ಬಸವಣ್ಣ, ಕುವೆಂಪು ಕಡೆಗಣನೆ, ಅಪ್ರಸ್ತುತ ಗೋಷ್ಠಿಗಳು, ಒಂದು ಸಮುದಾಯಕ್ಕೆ ಆದ್ಯತೆ, ಮಾತಿಗಿಂತ ಸನ್ಮಾನಕ್ಕೆ ಆದ್ಯತೆ – ಇವು ಎಂಬತ್ತೇಳನೆ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಲಕ್ಷಣಗಳು
ಬೆಂಗಳೂರು
ಎಂಬತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು, ಅದರಲ್ಲಿನ ಗೋಷ್ಠಿಗಳನ್ನು, ಸಮ್ಮೇಳದ ಆವರಣದಲ್ಲಿ ನಿರ್ಮಿಸಲಿರುವ ೮೭ ಸ್ವಾಗತ ದ್ವಾರಗಳ ವಿವರಗಳನ್ನು ಹಾಗೂ ಅಲ್ಲಿ ಸನ್ಮಾನ ಸ್ವೀಕರಿಸಲಿರುವ ೧೩೭ ಜನರ ಪಟ್ಟಿಯನ್ನು ನೋಡಿದಾಗ ಇಲ್ಲಿಯವರೆಗೆ ಇದೊಂದು ‘ಜಾತ್ರೆ’ ಎನ್ನುತ್ತಿದ್ದ ವಿವರಣೆಯನ್ನು ಬದಲಿಸಿ ಈಗ ರೂಪಕರ ಪರಿಭಾಷೆಯಲ್ಲಿ ಇದೊಂದು “ತಿಪ್ಪೆಗುಂಡಿ” ಎಂದು ಹೇಳಬೇಕಾದ ಪ್ರಮೇಯ ಬಂದಿದೆ.
ಒತ್ತಡದಿಂದ ಬಸವಣ್ಣನವರ ಹೆಸರು ಸೇರ್ಪಡೆ
ಈ ‘ತಿಪ್ಪೆಗುಂಡಿ’ಯ ನಿರ್ಮಾತೃ-ರೂವಾರಿ ಸಂಘ ಪರಿವಾರದ ಮಹೇಶ ಜೋಷಿ ಎಂಬುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಲು ತಕ್ಕುದಾಗಿದೆ. ಇದು ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಕಾರಣದ ಮೇಲೆ ೮೭ ಸ್ವಾಗತ ದ್ವಾರಗಳನ್ನು ನಿರ್ಮಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಮತ್ತು ೮೭ ಕಲಾವಿದರಿಂದ ನಾಡಗೀತೆಯನ್ನು, ರೈತ ಗೀತೆಯನ್ನು ಹೇಳಿಸಲಾಗುತ್ತದೆ.
ಈ ದ್ವಾರಗಳಿಗೆ ಯಾರ ಹೆಸರು ದೊರೆಯದಿದ್ದಾಗ ಯಾರದೋ ಮುಲಾಜಿಗೆ ಹೆಸರುಗಳನ್ನು ಆಯ್ಕೆ ಮಾಡಿದಂತಿದೆ. ಈ ೮೭ ದ್ವಾರಗಳ ಪಟ್ಟಿಯಲ್ಲಿ ಬಸವಣ್ಣನವರ ಹೆಸರಿಲ್ಲ ಎಂಬ ದೂರು ಬಂದಾಗ ಕೊನೆಯ ಕ್ಷಣದಲ್ಲಿ ಇಂಕಿನಲ್ಲಿ ಬರೆದು ಅವರ ಹೆಸರನ್ನು ಸೇರಿಸುವ ನಾಟಕ ಮಾಡಲಾಗಿದೆ.
ಅಪ್ರಸ್ತುತ ಗೋಷ್ಠಿಗಳು
ಈ ಸಮ್ಮೇಳನದ ಗೋಷ್ಠಿಗಳ ವಿಷಯಗಳನ್ನು ಪರಿಶೀಲಿಸಿದಾಗ ಅಲ್ಲಿ ಯಾವುವೂ ಇಂದು ಕನ್ನಡ-ಕರ್ನಾಟಕ-ಕನ್ನಡಿರಿಗೆ ಸಂಬಂಧಿಸಿದ, ಸದ್ಯದ ಸ್ಥಿತಿಯನ್ನು ಚರ್ಚಿಸುವ ಗೋಷ್ಠಿ-ವಿಷಯಗಳಿಲ್ಲ. ಇಲ್ಲಿ ವಿಷಯ ಆಯ್ಕೆಯಲ್ಲಿ ಕನ್ನಡದ ಮನಸ್ಸು ಕೆಲಸ ಮಾಡಿದಂತಿಲ್ಲ. ಇಂದು ಕರ್ನಾಟಕಕ್ಕೆ ಕನ್ನಡಿಗರಿಗೆ ಮುಖ್ಯವಾದ “ಸಮಾನತೆ”, “ಸೌಹಾರ್ದತೆ”, “ಸಂವಿಧಾನ” ಮತ್ತು ಕರ್ನಾಟಕವೇ ಮುಖ್ಯಪಾತ್ರಧಾರಿಯಾಗಿರುವ “ಕೇಂದ್ರ-ರಾಜ್ಯಗಳ ನಡುವಣ ಹಣಕಾಸು ವರ್ಗಾವಣೆ ಸಂಬಂಧ – ಮುಂತಾದ ವಿಷಯಗಳನ್ನು ಗೋಷ್ಠಿಗೆ ಆಯ್ಕೆ ಮಾಡಿಲ್ಲ.
ಗೋಷ್ಠಿಗಳ ಚರ್ಚೆಯ ವಿಷಯಕ್ಕೂ ಅಲ್ಲಿನ ಪ್ರಬಂಧಗಳ ವಿಷಯಕ್ಕೂ ತಾಳಮೇಳವಿದ್ದತೆ ಇಲ್ಲ. ಉದಾ: ‘ಕೃಷಿಕರು-ಕೃಷಿಕರ ಸಂಕಷ್ಟ’ ಎಂಬ ಗೋಷ್ಠಿಯಲ್ಲಿ ಇಂದು ರೈತರು ನಿಡುಗಾಲದಿಂದ ಹೋರಾಟ ನಡೆಸಿರುವ “ಕನಿಷ್ಟ ಬೆಂಬಲ ಬೆಲೆ” ಬಗ್ಗೆ ಚರ್ಚೆಯಿಲ್ಲ.
ಇವೆಲ್ಲವೂ ಯಾಮಾರಿಸುವ ಕೆಲಸವಿದ್ದಂತೆ ಕಾಣುತ್ತದೆ. ಈ ಸಮ್ಮೇಳನದ ಬೌತಿಕ-ಬೌದ್ಧಿಕ ಆಯಾಮಗಳನ್ನು ಪರಿಶೀಲಿಸಿದಾಗ ಸಾಹಿತ್ಯಿಕ ವಿವೇಕ, ಸಾಮಾಜಿಕ ಮ್ಯಾಟ್ರಿಕ್ಸ್, ಆರ್ಥಿಕ ಸದ್ಯತನ, ರಾಜಕೀಯ ಪ್ರಸ್ತುತತೆ –ಇವುಗಳು ಇಲ್ಲಿ ಕೆಲಸ ಮಾಡಿಂದತೆ ಕಾಣುವುದಿಲ್ಲ.
ಆರ್‌ಎಸ್‌ಎಸ್ ಅಜೆಂಡಾ, ಆಷಾಡಭೂತಿತನ

ಇಡೀ ಸಮ್ಮೇಳನವು ಆರ್‌ಎಸ್‌ಎಸ್ – ಬಿಜೆಪಿಯ ಅಜೆಂಡಾದ ಪ್ರಕಾರ ನಡೆಯುತ್ತಿರುವಂತೆ ಕಾಣುತ್ತದೆ.
ಈ ಆರ್‌ಎಸ್‌ಎಸ್ ತನ್ನ ಆಷಾಡಭೂತಿತನವನ್ನು ಇಲ್ಲಿ ಖುಲ್ಲಂಖುಲ್ಲಾ ಪ್ರದರ್ಶಿಸುತ್ತಿದೆ. ಈ ಸಂಘಟನೆಯು ಕಳೆದ ಒಂದು ವರ್ಷದಿಂದ ವಚನ ಸಾಹಿತ್ಯದ ಬಗ್ಗೆ (ವಚನ ದರ್ಶನ ಕೃತಿ), ಬಸವಣ್ಣನ ಬಗ್ಗೆ ತೋರಿಕೆಯ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದೆ. ಆದರೆ ತನ್ನ ನಿರ್ದೇಶನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೨೦೨೪ರಲ್ಲಿ ಕರ್ನಾಟಕ ಸರ್ಕಾರ ಘೋಷಿಸಿರುವ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂಬುದರ ಬಗ್ಗೆ ಸಮ್ಮೇಳನವು ಒಂದು ರೀತಿಯ ‘ದಿವ್ಯ’ ಮೌನವನ್ನು ವಹಿಸಿರುವಂತೆ ಕಾಣುತ್ತದೆ. ಇದು ಆರ್ ಎಸ್ ಎಸ್ ಆದೇಶವಿದ್ದಂತೆ ಕಾಣುತ್ತದೆ.
ಆಹ್ವಾನ ಪತ್ರಿಕೆಯಲ್ಲಿ ಬಸವಣ್ಣನನವರ ಭಾವಚಿತ್ರವಿಲ್ಲ. ಸಾಮಾಜಿಕ ಸೌಹಾರ್ದತೆಯ ಪ್ರಣಾಳಿಕೆಯಾದ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಸಾರಿದ ರಾಷ್ಟಕವಿ ಕುವೆಂಪು ಅವರ ಭಾವಚಿತ್ರವೂ ಆಹ್ವಾನ ಪತ್ರಿಕೆಯಲ್ಲಿಲ್ಲ ಮತ್ತು ಅವರು ಪ್ರತಿಪಾದಿಸಿದ ಯಾವ ಸಿದ್ಧಾಂತದ ಬಗ್ಗೆಯೂ ಗೋಷ್ಠಿಯಿಲ್ಲ.
ಸಮ್ಮೇಳನದ ಆವರಣದಲ್ಲಿ ೮೭ ಸ್ವಾಗತ ದ್ವಾರಗಳನ್ನ ಕಟ್ಟುವ ಬಗ್ಗೆ ಕೆಲಸ ನಡೆಯುತ್ತಿದೆ. ಈ ಪಟ್ಟಿಯನ್ನು ಪರಿಶೀಲಿಸಿದರೆ ಅದರಲ್ಲಿನ ಆಯ್ಕೆಯಲ್ಲಿ ಯಾವ ಮಾನದಂಡವೂ ಇದ್ದಂತೆ ಕಾಣುವುದಿಲ್ಲ.
ಒಂದು ಸಮುದಾಯಕ್ಕೆ ಆದ್ಯತೆ
ಪ್ರಧಾನ ವೇದಿಕೆ ಮತ್ತು ಸಮನಾಂತರ ೨ ವೇದಿಕೆಗಳು ಸೇರಿ ಒಟ್ಟು ೧೨ ಮಹನೀಯರ ಹೆಸರುಗಳನ್ನು ವೇದಿಕೆಗಳಿಗೆ ನೀಡಲಾಗಿದೆ. ಈ ೧೨ ಹೆಸರುಗಳಲ್ಲಿ ಐವರು ಬ್ರಾಹ್ಮಣರಿದ್ದಾರೆ (ಶೇ.೪೨). ಈ ೧೨ ಹೆಸರುಗಳಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರಿಲ್ಲ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವಿಲ್ಲ. ಈ ೧೨ ಹೆಸರುಗಳಲ್ಲಿ ದಲಿತ ವಿದ್ವಾಂಸರ ಹೆಸರಿಲ್ಲ.
ಇಂದಿನ ಜನತಂತ್ರ ಭಾರತದಲ್ಲಿ “ಶ್ರೀಮನ್ಮಹಾರಾಣಿ” ಎಂಬ ಸಂಬೋಧನೆಯು ಸಂವಿಧಾನ ವಿರೋದಿ ನಡೆಯಾಗಿದೆ.
ಪ್ರಧಾನ ವೇದಿಕೆಯ ಉದ್ಘಾಟನಾ ಸಮಾರಂಬದಲ್ಲಿ ವೇದಿಕೆಯಲ್ಲಿ ಎಷ್ಟು ಜನರಿರುತ್ತಾರೆ ಗೊತ್ತೇ? ಬರೋಬರಿ ೪೧ ಜನರಿರುತ್ತಾರೆ. ಅದರಲ್ಲಿ ಮಾತನಾಡುವವರು ೨೫ ಮಂದಿ. ಒಟ್ಟು ಸಮ್ಮೇಳನದಲ್ಲಿ ೧೩೭ ಜನರು “ಸನ್ಮಾನ” ಸ್ವೀಕರಿಸಲಿದ್ದಾರೆ. ಮತ್ತೆ ರೂಪಕದ ಪರಿಭಾಷೆಯಲ್ಲಿ ಹೇಳುವುದಾದರೆ ಇದೊಂದು ತಿಪ್ಪೆಗುಂಡಿ.
ಈ ಎಲ್ಲ ಸಂಗತಿ-ವಿಸಂಗತಿ-ವಿಕೃತಿಗಳ ಬಗ್ಗೆ ಸಮ್ಮೇಳಾನಧ್ಯಕ್ಷರು ತಮ್ಮ ಭಾಷಣದಲ್ಲಿ ನೇರವಾಗಿ ಆಕ್ಷೇಪವನ್ನು ವ್ಯಕ್ತಪಡಿಸಬಹುದು ಎಂಬುದು ನಮ್ಮ ನಿರೀಕ್ಷೆ.
ಸಾರ್ವಜನಿಕರ ತೆರಿಗೆ ಹಣದ ಪೋಲು. ಜನರ ತೆರಿಗೆ ಹಣದಲ್ಲಿ ಇನ್ಯಾರದ್ದೋ ಬಾಜಾಬಜಂತ್ರಿ . ಒಟ್ಟಿನಲ್ಲಿ ಹೇಳುವುದಾದರೆ ಕನ್ನಡ ಸಾಹಿತ್ಯ ಪರಿಷತ್ತು ಒಬ್ಬ ವ್ಯಕ್ತಿಯ ಕೈಯ್ಯಲ್ಲಿ ಎಲ್ಲವೂ ನಿರ್ಧಾರವಾಗುವ ಹಾಗೆ ತನ್ನ ಸಂವಿದಾನ ಹೇಗೆ ರೂಪಿಸಿಕೊಂಡಿದೆ ಎನ್ನುವುದೇ ಅರ್ಥವಾಗುವುದಿಲ್ಲ. ಸರ್ವಾಧ್ಯಕ್ಷರೂ ಸೇರಿದಂತೆ ಎಲ್ಲರೂ ಅಲ್ಲಿನ ಗೋಷ್ಠಿಗಳು ಮತ್ತು ಆಹ್ವಾನಿತರು ಮೇಲೆ ಅಸಹಾಯಕರಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲಾ ಸಭೆ ಸಮಾರಂಭಗಳಲ್ಲಿ ಈ ಸನ್ಮಾನ ಅನ್ನುವುದು ಒಂದು ದೊಡ್ಡ ರೋಗವಾಗಿದೆ. ಯಾಕೆ ಮತ್ತು ಯಾರಿಗೆ ಏತಕ್ಕಾಗಿ ಸನ್ಮಾನ ಮಾಡಬೇಕು ಅನ್ನುವುದೇ ಅರ್ಥವಾಗುತ್ತಿಲ್ಲ. ಇದು ನಮ್ಮನ್ನು ನಾವೇ ಅಪಹಾಸ್ಯ ಮಾಡಿಕೊಂಡಂತಿದೆ.