ದೊಡ್ಡ ಬದಲಾವಣೆ ತರುವುದಕ್ಕಿಂತಲೂ ಸಣ್ಣ ಸಣ್ಣ ಗುರಿಗಳನ್ನು ಇಟ್ಟುಕೊಂಡು ಅದು ಸಂಪೂರ್ಣವಾಗಿ ಸಾಧಿಸುವಂತೆ ಕೆಲಸ ಮಾಡುತ್ತೇವೆ. ಉದಾಹರಣೆಗೆ ಜನಗಣತಿಯಲ್ಲಿ ನಮ್ಮ ಧರ್ಮ ಲಿಂಗಾಯತ ಅಂತ ಬರೆಸಲು ಜನರಲ್ಲಿ ಜಾಗೃತಿ ಮೂಡಿಸಬೇಕು.

ಇದಕ್ಕಾಗಿ ಕರ ಪತ್ರಗಳನ್ನು ಆಗಲೇ ಪ್ರಿಂಟ್ ಮಾಡಿಸಿದ್ದೇವೆ. ಜನ ಗಣತಿ ಫಾರಂಗಳು ಯಾವ ರೀತಿ ಇರತ್ತೆ, ಅದನ್ನು ಹೇಗೆ ತುಂಬಿಸಬೇಕು ಅಂತ ಎಲ್ಲರಿಗೂ ತಿಳಿಸಬೇಕು. ಅದೇ ದೊಡ್ಡ ಕೆಲಸ.

ಜನಗಣತಿಯಲ್ಲಿ ನಮ್ಮ ಧರ್ಮ ಲಿಂಗಾಯತ ಅಂತ ಬರೆಸಲು ಜನರಲ್ಲಿ ಜಾಗೃತಿ ಮೂಡಿಸಬೇಕು.

ಮುಂದಿನ ಭಾಗ: ವೈದಿಕತೆ ಅಪ್ಪಿಕೊಳ್ಳುವ ಲಿಂಗಾಯತ ಸ್ವಾಮೀಜಿಗಳು, ಧರ್ಮ ಜಾಗೃತಿ ಅಭಿಯಾನ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳದಲ್ಲಿ ಏರಿಳಿತ

Share This Article
2 Comments
  • ಲಿಂಗಾಯತರ ಬಲಿಷ್ಠ ಸಂಘಟನೆ ಎಂದರೆ ಬಸವ ದಳ. ಅವರು ಬದಲಾದರೆ ಎಲ್ಲಾ ಬದಲಾಗತ್ತೆ. ಒಳ್ಳೆಯದಾಗಲಿ

  • ಪೂಜ್ಯ ಶ್ರೀ ಬಸವಗೀತಾ ಮಾತಾಜಿ ಗುರುಬಸವ ಮಠ ನಾಗನೂರ says:

    ನಮ್ಮ ರಾಷ್ಟ್ರೀಯ ಬಸವ ದಳದ ಕಾರ್ಯ ಅಂದ್ರೆ ಹಾಗೆ
    ಹಿಡಿದ ಕಾರ್ಯ ಉಸಿರು ಬಿಡದಂಗೆ ಮಾಡುತ್ತಾರೆ.
    ಎಲ್ಲವೂ ಅಪ್ಪಾಜಿ ಮಾತಾಜಿಯವರ ಗಂಗಾ ಮಾತಾಜಿಯರ ಮಾರ್ಗದರ್ಶನ

Leave a Reply

Your email address will not be published. Required fields are marked *