ರಾಷ್ಟ್ರೀಯ ಬಸವದಳದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಏನ್ ಚಂದ್ರಮೌಳಿ ಅವರ ಸಂದರ್ಶನದ ಎರಡನೇ ಭಾಗ. ಶನಿವಾರ ಮೊದಲನೇ ಭಾಗ ಪ್ರಕಟವಾಗಿತ್ತು.
6) ಬಳ್ಳಾರಿಯಲ್ಲಿ ವಚನಾನಂದ ಶ್ರೀಗಳ ವಿರುದ್ಧ ಒಂದು ನಿರ್ಣಯ ತೆಗೆದುಕೊಂಡಿರಿ…
ಬಳ್ಳಾರಿ ಅಧಿವೇಶನದಲ್ಲಿ ವೈದಿಕ ಆಚರಣೆಯಲ್ಲಿ ತೊಡಗಿರುವ ವಚನಾನಂದ ಸ್ವಾಮೀಜಿಗಳ ನಿಲುವನ್ನು ಖಂಡಿಸಲು ನಿರ್ಣಯ ತೆಗೆದುಕೊಂಡೆವು. ಲಿಂಗ ಕಟ್ಟಿರುವ ಸ್ವಾಮಿಗಳು ಕುಂಭಮೇಳಕ್ಕೆ ಹೋಗಿ ನದಿಯಲ್ಲಿ ಮುಳುಗಿದರೆ, ಅವರು ಯಾರೇ ಆಗಿರಲಿ ತೀವ್ರವಾಗಿ ವಿರೋಧಿಸಿ, ಖಂಡಿಸುತ್ತೇವೆ.
ಲಿಂಗಧಾರಣೆಯಾದ ಮೇಲೆ ಮೇಲೆ ಅನ್ಯದೈವಕ್ಕೆ ಕೈ ಮುಗಿಯಬಾರದು ಅಂತ ಸಾವಿರಾರು ವಚನಗಳು ಹೇಳುತ್ತವೆ. ಲಿಂಗಾಯತ ಪರಂಪರೆಯಲ್ಲಿ ಇರುವ ಅವರಿಗೆ ಶರಣರ ಆಶಯಗಳು ಏನು ಎಂದು ಗೊತ್ತಿಲ್ಲವೇ.
ಆ ಕಡೆ ಅವರಿಗೆ ಅಷ್ಟು ಪ್ರೀತಿಯಿದ್ರೆ, ಎದೆ ಮೇಲಿಂದ ಲಿಂಗ ತೆಗೆದು, ಲಿಂಗಾಯತ ಅಂತ ಹೇಳಿಕೊಳ್ಳೋದು ನಿಲ್ಲಿಸಲಿ, ನಾವು ವೈದಿಕರು ಅಂತ ಹೇಳಿಕೊಳ್ಳಲಿ.
7) ಈ ಸಮಸ್ಯೆಯನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲು ಕಾರಣ…
ಸಾಮಾನ್ಯ ಜನ ವೈದಿಕತೆ ತೋರಿದರೆ ಅವರಿಗೆ ಅರಿವಿಲ್ಲ ಅಂತ ಅಂದುಕೊಳ್ಳುತ್ತೇವೆ. ಆದರೆ ಎಲ್ಲವೂ ಗೊತ್ತಿರುವ ಒಬ್ಬ ವಿರಕ್ತ ಪರಂಪರೆಯ ಸ್ವಾಮೀಜಿ ಅದೇ ತಪ್ಪು ಮಾಡಿದರೆ ಅದು ಅಕ್ಷಮ್ಯ ಅಪರಾಧ.
ಜನರಲ್ಲಿ ಈಗ ಸ್ವಲ್ಪ ಜಾಗೃತಿ ಮೂಡುತ್ತ ಇದೆ. ಈ ಸ್ವಾಮೀಜಿಗಳು ವೈದಿಕರ ಬಾಲ ಹಿಡಿದರೆ ಜನರನ್ನು ತಪ್ಪು ದಾರಿಗೆ ಎಳೆದ ಹಾಗೆ ಆಗುತ್ತದೆ. ಇಂತಹ ಮಠಾಧೀಶರ ಆಚರಣೆಗಳನ್ನು ಪ್ರಶ್ನೆ ಮಾಡ್ತೀವಿ. ಅವರು ಇದನ್ನು ಮುಂದುವರೆಸಿದರೆ ಅವರಿಗೆ ದಿಕ್ಕಾರವನ್ನೂ ಕೂಗುತ್ತೇವೆ.
8) ಧಾರವಾಡದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೊಟ ರಾಜ್ಯದಲ್ಲಿ ಧರ್ಮ ಜಾಗೃತಿ ಅಭಿಯಾನ ನಡೆಸಲು ನಿರ್ಣಯಿಸಿತು. ಇದರ ಬಗ್ಗೆ ನಿಮ್ಮ ನಿಲುವು…
ಮಲೆಯ ಮಹದೇಶ್ವರ ಬೆಟ್ಟದಿಂದ ಬೀದರ್ ತನಕ ಎಲ್ಲೆಲ್ಲಿ ಧರ್ಮ ಜಾಗೃತಿ ಅಭಿಯಾನ ನಡೆಯಲಿದೆಯೋ ಅಲ್ಲೆಲ್ಲಾ ರಾಷ್ಟ್ರೀಯ ಬಸವದಳ ಸಂಪೂರ್ಣವಾಗಿ ಕೈ ಜೋಡಿಸಲಿದೆ. ಎಲ್ಲಾ ಕಡೆ ನಮ್ಮ ಕಾರ್ಯಕರ್ತರು ಅಭಿಯಾನ ಬೆಂಬಲಿಸುತ್ತಾರೆ.
9) ಇಂತಹ ಮಹತ್ವದ ಸಭೆಯಲ್ಲಿ ಸಂಘಟನೆಯಾಗಿ ರಾಷ್ಟ್ರೀಯ ಬಸವದಳ ಕಾಣಿಸಿಕೊಳ್ಳಲಿಲ್ಲ ಅಂತ ಒಂದು ಮಾತು ಕೇಳಿ ಬಂತು…
ನಾವು ಜಾಗತಿಕ ಲಿಂಗಾಯತ ಮಹಾಸಭಾ ಬೇರೆ ಬೇರೆಯಲ್ಲ. ನಾವು ಒಂದೇ ನಾಣ್ಯದ ಎರಡು ಮುಖಗಳು. ರಾಷ್ಟ್ರೀಯ ಬಸವದಳ ಧಾರ್ಮಿಕ ಸಂಘಟನೆಯಾದರೆ, ಜಾಗತಿಕ ಲಿಂಗಾಯತ ಮಹಾಸಭಾ ಸಾಮಾಜಿಕ, ರಾಜಕೀಯ ವಲಯಗಳಲ್ಲಿ ಕೆಲಸ ಮಾಡುತ್ತದೆ.
ಮಾತಾಜಿಯವರ ಬೆಂಬಲದಿಂದ ಜಾಗತಿಕ ಲಿಂಗಾಯತ ಮಹಾಸಭಾ ಶುರುವಾಯಿತು. ಅದು ಅಧಿಕೃತವಾಗಿ ಶುರುವಾಗುವ ಸಮಯದಲ್ಲಿ ಶರಣ ಮೇಳದಲ್ಲಿಯೇ ಮೊದಲ ಘೋಷಣೆಯಾಗಿತ್ತು.
ಜಾಮದಾರ್ ಅವರು ಸೇರಿದಂತೆ ಅಲ್ಲಿರುವ ಎಲ್ಲರೂ ನಮ್ಮ ಆತ್ಮೀಯರು. ನಮ್ಮವರೇ ಆದ ಪ್ರೊ ವೀರಭದ್ರಯ್ಯ ಅಲ್ಲಿಯೂ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ಧರ್ಮ ಜಾಗೃತಿ ಅಭಿಯಾನದಲ್ಲಿ ನಾವು ಜಾಗತಿಕ ಲಿಂಗಾಯತ ಮಹಾಸಭಾ ಜೊತೆಯೇ ಹೆಜ್ಜೆಯಿಡುತ್ತೇವೆ.
10) ಮಾತಾಜಿಯ ನಂತರ ಸಂಘಟನೆ ವೇಗ ಕಳೆದುಕೊಂಡಿತು ಅಂತ ಅಭಿಪ್ರಾಯವಿದೆಯಲ್ಲ
ನಮ್ಮ ಖಾಸಗಿ ಬದುಕಿನಲ್ಲಿ, ನಮ್ಮ ವೃತ್ತಿಯಲ್ಲಿ, ನಮ್ಮ ಕುಟುಂಬದಲ್ಲಿ ಏರಿಳಿತ ಸಾಮಾನ್ಯ.
ಲಿಂಗಾಯತ ಧರ್ಮದಲ್ಲಿ ಮೊದಲಿನಿಂದಲೂ ವಿಪರೀತವಾದ ಏರಿಳಿತವಿರುವುದು ಒಂದು ದುರಂತ. 12ನೇ ಶತಮಾನದ ನಂತರ ಮೂರು ಶತಮಾನಗಳು ಧರ್ಮ ಕುಂಠಿತವಾಗಿತ್ತು. ನಂತರ ಎಡೆಯೂರು ಸಿದ್ಧಲಿಂಗೇಶ್ವರರು ಬಂದು ಧರ್ಮವನ್ನು ಪುನಶ್ಚೇತನಗೊಳಿಸಿದರು. ನಂತರ ಹಳಕಟ್ಟಿ ಪೀಳಿಗೆ ಬರುವ ತನಕ ಗ್ಯಾಪ್ ಆಯಿತು. ಆಮೇಲೆ ಅಪ್ಪಾಜಿ, ಮಾತಾಜಿಯವರು ಬಂದು ಮತ್ತೆ ಕೆಲಸ ಶುರುಮಾಡಿದರು.
ನಾವು ಇಂದಿಗೂ ಮಾತಾಜಿ ಹಾಕಿಕೊಟ್ಟ ಚೌಕಟ್ಟಿನಲ್ಲಿಯೇ ನಡೆಯುತ್ತಿದೇವೆ. ಲಿಂಗಾಯತರಲ್ಲಿ ಹೆಚ್ಚಿನ ಏಕದೇವೋಪಾಸಕರು ಇರುವುದು ರಾಷ್ಟ್ರೀಯ ಬಸವದಳದಲ್ಲೇ ಎನ್ನುವುದು ಹೆಮ್ಮೆಯ ವಿಷಯ. ನಮಗೆ ಎದೆಯ ಮೇಲೆ ಇಷ್ಟಲಿಂಗ ಬಿಟ್ಟರೆ ಬೇರೆ ಯಾವ ದೇವರೂ ಇಲ್ಲ.
ಮನೆಯಲ್ಲಿ ನಾವು ‘ಜಗಲಿ’ ಪದ ಬಳಸುವುದಿಲ್ಲ. ಬೇರೆ ಬೇರೆ ದೇವತೆಗಳನ್ನು ಇಡುವ ಸ್ಥಳವೇ ಜಗಲಿ. ಅಪ್ಪ ಬಸವಣ್ಣನವರನ್ನು ಕೂರಿಸುವುದು ‘ಪರುಷ ಕಟ್ಟೆ’ ಅಂತ ಮಾತಾಜಿಯವರು ಹೇಳಿಕೊಟ್ರು. ಧರ್ಮ ಗುರುವಾಗಿ ನಾವು ಬಸವಣ್ಣನವರನ್ನ ಪೂಜೆ ಮಾಡ್ತೀವಿ.
ತಡವಾದರು ಉತ್ತಮ ಪ್ರತಿಕ್ರಿಯೆ ಕೊಟ್ಟ ರಾಷ್ಟ್ರೀಯ ಬಸವ
ದಳ ಸಂಘಟನೆ ಕ್ರಿಯಾ ರೂಪದಲ್ಲಿ ಲಿಂಗಾಯತ ಧರ್ಮವನ್ನು ಕೇಸರಿ ಕಾರಣದಿಂದ ಮುಕ್ತಗೊಳಿಸುವ
ಹೋರಾಟಕ್ಕೆ ಸನ್ನದರಾಗಲಿ. ರಾಬದ ಕೆಲ ಜಿಲ್ಲಾ ಅಧ್ಯಕ್ಷರು
ಲಿಂಗಧಾರಿಋಳು ಆಗಿಲ್ಲ ಕುಂಕುಮ ಧಾರೆಗಳಾಗಿದ್ದಾರೆ
ಇದು ನಿನ್ನೆ ಮೊನ್ನೆಯ ವಿಷಯವಲ್ಲ ಹಲವು ವರ್ಷಗಳ
ವಿಷಯ ಅದನ್ನು ಮುಕ್ತ ಮಾಡಿ. ಹೊಸ ಬದಲಾವಣೆಗೆ
ಸ್ಪಂದಿಸುವ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು 🙏