ಬೆಳಗಾವಿ
ಇಂದು ಅನೇಕ ಬಸವ ಭಕ್ತರು ವಚನ ದರ್ಶನ ಕೃತಿಯನ್ನು ವಿರೋಧಿಸಿ ಮಾತನಾಡುವುದು, ಬರೆಯುವುದು ಮಾಡುತ್ತಿದ್ದಾರೆ. ಈ ವಚನ ದರ್ಶನ ಕೃತಿಗಿಂತಲೂ ಲಿಂಗಾಯತ ಸಂಸ್ಕೃತಿಯನ್ನು ಅವಹೇಳನಾತ್ಮಕ ದೃಷ್ಟಿಯಿಂದ ಕಂಡ ಮತ್ತೊಂದು ಕೃತಿ ರವಿ ಹಂಜ್ ಬರೆದ ‘ಬಸವ ರಾಜಕಾರಣ’.
ಪ್ರಾಯಶಃ ಲಿಂಗಾಯತರು ಯಾರೂ ಈ ಕೃತಿಯನ್ನು ಓದಿದಂತೆ ಕಾಣುವುದಿಲ್ಲ. ಈ ಕೃತಿಯನ್ನು ಮೊದಲು ವಿರೋಧಿಸಬೇಕು. ಇಡೀ ಶರಣ ಸಂಸ್ಕೃತಿಯನ್ನು ಅಪಸವ್ಯಗೊಳಿಸುವ ವ್ಯವಸ್ಥಿತ ಸಂಚು ಈ ಕೃತಿಯಲ್ಲಿದೆ.
ಬೇರೆ ದೇಶದಲ್ಲಿ ಕುಳಿತು ವಿಶಭಟ್ ಎಂಬ ಲಿಂಗಾಯತ ವಿರೋಧಿ ಪತ್ರಕರ್ತ ಸಂಪಾದಿಸುತ್ತಿರುವ ವಿಶ್ವವಾಣಿಯಲ್ಲಿ ಲೇಖನ ಬರೆಯುತ್ತಿರುವ ರವಿ ಹಂಜ್ ಲಿಂಗಾಯತ ವಿರೋಧಿ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದಾರೆ. ಲಿಂಗಾಯತರು ಬಸವಾಭಿಮಾನಿಗಳು ಮೊದಲು ಈ ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕುವಂತೆ ಒತ್ತಾಯಿಸಬೇಕಾಗಿದೆ. ಬಸವ ರಾಜಕಾರಣ ಕೃತಿಯೊಂದಿಗೆ ತುಲನೆ ಮಾಡಿ ನೋಡಿದರೆ ‘ವಚನ ದರ್ಶನ’ ಕೃತಿ ಏನೇನೂ ಅಲ್ಲ.

‘ ಬಸವರಾಜಕಾರಣ’ ಕೃತಿಯು ರವಿ ಹಂಜ್ ಅವರ ವೀರಶೈವ ಹಾಗೂ ಲಿಂಗಾಯಿತ ವಿಚಾರಗಳ ಕುರಿತ ಲೇಖನ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಶೈಲಜ ಇಂ. ಹಿರೇಮಠ ಅವರು, ವೀರಶೈವವು ಲಿಂಗಾಯತ ಧರ್ಮವಾಗಿ ಗುರುತಿಸಲ್ಪಟ್ಟು ಓಟು ಬ್ಯಾಂಕಿನ ಪ್ರಮುಖ ರಾಜಕೀಯ ಅಸ್ತ್ರವಾಗಿ ಪರಿವರ್ತಿತವಾದ ಚರಿತ್ರೆಯ ಚಲನೆಯನ್ನು, ಕಣ್ಣೆದುರಿಗೆ ಕಂಡಿದ್ದೇವೆ. ಲಿಂಗಾಯಿತ ಧರ್ಮ ಹಿಂದೂ ಧರ್ಮವೇ?' ಎನ್ನುವ ಚರ್ಚೆಯನ್ನು ಹುಟ್ಟುಹಾಕಿ,
ಲಿಂಗಾಯತ ಧರ್ಮ ಹಿಂದೂ ಧರ್ಮವಲ್ಲ’ ಎನ್ನುವ ಸಂಶೋಧನಾ ಅಧ್ಯಯನವು ರಾಜಕೀಯ ವಲಯದಲ್ಲಿ ಭಾರಿ ಸಂಚಲನವನ್ನುಂಟು ಮಾಡಿ ಗೊಂದಲವನ್ನು ಸೃಷ್ಟಿಸಿತು.
ದಾರ್ಶನಿಕರನ್ನು ಜಾತಿಯ ನಾಯಕರನ್ನಾಗಿ ಕಟ್ಟಿಕೊಳ್ಳುವ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಜಾತಿಯನ್ನು ಕಳೆದುಕೊಂಡವರನ್ನು, ಧರ್ಮವನ್ನು ವಿರೋಧಿಸಿದವರನ್ನು ಪುನಃ ಜಾತಿಗೆ, ಧರ್ಮಕ್ಕೆ ಬಗ್ಗಿಸಿ ಅವರನ್ನು ಜಾತಿ ನಾಯಕರನ್ನಾಗಿ, ಧಾರ್ಮಿಕ ನಾಯಕರನ್ನಾಗಿ ನಿರೂಪಿಸಿದ್ದರ ಫಲವೇ, ನಾಯಕರ ಹೆಸರಿನಲ್ಲಿ ಜಾತಿ, ಧರ್ಮ, ಸಂಘಟನೆಗಳು, ಮಠಗಳು ಹುಟ್ಟಿಕೊಂಡು ಸಾಮಾಜಿಕ ವಿಕಾಸಕ್ಕೆ ತಡೆಗೋಡೆಯಾಗಿ ನಿಂತಿವೆ.
ಅದನ್ನು ನಿರಚನಗೊಳಿಸುವ ಅಗತ್ಯವಿದೆ: ಈ ದಿಸೆಯಲ್ಲಿ ಯಾವುದೇ ಅಧ್ಯಯನಗಳು ಕನ್ನಡದಲ್ಲಿ ನಡೆದಿಲ್ಲ. ಇಂತಹ ಬಹುದೊಡ್ಡ ಸಾಹಸವನ್ನು ರವಿ ಹಂಜ್ ಅವರು ಮಾಡಿದ್ದಾರೆ. ಅವರಿಗಿರುವ ಎರಡು ಬಹುದೊಡ್ಡ ಕ್ವಾಲಿಟಿಗಳು ಇದುವರೆಗಿನ ಅಧ್ಯಯನ ಮಿತಿಯನ್ನು ದಾಟಲು ಸಹಾಯಕ್ಕೆ ಒದಗಿ ಬಂದಿದೆ; ಅವುಗಳೆಂದರೆ: 1. ಮುಖ್ಯವಾಗಿ ಅವರಿಗೆ ಮಾನವ ವಿಕಾಸ ಹಾಗೂ, ಮಾನವ ವಲಸೆ ವಿಕಾಸದ ಬಗ್ಗೆ ಅಪಾರವಾದ ಜ್ಞಾನವಿರುವುದು. 2.. ಅನಿವಾಸಿ ಭಾರತೀಯನಾಗಿರುವುದು. ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ ಎಂದಿದ್ದಾರೆ.
ಈ ಮುನ್ನುಡಿ ಮಾತುಗಳ ಹಿನ್ನೆಲೆಯಲ್ಲಿ ಇಡೀ ಕೃತಿ ರೂಪುಗೊಂಡಿದೆ. ಬಸವಾಭಿಮಾನಿಗಳು ಈ ಕೃತಿಯನ್ನು ವಿರೋಧಿಸಿ, ಸರಕಾರ ಮುಟ್ಟುಗೋಲು ಹಾಕುವಂತೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಭಾವಿಸಿರುವೆ.